ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಲುಬೆ: ಸೋಲಿನ ಪಾಡೋ ಜಯದ ಹಾಡೋ

ಇಂದು ಗುಡ್‌ ಫ್ರೈಡೇ
Last Updated 14 ಏಪ್ರಿಲ್ 2022, 17:48 IST
ಅಕ್ಷರ ಗಾತ್ರ

ಇಂದು ‘ಗುಡ್ ಫ್ರೈಡೇ’ ಅಥವಾ ‘ಶುಭ ಶುಕ್ರವಾರ’. ಯೇಸುವನ್ನು ಕಲ್ವಾರಿ ಬೆಟ್ಟದಲ್ಲಿ ಶಿಲುಬೆಗೇರಿಸಿದ ದಿನ.

ಶಿಲುಬೆಯು ಕ್ರೈಸ್ತರ ಪವಿತ್ರ ಮತ್ತು ಪ್ರಮುಖ ಸಂಕೇತ. ಸಾಮಾನ್ಯ ನೋಟಕ್ಕೆ ಶಿಲುಬೆಯು ಶಾಪದ, ಪಾಪದ ಹಾಗೂ ಶಿಕ್ಷೆಯ ಸಾಧನ. ಆದರೆ ಯೇಸುವು ಶಿಲುಬೆಯಲ್ಲಿ ಮರಣ ಹೊಂದಿದ ನಂತರ ಅದೊಂದು ಪ್ರೀತಿಯ, ಕ್ಷಮೆಯ ಹಾಗೂ ಬಿಡುಗಡೆಯ ಸಾಧನವಾಯಿತು. ಯೇಸುವಿಗಿಂತ ಮೊದಲು ಶಿಲುಬೆಯು ಶಿಕ್ಷೆ ನೀಡುವ ಅಸ್ತ್ರವಾಗಿತ್ತು. ಕಳ್ಳ, ಅಪರಾಧಿ, ದುಷ್ಕರ್ಮಿ, ತಪ್ಪಿಸಿ ಓಡಿಹೋದ ಗುಲಾಮ, ಕ್ರಾಂತಿಕಾರಿ, ಪ್ರತಿಭಟನಕಾರ ಮುಂತಾದವರಿಗೆ ರೋಮನ್ನರು ಶಿಲುಬೆಯ ಶಿಕ್ಷೆ ನೀಡುತ್ತಿದ್ದರು. ಹೀಗಾಗಿ ಅದೊಂದು ಮರಣದಂಡನೆಯ ಶಿಕ್ಷೆಯಾಗಿತ್ತು.

ಯೇಸುಕ್ರಿಸ್ತರು ಶಿಲುಬೆಗೆ ಹೆಗಲು ನೀಡಿದರು. ಹೀಗೆ ಶಿಲುಬೆಯು ಕಷ್ಟ, ನೋವು, ವೇದನೆ ಹಾಗೂ ವ್ಯಥೆಯಲ್ಲಿರು ವವರಿಗೆ ಭರವಸೆಯ ಪ್ರತೀಕವಾಯಿತು. ಶಿಲುಬೆಯ ಮುಖಾಂತರ ಸಮಾಜದಲ್ಲಿನ ಕೊನೆಯ ಅಥವಾ ಕಟ್ಟಕಡೆಯ ವ್ಯಕ್ತಿಗೂ ಯೇಸು ಸಾರಿದ ದೇವರ ಪ್ರೀತಿ ವ್ಯಕ್ತವಾಯಿತು. ಶಿಲುಬೆಯ ಮುಖಾಂತರ ಯೇಸು ಕಲಿಸಿದ ಸಹನೆ, ತ್ಯಾಗ, ಸಮಾಧಾನ, ಶಾಂತಿ, ಕ್ಷಮೆ, ಕರುಣೆ ಮತ್ತು ಪ್ರೀತಿಯಿಂದ ಮಾತ್ರ ಒಳ್ಳೆಯ ಬಾಳು ಹಾಗೂ ಸಮಾಜ ಸಾಧ್ಯ ಎಂಬುದನ್ನು ನಾವು ಮನಗಾಣಬೇಕು.

ಶಿಲುಬೆಯ ಹಿಂದಿನ ಹಾದಿ ನೋಡಿದರೆ ಅದೊಂದು ಸೋಲು, ನಿರಾಶೆ, ಕೇಡು, ನಿಂದನೆ, ನೋವು, ವೇದನೆ, ಅವಹೇಳನ, ಅಸಹ್ಯ ಎಂಬಿತ್ಯಾದಿ ಗೋಳು ಅಥವಾ ಪಾಡು. ಆದರೆ ಶಿಲುಬೆಯ ನಂತರದ ಅನುಭವ ಜಯ, ಸಂತೋಷ, ಶಾಂತಿ, ಧೈರ್ಯ, ಹುಮ್ಮಸ್ಸು, ಭರವಸೆ, ಆತ್ಮವಿಶ್ವಾಸ, ಬಿಡುಗಡೆ, ಸಮಾಧಾನದ ಹಾಡು. ಇದನ್ನು ಯೇಸು ‘ಗೋಧಿಯ ಕಾಳು ಸತ್ತರೆ ಮಾತ್ರ ಸಮೃದ್ಧಿಯಾದ ಫಲವನ್ನು ಕೊಡುತ್ತದೆ’ ಎಂಬ ಮಾತಿನಲ್ಲಿ ಸ್ಪಷ್ಟಪಡಿಸಿದ್ದಾರೆ (ಬೈಬಲ್, ಯೊವಾನ್ನ 12:24).

ಶಿಲುಬೆಯನ್ನೊಮ್ಮೆ ನೋಡಿದಾಗ ಎಲ್ಲರ ಬಾಳಿನಲ್ಲೂ ಕಷ್ಟ-ಸಂಕಷ್ಟಗಳಿವೆ ಎಂಬುದು ಸ್ಫುಟವಾಗುತ್ತದೆ. ನಮ್ಮ ಬಾಳು ಸುಖ-ದುಃಖಗಳ ಸಮ್ಮಿಲನ. ನಾವೆಲ್ಲರೂ ವಾಸ್ತವ ಬದುಕಿನಲ್ಲಿ ಆರೋಹಣ-ಅವರೋಹಣ, ಮೇಲಕ್ಕೇರುವುದು-ಕೆಳಗಿಳಿಯುವುದು, ಏಳಿಕೆ-ಇಳಿಕೆಗಳನ್ನು ಅನುಭವಿಸುತ್ತೇವೆ. ಶಿಲುಬೆಗೇರಿ ಸಾವನ್ನಪ್ಪುವುದೆಂದರೆ ಹೊಸ ಬಾಳಿಗೆ ಮತ್ತು ನಿತ್ಯಜೀವಕ್ಕೆ ಮೇಲಕ್ಕೇಳುವುದು. ಶಿಲುಬೆಯು ಬಾಳಲ್ಲಿ ನೊಂದವರಿಗೆ, ನಿರುತ್ಸಾಹಗೊಂಡವರಿಗೆ ಸಾಂತ್ವನ-ಸಮಾಧಾನದ ಸಂದೇಶವಾಗಿದೆ. ‘ನನ್ನನ್ನು ಭೂಮಿಯಿಂದ ಮೇಲೇರಿಸಿದಾಗ, ನಾನು ಎಲ್ಲರನ್ನೂ ನನ್ನೆಡೆಗೆ ಸೆಳೆದುಕೊಳ್ಳುತ್ತೇನೆ’ ಎಂಬ ಯೇಸುವಿನ ಮಾತಿನಲ್ಲಿ ಅವರ ಶಿಲುಬೆಯ ಶಕ್ತಿ ಅಡಗಿದೆ (ಬೈಬಲ್, ಯೊವಾನ್ನ 12:32).
ದೇವರು ಮನುಕುಲಕ್ಕೆ ಹತ್ತು ಆಜ್ಞೆಗಳನ್ನು ನೀಡಿದರು. ಅವುಗಳಲ್ಲಿ ಮೊದಲ ಮೂರು ಆಜ್ಞೆಗಳು ದೇವರನ್ನು ಪ್ರೀತಿಸಲು ಕರೆ ನೀಡಿದರೆ, ಉಳಿದ ಏಳು ಆಜ್ಞೆಗಳು ಪರರನ್ನು ಪ್ರೀತಿಸಲು ಕರೆ ನೀಡುತ್ತವೆ. ಯೇಸುವಿನ ಕಾಲದಲ್ಲಿ ಶಾಸ್ತ್ರಜ್ಞರು ಹಾಗೂ ಸಂಪ್ರದಾಯಸ್ಥರು ಹಳೆ ಒಡಂಬಡಿಕೆಯ ಹತ್ತು ಆಜ್ಞೆಗಳನ್ನು ಇನ್ನಷ್ಟು ವಿಭಾಗಗಳನ್ನಾಗಿ ಮಾಡಿ 613 ನಿಯಮಗಳನ್ನಾಗಿ ಮಾಡಿದ್ದರು. ಇದರಿಂದ ಜನಸಾಮಾನ್ಯರಿಗೆ ತೊಡಕು-ತೊಂದರೆಗಳಾಗುತ್ತಿದ್ದವು. ಆದುದರಿಂದ ಯೇಸು ಈ ಎಲ್ಲಾ ಆಜ್ಞೆ-ನಿಯಮಗಳನ್ನು ಒಟ್ಟು ಸೇರಿಸಿ, ಎರಡು ಆಜ್ಞೆಗಳು ಮಾತ್ರ ಸರ್ವಶ್ರೇಷ್ಠವಾದುವು ಎಂದು ಸಾರಿದರು. ಮೊದಲನೆಯದು ದೇವರನ್ನು ಪ್ರೀತಿಸುವುದು, ಎರಡನೆ ಯದು ನೆರೆಯವರನ್ನು ಪ್ರೀತಿಸುವುದು.

ಯೇಸು ತನ್ನ ಶಿಷ್ಯರಿಗೆ ಕಲಿಸಿದ ‘ಪರಲೋಕದಲ್ಲಿರುವ ನಮ್ಮ ತಂದೆಯೇ’ (ಬೈಬಲ್, ಮತ್ತಾಯ 6:10-15) ಎಂಬ ಪ್ರಾರ್ಥನೆಯ ಮೊದಲ ಭಾಗದಲ್ಲಿ ದೇವರೊಡನೆ ಆತ್ಮೀಯತೆಯಿಂದ ಬಾಳುವ ಬಿನ್ನಹವಿದ್ದರೆ, ಎರಡನೆಯ ಭಾಗದಲ್ಲಿ ಎಲ್ಲಾ ಜನರೊಂದಿಗೂ ಅನ್ಯೋನ್ಯತೆಯಿಂದ ಬದುಕಲು ಮಾಡುವ ವಿನಂತಿಯಿದೆ. ಇದರಲ್ಲಿ ಕ್ಷಮೆಯಿಂದ ಮಾನವ ಸಂಬಂಧಗಳನ್ನು ಬೆಸೆಯುವ ಕರೆಯಿದೆ. ಶಿಲುಬೆಯ ಎರಡು ಹಲಗೆಗಳು ದೇವರನ್ನು (ನೇರ ಹಲಗೆ) ಹಾಗೂ ಪರರನ್ನು (ಅಡ್ಡ ಹಲಗೆ) ಪ್ರೀತಿಸಲು ಆಹ್ವಾನಿಸುತ್ತವೆ. ಕ್ಷಮೆಯೇ ಪ್ರೀತಿಯ ಪರಮರೂಪ ಎಂಬ ಮಹಾನ್ ಸತ್ಯವನ್ನು ಯೇಸುವಿನ ಶಿಲುಬೆ ಸಾರುತ್ತದೆ. ‘ಪಿತನೇ, ಇವರನ್ನು ಕ್ಷಮಿಸಿ; ತಾವೇನು ಮಾಡುತ್ತಿರುವರೆಂದು ಇವರು ಅರಿಯರು’ (ಬೈಬಲ್, ಲೂಕ 23:34) ಎಂದು ತನ್ನನ್ನು ಶಿಲುಬೆಗೇರಿಸಿದವರನ್ನು ಯೇಸು ಕ್ಷಮಿಸಿದರು.

ರಾಜಕೀಯ ಲಾಭ, ಜಾತಿ-ಮತಗಳ ನಡುವಿನ ಭೇದ-ದ್ವೇಷ ಮತ್ತು ಅಸಹಿಷ್ಣುತೆಯಿಂದ ವಿಭಜನೆಗೊಂಡ ಇಂದಿನ ಸಮಾಜಕ್ಕೆ ಶಿಲುಬೆಯಲ್ಲಿನ ಯೇಸುವಿನ ತ್ಯಾಗ, ಕರುಣೆ, ಮಮತೆ ಹಾಗೂ ಕ್ಷಮೆ ಪ್ರೇರಣೆಯಾಗಲಿ. ನಾವೆಲ್ಲರೂ ಈ ಗುಣಗಳನ್ನು ಮೈಗೂಡಿಸಿಕೊಂಡು ಉತ್ತಮ ಸಮಾಜವನ್ನು ಕಟ್ಟೋಣ. ಯೇಸುವಿನಂತೆ ಅನ್ಯಾಯ, ಅನೀತಿ, ಅಸತ್ಯ, ಅಜ್ಞಾನಗಳನ್ನು ಪ್ರಶ್ನಿಸೋಣ. ಶಿಲುಬೆಯು ಸೋಲಲ್ಲ, ಜಯದ ಮೆಟ್ಟಿಲು.⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT