ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ನಿಜವಾದ ಸಹಾಯ

Last Updated 5 ನವೆಂಬರ್ 2020, 1:21 IST
ಅಕ್ಷರ ಗಾತ್ರ

ಸಂತ ಏವ ಸತಾಂ ನಿತ್ಯಮಾಪತ್ತರಣಹೇತವಃ ।

ಗಜಾನಾಂ ಪಂಕಮಗ್ನಾನಾಂ ಗಜಾ ಏವ ಧುರಂಧರಾಃ ।।

ಇದರ ತಾತ್ಪರ್ಯ ಹೀಗೆ:

‘ಸಜ್ಜನರನ್ನು ಕಷ್ಟಗಳಿಂದ ಪಾರುಮಾಡಲು ಕಾರಣರಾಗಬಲ್ಲವರು ಸಜ್ಜನರೇ. ಕೆಸರಿನಲ್ಲಿ ಸಿಕ್ಕಿಹಾಕಿಕೊಂಡ ಆನೆಗಳನ್ನು ಮೇಲೆಳೆಯಬಲ್ಲವು ಆನೆಗಳೇ ತಾನೆ?’

ಇದೊಂದು ಅರ್ಥಗರ್ಭಿತವಾದ ಸುಭಾಷಿತ.

ಮೊದಲಿಗೆ ಒಂದು ಸರಳವಾದ ಉದಾಹರಣೆಯ ಮೂಲಕ ಇದನ್ನು ಅರ್ಥಮಾಡಿಕೊಳ್ಳಲು ನೋಡೋಣ.

ನಮಗೆ ಈಗ ಸಾವಿರ ರೂಪಾಯಿಗಳ ಆವಶ್ಯಕತೆಯಿದೆ. ಸಾಲ ಮಾಡಬೇಕಿದೆ. ಅದನ್ನು ನಾವು ಯಾರ ಹತ್ತಿರ ಕೇಳುತ್ತೇವೆ? ಹೀಗೆ ಕೇಳುವಾಗ ಮುಖ್ಯವಾಗಿ ಎರಡು ಮಾನದಂಡಗಳನ್ನು ಬಳಸಿಕೊಳ್ಳುತ್ತೇವೆ. ಮೊದಲನೆಯದು: ನಮ್ಮ ಆತ್ಮೀಯರಲ್ಲಿಯೇ ಕೇಳಬೇಕು ಎಂದು ತೀರ್ಮಾನಿಸಿಕೊಳ್ಳುತ್ತೇವೆ. ಎರಡನೆಯದು: ಆತ್ಮೀಯರಷ್ಟೇ ಅಲ್ಲ, ಅವರು ನಮಗೆ ಆವಶ್ಯಕತೆ ಇರುವಷ್ಟು ಹಣವನ್ನು ಹೊಂದಿದವರೂ ಆಗಿರಬೇಕು; ನಮ್ಮ ಕಷ್ಟಕ್ಕೆ ಸ್ಪಂದಿಸಬಲ್ಲವರೂ ಆಗಿರಬೇಕು. ಎಂದರೆ ಒಂದು ರೀತಿಯಲ್ಲಿ ಅವರು ನಮ್ಮದೇ ಪ್ರತಿಬಿಂಬದಂತಿರಬೇಕು.

ಇದು ಏಕೆಂದರೆ, ನಮ್ಮನ್ನು ಅರ್ಥಮಾಡಿಕೊಳ್ಳಬಲ್ಲವರಷ್ಟೆ ನಮ್ಮ ಬಗ್ಗೆ ಕಾಳಜಿಯನ್ನೂ ವಹಿಸಬಲ್ಲರು; ಸಹಾಯವನ್ನೂ ಮಾಡಬಲ್ಲವರು. ಅವರು ನಮ್ಮ ಆತ್ಮದ ವಿಸ್ತರಣವೇ ಆಗಿರುತ್ತಾರೆ. ಅಂಥವರು ಮಾತ್ರವೇ ನಮ್ಮ ಕಷ್ಟಕಾಲದಲ್ಲಿ ಒದಗುತ್ತಾರೆ. ನಮಗೆ ಅನಾರೋಗ್ಯ ಆವರಿಸಿಕೊಂಡಾಗ ನಮ್ಮ ಶರೀರವೇ ಅದರ ವಿರುದ್ಧ ಹೋರಾಡಬೇಕಾಗಿರುವುದು ಅಲ್ಲವೆ?

ಸುಭಾಷಿತ ಹೇಳುತ್ತಿರುವುದು ಇಂಥ ಸೂಕ್ಷ್ಮತೆಯ ಬಗ್ಗೆಯೇ ಹೌದು.

ಒಳ್ಳೆಯವರಿಗೆ ಒಳ್ಳೆಯವರಷ್ಟೇ ಸಹಾಯಕ್ಕೆ ನಿಲ್ಲಬಲ್ಲರು. ಇದನ್ನು ನಿರೂಪಿಸಲು ಸುಭಾಷಿತ ಬಳಸಿರುವ ಉದಾಹರಣೆಯೂ ಸೊಗಸಾಗಿದೆ. ಆನೆಯೊಂದು ಕೆಸರಿನಲ್ಲಿ ಸಿಕ್ಕಿಹಾಕಿಕೊಂಡಿದೆ. ಅದನ್ನು ಅಲ್ಲಿಂದ ಮೇಲಕ್ಕೆ ಎತ್ತಬೇಕು. ಅದನ್ನು ಅಲ್ಲಿಂದ ಎಳೆಯಲು ಆಗ ನಾವು ಆನೆಯನ್ನೇ ಬಳಸಬೇಕು. ಹೀಗಲ್ಲದೆ ಇನ್ನೊಂದು ಪ್ರಾಣಿಯನ್ನು, ಎಂದರೆ ಆನೆಗಿಂತಲೂ ಸಣ್ಣ ಪ್ರಾಣಿಯನ್ನು, ಬಳಸಿಕೊಂಡರೆ ಆನೆಯ ತೂಕವನ್ನು ಅದು ಜಗ್ಗಲಾರದು.

ಇಂದು ನಮ್ಮ ಸಮಾಜ ಎದುರಿಸುತ್ತಿರುವ ಸಮಸ್ಯೆಗಳಿಗೂ ಈ ಉದಾಹರಣೆಯನ್ನು ವಿಸ್ತರಿಸಿ ನೋಡಬಹುದು. ನಮ್ಮ ಸಮಸ್ಯೆಗಳನ್ನು ಸರಿಯಾಗಿ ಅರ್ಥಮಾಡಿಕೊಂಡು, ಅದಕ್ಕೆ ಯುಕ್ತ ರೀತಿಯಲ್ಲಿ ಸ್ಪಂದಿಸಿ, ಪರಿಹಾರವನ್ನು ಕಾಣಿಸಬಲ್ಲ ಧೀಮಂತ, ಸಮರ್ಥ ಜನನಾಯಕರು ನಮಗೆ ಇಂದು ಬೇಕಾಗಿದೆ. ಅಂಥವರ ಆಗಮನ ಆಗಲಿ; ಸಮಾಜದ ಏಳಿಗೆಯಾಗಲಿ ಎಂಬ ಹಾರೈಕೆಯನ್ನು ನಾವೆಲ್ಲರೂ ಮಾಡೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT