ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮ: ಪ್ರಶ್ನೆಯೋ? ಉತ್ತರವೋ?

Last Updated 12 ಏಪ್ರಿಲ್ 2019, 3:53 IST
ಅಕ್ಷರ ಗಾತ್ರ

ರಾಮಾಯಣ ಮತ್ತು ಮಹಾಭಾರತ – ಭಾರತೀಯತೆಯ ಎರಡು ಕಣ್ಣುಗಳು; ಭಾರತೀಯ ಸಂಸ್ಕೃತಿಯ ವಿಶ್ವಕೋಶಗಳು. ಆದಿಕಾವ್ಯವಾದ ರಾಮಾಯಣ ಜಗತ್ತಿನ ಶ್ರೇಷ್ಠ ಕಾವ್ಯವೂ ಹೌದು. ರಾಮಾಯಣದ ಅಂತರಂಗದಲ್ಲಿ ಹಲವು ರಸಗಳ ಒರತೆಯಿದೆ; ಸಾಮಾಜಿಕ ತಲ್ಲಣಗಳಿವೆ; ರಾಜಕೀಯದ ಸಂಕ್ಷೋಭೆಗಳಿವೆ; ಶಾಸ್ತ್ರಗಳ ಅನುಸಂಧಾನವಿದೆ; ಜಾನಪದದ ಸಂವೇದನೆಗಳಿವೆ; ಭಾವಗಳ ಬೆದಕಾಟವಿದೆ; ಧನ್ಯತೆಯ ತಡಕಾಟವಿದೆ; ಜೀವನಕ್ಕೆ ಬೇಕಾದ ಆದರ್ಶಗಳಿವೆ; ಅಧ್ಯಾತ್ಮದ ಬೆಳಕಿದೆ; ಎಲ್ಲಕ್ಕಿಂತಲೂ ಮಿಗಿಲಾಗಿ ರಾಮಾಯಣವೇ ಜೀವನ ಎನಿಸಿದೆ. ಈ ಎಲ್ಲ ದಾರಿಗಳ ಸಂಗಮವೇ ‘ರಾಮಾಯಣ ರಸಯಾನ’.

ತಮಸಾನದಿಯ ತೀರ. ಆ ಕಾಲದಲ್ಲಿ ದೊಡ್ಡ ತಪಸ್ವಿಗಳು ಎಂದು ಹೆಸರಾದವರಲ್ಲಿ ಒಬ್ಬರು ವಾಲ್ಮೀಕಿ ಮಹರ್ಷಿ; ಅವರ ಆಶ್ರಮ ಅದೇ ತೀರದಲ್ಲಿತ್ತು. ನೆಮ್ಮದಿಯೇ ಅವರ ಆಭರಣ; ಪ್ರೀತಿಯೇ ಅವರ ಉಸಿರಾಟ. ಮೊದಲು ಅವರು ಹಾಗೆ ಇದ್ದವರಲ್ಲವಂತೆ; ಹಿಂಸೆಯಲ್ಲಿಯೇ ಮುಳುಗಿದ್ದವರಂತೆ; ಆಮೇಲೆ ಏನಾಯಿತೋ? ತಪಸ್ಸಿಗೆ ಕುಳಿತರಂತೆ. ಅದು ಏನು ಬದಲಾವಣೆ ಆಯಿತೋ? ಯಾರ ದರ್ಶನವಾಯಿತೋ? ಹಿಂಸೆ ಅನ್ನುವ ಶಬ್ದ ಕೇಳಿದರೂ ಸಾಕು, ಅಂತಃಕರಣದಲ್ಲಿ ಕರುಣೆಯ ಒರತೆ ಆರಂಭವಾಗುವಷ್ಟು ಅವರು ಮೆತ್ತಗಾಗಿಹೋದರು. ಅವರ ಈ ಬದಲಾವಣೆಯ ಹಿನ್ನೆಲೆಯಲ್ಲಿ ಏನೇನೋ ಕಥೆಗಳು; ಅವು ನಿಜವೆ? ಸುಳ್ಳೆ? ಹೇಳುವವರು ಯಾರು? ಆಶ್ರಮದವರಿಗೂ ಗೊತ್ತಿಲ್ಲ. ಯಾರಾದರೂ ಅವರ ಹಿಂದಿನ ಕಥೆಯ ಬಗ್ಗೆ ಮಾತನ್ನು ಎತ್ತಿದರೆ ‘ಅದನ್ನು ಕಟ್ಟಿಕೊಂಡು ಏನಾಗಬೇಕು?’ ಎನ್ನುವವರೇ ಎಲ್ಲರೂ. ಈಗ ಅವರು ನಮ್ಮ ಪಾಲಿಗೆ ತಾಯಿಯಾಗಿದ್ದಾರೆ. ಆ ತಾಯಿಗೂ ತಾಯಿಯಂತೆ ಇದ್ದಾರೆ; ಆ ತಾಯಿಯ ಮಕ್ಕಳಿಗೂ ತಾಯಿಯಂತೆಯೇ ಇದ್ದಾರೆ. ಜಗತ್ತಿನಲ್ಲಿ ತಾಯಿಯ ಬಗ್ಗೆ ಯಾರಾದರೂ ಸಂದೇಹಿಸುತ್ತಾರೆಯೆ? ತಾಯಿ ಎಂದರೆ ತಾಯಿ ಅಷ್ಟೆ; ತಾಯಿಯ ಜೊತೆ ‘ಕೆಟ್ಟ’ ಎಂಬ ಪದ ಎಂದಿಗೂ ಬೆರೆಯದು; ವಾಲ್ಮೀಕಿ ಮಹರ್ಷಿ ಎಂದರೆ ತಾಯ್ತನದ ಮೂರ್ತರೂಪ – ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರು.

ಆದರೆ ಅಂದು ವಾಲ್ಮೀಕಿಯ ಮನಸ್ಸು ಅಷ್ಟಾಗಿ ಸಮಾಧಾನದಲ್ಲಿ ಇರಲಿಲ್ಲ; ಉದ್ವೇಗ, ತಳಮಳ, ನಿರಾಶೆಗಳಿಂದ ಮನಸ್ಸು ಭಾರವಾಗಿದೆ. ಹಿಂದಿನ ರಾತ್ರಿ ಜೋರಾದ ಮಳೆಯಾಗಿತ್ತು; ತಮಸಾನದಿಯ ನೀರು ಕೂಡ ಇಂದು ಬಗ್ಗಡವಾಗಿತ್ತು. ‘ನಾನು ಅಷ್ಟು ನಂಬಿದವರೇ ಹೀಗಾದ ಮೇಲೆ, ಇನ್ನು ಯಾರನ್ನು ನೆಚ್ಚಿಕೊಳ್ಳುವುದು?’ ಈ ಪ್ರಶ್ನೆಯೇ ಅವರನ್ನು ಕಾಡುತ್ತಿದೆ. ‘ಎಂಥ ತಾಯಿಗೆ ಎಂಥ ಸ್ಥಿತಿ ಬಂತು? ಅದೂ ಎಂಥವರಿಂದ?’ ಅವರ ಈ ಪ್ರಶ್ನೆ ಮನಸ್ಸಿನಲ್ಲಿ ಮತ್ತೆ ಮತ್ತೆ ಸುಂಟರಗಾಳಿಯಂತೆ ಸುತ್ತುತ್ತಲೇ ಇದೆ. ‘ಅವನೇ ಹೀಗೆ ಮಾಡಿದ ಮೇಲೆ ಇತರರ ಪಾಡೇನು? ಕಾಲ ಕೆಟ್ಟುಹೋಯ್ತ! ಅಥವಾ ಯಾವ ಕಾಲದಲ್ಲೂ ಹೀಗೆಯೇ? ಅವನೊಬ್ಬನಾದರೂ ಕಾಲದ ಕಲ್ಮಶಗಳನ್ನು ಗೆದ್ದಿದ್ದಾನೆ ಎಂದು ಅಂದುಕೊಂಡಿದ್ದೆ. ಆದರೆ ಅವನೂ ಎಲ್ಲರಂತೆಯೇ ಆಗಿಹೋದ. ಹಾಗಾದರೆ ನಾನು ಅಂದುಕೊಂಡಂತೆ ಇಂದು ಒಬ್ಬನೂ ಇಲ್ಲವೆ?’ ಮನಸ್ಸನ್ನು ಎಷ್ಟು ಬಿಗಿಹಿಡಿಯಲು ಪ್ರಯತ್ನಿಸಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ.
ವಾಲ್ಮೀಕಿ ಮಹರ್ಷಿಯ ದುಗುಡ ನಾರದ ಮಹರ್ಷಿಗೆ ತಿಳಿಯಿತು. ಎಲ್ಲ ಲೋಕಗಳಿಗೂ ಸಂಚರಿಸಬಲ್ಲವರು ಈ ನಾರದ. ಹೀಗಾಗಿ ಅವರಿಗೆ ಎಲ್ಲ ಲೋಕಗಳ ಸುದ್ದಿಯೂ ಗೊತ್ತಿರುತ್ತದೆ; ಎಲ್ಲ ಜೀವಿಗಳ ತಳಮಳವೂ ತಿಳಿದಿರುತ್ತದೆ. ವಾಲ್ಮೀಕಿಗೆ ಒದಗಿದ ತಳಮಳದ ಸುಳಿವು ಸಿಕ್ಕಿ ಆಶ್ರಮಕ್ಕೆ ಬಂದಿದ್ದಾರೆ. ಉಭಯಕುಶಲೋಪರಿಯ ಮಾತುಗಳು ಅವರಿಬ್ಬರ ನಡುವೆ ಹೆಚ್ಚು ನಡೆಯಲಿಲ್ಲವೆನಿಸುತ್ತದೆ. ನಾರದರಿಗೆ ಪರಿಸ್ಥಿತಿಯ ಗಂಭೀರತೆ ತಿಳಿಯಿತು. ‘ಮಹರ್ಷಿ ವಾಲ್ಮೀಕಿ, ಏನು ನಿಮ್ಮ ದುಗುಡಕ್ಕೆ ಕಾರಣ?’ ಎಂದು ಕೇಳಿದರು, ಏನೂ ತಿಳಿಯದವರಂತೆ.

ವಾಲ್ಮೀಕಿ ರಾಮಾಯಣದ ಮೊದಲ ಶ್ಲೋಕದ ಹಿನ್ನೆಲೆಯ ಸಂಕ್ಷಿಪ್ತ ಸ್ವರೂಪ ಇಷ್ಟು ಎನ್ನಬಹುದು.

ತಪಃಸ್ವಾಧ್ಯಾಯನಿರತಂ ತಪಸ್ವೀ ವಾಗ್ವಿದಾಂ ವರಮ್ |
ನಾರದಂ ಪರಿಪಪ್ರಚ್ಛ ವಾಲ್ಮೀಕಿರ್ಮುನಿಪುಂಗವಮ್‌ ||

ಇದು ರಾಮಾಯಣದ ಪ್ರಥಮ ಶ್ಲೋಕ. ‘ತಪಸ್ಸು ಮತ್ತು ಸ್ವಾಧ್ಯಾಯದಲ್ಲಿ ನಿರತರೂ ಮಾತಿನಲ್ಲಿ ಸಿದ್ಧಿಯನ್ನು ಪಡೆದವರೂ ಆದ ನಾರದಮಹರ್ಷಿಗಳನ್ನು ಕುರಿತು ಮುನಿಗಳಲ್ಲಿ ಶ್ರೇಷ್ಠರಾದ ವಾಲ್ಮೀಕಿಗಳು ಪ್ರಶ್ನೆ ಮಾಡಿದರು’ – ಇದು ಈ ಶ್ಲೋಕದ ಭಾವಾರ್ಥ.

ಈ ಮೊದಲನೆಯ ಶ್ಲೋಕವೇ ಸ್ವಾರಸ್ಯಕರವಾಗಿದೆ. ರಾಮಾಯಣದ ಮೊದಲ ಪದಗಳು – ‘ತಪಸ್ಸು’ ಮತ್ತು ‘ಸ್ವಾಧ್ಯಾಯ’ಗಳು; ಅದರ ಮೊದಲ ಆಶಯ ಎಂದರೆ ಪ್ರಶ್ನೆ. ಬಹುಶಃ ಈ ಕಾರಣದಿಂದಲೇ ರಾಮನನ್ನು ನಾವು ಈಗಲೂ ಪ್ರಶ್ನಿಸುತ್ತಲೇ ಇದ್ದೇವೆ ಎನಿಸುತ್ತದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT