ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷ ಲೇಖನ: ವಾಲ್ಮೀಕಿ ಎಂಬ ಕರುಣಾಲಹರಿ

Last Updated 9 ಅಕ್ಟೋಬರ್ 2022, 2:34 IST
ಅಕ್ಷರ ಗಾತ್ರ

ನಮ್ಮ ದೇಶದ ಆದಿಕವಿ ವಾಲ್ಮೀಕಿ ಮಹರ್ಷಿ; ಅವನು ರಚಿಸಿದ ಮಹಾಕಾವ್ಯ ರಾಮಾಯಣ ನಮ್ಮ ಸಂಸ್ಕೃತಿಯ ಆದಿಕಾವ್ಯ.

ವಾಲ್ಮೀಕಿಯ ಹೆಸರು ಇಂದು ನಮಗೆ ಉಳಿದುಬಂದಿರುವುದೇ ರಾಮಾಯಣದಿಂದ. ಆದರೆ ಸ್ವಾರಸ್ಯ ಎಂದರೆ ರಾಮಾಯಣದಲ್ಲಿ ವಾಲ್ಮೀಕಿಯ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚೇನೂ ಮಾಹಿತಿ ಸಿಗುವುದಿಲ್ಲ. ಬಾಲಕಾಂಡ ಮತ್ತು ಉತ್ತರಕಾಂಡಗಳಲ್ಲಿ ಸ್ವಲ್ಪ ವಿವರಗಳು ಸಿಗುತ್ತವೆ, ದಿಟ. ಆದರೆ ಅವುಗಳಿಂದ ಸಮಗ್ರ ಜೀವನವನ್ನು ಕಟ್ಟಿಕೊಳ್ಳಲು ನಮಗೆ ಸಾಧ್ಯವಾಗದು. ಹೀಗಿದ್ದರೂ ನಮಗೆ ವಾಲ್ಮೀಕಿ ಪೂಜ್ಯನಾಗಿದ್ದಾನೆ; ನಮ್ಮ ನಿತ್ಯಜೀವನದ ಅವಿಭಾಜ್ಯ ಅಂಗವಾಗಿದ್ದಾನೆ. ವ್ಯಕ್ತಿಯೊಬ್ಬನ ವಿವರಗಳ ನಮಗೆ ಗೊತ್ತಿಲ್ಲದಿದ್ದರೂ ಅವನು ನಮಗೆ ಪೂಜಾರ್ಹನಾಗಿದ್ದಾನೆ ಎಂಬುದು ನಿಜಕ್ಕೂ ವಿಚಾರಾರ್ಹ. ವಾಲ್ಮೀಕಿಗೆ ಗೌರವ ದೊರೆತಿರುವುದು ಅವನ ಕೃತಿಯಿಂದಲೇ ಹೌದು. ನಮಗೆ ವಾಲ್ಮೀಕಿಯ ಬದುಕಿನ ಬಗ್ಗೆ ಗೊತ್ತಿಲ್ಲದಿರಬಹುದು; ಆದರೆ ರಾಮಾಯಣವನ್ನು ಓದಿದರೆ ನಮಗೆ ಅವನ ಭವ್ಯ ವ್ಯಕ್ತಿತ್ವದ ಮಹಾದರ್ಶನವೇ ಆಗುತ್ತದೆ.

ಇಂದಿಗೂ ನಮ್ಮ ದೇಶದಲ್ಲಿ ರಾಮಾಯಣವು ಪಾರಾಯಣ ಗ್ರಂಥ. ಮಾತ್ರವಲ್ಲ, ಈ ಮಹಾಕಾವ್ಯ ನಮ್ಮ ಸಂಸ್ಕೃತಿಯನ್ನೂ ರೂಪಿಸಿದ ಮಹಾಕೃತಿ. ಈ ಕೃತಿಗೆ ಭಿತ್ತಿಯೇ ವಾಲ್ಮೀಕಿ ಮಹರ್ಷಿಯ ಮಹಾಪ್ರತಿಭೆ. ಇಲ್ಲಿ ಇನ್ನೊಂದು ಸ್ವಾರಸ್ಯವೂ ಉಂಟು. ವಾಲ್ಮೀಕಿಯಲ್ಲಿ ಅಡಗಿದ್ದ ಪ್ರತಿಭೆ ಅನಾವರಣಗೊಂಡದ್ದು ಅವನ ಅಂತರಂಗದಲ್ಲಿ ದಟ್ಟವಾಗಿ ನೆಲೆಯಾಗಿದ್ದ ಕಾರುಣ್ಯದಿಂದಲೇ ಎನ್ನುವುದೂ ಗಮನಾರ್ಹ. ಪುಟ್ಟ ಹಕ್ಕಿಯೊಂದರ ಅಳುವಿಗೆ ಕಿವಿಯಾದವನು ಮಹರ್ಷಿ ವಾಲ್ಮೀಕಿ; ಆ ಹಕ್ಕಿಯ ರೋದನದಲ್ಲಿ ಇಡಿಯ ಜಗತ್ತಿನ ಆಕ್ರಂದನವನ್ನು ಅವನು ಕೇಳಿದ. ಎಲ್ಲರ ಆಕ್ರಂದನದ ಧ್ವನಿಯಾಗಿ ಸೀತಾರಾಮರ ದುಃಖವನ್ನೂ ಕಷ್ಟವನ್ನೂ ನಿರೂಪಿಸಿದ. ಇಡಿಯ ರಾಮಾಯಣದ ಉದ್ದಕ್ಕೂ ನಮಗೆ ಕೇಳುವುದು ಆ ಹಕ್ಕಿಯ ರೋದನವೇ ಹೌದು; ಆ ಹಕ್ಕಿಯ ಗೋಳಾಟಕ್ಕೆ ಸ್ಪಂದಿಸಿದ ವಾಲ್ಮೀಕಿಯ ಕರುಣಾಲಹರಿಯನ್ನೇ ಹೌದು. ಕರುಣೆ ಎಂಬುದು ಮಹಾಮೌಲ್ಯವೇ ಹೌದು ಎಂಬುದನ್ನು ರಾಮಾಯಣ ಸ್ಥಿರಪಡಿಸಿದೆ.

ಯಾರೊಬ್ಬರ ಸಂತೋಷದ ಹದವನ್ನು ಇನ್ನೊಬ್ಬರು ಕೆಡಿಸುವುದು ಪಾಪಕಾರ್ಯ – ಎಂಬುದು ರಾಮಾಯಣ ನೀಡುತ್ತಿರುವ ಹಲವು ಸಂದೇಶಗಳಲ್ಲಿ ಒಂದು. ಆ ಒಂದು ಜೋಡಿಹಕ್ಕಿಗಳ ಸಂತೋಷವನ್ನು ಬೇಡನೊಬ್ಬ ನಾಶಗೊಳಿಸಿದ; ಸೀತಾರಾಮರ ಸಂತೋಷವನ್ನು ರಾಕ್ಷಸನೊಬ್ಬ ನಾಶಗೊಳಿಸಿದ. ಬೇಡನೊಬ್ಬನಿಗೆ ಬೇಟೆಯಾಡುವುದು ನಿಷೇಧವೇನಲ್ಲ. ಹೀಗೆಯೇ ಪುರುಷನೊಬ್ಬ ಹೆಣ್ಣನ್ನು ಬಯಸುವುದೂ ತಪ್ಪಲ್ಲ. ಆದರೆ ಬೇಟೆಗೂ ನಿಯಮಗಳಿವೆ; ಇರಬೇಕು. ಗಂಡು–ಹೆಣ್ಣಿನ ಬಯಕೆಗಳಿಗೂ ಕಟ್ಟುಪಾಡುಗಳಿವೆ; ಇರಬೇಕು. ಯಾವಾಗ ಬೇಟೆ ಸರಿ, ಯಾವಾಗ ತಪ್ಪು; ಯಾವ ಹೆಣ್ಣನ್ನು ಬಯಸಬಹುದು, ಯಾರನ್ನು ಬಯಸಬಾರದು – ಇಂಥ ಜಿಜ್ಞಾಸೆ ಜೀವನದಲ್ಲಿ ಮುಖ್ಯ. ಇಂಥ ಚಿಂತನೆಯನ್ನೇ ‘ಧರ್ಮ‘ ಎಂದು ಸಂಸ್ಕೃತಿ ಒಕ್ಕಣಿಸುವುದು. ವಾಲ್ಮೀಕಿ ತನ್ನ ಕಾವ್ಯದ ಉದ್ದಕ್ಕೂ ನಡೆಸುವುದು ಇಂಥ ಧರ್ಮಜಿಜ್ಞಾಸೆಯನ್ನೇ ಹೌದು. ಆದರೆ ಇದು ಕೇವಲ ಬೇಟೆಗೂ ಬೇಟಕ್ಕೂ ಸೀಮಿತವಾಗಿಲ್ಲ; ನಮ್ಮ ಜೀವನದಲ್ಲಿ ಎದುರಾಗುವ ಎಲ್ಲ ವಿಧದ ಆಸೆ–ನಿರಾಸೆಗಳ ಸಂದರ್ಭಕ್ಕೂ ಒದಗುವಂಥ ಮೌಲ್ಯಮೀಮಾಂಸೆಯನ್ನು ರಾಮಾಯಣದಲ್ಲಿ ಕಾಣಬಹುದಾಗಿದೆ. ನಮ್ಮೆಲ್ಲರಿಗೂ ಎದುರಾಗುವ, ನಾವೆಲ್ಲರೂ ಬಯಸುವ ಜೀವನದ ಮಹಾಸಾಮಗ್ರಿಯನ್ನೇ ಶಾಸ್ತ್ರಗಳು ‘ಪುರುಷಾರ್ಥ’ ಎಂದು ಕರೆದಿರುವುದು. ವಾಲ್ಮೀಕಿ ಮಹರ್ಷಿಯು ರಾಮಾಯಣದಲ್ಲಿ ನಡೆಸಿರುವುದೇ ಈ ಪುರುಷಾರ್ಥಗಳ ಮೌಲ್ಯಮೀಮಾಂಸೆಯನ್ನು. ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ – ಎಂಬ ನಾಲ್ಕು ಪುರುಷಾರ್ಥಗಳು ಯಾವುದೋ ‘ರಾಮಯಣಕಾಲ’ಕ್ಕೆ ಮಾತ್ರವೇ ಸಲ್ಲುವಂಥ ವಿವರಗಳಲ್ಲ; ಅವು ಅಂದಿನಿಂದ ಇಂದಿನವರೆಗೂ, ಒಟ್ಟು ಮಾನವಕುಲವನ್ನೇ ಆಳುತ್ತಿರುವ ಸಂಗತಿಗಳು. ಹೀಗಾಗಿಯೇ ರಾಮಾಯಣ ನಮಗೆ ಇಂದಿಗೂ ಆದರ್ಶವಾಗಿದೆ; ಅದರ ಕರ್ತೃ ವಾಲ್ಮೀಕಿ ಮಹರ್ಷಿ ಇಂದಿಗೂ ಪೂಜಾರ್ಹನಾಗಿದ್ದಾನೆ. v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT