ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಅದೃಷ್ಟಚಕ್ರ

Last Updated 3 ಫೆಬ್ರುವರಿ 2021, 1:03 IST
ಅಕ್ಷರ ಗಾತ್ರ

ಕಾಲಕ್ರಮೇಣ ಜಗತಃ ಪರಿವರ್ತಮಾನಾ ।

ಚಕ್ರಾರಪಂಕ್ತಿರಿವ ಗಚ್ಛತಿ ಭಾಗ್ಯಪಂಕ್ತಿಃ ।।

ಇದರ ತಾತ್ಪರ್ಯ ಹೀಗೆ:

‘ಕಾಲವು ಬದಲಾಯಿಸಿದಂತೆಲ್ಲ ಅದೃಷ್ಟವು ಚಕ್ರದ ಅರೆಕೋಲುಗಳಂತೆ ಮೇಲಕ್ಕೂ ಕೆಳಕ್ಕೂ ಉರುಳುತ್ತದೆ.’

ಬಡತನವಾಗಲೀ ಸಿರಿತನವಾಗಲೀ ಶಾಶ್ವತವಲ್ಲ – ಎಂದು ಸುಭಾಷಿತ ಹೇಳುತ್ತಿದೆ.

ಮನುಷ್ಯನ ಮನಸ್ಸು ಯಾವಾಗಲೂ ಸುಖವನ್ನೇ ಬಯಸುತ್ತದೆ. ಹೀಗಾಗಿಯೇ ಹಣ, ಆರೋಗ್ಯ, ಅಧಿಕಾರ, ಯೌವನ – ಹೀಗೆ ಸುಖದ ಸಾಧನಗಳೆಲ್ಲವೂ ಸದಾ ತನ್ನಲ್ಲಿಯೇ ಇರಲಿ ಎಂದು ಅವನು ಬಯಸುವುದು ಸಹಜವೇ. ಹಣ–ಅಧಿಕಾರಗಳು ಇದ್ದವರು ಹೀಗೆ ಯೋಚಿಸುತ್ತಾರೆ ಸರಿ. ಆದರೆ ಇಂಥ ಸೌಕರ್ಯಗಳು ಇಲ್ಲದವರು ಏನು ಮಾಡಬೇಕು? ಬಡವರು ಯಾವಾಗಲೂ ಬಡವರಾಗಿಯೇ ಇರಬೇಕೆ? ಇಂದು ಅನಾರೋಗ್ಯದಲ್ಲಿರುವವನು ಎಂದಿಗೂ ಅನಾರೋಗ್ಯದಲ್ಲಿಯೇ ಇರಬೇಕೆ?

ಇದನ್ನು ಇನ್ನೊಂದು ವಿಧದಲ್ಲಿ ನೋಡೋಣ. ನಾವೀಗ ಬೆಳಕು, ಎಂದರೆ ಹಗಲಿನಲ್ಲಿದ್ದೇವೆ. ಯಾವಾಗಲೂ ಹೀಗೆಯೇ ಬೆಳಕು ಇರಲಿ ಎಂದು ನಾವು ಬಯಸುತ್ತೇವೆ. ನಾವು ಬೆಳಕಿನಲ್ಲಿರುವಾಗ ಭೂಭಾಗದ ಇನ್ನೊಂದು ಕಡೆ ಇರುವವರು ಕತ್ತಲಿನಲ್ಲಿರುತ್ತಾರೆ. ನಮ್ಮ ಆಸೆಯಂತೆ ಭೂಮಿ ಚಲಿಸದೆ, ಹಗಲಿನಲ್ಲಿಯೇ ನಿಂತುಬಿಟ್ಟರೆ ಅವರು ಆಗ ಕತ್ತಲಿನಲ್ಲಿಯೇ ಇರಬೇಕಾಗುತ್ತದೆ, ಅಷ್ಟೆ! ಆದರೆ ನಿಸರ್ಗದ ನಿಯಮಗಳು ಬೇರೆ ರೀತಿಯಲ್ಲಿವೆ. ಭೂಮಿ ಸುತ್ತುತ್ತಲೇ ಇರುತ್ತದೆ; ಹಗಲು–ರಾತ್ರಿಗಳು ಬದಲಾವಣೆ ಆಗುತ್ತಲೇ ಇರುತ್ತವೆ; ಕತ್ತಲೆ ಆದಮೇಲೆ ಬೆಳಕು, ಬೆಳಕಿನ ನಂತರ ಕತ್ತಲು – ಹೀಗೆ ಚಕ್ರದಂತೆ ಪ್ರಕೃತಿಯ ಪಯಣ ನಡೆಯುತ್ತಿರುತ್ತದೆ.

ನಮ್ಮ ಜೀವನದಲ್ಲಿಯೂ ಹೀಗೆಯೇ ನಡೆಯುತ್ತಿರುತ್ತದೆ. ಬಡತನ–ಸಿರಿತನ, ಸುಖ–ದುಃಖ, ಆರೋಗ್ಯ–ಅನಾರೋಗ್ಯ, ಸೋಲು–ಗೆಲವು – ಹೀಗೆ ಒಂದಾದಮೇಲೆ ಇನ್ನೊಂದು ಸುತ್ತತ್ತಲೇ ಇರುತ್ತವೆ. ಇದನ್ನೇ ಸುಭಾಷಿತ ಅದೃಷ್ಟ, ಭಾಗ್ಯ ಎಂದು ಕರೆದಿರುವುದು. ಇದು ಚಕ್ರದಂತೆ ಸುತ್ತತ್ತಲೇ ಇರುತ್ತದೆ. ಹೀಗಾಗಿ ನಾವು ಸುಖ ಬಂದಾಗ ಹಿಗ್ಗಿ ಉಬ್ಬಬಾರದು, ದುಃಖ ಬಂದಾಗ ಕುಗ್ಗಿ ನುಗ್ಗಾಗಬಾರದು. ಚಕ್ರವೊಂದರ ಅರೆಕೋಲುಗಳು ಈ ಕ್ಷಣ ಮೇಲಿರುವುದು, ಮುಂದಿನ ಕ್ಷಣದಲ್ಲಿ ಕೆಳಗೆ ಇಳಿಯುವುದು; ಈ ಸುತ್ತಾಟ ನಿರಂತರ. ಹೀಗೆಯೇ ನಮ್ಮ ಜೀವನದ ಅದೃಷ್ಟವೂ ಮೇಲೆ–ಕೆಳಗೆ ಸುತ್ತುತ್ತಲೇ ಇರುತ್ತದೆ. ಹೀಗೆ ಅದು ಸುತ್ತುವುದರಿಂದಲೇ ನಾವು ಆರೋಗ್ಯವಾಗಿರುವುದು; ಹುಚ್ಚಿನಿಂದ ಪಾರಾಗಿರುವುದು ಎನ್ನುವುದನ್ನು ಮರೆಯಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT