ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗು: ದೇವತೆಗಳಿಗೂ ಬೇಕಾದ ರಸ

Last Updated 1 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ

ಬಾಲಕ ತೆನಾಲಿ ರಾಮನಿಗೊಮ್ಮೆ ಕಾಳಿಕಾದೇವಿ ಪ್ರತ್ಯಕ್ಷಳಾದಳಂತೆ. ಆ ಭಯಂಕರರೂಪವನ್ನು ನೋಡಿ ಭಯವಾಗುವ ಬದಲು, ಆತನಿಗೆ ನಗೆ ಬಂತಂತೆ. ಬಿದ್ದುಬಿದ್ದು ನಗುತ್ತಾ ‘ಅಲ್ಲಮ್ಮಾ ತಾಯಿ, ನಿನಗೇನಾದರೂ ನೆಗಡಿ ಬಂದರೇನು ಗತಿ, ಇರುವ ಇಷ್ಟು ಕೈಯಲ್ಲಿ ಅಷ್ಟೊಂದು ಮೂಗುಗಳನ್ನ ಹೇಗೆ ಸಂಬಾಳಿಸುತ್ತೀ’ ಎಂದನಂತೆ. ಅದನ್ನು ಕೇಳಿ ಆ ತಾಯಿ ಸಿಟ್ಟುಗೊಂಡು ರಾಮನ ತಲೆ ಕಡಿಯಲಿಲ್ಲ. ಬದಲಿಗೆ ನಸುನಾಚಿ, ತನ್ನ ಘೋರರೂಪವನ್ನು ಉಪಸಂಹರಿಸಿ ನಗುನಗುತ್ತಾ ರಾಮನ ಬಳಿ ಕುಳಿತು ಅನುಗ್ರಹಿಸಿದಳಂತೆ. ಇದು ಕಥೆ - ಇದು ಪರಂಪರೆ ಕೂಡ.

ನಮ್ಮ ಪಾಲಿಗೆ ದೈವವೆಂದರೆ ಅಲ್ಲೆಲ್ಲೋ ಕುಳಿತು ಉತ್ಪಾತಗಳ ಬಾರುಕೋಲು ಹಿಡಿದು ಬೆದರಿಸಿ ಬಗ್ಗಿಸುವ ಶಕ್ತಿಯಲ್ಲ, ನಮ್ಮ ಬದುಕಿನ ಒಂದು ರಸಭಾಗವದು, ಬೇಕೆಂದರೆ ಎದುರು ಬಂದು ಹೆಗಲ ಮೇಲೆ ಕೈಯಿಟ್ಟು ಮಾತಾಡಬಲ್ಲುದು, ನಗಿಸಿದರೆ ನಗಬಲ್ಲುದು, ಮುನಿದರೆ ಸಂತೈಸಬಲ್ಲುದು, ತಾನೇ ಮುನಿದು ಕೂತು ಸಂತಯಿಕೆ ಬೇಡಬಲ್ಲುದು ಕೂಡ. ನಿರ್ಗುಣೋಪಾಸನೆಯ ಜ್ಞಾನಮಾರ್ಗಕ್ಕಿಂತ ಸಗುಣೋಪಾಸನೆಯ ಭಕ್ತಿಮಾರ್ಗವೇ ಸುಖ ಜೀವಕ್ಕೆ. ದೈವಕ್ಕೆ ನಮ್ಮಂತೆಯೇ ಕಣ್ಣು ಮೂಗು, ಕೈಕಾಲು, ಒಂದೆರಡೋ ಮೂರೋ ಐದೋ ಕೈ ತಲೆ ಕಣ್ಣುಗಳು ಹೆಚ್ಚಿದ್ದರೂ ನಮಗೆ ಮೆಚ್ಚೇ. ಡೊಳ್ಹೊಟ್ಟೆಯ ಗಣಪನಾಗಲಿ, ಕಪಿಮುಖದ ಹನುಮನಾಗಲೀ, ಬೆಣ್ಣೆಕಳ್ಳ ಕೃಷ್ಣನಾಗಲೀ ಆಪ್ತದೈವಗಳೇ. ಇನ್ನು ದೇವದೇವಿಯರ ಪ್ರಣಯ-ಕಲಹಗಳೂ ನಮಗೆ ಬೇಕು - ಕವಿಗಳಿಗಂತೂ ಇದು ಗಣಿಯಿದ್ದಂತೆ.

‘ಸದುಕ್ತಿಕರ್ಣಾಮೃತ’ದಲ್ಲಿ ಭವಭೂತಿಯದ್ದೆನ್ನಲಾದ ಈ ಸುಂದರಶ್ಲೋಕವನ್ನು ನೋಡಿ:

ಕಾಂ ತಪಸ್ವೀ ಗತೋsವಸ್ಥಾಮಿತಿ ಸ್ಮೇರಾವಿವ ಸ್ತನೌ ವಂದೇ ಗೌರೀಘನಾಶ್ಲೇಷಭವಭೂತಿಸಿತಾನನೌ

ತಪಸ್ವಿಯಾದ ಶಂಕರನೊಮ್ಮೆ ಸರಸೋತ್ಸಾಹದಲ್ಲಿ ಗೌರಿಯನ್ನು ಬಿಗಿದಪ್ಪಿಕೊಂಡಿದ್ದಾನೆ. ಅವನ ಮೈಗೆ ಬಳಿದ ಬೂದಿ ಆಕೆಯ ಸ್ತನಗಳಿಗೂ ಮೆತ್ತಿಕೊಂಡು ಅವು ಬೆಳ್ಳಗಾಗಿವೆ. ‘ಅಯ್ಯೋ, ಈ ತಪಸ್ವಿಯ ಅವಸ್ಥೆಯನ್ನು ನೋಡು’ ಎಂದು ಶಿವನನ್ನು ಗೇಲಿ ಮಾಡುತ್ತಿರುವಂತೆ ಕಾಣುವ ಆ ಸ್ತನಯುಗ್ಮಕ್ಕೆ ನಮಸ್ಕಾರಗಳು ಎನ್ನುತ್ತಾನೆ, ಕವಿ.

ಇಬ್ಬರ‍್ಹೆಂಡಿರ ಕಾಟ - ಗಾದೆಯೇ ಇದೆಯಲ್ಲ. ಇದು ದೇವದೇವನಿಗೂ ತಪ್ಪಿದ್ದಲ್ಲ. ಶಿವನಿಗೊದಗಿದ ಈ ಪಜೀತಿಯನ್ನು ಅಜ್ಞಾತಕವಿಯೊಬ್ಬ ಚಿತ್ರಿಸಿರುವ ಪರಿ ನೋಡಿ:

ಪ್ರಣಯಕುಪಿತಾಂ ದೃಷ್ಟ್ವಾ ದೇವೀಂ ಸಸಂಭ್ರಮವಿಸ್ಮಿತ ಸ್ತ್ರಿಭುವನಗುರುರ್ಭೀತ್ಯಾ ಸದ್ಯಃಪ್ರಣಾಮಪರೋ ಭವತ್| ನಮಿತಶಿರಸೋ ಗಂಗಾಲೋಕೇ ತಯಾ ಚರಣಾಹತಾ ವವತು ಭವತಸ್ತ್ರ್ಯಕ್ಷಸ್ಯೈತದ್ವಿಲಕ್ಷಮವಸ್ಥಿತಮ್ ||

ಪ್ರಣಯಕಲಹವೊಂದರಲ್ಲಿ ಪಾರ್ವತಿ ಕುಪಿತಳಾಗಿದ್ದಾಳೆ, ಅದನ್ನು ಸಂಭ್ರಮವಿಸ್ಮಯಗಳಿಂದ ವೀಕ್ಷಿಸುವ ಶಂಕರನು ಭಯವನ್ನಭಿನಯಿಸುತ್ತಾ ಆಕೆಯನ್ನು ರಮಿಸಲು ಅವಳ ಕಾಲಿಗೇ ಬಿದ್ದಿದ್ದಾನೆ (Acting over smart ಎಂದರೆ ಇದೇ ಇರಬೇಕು). ಗ್ರಹಚಾರ, ಮೊದಲೇ ಕೋಪಗೊಂಡಿರುವ ಪಾರ್ವತಿಗೆ ಆತನ ಬಾಗಿದ ತಲೆಯ ಮೇಲೆ ಮನೆಮಾಡಿದ್ದ ಗಂಗೆ ಕಣ್ಣಿಗೆ ಬೀಳಬೇಕೇ? ಇನ್ನಷ್ಟು ಕೆರಳಿ, ತಲೆವಾಗಿದ ಶಿವನನ್ನೇ ಒದ್ದುಬಿಟ್ಟಿದ್ದಾಳೆ. ಆ ಮುಕ್ಕಣ್ಣನಿಗೊದಗಿದ ಇಂತಹ ವಿಲಕ್ಷಣಸ್ಥಿತಿ ನಮ್ಮನ್ನು ಕಾಪಾಡಲಿ ಎನ್ನುತ್ತಾನೆ, ಕವಿ.

ಗಂಗೆಯೆಂದರೆ ನೆನಪಾಗುವುದು ತೆಲುಗುಕವಿ ಶ್ರೀನಾಥನ ಇನ್ನೊಂದು ಚಾಟುಪದ್ಯ. ಆತನೊಮ್ಮೆ ವಿಜಯನಗರದ ಸೀಮೆಯಲ್ಲಿ ಪಯಣಿಸುತ್ತಿದ್ದಾಗ ಅಲ್ಲಿನ ನೀರಿನ ಹಾಹಾಕಾರವನ್ನು ಕಂಡು ಬೇಸರಗೊಂಡು ಶಿವನನ್ನೇ ದಬಾಯಿಸಿದನಂತೆ:

ಸಿರಿಗಲವಾಡಿಕಿ ಚೆಲ್ಲುನು

ತರುಣುಲ್ಪದಿಯಾರುವೇಲ ತಗ ಪೆಂಡ್ಲಾಡನ್ |

ತಿರಿಪೆಮುನ ಕಿದ್ದರಾಂಡ್ರಾ
ಪರಮೇಶಾ ಗಂಗ ವಿಡುಮು ಪಾರ್ವತಿ ಚಾಲುನ್ ||

(ಸಿರಿವಂತನು ಹದಿನಾರು ಸಾವಿರ ಮದುವೆ ಯಾದರೂ ಆದೀತು, ಅಯ್ಯಾ ಪರಮೇಶಾ, ತಿರುಪೆಯೆತ್ತುವ ನಿನಗೆ ಇಬ್ಬರು ಹೆಂಡಿರೇಕಯ್ಯಾ? ಗಂಗೆಯನ್ನಿತ್ತ ಕಳಿಸು, ನಿನಗೆ ಪಾರ್ವತಿಯೊಬ್ಬಳೇ ಸಾಕು)

ಭಗವಂತನಲ್ಲಿ ಭಕ್ತನ ಸಲುಗೆಯೋ! ದೇವನೇನೋ ಭಯಕೃದ್ಭಯನಾಶನನಿರಬಹುದು, ಆದರೆ ಭಕ್ತನೇನು ಕಡಿಮೆಯಲ್ಲ. ಕೆಲವೊಮ್ಮೆ ಭಕ್ತನೇ ದೇವನನ್ನು ಮಹದಪವಾದದಿಂದ ರಕ್ಷಿಸಿಕೊಳ್ಳುವುದೂ ಉಂಟು. ಯುದ್ಧದಲ್ಲಿ ಚಕ್ರವಿಡಿಯೆನೆಂದು ಪ್ರತಿಜ್ಞೆಮಾಡಿದ ಕೃಷ್ಣನನ್ನು ಕೆರಕೆರಳಿಸಿ ಭಯಂಕರಕೋಪದಿಂದ ಚಕ್ರವಿಡಿಯುವಂತೆ ಮಾಡುವ ಭೀಷ್ಮ, ಲೋಕಕ್ಕೆ ಬಂದ ಆ ಆಪತ್ತನ್ನು ತನ್ನ ಭಕ್ತಿಯಿಂದಲೇ ನಿವಾರಿಸಿ, ಲೋಕವನ್ನೂ ದೇವನನ್ನೂ ಒಟ್ಟಿಗೇ ಕಾಯ್ದುಕೊಳ್ಳುತ್ತಾನೆ. ‘ನೆಚ್ಚಿನಾಳಿನ ಬಿನ್ನಹಕೆ ಹರಿ ಮೆಚ್ಚಿ ಮನದಲಿ ನಾಚಿ ಚಕ್ರವ ಮುಚ್ಚಿದ’ – ಈ ಸಂದರ್ಭವನ್ನು ಬಹು ಮನೋಜ್ಞವಾಗಿ ಚಿತ್ರಿಸುವ ಕುಮಾರವ್ಯಾಸ, ಆ ಪ್ರಸಂಗಕ್ಕೆ ಬರೆಯುವ ಭರತವಾಕ್ಯವನ್ನು ನೋಡಿ:

ಹೋದುದೊಂದಪಮೃತ್ಯು ಲೋಕಕೆ
ತೀದುದಿಲ್ಲಾಯುಷ್ಯ, ಮಹದಪ
ವಾದ ದೇವಂಗಾಗಿ ತಪ್ಪಿತು ಮುಚ್ಚು ಮರೆಯೇಕೆ? ಕಾದುಕೊಂಡನು ಭೀಷ್ಮನೀ ಕಮ

ಲೋದರನ ಕೆರಳಿಚಿಯು ಭಕುತಿಯ
ಲಾದರಿಸಿದನು ಪುಣ್ಯವೆಂದನು ಕಮಲಭವ ನಗುತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT