ಸೋಮವಾರ, ಜೂನ್ 1, 2020
27 °C

ಸಂಸ್ಕೃತಿ ಸಂಭ್ರಮ | ಏಕಾಂತ ಎಂಬ ಧ್ಯಾನ

ದೀಪಾ ಫಡ್ಕೆ Updated:

ಅಕ್ಷರ ಗಾತ್ರ : | |

ಗುರು ವ್ಯಾಸರಾಯರು ಒಮ್ಮೆ ಕನಕದಾಸರಿಗೂ ಉಳಿದ ಶಿಷ್ಯಂದಿರಿಗೂ ತಲಾ ಒಂದೊಂದು ಬಾಳೆಹಣ್ಣನ್ನು ಕೊಟ್ಟು ’ಏಕಾಂತ‘ದಲ್ಲಿ, ಯಾರೂ ಇಲ್ಲದ ಕಡೆ ತಿಂದು ಬರಬೆಕೆಂದು ಹೇಳಿದರು.

ಬಾಗಿಲಿನ ಸಂದಿಯಲಿ, ಕೋಣೆಯ ಕತ್ತಲಲಿ, ಮುಸುಕೆಳೆದುಕೊಂಡು ಯಾರೂ ಇಲ್ಲದಿದ್ದ ಕಡೆ – ಹೀಗೆ ಒಬ್ಬೊಬ್ಬ ಶಿಷ್ಯ ಒಂದೊಂದು ರೀತಿಯ ’ಏಕಾಂತ‘ದಲ್ಲಿ ಬಾಳೆಹಣ್ಣನ್ನು ತಿಂದು ಬಂದರು; ದಾಸರ ದಾಸ ಕನಕದಾಸರು ವಿಷಾದದಿಂದ ಹಣ್ಣನ್ನು ಹಾಗೇ ತಂದು ಮೌನವಾಗಿ ಗುರುಗಳ ಮುಂದೆ ನಿಂತರು.

ಗುರುಗಳು ಕಾರಣ ಕೇಳಿದಾಗ ’ಹರಿಯಿಲ್ಲದ ಏಕಾಂತ ಸ್ಥಳ ಸಿಗಲೇ ಇಲ್ಲ ಗುರುಗಳೇ‘ ಎಂದು ಕನಕದಾಸ; ಗುರುಗಳು ಗೆದ್ದ ಭಾವದಿಂದ ಬೀಗಿದ್ದರು. ಭಕ್ತರ ಭಕ್ತ ಕನಕದಾಸರಿಗೆ ಎಲ್ಲೆಡೆಯೂ – ಹೊರಗೆ, ಒಳಗೆ – ಕೇಶವನೇ ತುಂಬಿದ್ದ. ಅವರ ಏಕಾಂತದಲ್ಲಿ ಸಂಪೂರ್ಣ ಹರಿಯೇ ತುಂಬಿದ್ದ. 

ಲೋಕಾಂತವೇ ಮೋಹಕವಾಗಿ ಕಾಣುವ ಈ ಹೊತ್ತಲ್ಲಿ ಏಕಾಂತದ ತೆಕ್ಕೆಯೊಳಗೆ ಇರುವ ಸುಖದ ಅರಿವಾಗಲು ಈ ಏಕಾಂತದ ಹತ್ತಿರ ನಾವು ಹೋಗಬೇಕಾಗುತ್ತದೆ. ’ಏಕಾಂತ‘ ನಮ್ಮ ಮನಸ್ಸಿನ ಜೊತೆ ಕಳೆಯುವ ಬೆಚ್ಚನೆಯ ಹೊತ್ತು. ಅದು ನಮ್ಮೊಳಗನ್ನು ಪುಷ್ಟಿಯಾಗಿಸುತ್ತದೆ, ಲಾಲಿಸುತ್ತದೆ. ಅದು ನಮ್ಮನ್ನು ಪರೀಕ್ಷಿಸುತ್ತದೆ. ಫಲಿತಾಂಶವನ್ನೂ ನೀಡುತ್ತದೆ. ಅದರ ಹೆಗಲೇರಿದರೆ ಅದು ಹೊತ್ತು ಸಾಗುವ ಗಮ್ಯತೆಯ ಅರಿವು ಪಯಣಿಗನಿಗೆ ದಕ್ಕುತ್ತದೆ.

ಏಕಾಂತಕ್ಕೆ ವಿವಿಧ ಮಜಲುಗಳು, ವಿವಿಧ ಸ್ತರಗಳು. ಒಬ್ಬನಿಗೆ ಒಂದು ಹಂತದಲ್ಲಿ ನಿರಾಳವೆನಿಸಿದರೆ, ಸಂತೋಷದ ಅನುಭವವಾದರೆ ಮತ್ತೊಬ್ಬನಿಗೆ ಅದು ಭಯವನ್ನೇ ಉಂಟುಮಾಡಬಹುದು. ಆದರೆ ಪ್ರಪಂಚದ ಸೃಜನಶೀಲ ಅಭಿವ್ಯಕ್ತಿ ಎಲ್ಲವೂ ಏಕಾಂತದ ಫಲವೆನ್ನಬಹುದು. ಅನೇಕ ಕವಿಗಳ, ಕಲಾವಿದರ ಏಕಾಂತ, ಅನೂಹ್ಯವೆನಿಸುವ ಫಲಗಳನ್ನು ಹೊತ್ತು ತಂದಿದೆ. ನಿಸಾರ್ ಅಹಮದ್ ಅವರ ’ಮತ್ತದೇ ಬೇಸರ ಅದೇ ಸಂಜೆ, ಅದೇ ಏಕಾಂತ‘ ಗೀತ ಸೃಜಿಸಿದ ಭಾವ ಬಲು ಆಪ್ತ. ಮನುಷ್ಯನ ಸೃಷ್ಟಿಯೂ ಗಂಡುಹೆಣ್ಣಿನ ಏಕಾಂತದ ಫಲವೇ ತಾನೇ!

ಏಕಾಂತ ದೇವರನ್ನೂ ಬಿಟ್ಟಿಲ್ಲ! ಏಕಾಂತಸೇವೆಯೆನ್ನುವ ವಿಶೇಷ ಸೇವೆ ದೇಗುಲಗಳಲ್ಲಿ ನಡೆಯುತ್ತದೆ. ಏಕಾಂತದ ಫಲಪುರಾಣ ದೊಡ್ಡದೇ ಇದೆ. ಅದು ಕೆಲವರಲ್ಲಿ ಒತ್ತಡ, ಖಿನ್ನತೆಯನ್ನೂ ಮೂಡಿಸುತ್ತದೆ. ಲಾಕ್‍ಡೌನಿನ ಕಾರಣ ಕುಟುಂಬದಿಂದ ದೂರವಿರುವ ಅನೇಕರಲ್ಲಿ ಬಯಸದೇ ಬಂದ ಏಕಾಂತ ಖಿನ್ನತೆಯನ್ನೂ ಮೂಡಿಸಿದ್ದು ಹೌದು. ಇದಕ್ಕೆ ಸರಳ ಉಪಾಯವೂ ಅದೇ ಏಕಾಂತದ ಮಡಿಲಲ್ಲಿದೆ. ಏಕಾಂತ ಮೂಡಿಸುವ ಗಂಭೀರ ಮೌನದೊಂದಿಗೆ ಮೆಲುವಾಗಿ ಸಂಭಾಷಿಸಲು, ಸಂವಾದಿಸಲು ತೊಡಗಿದರೆ ಏಕಾಂತವೂ ಸುಖವಾಗಬಹುದು. ಧ್ಯಾನ, ಪ್ರಾರ್ಥನೆ ಇವೆಲ್ಲ ನಿಜಕ್ಕೂ ಏಕಾಂತದ ಆಚರಣೆಗಳು. ಒಂದಷ್ಟು ಹೊತ್ತನ್ನು ಏಕಾಂತದ ತೆಕ್ಕೆಯೊಳಗೆ ಸವಿದು ಒಳಗಿನ ಸೌಂದರ್ಯವನ್ನು ವರ್ಧಿಸಿಕೊಂಡರೆ ಹೊರಗಿನ ಪ್ರಪಂಚ ಇನ್ನೂ ಸುಂದರವಾಗಿ ಕಾಣಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.