ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಮಾತು ಕೊಡುವುದು

Last Updated 3 ಜೂನ್ 2021, 3:53 IST
ಅಕ್ಷರ ಗಾತ್ರ

ಸದ್ಭಿಸ್ತು ಲೀಲಯಾ ಪ್ರೋಕ್ತಂ ಶಿಲಾಲಿಖಿತಮಕ್ಷರಮ್‌ ।

ಅಸದ್ಭಿಃ ಶಪಥೇನೋಕ್ತಂ ಜಲೇ ಲಿಖಿತಮಕ್ಷರಮ್‌ ।।

ಇದರ ತಾತ್ಪರ್ಯ ಹೀಗೆ:

‘ಸಜ್ಜನರು ಸುಮ್ಮನೆ ಹೇಳಿದ ಮಾತು ಕೂಡ ಅದು ಕಲ್ಲಿನಲ್ಲಿ ಕೆತ್ತಿದ ಶಾಸನದಂತೆ; ಅದೇ ನೀಚರು ಮಾಡಿದ ಪ್ರತಿಜ್ಞೆಗಳು ಕೂಡ ಅವು ನೀರಿನಲ್ಲಿ ಬರೆದ ಬರಹಗಳಂತೆ.’

ಸಜ್ಜನರ ಮತ್ತು ದುರ್ಜನರ ಗುಣಗಳಲ್ಲಿ ಇರುವ ವ್ಯತ್ಯಾಸವನ್ನು ಸುಭಾಷಿತ ಹೇಳುತ್ತಿದೆ. ಇದಕ್ಕಾಗಿ ಅದು ಬಳಸಿಕೊಂಡಿರುವ ವಿಷಯ ‘ಮಾತು’.

ಮಾತಿನ ಶಕ್ತಿಯ ಬಗ್ಗೆ ಈ ಹಿಂದೆ ಹಲವು ಸಲ ನಾವು ಮಾತನಾಡಿದ್ದೇವೆ. ಮಾತು ನಮ್ಮ ವ್ಯಕ್ತಿತ್ವವನ್ನು ಕಟ್ಟಿಕೊಡುತ್ತದೆ; ನಮ್ಮ ಸಂಸ್ಕೃತಿ ಎಂಥದು ಎಂಬುದನ್ನು ತೋರಿಸುತ್ತದೆ. ನಮ್ಮ ಜೀವನದ ಎಲ್ಲ ಅಗುಹೋಗುಗಳಲ್ಲೂ ಮಾತಿನ ಪ್ರಭಾವ ಇದ್ದೇ ಇರುತ್ತದೆ. ಹೀಗೆ ನಮ್ಮ ಜೀವನಕ್ಕೇ ಬೆಳಕಾಗಿರುವ ಮಾತನ್ನು ಸಜ್ಜನ ಮತ್ತು ದುರ್ಜನ ಹೇಗೆ ನೋಡುತ್ತಾರೆ?

ಮಾತನ್ನು ಸಂವಹನಕ್ಕೆ ಬಳಸುತ್ತೇವೆ ಅಲ್ಲವೆ? ಎಂದರೆ ನಮ್ಮ ಭಾವನೆಗಳನ್ನು ಪ್ರಕಟಿಸಲು, ನಮ್ಮ ಬೇಕು–ಬೇಡಗಳನ್ನು ತಿಳಿಸಲು, ನಮ್ಮ ಮಾಹಿತಿ–ವಿದ್ಯೆಯನ್ನು ಹಂಚಿಕೊಳ್ಳಲು – ಹೀಗೆ ನಮ್ಮ ನಿತ್ಯದ ಬಹುಪಾಲು ಚಟುವಟಿಕೆಗಳು ಮಾತಿನಿಂದಲೇ ಕೂಡಿರುತ್ತವೆ. ಇದರ ಜೊತೆಗೆ ‘ಮಾತನ್ನು ಕೊಡುವುದು‘ ಎಂಬುದೊಂದಿದೆ. ಎಂದರೆ ಪ್ರತಿಜ್ಞೆಯನ್ನು ಮಾಡುವುದು, ವಾಗ್ದಾನವನ್ನು ನೀಡುವುದು, ಹೀಗೆ ಮಾಡಿಯೇ ತೀರುತ್ತೇನೆ – ಎಂದು ಪ್ರಮಾಣ ಮಾಡುವುದು, ಆಣೆಯನ್ನು ಮಾಡುವುದು. ಈ ವಿಷಯದಲ್ಲಿ ಸಜ್ಜನರ ಮತ್ತು ದುರ್ಜನರ ನಡೆವಳಿಕೆ ಹೇಗಿರುತ್ತದೆ ಎಂಬುದನ್ನು ಸುಭಾಷಿತ ಹೇಳುತ್ತಿದೆ.

ದುರ್ಜನ ಮಾತನ್ನು ಕೊಡುತ್ತಾನೆ; ಎಂದರೆ ಪ್ರಮಾಣಗಳನ್ನು ಮಾಡುತ್ತಾನೆ. ಸಹಾಯ ಮಾಡುತ್ತೇನೆ ಎಂದೋ, ಇಂಥ ಸಮಯಕ್ಕೆ ಬರುತ್ತೇನೆ ಎಂದೋ, ಸತ್ಯವನ್ನೇ ಹೇಳುತ್ತೇನೆ ಎಂದೋ, ಒಳ್ಳೆಯವನಾಗಿರುತ್ತೇನೆ ಎಂದೋ, ಮೋಸ ಮಾಡುವುದಿಲ್ಲ ಎಂದೋ – ಹೀಗೆ ಏನೇನೋ ವಿಷಯಗಳ ಬಗ್ಗೆ ಅವನು ಮಾತು ಕೊಡಬಹುದು; ಒಂದಲ್ಲ, ಹತ್ತಲ್ಲ, ನೂರು ಸಲ ಅವನು ಪ್ರಮಾಣ ಮಾಡಬಹುದು. ಆದರೆ ಅವನಿಗೆ ಮಾತಿನ ಬಗ್ಗೆ ಗೌರವ ಇರುವುದಿಲ್ಲ; ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಎಂಬ ಸಂಸ್ಕಾರವೂ ಇರುವುದಿಲ್ಲ. ಏಕೆಂದರೆ ಅವನ ಮಾತುಗಳು ನೀರಿನ ಮೇಲೆ ಬರೆದ ಬರಹಗಳಂತೆ, ಅಷ್ಟೆ!

ಆದರೆ ಸಜ್ಜನನಾದವನು ಹೀಗೆ ಪ್ರಮಾಣ ಮಾಡುವುದಿಲ್ಲ. ಅವನು ಸಾಧಾರಣವಾಗಿ ಆಡಿದ ಮಾತೇ ವೇದವಾಕ್ಯದಂತೆ ಗಟ್ಟಿಯಾಗಿರುತ್ತದೆ. ಅದು ಕಲ್ಲಿನಲ್ಲಿ ಕೆತ್ತಿದಂತೆ ಸ್ಥಿರವಾಗಿರುತ್ತದೆ. ಸಜ್ಜನ ತನ್ನ ಮಾತುಗಳನ್ನು ಎಂದೂ ಮರೆಯುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT