‘ಬುದ್ಧ’ ಎನ್ನುವುದು ವ್ಯಕ್ತಿಯೊಬ್ಬನ ಹೆಸರಲ್ಲ, ಅದು ಮಹಾತತ್ತ್ವವೊಂದರ ಹೆಸರು. ಬೋಧಿಯನ್ನು, ಎಂದರೆ ಅರಿವನ್ನು ಸಂಪಾದಿಸಿದವನೇ ‘ಬುದ್ಧ’.

ಜಗತ್ತಿನ ಹಲವು ಸಮಸ್ಯೆಗಳಿಗೆ ಮೂಲ ಎಂದರೆ ನಮ್ಮಲ್ಲಿ ‘ಅರಿವು’ ಇಲ್ಲದಿರುವುದು. ಹೀಗಾಗಿ ನಾವು ಬುದ್ಧನನ್ನು ದಕ್ಕಿಸಿಕೊಂಡರೆ, ಆಗ ಅರಿವನ್ನೂ ದಕ್ಕಿಸಿಕೊಂಡಂತೆಯೇ ಆಗುತ್ತದೆ. ನಮಗೆ ಅರಿವಿನ ಪರಿಚಯ ಇಲ್ಲ – ಎನ್ನುವ ಮಾತು ನಮಗೆ ವಿಚಿತ್ರವಾಗಿ ಕಾಣುವುದು ಸಹಜ. ‘ನಾವು ಎಷ್ಟೆಲ್ಲ ಸಾಧನೆಗಳನ್ನು ಮಾಡಿದ್ದೇವೆ, ಎಷ್ಟೆಲ್ಲ ವಿದ್ಯೆಗಳನ್ನು ಕರಗತ ಮಾಡಿಕೊಂಡಿದ್ದೇವೆ. ಹೀಗಿರುವಾಗ ನಮಗೆ ಅರಿವು, ಎಂದರೆ ತಿಳಿವಳಿಕೆ ಇಲ್ಲ ಎಂಬ ಮಾತನ್ನು ಹೇಗೆ ಒಪ್ಪುವುದು’ ಎಂಬ ತರ್ಕ ನಮ್ಮದು. ದಿಟವೇ, ನಮಗೆ ಏನೇನೋ ವಿದ್ಯೆಗಳು ಗೊತ್ತಿವೆ. ಆದರೆ ಹೇಗೆ ಬದುಕಬೇಕೆಂಬ ವಿದ್ಯೆ ಮಾತ್ರ ಗೊತ್ತಿಲ್ಲ! ಹೌದು, ನಮ್ಮಲ್ಲಿ ಎಂತೆಂಥವೋ ಅರಿವುಗಳ ಖಜಾನೆಯೇ ಇದೆ.

ಆದರೆ ಜೀವನ ಎಂದರೆ ಏನು ಎಂಬ ಅರಿವಿನ ಕೋಶವೇ ಇಲ್ಲವಾಗಿದೆ. ಎಂದರೆ, ವಾಸ್ತವವಾಗಿ ಯಾವ ಅರಿವು ಬೇಕಾಗಿದೆಯೋ ಅದು ನಮಲ್ಲಿ ಇಲ್ಲವಾಗಿದೆ. ಆದರೂ ನಮ್ಮನ್ನು ನಾವು ಬುದ್ಧಿವಂತರು ಎಂದುಕೊಂಡು ಬೀಗುತ್ತಿದ್ದೇವೆ, ಅನಾರೋಗ್ಯವನ್ನೇ ಆರೋಗ್ಯ ಎಂದು ಸಂತೋಷಪಡುವಂತೆ! ಇದನ್ನು ಬುದ್ಧ ಸೊಗಸಾಗಿ ಹೇಳಿದ್ದಾನೆ: ‘ಯಾವ ಮೂರ್ಖನಿಗೆ ತಾನು ಮೂರ್ಖ ಎಂದು ತಿಳಿದಿದೆಯೋ, ಅವನು ಲೋಕದ ದೃಷ್ಟಿಯಿಂದ ಮೂರ್ಖನಾಗಿದ್ದರೂ ಜೀವನದ ದೃಷ್ಟಿಯಿಂದ ಬುದ್ಧಿವಂತನೇ ಹೌದು. ಆದರೆ ಯಾವ ಮೂರ್ಖನಿಗೆ ತಾನು ಮೂರ್ಖನೆಂದು ಗೊತ್ತಾಗದೆ, ತನ್ನನ್ನು ತಾನು ಜಾಣ ಎಂದು ತಿಳಿದುಕೊಂಡಿದ್ದಾನೋ ಅವನು ದಿಟವಾಗಿಯೂ ಮೂರ್ಖನೇ ಹೌದು.’

ನಮ್ಮ ಜೀವನವನ್ನು ಅರ್ಥಪೂರ್ಣವಾಗಿಸಬಲ್ಲ, ನೆಮ್ಮದಿಯ ನೆಲೆಯಾಗಿಸಬಲ್ಲ ವಿದ್ಯೆಗಳನ್ನು ಉಪದೇಶಿಸಿದ ಮಹಾಗುರು ಗೌತಮ ಬುದ್ಧ. ಜೀವನ ಎಂದರೆ ಏನು – ಎಂಬ ಅರಿವನ್ನು ಮೊದಲಿಗೆ ಅವನು ಸಂಪಾದಿಸಿದ; ಹೀಗೆ ಸಂಪಾದಿಸಿದ ಅರಿವನ್ನು ಅವನು ತನ್ನಲ್ಲಿಯೇ ಉಳಿಸಿಕೊಳ್ಳಲಿಲ್ಲ; ಜಗತ್ತಿನ ಒಳಿತಿಗಾಗಿ ಅದನ್ನು ಜನರಿಗೆ ನಿರಂತರವಾಗಿ ಉಪದೇಶಿಸಿದ.

ಜೀವನದ ಈ ಅರಿವನ್ನೇ ಅವನು ಸನಾತನಧರ್ಮ ಎಂದು ಒಕ್ಕಣಿಸಿದ. ‘ಸನಾತನಧರ್ಮ’ ಎಂದ ಕೂಡಲೇ ಕೆಲವರಿಗೆ ವಿಪರೀತವಾದ ಅರ್ಥಗಳು ಸ್ಫುರಿಸಿ, ಅವರಲ್ಲಿ ಉದ್ವೇಗವನ್ನು ಮೂಡಿಸುವುದುಂಟು! ಎಂದೆಂದಿಗೂ ಇರುವ, ಎಲ್ಲರ ಹಿತವನ್ನೂ ಕಾಪಾಡಬಲ್ಲ ರೀತಿ–ನೀತಿಗಳ ಸಂಹಿತೆಯೇ ಸನಾತನಧರ್ಮ; ಇದು ಯಾವುದೋ ಒಂದು ಮತ ಅಥವಾ ನಂಬಿಕೆಗೆ ಸೀಮಿತವಾದ ಪದ ಅಲ್ಲ.

ನಾಲ್ಕು ಆರ್ಯಸತ್ಯಗಳು ಮತ್ತು ಆರ್ಯ ಅಷ್ಟಾಂಗಿಕಮಾರ್ಗ – ಎಂಬ ಎರಡು ಮಹಾಪ್ರಸ್ಥಾನಗಳ ಮೂಲಕ ಬುದ್ಧ ನಮಗೆ ಅರಿವಿನ ಉಪಾಯಗಳನ್ನು ಸೂಚಿಸಿದ. ಜೀವನದ ಸತ್ಯ ಏನು? ನಿಜವಾದ ಜೀವನವನ್ನು ನಡೆಸಲು ಬೇಕಾದ ಸಿದ್ಧತೆಗಳೇನು? ಈ ಎರಡು ಪ್ರಮುಖ ಪ್ರಶ್ನೆಗಳಿಗೆ ಉತ್ತರವಾಗಿ ಈ ಎರಡು ಮಹಾತತ್ತ್ವಗಳನ್ನು ಉಪದೇಶಿಸಿದ್ದಾನೆ. ಜೀವನದಲ್ಲಿ ದುಃಖ ಇದೆ; ಆದರೆ ಆ ದುಃಖದಿಂದ ಪಾರಾಗುವ ದಾರಿಯೂ ಇದೆ – ಎಂಬುದೇ ಅವನ ಎಲ್ಲ ಉದೇಶಗಳ ಸಾರ ಎಂದು ಹೇಳಿದರೆ, ಅದೇನೂ ತಪ್ಪಾಗದು.

ಇಂದು ನಾವೆಲ್ಲರೂ ‘ನಾವು ಕಂಡಿದ್ದೇ ಸತ್ಯ; ನಮ್ಮ ಮತ ಹೇಳಿದ್ದೇ ಸತ್ಯ; ನಮ್ಮ ಮತಗ್ರಂಥ ಹೇಳುತ್ತಿರುವುದೇ ಸತ್ಯ’ – ಎಂಬ ಹೋರಾಟಗಳಲ್ಲಿ ತೊಡಗಿದ್ದೇವೆ. ಆದರೆ ನಾವು ಸತ್ಯ ಎಂದು ಹಟಮಾಡುತ್ತಿರುವುದು ಸತ್ಯದ ಒಂದು ಅಂಶ ಮಾತ್ರವೇ ಎಂಬುದನ್ನು ಬುದ್ಧ ಪ್ರತಿಪಾದಿಸಿದ. ಹುಟ್ಟುಗುರುಡರು ಆನೆಯ ಯಾವುದಾದರೊಂದು ಭಾಗವನ್ನು ಸ್ಪರ್ಶಿಸಿ, ‘ಆನೆ ಎಂದರೆ ಇದೇ’ ಎಂದು ತಿಳಿದುಕೊಳ್ಳುವಂತೆ ನಮ್ಮ ‘ಸತ್ಯಸಾಕ್ಷಾತ್ಕಾರ’ದ ಪಾಡು ಕೂಡ ಎಂಬುದನ್ನು ಅವನು ಪ್ರತಿಪಾದಿಸಿದ. ಕುರುಡರು ವರ್ಣಿಸಿದ ವಿವರಗಳು ಆನೆಯ ವಿವರಗಳೇ ಆದರೂ, ಅವೇನೂ ಆನೆಯ ಸಮಗ್ರ ಚಿತ್ರಣವಲ್ಲ. ಹೀಗೆಯೇ ನಾವೆಲ್ಲರೂ ಹೇಳುತ್ತಿರುವುದು ಸತ್ಯವೇ ಆದರೂ, ಯಾರದ್ದೂ ಪೂರ್ಣಸತ್ಯವಲ್ಲವಷ್ಟೆ! ಇಂಥ ಅರಿವಿನ ವಿನಯ, ವಿನಯದ ಅರಿವು ಮಾತ್ರವೇ ನಮ್ಮ ಜೀವನವನ್ನು ನೆಮ್ಮದಿಯಾಗಿಡಬಹುದು. ಇಂಥ ಅರಿವಿನ ಪೂರ್ಣಚಂದ್ರನೇ ಬುದ್ಧ ಎಂಬ ಮಹಾಗುರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.