ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಬಸವ ಜಯಂತಿ: ‘ಲೋಕದ ಡೊಂಕ ನೀವೇಕೆ ತಿದ್ದುವಿರಿ’

Last Updated 13 ಮೇ 2021, 19:31 IST
ಅಕ್ಷರ ಗಾತ್ರ

ಈಗ ಎಲ್ಲೆಲ್ಲೂ ಚಿಂತೆಯೋ ಚಿಂತೆ. ಇಡಿಯ ಜಗತ್ತಿನ ಬಗ್ಗೆ ನಮಗೆ ಚಿಂತೆ. ಇನ್ನೊಬ್ಬರ ಬಗ್ಗೆ ಚಿಂತಿಸುವ ಮೊದಲು ನಮ್ಮ ಬಗ್ಗೆ ನಾವು ಚಿಂತನೆ ಮಾಡಬೇಕಲ್ಲವೆ? ಈ ವಿಷಯವಾಗಿ ಬಸವಣ್ಣನವರ ಚಿಂತನೆಯ ಬಗ್ಗೆ ಮನನ ಮಾಡುತ್ತದೆ ಈ ಲೇಖನ...

ಬಸವಣ್ಣನವರ ಈ ವಚನವನ್ನು ಕೇಳದವರಿಲ್ಲ:
ಲೋಕದ ಡೊಂಕ ನೀವೇಕೆ ತಿದ್ದುವಿರಿ
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ;
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ.
ನೆರೆಯವರ ದಃಖಕ್ಕೆ ಅಳುವವರ ಮೆಚ್ಚ ಕೂಡಲಸಂಗಮದೇವ

ಈ ವಚನವನ್ನು ಕೇಳಿದಾಗ ಕೊನೆಯ ಸಾಲು ಪಕ್ಕನೆ ಗಮನಸೆಳೆಯುತ್ತದೆ! ನೆರೆಯವರ ದುಃಖಕ್ಕೆ ಮರುಗುವುದು ತಪ್ಪೇ? ‘ಸಕಲ ಜೀವಾತ್ಮರಿಗೆ ಲೇಸನೆ ಬಯಸುವ’ ಅಣ್ಣನವರು ಹೀಗೆ ಹೇಳಿದ್ದಾದರೂ ಏತಕ್ಕೆ?

ವಚನದ ಸ್ವಾರಸ್ಯವಿರುವುದೇ ಇಲ್ಲಿ. ನೆರೆಯವರ ದುಃಖಕ್ಕೆ ಮರುಗುವುದಕ್ಕೂ ನೆರೆಯವರ ದುಃಖಕ್ಕೆ ಅಳುವುದಕ್ಕೂ ಬೆಟ್ಟದಷ್ಟು ವ್ಯತ್ಯಾಸ. ಮರುಕದಲ್ಲೊಂದು ಕ್ರಿಯಾಶೀಲತೆಯಿದೆ, ಸಾಂತ್ವನವಿದೆ. ಆದರೆ, ಅಳುವುದರಲ್ಲಿರುವುದು ನಿಸ್ಸಹಾಯಕತೆ ಮಾತ್ರ. ಅದರಿಂದ ಉಪಯೋಗವಾದರೂ ಏನು? ಇದು ಒಂದು. ಅದರ ಹಿಂದಿನ ಮಾತನ್ನು ಈ ಹಿನ್ನೆಲೆಯಲ್ಲಿ ನೋಡಿ- ‘ಲೋಕದ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ತನುವ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ’ ಆ ನೆರೆಯವರ ದುಃಖ ನಮ್ಮ ಡೊಂಕಿನಿಂದಾದದ್ದೂ ಇರಬಹುದು, ನಮ್ಮಂತಹ ಹಲವರ ಡೊಂಕಿನಿಂದಾದದ್ದೂ ಇರಬಹುದು. ಅದನ್ನು ನಾವು ನೇರ್ಪಡಿಸಿಕೊಂಡು ಸಮಾಜಕ್ಕೆ ಎಡವಟ್ಟಾಗದಂತಿದ್ದರೆ ಎಷ್ಟೋ ಒಳ್ಳಿತಲ್ಲವೇ ಎಂಬುದು ಅಣ್ಣನವರ ಆಶಯ.

ಈ ಡೊಂಕಿನ ಮಾತು ಬಂದಾಗ ಅಣ್ಣನವರ, ಅಷ್ಟೇನು ಪ್ರಸಿದ್ಧವಲ್ಲದ ಮತ್ತೊಂದು ಸೊಗಸಾದ ವಚನ ನೆನಪಾಗುತ್ತದೆ:

ಹಾವಿನ ಡೊಂಕು ಹುತ್ತಕ್ಕೆ ಸಸಿನ,
ನದಿಯ ಡೊಂಕು ಸಮುದ್ರಕ್ಕೆ ಸಸಿನ,
ನಮ್ಮ ಕೂಡಲಸಂಗನ ಶರಣರ ಡೊಂಕು ಲಿಂಗಕ್ಕೆ ಸಸಿನ

ಇಲ್ಲಿ ಸಸಿನ ಎಂಬ ಪದಕ್ಕೆ ವಚನಕಾರರು ಇಟ್ಟಿರುವ ವ್ಯಂಗ್ಯಾರ್ಥ ಗಮನಿಸಲೇಬೇಕಾದ್ದು. ಸಸಿನ ಎಂದರೆ ‘ನೇರ’ ಎಂಬ ಅರ್ಥವನ್ನು ನಿಘಂಟು ಸೂಚಿಸುತ್ತದೆ. ಆದರೆ ನಿಘಂಟುವಿನ ಮಾತೊಂದನ್ನೇ ಹಿಡಿದರೆ ವಚನದ ಸ್ವಾರಸ್ಯ ದಕ್ಕಲಾರದು. ಸಸಿನ ಎಂಬುದು ನೇರ/ಯುಕ್ತ, ಸರಿಯೇ. ಆದರೆ ‘ನೇರ’ ಎಂಬುದು ಯಾವುದಕ್ಕೆ? ನೆಲಕ್ಕೆ ನೆಟ್ಟ ಕೋಲು ನೆಲಕ್ಕೆ ನೇರ ಎಂದರೆ ಆದೀತು, ಗೋಡೆಗೆ ಹೊಡೆದ ಮೊಳೆ ಗೋಡೆಗೆ. ಆದರೆ ಗೋಡೆಗೆ ಹೊಡೆದ ಮೊಳೆ ನೆಲಕ್ಕೆ ನೇರವಾಗಲಾರದು, ನೆಲಕ್ಕೆ ಬಡಿದ ಗೂಟ ಗೋಡೆಗೆ ನೇರವಾಗಲಾರದಷ್ಟೇ? ಹಾಗೆಯೇ ಅಂಕುಡೊಂಕಾದ ಹುತ್ತದಲ್ಲಿ ಮಲಗುವ ಹಾವಿಗೆ, ಕಡಲಿಟ್ಟು ಕುಣಿಯುವ ಸಮುದ್ರಕ್ಕೆ ಸೇರುವ ನದಿಗೆ ಯಾವುದು ನೇರ? ಯಾವುದು ಯುಕ್ತ? ನೆಲದ ಗೂಟದಂತೆ ಹಾವಿರಲಾರದು, ಹುತ್ತದ ಡೊಂಕಿನಂತೆ ಗೂಟವೂ ಇರಲಾರದು. ಹುತ್ತಕ್ಕೆ ತಕ್ಕಂತೆ ಹಾವಿದೆ, ಕಡಲಿಗೆ ತಕ್ಕಂತೆ ನದಿಯಿದೆ. ಅವಕ್ಕೆ ಹಾಗಿರುವುದೇ ನೇರ, ಅದೇ ಯುಕ್ತ. ಶಿವಶರಣ ಹೀಗಿರಬೇಕೆಂದು ಹೇಳಲು ನಾವು ಯಾರು? ಅವನು ಲಿಂಗಕ್ಕೆ ತಕ್ಕಂತಿರುತ್ತಾನೆ, ಅವನಿಗೆ ಅದೇ ನೇರ - ಇದು ವಚನದ ಆಶಯ. ಆದ್ದರಿಂದ ಸಸಿನ (ಅಥವಾ ನೇರ/ಯುಕ್ತ) ಎನ್ನುವ ಪರಿಕಲ್ಪನೆ ಎಷ್ಟು ವೈಯಕ್ತಿಕ, ಎಷ್ಟು ಸಾಂದರ್ಭಿಕ! ಲೋಕಚಿಂತನೆ ಮಾಡುವವನಿಗೆ ಈ ಅರಿವು, ಎಚ್ಚರ ಬಹಳ ಅತ್ಯಗತ್ಯ.

‘ಮೂಗಿನ ನೇರಕ್ಕೆ ಮಾತಾಡುವುದು’ ಎನ್ನುವ ಗಾದೆಯಿದೆಯಲ್ಲ, ಅದರ ಆಶಯವೂ ಇದೇ. ನಮ್ಮ ಮೂಗಿನ ನೇರವೇ ಇನ್ನೊಬ್ಬರದೂ ಇರಬೇಕಿಲ್ಲವಷ್ಟೇ, ಅಲ್ಲದೇ ನಮ್ಮ ಮೂಗೇ ಡೊಂಕಿರಬಹುದು. ಆದ್ದರಿಂದ ಒಂದು ಅಳತೆ ಪಟ್ಟಿ ಹಿಡಿದು ಲೋಕದ ಡೊಂಕನ್ನು ತಿದ್ದುವುದಾದರೂ ಹೇಗೆ? ಏಕೆ? ನಮ್ಮ ನೇರವನ್ನೇ ನಾವರಿಯದಿರಲು ಲೋಕದ ಡೊಂಕು ತಿದ್ದುವ ಉಪದ್ವ್ಯಾಪವಾದರೂ ಏಕೆ? ಪ್ರತಿಯೊಬ್ಬರೂ ಅವರವರನ್ನು ಅವರವರು ಸಂತೈಸಿಕೊಂಡು ಅವರವರ ‘ನೇರ’ವನ್ನು ಕಂಡುಕೊಂಡರೆ, ನಮ್ಮ ಡೊಂಕಿ
ನಿಂದಾದ ನೆರೆಯವರ ದುಃಖ ಎಷ್ಟೋ ಹಗುರವಾಗಬಹುದಲ್ಲವೇ ಎನ್ನುವ ಚಿಂತನೆ ಬಸವಣ್ಣನವರದ್ದು.

ಶರಣನೆಂದುಕೊಳ್ಳುವವನಿಗೆ ಕೆಲವು ‘ಛಲ’ಗಳು ಅಗತ್ಯವಂತೆ - ಛಲ ಬೇಕು ಶರಣಂಗೆ, ಪರಧನವನೊಲ್ಲೆನೆಂಬ; ಪರಸತಿಯನೊಲ್ಲೆನೆಂಬ; ಪರದೈವವನೊಲ್ಲೆನೆಂಬ - ಈ ’ಛಲವಿಲ್ಲದವರ ಮೆಚ್ಚ ನಮ್ಮ ಕೂಡಲಸಂಗಮದೇವ’ ಎನ್ನುತ್ತಾರೆ. ಈ ಛಲಕ್ಕೆರವಾದ ಸಾಧಕ ಕೆಟ್ಟ. ಆದರೆ ಆ ಬಗೆಯ ಛಲ ದಕ್ಕುವುದು ಸುಲಭವಲ್ಲ, ಅದು ದಕ್ಕುವವರೆಗೂ ಕೂಡಿದಮಟ್ಟಿಗೂ ಗಮನವನ್ನು ಅತ್ತಿತ್ತ ಹರಿಯದಂತೆ ಕಟ್ಟಿಟ್ಟುಕೊಳ್ಳುವುದು ಸಾಧಕನಿಗೆ ಎಷ್ಟೋ ಕ್ಷೇಮ.

ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯಾ ತಂದೆ
ಸುತ್ತಿ ಸುಳಿದು ನೋಡದಂತೆ ಅಂಧಕನ ಮಾಡಯ್ಯಾ ತಂದೆ
ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯಾ ತಂದೆ
ನಿಮ್ಮ ಶರಣರ ಪಾದವಲ್ಲದೆ ಅನ್ಯ ವಿಷಯಕ್ಕೆಳಸದಂತೆ ಇರಿಸು
ಕೂಡಲಸಂಗಮದೇವಾ

ಎನ್ನುವ ಆರ್ತತೆಯಲ್ಲಿ ಈ ಭಾವ ಬಸವಣ್ಣನವರನ್ನು ಬಹುವಾಗಿಯೇ ಕಾಡಿರಬೇಕು. ಅದಕ್ಕೆ ಬೇಕಾದ ‘ಚಿತ್ತನಿವೃತ್ತಿ’ಗೆ ದಾರಿ? ‘ಪರಚಿಂತೆ ಎಮಗೇಕಯ್ಯಾ ನಮ್ಮ ಚಿಂತೆ ನಮಗೆ ಸಾಲದೆ’ ಎಂದು ಇದ್ದುಬಿಡುವುದು - ನಮಗೆ ’ಕೂಡಲಸಂಗಯ್ಯ ಒಲಿದಾನೊ ಒಲ್ಲನೊ ಎಂಬ ಚಿಂತೆ - ಹಾಸಲುಂಟು, ಹೊದೆಯಲುಂಟು’ ಹೀಗಿರುವಾಗ ನೆರೆಯವರ ದುಃಖಕ್ಕೆ ಅಳುವುದಾದರೂ ಏಕೆ?

ಭುವನದ ಬೆಳಕು ಬಸವಣ್ಣನವರ ಜನ್ಮದಿನದಂದು ಈ ವಿವೇಕವಾಣಿ ನಮ್ಮೆಲ್ಲರ ಕೈಹಿಡಿದು ನಡೆಸಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT