ಸೋಮವಾರ, ಮೇ 23, 2022
30 °C

ವಾರ ಭವಿಷ್ಯ: 14-02-2021ರಿಂದ 20-02-2021

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ, ಜ್ಯೋತಿಷ್ಯ ಪದ್ಮಭೂಷಣ
ಸಂಪರ್ಕ: 8197304680

***

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)
ನಂಬಿ ಬಂದವರಿಗೆ ಉತ್ತಮ ಆಸರೆಯನ್ನು ನೀಡಿ ಅವರಿಗೆ ಸೌಕರ್ಯವನ್ನು ಕಲ್ಪಿಸಿ ಸಂತಸಪಡುವಿರಿ. ಅತಿಯಾದ ಉತ್ಸಾಹ ನಿಮ್ಮಲ್ಲಿ ಮೈಗೂಡುತ್ತದೆ. ಚಮತ್ಕಾರಿಕವಾಗಿ ಮಾತನಾಡಿ ನಿಮ್ಮ ಕೆಲಸಗಳನ್ನು ಮಾಡಿಸಿಕೊಳ್ಳುವಿರಿ.ವಿದೇಶಿ ವ್ಯಾಪಾರ ಮಾಡುವವರಿಗೆ ಹೊಸ ಅವಕಾಶಗಳು ದೊರೆತು ವ್ಯವಹಾರ ವಿಸ್ತರಣೆಯಾಗುತ್ತದೆ. ಅಧ್ಯಯನ ಶೀಲರಿಗೆ ಉತ್ತಮ ಅವಕಾಶ ದೊರೆತು ಅಧ್ಯಯನ ಮುನ್ನಡೆಯುತ್ತದೆ. ನೌಕರಿಯಲ್ಲಿ ಇರುವವರಿಗೆ ಕೆಲಸದ ಒತ್ತಡದಿಂದ ಸ್ವಲ್ಪ ಬಿಡುವು ದೊರೆಯುತ್ತದೆ.ಧನದ ಒಳಹರಿವು ಸಾಮಾನ್ಯವಾಗಿರುತ್ತದೆ. ವಾಹನ ಮಾರಾಟಗಾರರಿಗೆ ಮಾರಾಟದಲ್ಲಿ ಪ್ರಗತಿ ಇರುತ್ತದೆ. ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ.

ವೃಷಭರಾಶಿ (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಸಾಧ್ಯತೆಗಳು ಹೆಚ್ಚಾಗಿವೆ. ಕಾಡುತ್ತಿದ್ದ ಕೆಲವು ಕೌಟುಂಬಿಕ ಕಲಹಗಳು ಇತ್ಯರ್ಥವಾಗಿ ನಿರಾಳವೆನಿಸುತ್ತದೆ. ನಿರೀಕ್ಷಿತವಾದ ವ್ಯವಹಾರವೊಂದರಲ್ಲಿ ನಿಮಗೆ ಲಾಭವಿರುತ್ತದೆ. ಹಿರಿಯರು ಅವರ ಎಚ್ಚರಿಕೆಯ ಮೂಲಕ ನಿಮಗೆ ಬರಬಹುದಾದ ಆಪತ್ತನ್ನು ತಪ್ಪಿಸುವರು. ವಂಶ ಪಾರಂಪರ್ಯವಾದ ವ್ಯವಹಾರಗಳಲ್ಲಿ ನಿಮಗೆ ಅಭಿವೃದ್ಧಿಯ ಜೊತೆಗೆ ಲಾಭವೂ ಇರುತ್ತದೆ. ರೈತರ ಬೆಳೆಗಳಿಗೆ ಉತ್ತಮ ಬೆಲೆ ಸಿಗುವ ಸಾಧ್ಯತೆಗಳಿವೆ. ಅವರಿಗೆ ಬೇಕಾದ ಕೃಷಿ ಮಾರ್ಗದರ್ಶನಗಳು ದೊರೆಯುತ್ತವೆ. ಹಿರಿಯರಿಂದ ಧನಸಹಾಯ ಸಿಗುವ ಲಕ್ಷಣಗಳಿವೆ.

ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ರಾಜಕೀಯ ವ್ಯಕ್ತಿಗಳಿಗೆ ವಿರೋಧಿಗಳಿಂದ ಸಾಕಷ್ಟು ಟೀಕೆಗಳು ಬರಬಹುದು. ಹಣದ ಒಳಹರಿವು ನಿಧಾನವಾಗಿ ಏರುತ್ತದೆ. ಹಣದ ವ್ಯವಹಾರ ಅಥವಾ ಲೇವಾದೇವಿ ಮಾಡುವವರಿಗೆ ಹಿನ್ನಡೆ ಇರುತ್ತದೆ. ಸರ್ಕಾರಿ ಮಟ್ಟದ ಕೆಲಸಗಳು ಪರಿಚಿತರೊಬ್ಬರ ಸಹಾಯದಿಂದ ಆಗ ತೊಡಗುತ್ತವೆ. ಇರುವ ಕೆಲಸಗಳನ್ನು ಮಾಡಿ ಮುಗಿಸಲು ಯೋಜನೆಯನ್ನು ತಯಾರುಮಾಡಿ ಕೊಳ್ಳುವಿರಿ. ಮಕ್ಕಳಿಂದ ಧನ ಸಹಾಯ ಸಿಗುತ್ತದೆ. ಹೆಣ್ಣುಮಕ್ಕಳ ವ್ಯಾಸಂಗಕ್ಕಾಗಿ ಹೆಚ್ಚಿನ ಹಣ ಕೊಡುವಿರಿ. ವೃತ್ತಿಯಲ್ಲಿ ತೊಂದರೆ ಕೊಡುತ್ತಿದ್ದ ಹಿತಶತ್ರುಗಳನ್ನು ಸದೆಬಡಿಯಬಹುದು. ಸ್ತ್ರೀಯರು ನಡೆಸುವ ವ್ಯವಹಾರಗಳಲ್ಲಿ ಪ್ರಗತಿಯನ್ನು ಕಾಣಬಹುದು.

ಕಟಕ ರಾಶಿ (ಪುನರ್ವಸು 4 ಪುಷ್ಯ ಆಶ್ಲೇಷ)
ಜನಗಳ ಮಧ್ಯೆ ನ್ಯಾಯ ತೀರ್ಮಾನ ಮಾಡುವಲ್ಲಿ ಯಶಸ್ಸನ್ನು ಕಾಣುವಿರಿ. ಕೈಗಾರಿಕೆಗಳಿಗೆ ಸಂಬಂಧಪಟ್ಟ ತೈಲಗಳನ್ನು ಮಾರುವ ವ್ಯಾಪಾರಿಗಳಿಗೆ ಆದಾಯ ಹೆಚ್ಚುತ್ತದೆ. ಸಂಗಾತಿಯಿಂದ ಹೊಸ ವ್ಯಾಪಾರಗಳ ಬಗ್ಗೆ ಮಾಹಿತಿ ದೊರೆಯುತ್ತದೆ. ಮಕ್ಕಳ ಏಳಿಗೆಯ ಬಗ್ಗೆ ಹಿತಕರವಾದ ವಾರ್ತೆ ಕೇಳಿಬರುತ್ತದೆ. ಉದ್ಯೋಗಸ್ಥ ಮಹಿಳೆಯರಿಗೆ ವೃತ್ತಿಯ ಆದಾಯದಲ್ಲಿ ಏರಿಕೆಯನ್ನು ಕಾಣಬಹುದು. ಅಭಿರುಚಿಗೆ ತಕ್ಕಂತೆ ಸಾಮಾಜಿಕ ಕಾರ್ಯಗಳನ್ನು ಕೈಗೊಂಡು ಸಂತಸವನ್ನು ಪಡುವಿರಿ. ವಿದ್ಯಾರ್ಥಿಗಳಿಗೆ ಉತ್ತಮ ಸಾಧನೆ ಮಾಡುವ ಅವಕಾಶವಿರುತ್ತದೆ. ವಾಹನವನ್ನು ದುರಸ್ತಿ ಮಾಡುವವರಿಗೆ ಕೈತುಂಬಾ ಕೆಲಸ ದೊರೆತು ಆದಾಯ ಹೆಚ್ಚುತ್ತದೆ.

ಸಿಂಹ ರಾಶಿ (ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ಸದಾಚಾರ ಕಾರ್ಯಗಳಲ್ಲಿ ಸಾಕಷ್ಟು ತೊಡಗಿಸಿಕೊಳ್ಳುವಿರಿ. ಧಾರ್ಮಿಕ ಚಿಂತನೆಯನ್ನು ಮಾಡುವವರಿಗೆ ಹೊಸ ಶಿಷ್ಯವರ್ಗ ದೊರೆಯುತ್ತದೆ. ರಾಜಕೀಯ ಉನ್ನತಿಗಾಗಿ ಸಾಕಷ್ಟು ಚಿಂತನ ಮಂಥನ ನಡೆಸುವಿರಿ. ಹೊಸ ವಾಹನ ಖರೀದಿಯ ಬಗ್ಗೆ ವಿಷಯ ಸಂಗ್ರಹ ಮಾಡುವಿರಿ. ಕೆಲಸಗಾರರ ಮೇಲೆ ಅತಿಯಾದ ಒತ್ತಡವನ್ನು ಹೇರುವುದು ಒಳಿತಲ್ಲ. ಆರ್ಥಿಕ ಸ್ಥಿತಿಯು ತಕ್ಕಮಟ್ಟಿಗೆ ಇರುತ್ತದೆ. ಇಷ್ಟ ಜನರ ಜೊತೆ ದೇವರ ದರ್ಶನಗಳಿಗೆ ಹೋಗಬಹುದು. ವಾತ ಸಂಬಂಧಿ ರೋಗಗಳು ಕಾಡಬಹುದು. ಕೈ ಸೇರಬೇಕಿದ್ದ ಆಸ್ತಿ ಬರುವುದು ನಿಧಾನವಾಗಬಹುದು. ಸರ್ಕಾರದಿಂದ ಬರದೇ ಇದ್ದ ಬಾಕಿ ಹಣಗಳು ಈಗ ಬರುತ್ತವೆ.

ಕನ್ಯಾ ರಾಶಿ (ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ನಿಮ್ಮ ವಿರುದ್ಧ ಪಿತೂರಿಯನ್ನು ನಡೆಸುತ್ತಿದ್ದವರ ಬಣ್ಣ ಬಯಲಾಗಲಿದೆ. ಅತಿಯಾದ ಮೇಧಾವಿತನವನ್ನು ತೋರಿಸಲು ಹೋಗಬೇಡಿರಿ, ಸಿಕ್ಕಿ ಬೀಳುವ ಸಾಧ್ಯತೆ ಇದೆ. ವಿವಾಹ ಅಪೇಕ್ಷಿತರಿಗೆ ಕಂಕಣಬಲ ಕೂಡಿಬರುವ ಸಾಧ್ಯತೆಗಳಿವೆ. ಮಕ್ಕಳ ಏಳಿಗೆ ನಿರೀಕ್ಷಿತ ಮಟ್ಟದಲ್ಲಿ ಇರುತ್ತದೆ. ಹಳೆಯ ಸಾಲಗಳನ್ನು ತೀರಿಸಿ ಸಂತೃಪ್ತಿ ಹೊಂದುವಿರಿ. ಬಹಳ ದಿನಗಳಿಂದ ನಿಮ್ಮ ನೆರೆಹೊರೆ ಯವರು ಮಾಡುತ್ತಿದ್ದ ತಂಟೆ ತಕರಾರುಗಳಿಂದ ವಿಮುಕ್ತಿಯನ್ನು ಪಡೆಯುವಿರಿ. ಲೇವಾದೇವಿಯಲ್ಲಿ ತೊಡಗಿದ್ದವರಿಗೆ ಅಲ್ಪ ಲಾಭವಿದೆ. ಹಣದ ಹರಿವು ತಕ್ಕಮಟ್ಟಿಗೆ ಇರುತ್ತದೆ.ಕ್ರೀಡಾಪಟುಗಳಿಗೆ ಅವರ ಉತ್ತಮ ಸಾಧನೆಯನ್ನು ತೋರಿಸಲು ಸೂಕ್ತ ಅವಕಾಶ ದೊರೆಯುತ್ತದೆ.

ತುಲಾ ರಾಶಿ (ಚಿತ್ತಾ 3 4 ಸ್ವಾತಿ ವಿಶಾಖ 1 2 3)
ಸಮಸ್ಯೆಗಳ ಪರಿಹಾರಕ್ಕಾಗಿ ನಿಮ್ಮ ಜಾಣ್ಮೆಯನ್ನು ಬಳಸಿ ಹೊಸ ಸೂತ್ರವೊಂದನ್ನು ಹೆಣೆಯುವಿರಿ. ನಿಮ್ಮ ದಿಟ್ಟಮಾತುಗಳಿಂದ ಸಮಾಜದ ಕೆಲವು ಜನಗಳ ವಿರೋಧವನ್ನು ಕಟ್ಟಿಕೊಳ್ಳುವಿರಿ. ಚಿನ್ನ ಬೆಳ್ಳಿ ಲೋಹಗಳಿಂದ ಆಭರಣಗಳನ್ನು ತಯಾರಿಸುವವರಿಗೆ ತಯಾರಿಕೆಗಾಗಿ ಹೊಸ ಆದೇಶಗಳು ದೊರೆಯುತ್ತವೆ. ಕೃಷಿ ಕಾರ್ಯಗಳಿಗಾಗಿ ಸಾಕಷ್ಟು ದೊಡ್ಡ ಮಟ್ಟದ ಹಣ ಹೂಡಿಕೆ ಮಾಡುವಿರಿ. ಸಿಹಿ ಪದಾರ್ಥಗಳನ್ನು ತಯಾರಿಸಿ ಮಾರುವವರಿಗೆ ಸಾಕಷ್ಟು ವ್ಯವಹಾರ ವೃದ್ಧಿಸುತ್ತದೆ. ಧರ್ಮ ಕಾರ್ಯಗಳಿಗಾಗಿ ದೇಣಿಗೆ ಕೊಡುವಿರಿ. ಕೊಟ್ಟ ಸಾಲಗಳು ವಾಪಸ್ಸು ಬರದಿರುವ ಸಾಧ್ಯತೆಗಳು ಹೆಚ್ಚಾಗಿವೆ.

ವೃಶ್ಚಿಕ ರಾಶಿ (ವಿಶಾಖಾ 4 ಅನುರಾಧ ಜೇಷ್ಠ)
ಧೈರ್ಯದ ನಡೆಯಿಂದಾಗಿ ಕಚೇರಿಯಲ್ಲಿನ ಕಾರ್ಯಕಲಾಪಗಳು ಸುಗಮವಾಗಿ ನಡೆಯುವವು. ವ್ಯಾಪಾರದಲ್ಲಿ ತೊಡಗಿಕೊಂಡಿರುವವರಿಗೆ ಲಾಭಾಂಶಗಳು ಕಾಣತೊಡಗುತ್ತವೆ. ಸರ್ಕಾರಿ ಹಿರಿಯ ಅಧಿಕಾರಿಗಳಿಗೆ ಕಾರ್ಯಒತ್ತಡ ಸ್ವಲ್ಪ ಕಡಿಮೆ ಎನ್ನಿಸಬಹುದು. ಮಿತವ್ಯಯವನ್ನು ಮಾಡಿ ಹಣ ಉಳಿಸುವ ಯತ್ನಕ್ಕೆ ಕೈ ಹಾಕುವಿರಿ.ವಿದೇಶಿ ಕಂಪನಿಯಲ್ಲಿ ಕಾರ್ಯನಿರ್ವಹಿಸುವ ಹಿರಿಯ ಸ್ಥಾನ ಕೆಲವರಿಗೆ ಒದಗಲಿದೆ. ಹಿರಿಯರ ಆಸ್ತಿಗಳ ದಾಖಲಾತಿಗಳನ್ನು ಹುಡುಕಿ ಒಟ್ಟು ಮಾಡುವಿರಿ. ರಾಜಕೀಯ ನಾಯಕರುಗಳು ಭರವಸೆಗಳನ್ನು ಕೊಡುವಾಗ ಎಚ್ಚರ ವಹಿಸಿರಿ. ಹರಿತವಾದ ಆಯುಧಗಳನ್ನು ಉಪಯೋಗಿಸುವಾಗ ಎಚ್ಚರ ವಹಿಸಿರಿ.

ಧನಸ್ಸು ರಾಶಿ (ಮೂಲ ಪೂರ್ವಷಾಢ ಉತ್ತರಾಷಾಢ 1 )
ಹೊಸ ವ್ಯಾಪಾರಗಳ ಬಗ್ಗೆ ಹಿರಿಯರೊಡನೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಇದು ನಿಮಗೆ ಬಂಡವಾಳ ಕ್ರೋಡೀಕರಣದಲ್ಲಿ ಸಮಯದಲ್ಲಿ ಅನುಕೂಲವಾಗುತ್ತದೆ. ನಿಮ್ಮ ಹೊಂದಿಕೊಳ್ಳುವ ಸ್ವಭಾವದಿಂದ ವ್ಯವಹಾರದಲ್ಲಿ ಪ್ರಮುಖ ಸ್ಥಾನಗಳು ದೊರೆಯುತ್ತವೆ. ವ್ಯವಹಾರದಲ್ಲಿ ಆರ್ಥಿಕ ಸದೃಡತೆಯನ್ನು ತರಲು ಮುಂದಾಗುವಿರಿ. ವಿದ್ಯಾರ್ಥಿಗಳು ಅಭ್ಯಾಸದ ಬಗ್ಗೆ ಬಹಳ ಮುತುವರ್ಜಿ ವಹಿಸುವರು. ಕೃಷಿಕರು ತಮ್ಮ ಸತತ ಪ್ರಯತ್ನದಿಂದ ಆದಾಯವನ್ನು ಹೆಚ್ಚಿಸಿ ಕೊಳ್ಳಬಹುದು. ರಾಜಕೀಯ ನಾಯಕರುಗಳಿಗೆ ಸಾಮಾಜಿಕ ಗೌರವಗಳು ದೊರೆಯುತ್ತವೆ ಮತ್ತು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಹಿಡಿತ ಸಾಧಿಸಬಹುದು.

ಮಕರ ರಾಶಿ (ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ಉದ್ಯೋಗದಲ್ಲಿ ನೆಮ್ಮದಿಯನ್ನು ತರುವ ಶುಭ ಸುದ್ದಿಯೊಂದು ನಿಮಗೆ ಕೇಳಿಬರಲಿದೆ. ಭೂಮಿ ಖರೀದಿ ಮಾಡಿ ಲಾಭವನ್ನು ಪಡೆಯುವಿರಿ. ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಹೊಸ ರೀತಿಯ ಅವಕಾಶಗಳು ಒದಗಿ ಬರುತ್ತವೆ. ಆರ್ಥಿಕ ಸ್ಥಿತಿಯು ಉತ್ತಮವಾಗುತ್ತದೆ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ನಿಧಾನಗತಿ ಬೇಡ. ಸರ್ಕಾರಿ ಮಟ್ಟದ ಸಾಲಗಳು ಸುಲಭವಾಗಿ ದೊರೆಯುತ್ತವೆ. ಧಾರ್ಮಿಕ ವಿಚಾರಗಳ ಬಗ್ಗೆ ಹೆಚ್ಚು ಗಮನ ಹರಿಸುವಿರಿ. ಹಳೆಯ ಸ್ನೇಹಿತರುಗಳು ನಿಮ್ಮನ್ನು ಪುನಃ ಕಂಡು ಸ್ನೇಹ ಮರುಸ್ಥಾಪನೆ ಮಾಡಿಕೊಳ್ಳುವರು. ಆರೋಗ್ಯದಲ್ಲಿ ಹೊಸ ಚೈತನ್ಯವನ್ನು ಕಾಣಬಹುದು.

ಕುಂಭ ರಾಶಿ (ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಕುಟುಂಬದಲ್ಲಿ ಸುಖ ಸಂತೋಷಗಳನ್ನು ಕಾಣುವಿರಿ. ನಿಮ್ಮ ಹಿತೈಷಿಗಳೊಡನೆ ವಿಶೇಷ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ವಿದ್ಯಾರ್ಥಿಗಳಿಗೆ ಸ್ವಲ್ಪ ಹಿನ್ನಡೆ ಎನ್ನಿಸಬಹುದು. ಆದಾಯದಷ್ಟೇ ಖರ್ಚು ಸಹ ಇರುತ್ತದೆ. ಶೀತಬಾಧೆ ಇರುವವರು ಎಚ್ಚರ ವಹಿಸಿರಿ. ಉದ್ಯೋಗದಲ್ಲಿ ಸಾಧಾರಣ ಪ್ರಗತಿ ಇರುತ್ತದೆ. ಪ್ರೀತಿ ಪಾತ್ರರೊಂದಿಗೆ ಮನಬಿಚ್ಚಿ ಮಾತಾಡಿ ನೆಮ್ಮದಿಯನ್ನು ಪಡೆಯುವಿರಿ. ಉದ್ಯೋಗಿಗಳಿಗೆ ಅನುಕೂಲ ಮಾಡಿ ಪಾಲುದಾರರ ಕೋಪಕ್ಕೆ ತುತ್ತಾಗುವಿರಿ. ನಂತರ ಅವರು ವಿಚಾರ ಮಾಡಿ ತಮ್ಮ ಕೋಪ ಬಿಟ್ಟು ನಿಮ್ಮೊಡನೆ ಸಹಕರಿಸುವರು. ಸಾಂಪ್ರದಾಯಿಕ ವೈದ್ಯರಿಗೆ ಬೇಡಿಕೆ ಬರತೊಡಗುತ್ತದೆ.

ಮೀನ ರಾಶಿ (ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ಮೈಮೇಲೆ ಏರಿ ಬಂದಿದ್ದ ಕಷ್ಟಗಳೆಲ್ಲವೂ ಮಂಜಿನಂತೆ ಕರಗಿಹೋಗುತ್ತವೆ. ನೀವು ಇಚ್ಚಿಸಿದ ಕೆಲವು ಕಾರ್ಯಗಳು ಕೈಗೂಡುತ್ತದೆ. ಬಂಧುಗಳಿಂದ ಧನಸಹಾಯ ಒದಗಿಬರುತ್ತದೆ. ಕೃಷಿ ಪರಿಕರಗಳನ್ನು ತಯಾರಿಸಿ ಮಾರುವವರಿಗೆ ಕೈತುಂಬಾ ಕೆಲಸದ ಜೊತೆಗೆ ಲಾಭವಿರುತ್ತದೆ. ಕೃಷಿಕರಿಗೆ ಸಿಗಬೇಕಾಗಿದ್ದ ಸಹಾಯಧನಗಳು ಸಂಪೂರ್ಣವಾಗಿ ದೊರಕುತ್ತವೆ. ಪಶುಸಂಗೋಪನೆಯನ್ನು ದೊಡ್ಡಮಟ್ಟದಲ್ಲಿ ಮಾಡಲು ಆಲೋಚಿಸುವಿರಿ. ಕೆಲವು ಹಂಗಾಮಿ ಉದ್ಯೋಗಿಗಳಿಗೆ ಉದ್ಯೋಗದಲ್ಲಿ ಕಾಯಮಾತಿ ಆಗುವ ಸಾಧ್ಯತೆಗಳಿವೆ. ಸಾಲ ಕೊಡಿಸುವ ವ್ಯವಹಾರದಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡುವವರಿಗೆ ಆದಾಯ ಹೆಚ್ಚುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.