ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ| ನಿಜವಾದ ಓದು

Last Updated 7 ಮಾರ್ಚ್ 2021, 1:37 IST
ಅಕ್ಷರ ಗಾತ್ರ

ಶಾಸ್ತ್ರಾಣ್ಯಧೀತ್ಯಾಪಿ ಭವಂತಿ ಮೂರ್ಖಾಃ

ಯಸ್ತು ಕ್ರಿಯಾವಾನ್‌ ಪುರುಷಃ ಸ ವಿದ್ವಾನ್‌ ।

ಸುಚಿಂತಿತಂ ಔಷಧಮಾತುರಾಣಾಂ

ನ ನಾಮಮಾತ್ರೇಣ ಕರೋತ್ಯರೋಗಮ್‌ ।।

ಇದರ ತಾತ್ಪರ್ಯ ಹೀಗೆ:

‘ಶಾಸ್ತ್ರಗಳನ್ನೆಲ್ಲ ಓದಿಯಾದರೂ ಅನೇಕರು ಮೂರ್ಖರಾಗಿಯೇ ಇರುತ್ತಾರೆ. ಯಾವನು ಅದನ್ನು ಅನುಷ್ಠಾನಕ್ಕೆ ತಂದುಕೊಳ್ಳುವನೋ ಅವನೇ ವಿದ್ವಾಂಸ. ಚೆನ್ನಾಗಿ ಯೋಚಿಸಿ ನಿಶ್ಚಯಿಸಲ್ಪಟ್ಟ ಔಷಧವು ಹೆಸರು ಹೇಳಿದ ಮಾತ್ರಕ್ಕೇ ರೋಗಿಗಳ ರೋಗವನ್ನು ವಾಸಿಮಾಡುವುದಿಲ್ಲ.’

ಬರಿಯ ಪುಸ್ತಕದ ಬದನೆಕಾಯಿ ಆದರೆ ಪ್ರಯೋಜನವಿಲ್ಲ, ಪುಸ್ತಕದಲ್ಲಿರುವುದು ಮಸ್ತಕಕ್ಕೆ ಏರಿ, ಅಲ್ಲಿಂದ ಅದು ಕೈ ಕಾಲು ಹೃದಯಗಳ ಮೂಲಕ ಕ್ರಿಯೆಯಾಗಿ ಪ್ರಕಟವಾಗಬೇಕು; ಆಗಲೇ ಪುಸ್ತಕದ ಆ ವಿದ್ಯೆಗೆ ಬೆಲೆ ಎಂದು ಹೇಳುತ್ತಿದೆ ಸುಭಾಷಿತ.

ಇಂದು ಪುಸ್ತಕಗಳನ್ನು ಬರೆಯುವವರು, ಓದುವವರು, ಪ್ರಕಟಿಸುವವರು ಇವರ ಸಂಖ್ಯೆ ಸಾಕಷ್ಟಿದೆ. ಇವರ ಜೊತೆಗೆ ಎಲ್ಲ ವಿಷಯಗಳ ಬಗ್ಗೆಯೂ ಉಪನ್ಯಾಸಗಳನನ್ನು ನೀಡುವವರೂ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಆದರೆ ಹೇಳಿದ್ದನ್ನು ಆಚರಣೆಗೆ ತರುವವರ ಸಂಖ್ಯೆಯೂ ಕಡಿಮೆ; ಓದಿದ್ದನ್ನು ಅರ್ಥಮಾಡಿಕೊಳ್ಳುವವರ ಸಂಖ್ಯೆಯೂ ಕಡಿಮೆಯೇ.

ಸುಭಾಷಿತ ಇಲ್ಲಿ ಕೊಟ್ಟಿರುವ ಉದಾಹರಣೆ ನಮ್ಮ ಅನುಭವಕ್ಕೆ ಸುಲಭವಾಗಿ ಬರುವಂಥದೇ.

ಇಂಥ ರೋಗಕ್ಕೆ ಇಂಥ ಔಷಧ – ಎಂದು ವೈದ್ಯರು ನಿರ್ಧಾರಮಾಡುತ್ತಾರೆ. ಆ ಔಷಧದ ಹೆಸರನ್ನು ಅವರು ರೋಗಿಯ ಬಾಯಿಯ ಮೂಲಕ ಹೇಳಿಸಿದರೆ ಅವನ ರೋಗ ವಾಸಿಯಾಗುವುದೆ? ರೋಗ ವಾಸಿಯಾಗಬೇಕಾದರೆ ರೋಗಿಗೆ ಔಷಧವನ್ನು ಕುಡಿಸಬೇಕೆ ಹೊರತು ಅದರ ಹೆಸರನ್ನು ಅವನಿಂದ ಹೇಳಿಸುವುದರಿಂದ ಪ್ರಯೋಜನವಿರದಷ್ಟೆ! ಅಂತೆಯೇ ನಾವು ಓದುವ ಪುಸ್ತಕಗಳಲ್ಲಿ ಎಷ್ಟೋ ಒಳ್ಳೆಯ ವಿಷಯಗಳು ಇರಬಹುದು. ಆದರೆ ನಮ್ಮ ಓದಿಗೆ ಪ್ರಯೋಜನ ಒದಗುವುದು ಆ ಒಳ್ಳೆಯ ಗುಣಗಳನ್ನು ನಾವು ಅಳವಡಿಸಿಕೊಂಡಾಗಲೇ. ಹೀಗೇಯೇ ನಮ್ಮ ಓದು ಸಾರ್ಥಕವಾಗುವುದು ಆ ಪುಸ್ತಕದಲ್ಲಿರುವ ವಿಷಯವನ್ನು ಚೆನ್ನಾಗಿ ಗ್ರಹಿಸಿದಾಗ, ಎಂದರೆ ಅರ್ಥಮಾಡಿಕೊಂಡಾಗಲೇ.

ಇನ್ನೊಂದು ಸುಭಾಷಿತವನ್ನು ನೋಡಿ:

ಪಠಕಃ ಪಾಠಕಾಶ್ಚೈವ ಯೇ ಚಾನ್ಯೇ ಶಾಸ್ತ್ರಪಾಠಕಾಃ ।

ಸರ್ವೇ ವ್ಯಸನಿನೋ ಜ್ಞೇಯಾಃ ಯಃ ಕ್ರಿಯವಾನ್‌ ಸ ಪಂಡಿತಃ ।।

’ಓದುವವನು, ಓದಿಸುವವನು ಮತ್ತು ಇತರ ಶಾಸ್ತ್ರಗಳನ್ನು ಓದುವವರು – ಇವರೆಲ್ಲರೂ ಕೇವಲ ವ್ಯಸನಿಗಳಷ್ಟೆ. ಯಾರು ಆಚರಣೆಗೆ ತರುತ್ತಾನೋ ಅವನೇ ನಿಜವಾದ ಜ್ಞಾನಿ‘ – ಎನ್ನುವುದು ಇದರ ತಾತ್ಪರ್ಯ.

‘ಆಡದೇ ಮಾಡುವವನು ರೂಢಿಯೊಳಗುತ್ತಮನು
ಆಡಿ ಮಾಡುವವನು ಮಧ್ಯಮನು
ಆಡಿಯೂ ಮಾಡದವನು ಅಧಮನು‘

– ಎಂಬ ಮಾತು ನಮಗೆ ಗೊತ್ತಿದೆಯಷ್ಟೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT