ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತಿ ಸಂಭ್ರಮ | ಸಾವಧಾನ ಇರಲಿ...

Last Updated 29 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಸತ್ಯವುಳ್ಳ ಭಂಡವ ತುಂಬುವುದಯ್ಯಾ
ಸುವಿಧಾನವಯ್ಯಾ ಸುವಿಧಾನವಯ್ಯಾ
ಮನಧಾರೆವಟ್ಟಲು ಕೂಡಲಸಂಗನ ಶರಣರು ಹಿಡಿಯದ ಭಂಡವನು
ಆರಾದಡಾಗಲಿ ಹೋಗಲೀಯರಯ್ಯಾ

ಭಕ್ತಿ ಭಂಡಾರಿ ಬಸವಣ್ಣನವರ ವಚನವಿದು. ತನ್ನ ಸಮಕಾಲೀನ ಜಗತ್ತಿನ ಮೌಢ್ಯವನ್ನು ತೊಡೆಯುವಲ್ಲಿ ಗಮನೀಯ ಸೇವೆಗೈದ ಮಹಾಚೇತನವಾಗಿ ಪ್ರಸಿದ್ಧಿಗೊಂಡಿರುವ ಬಸವಣ್ಣನವರು ಈ ವಚನದಲ್ಲಿಯೂ ಗಹನವಾದ ಅರ್ಥವುಳ್ಳ ಕಿವಿಮಾತನ್ನು ಹೇಳಿದ್ದಾರೆ.

ಭಂಡ ಎಂದರೆ ಪಾತ್ರೆ. ಸತ್ಯವುಳ್ಳ ಪಾತ್ರೆ ಎಂದರೆ ಮನಸ್ಸನ್ನು ಸತ್ಯವಾದ ವಿಚಾರಗಳಿಂದ ತುಂಬಿಕೊಳ್ಳಬೇಕು. ವರ್ತಮಾನ ಕಾಲದಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ಮನಸ್ಸಿನಲ್ಲಿ ಕೇವಲ ಲೌಕಿಕ ಸಂಗತಿಗಳನ್ನು ತುಂಬಿಕೊಳ್ಳುತ್ತಾರೆ. ಅವುಗಳಲ್ಲಿ ಮುಖ್ಯವಾದುದು ಅರ್ಥಸಂಗ್ರಹ, ಅಂದರೆ ಹಣವನ್ನು ಗಳಿಸುವ ಮಾರ್ಗ, ಕೌಶಲ. ಪ್ರಪಂಚದ ಸುಖವನ್ನು ಪಡೆಯುವುದಕ್ಕೆ ಹಣವೇ ಪ್ರಧಾನವಾದ ಪಾತ್ರ ವಹಿಸುತ್ತದೆ ಎಂಬ ಭ್ರಮೆಯೊಂದಿಗೆ ಅದಕ್ಕೆ ಬೇಕಾದ ಮಾಹಿತಿಯನ್ನು ತಲೆಯಲ್ಲಿ ತುಂಬಿಕೊಳ್ಳುವುದಕ್ಕೆ ಪ್ರಾಧಾನ್ಯವನ್ನು ನೀಡಲಾಗುತ್ತದೆ. ಸುಖ-ಭೋಗ ಲಾಲಸೆಯ ಈ ತುರುಸಿನ ಗಡಿಬಿಡಿಯಲ್ಲಿ ತೊಡಗಿಕೊಂಡವರ ಅತಿ ಧಾವಂತವನ್ನು ಕಂಡು ಬಸವಣ್ಣನವರು ಸುವಿಧಾನವಯ್ಯಾ ಎಂದು ದ್ವಿರುಕ್ತಿಯ ಮೂಲಕ ಎಚ್ಚರಿಸುತ್ತಿದ್ದಾರೆ.

ಸುವಿಧಾನ ಎಂದರೆ ಸಮಾಧಾನ ಅಥವಾ ಸಾವಧಾನ. ಆಧುನಿಕ ಮಾನವನಿಗೆ ಅತಿ ಮುಖ್ಯವಾಗಿ ಬೇಕಾಗಿರುವುದೇ ಈ ಸಮಾಧಾನ. ಬೆಳಗ್ಗೆಯಿಂದ ರಾತ್ರಿಯ ತನಕ ಕಾಳಿಗೆ ಚಕ್ರ ಕಟ್ಟಿಕೊಂಡವರಂತೆ ಗಿರಿಗಿರಿ ಓಡಾಡುವ ಜನರಲ್ಲಿ ಬಹುಪಾಲು ವಿಚಾರಗಳು, ವ್ಯವಹಾರಗಳು ಅನಗತ್ಯವೇ ಆಗಿರುತ್ತವೆ. ಆದರೆ ನಮ್ಮ ನಮ್ಮ ಸಂಕುಚಿತ ದೃಷ್ಟಿಕೋನಗಳು ನಮ್ಮನ್ನು ಸ್ವಕೇಂದ್ರಿತಗೊಳಿಸಿರುವುದರಿಂದ ನಾವು ಅದನ್ನು ಅರ್ಥಮಾಡಿಕೊಳ್ಳಲು ಅಸಫಲರಾಗಿದ್ದೇವೆ. ಆದ್ದರಿಂಲೇ ಬಸವಣ್ಣನವರು ಮನಸ್ಸು ಒಂದು ಧಾರೆಯ ಬಟ್ಟಲು ಎಂದಿದ್ದಾರೆ.

ದೇವಸ್ಥಾನಗಳಲ್ಲಿ ದೇವರ ಮೂರ್ತಿಯ ಶಿರೋಭಾಗದ ಮೇಲೆ ಅಭಿಷೇಕ ಮಾಡಲು ಧಾರಾ ಪಾತ್ರೆಯನ್ನು ನೇತುಹಾಕಿರುತ್ತಾರೆ. ಆ ಧಾರಾಪಾತ್ರೆಯಲ್ಲಿ ಹಾಕಿದ ನೀರು ಕೆಳಭಾಗದಲ್ಲಿರುವ ಸಣ್ಣ ತೂತಿನಿಂದ ಧಾರೆಯಾಗಿ ಸುರಿದು ಅಭಿಷೇಕವಾಗುತ್ತದೆ. ಅಂದರೆ ಪಾತ್ರೆಯಲ್ಲಿ ನೀರು ನಿಲ್ಲಲಾರದು. ನಮ್ಮ ಮನಸ್ಸೂ ಕೂಡ ಹಾಗೆಯೇ. ಭಕ್ತಿ ಭಾವವೆಂಬುದು ಅಚಲವಾಗಿ ಅದರಲ್ಲಿ ನಿಲ್ಲಲಾರದು. ಅದು ಕ್ರಮೇಣ ಸೋರಿ ಹೋಗುತ್ತದೆ. ಹಾಗೆ ಭಕ್ತಿಹೀನವಾದ ಮನಸ್ಸು ಯಾರದ್ದೇ ಆದರೂ ಅಷ್ಟೇ. ಅದು ಪರಮಾತ್ಮನ ಸನ್ನಿಧಿಯನ್ನು ಸೇರಲಾರದು.

ಕೂಡಲಸಂಗನ ಶರಣರು ಹಿಡಿಯದ ಭಂಡ ಎಂದರೆ ಭಗವಂತನ ಆರಾಧನೆಯಿಂದ ವಿಮುಖಗೊಂಡ ಮನಸ್ಸು ಎಂದರ್ಥ. ದೇವಭಕ್ತಿಯನ್ನು ಬಿಟ್ಟನಂತರ ಆ ವ್ಯಕ್ತಿಯ ಮನಸ್ಸು ನೀರು ಸೋರಿಹೋದ ಪಾತ್ರೆಯಂತೆ ಒಣಗಿಹೋಗುತ್ತದೆ. ಅಂತಹ ಮನಸ್ಸಿನ ವ್ಯಕ್ತಿಗೆ ದೇವರ ಸಾನ್ನಿಧ್ಯ ಪ್ರಾಪ್ತಿಯಾಗಲು ಸಾಧ್ಯವಿಲ್ಲ.

ಪ್ರಸ್ತುತ ಸನ್ನಿವೇಶವನ್ನು ಗಮನಿಸಿದರೆ ಈ ವಚನದ ಆಶಯವು ತುಂಬಾ ಚೆನ್ನಾಗಿ ಮನದಟ್ಟಾಗುತ್ತದೆ.

ನಾವೆಲ್ಲರೂ ನಮ್ಮ ವಾಸಸ್ಥಳಗಳಲ್ಲಿಯೇ ಉಳಿದು ಜೀವಿಸಬೇಕೆಂಬ ಸಂದರ್ಭ ರೂಪುಗೊಂಡಿರುವಾಗ ಸಾವಧಾನ ಎಂಬ ಪದದ ಮಹತ್ವ ಅರಿವಾಗುತ್ತದೆ. ಧಾರಾಪಾತ್ರೆಯಂತಹ ನಮ್ಮೆಲ್ಲರ ಮನಸ್ಸುಗಳು ಒಳ್ಳೆಯ ವಿಚಾರಗಳನ್ನು ಬಹಳ ಬೇಗ ಕಳೆದುಕೊಂಡು ಆತಂಕದ ಗೂಡಾಗಿಬಿಡುತ್ತದೆ. ನಮ್ಮ ಆಸಕ್ತಿಯ ಚಟುವಟಿಕೆಗಳಲ್ಲಿ ತೊಡಗಿಕೊಂಡು, ಲಭ್ಯವಿರುವ ಸೀಮಿತ ಸಂಪನ್ಮೂಲಗಳನ್ನು ಮಿತವಾಗಿ ಬಳಸಿಕೊಂಡು, ಸರಳವಾಗಿ ಬದುಕುವ ಸಾಧ್ಯತೆಯಿದೆ. ಆದರೆ ನಮಗೆ ಸಾವಧಾನವೇ ಇಲ್ಲ. ಅಲಭ್ಯವಾಗಿರುವುದೇ ಅಗತ್ಯವೆಂಬ ಹುಸಿಭ್ರಮೆಯಲ್ಲಿ ಬಿದ್ದುಕೊಂಡಿದ್ದೇವೆ. ಬಹಳ ಮುಖ್ಯವಾದುದೇನೋ ನಮ್ಮ ಕೈತಪ್ಪಿ ಹೋಗಿದೆಯೆಂದುಕೊಂಡು ಮನಸ್ಸು ವಿಲಿವಿಲಿ ಒದ್ದಾಡುತ್ತದೆ. ಅದರ ಬದಲು ಸುವಿಚಾರಗಳನ್ನು, ಉತ್ತಮ ಅಭಿರುಚಿಯ ಕ್ರಿಯಾಶೀಲತೆಯನ್ನು ಮನಸ್ಸಿನಲ್ಲಿ ತುಂಬಿಕೊಂಡರೆ ಅದು ಶಿವನ ಸನ್ನಿಧಿಗೆ ಅಣಿಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT