ಮಂಗಳವಾರ, ಫೆಬ್ರವರಿ 18, 2020
16 °C

ಮಗು ಮತ್ತು ದೇವರು

ಡಿ.ಎಂ.ಘನಶ್ಯಾಮ Updated:

ಅಕ್ಷರ ಗಾತ್ರ : | |

Prajavani

'ಮಕ್ಕಳನ್ನು ಹೆದರಿಸಬೇಡಿ. ಮುಂದೆ ಅವು ಸರಿ-ತಪ್ಪು ಅರ್ಥ ಮಾಡ್ಕೊಳುತ್ವೆ. ಇಷ್ಟು ವರ್ಷ ಆದ್ರೂ ನಿಮಗೆ ಏನ್ ತಾನೆ ಅರ್ಥವಾಗಿದೆ ಹೇಳಿ?'

ಚಿಕ್ಕಮಗಳೂರಿನ ವಿಜಯಪುರ ಬಡಾವಣೆಯಲ್ಲಿ ನರಸಿಂಹಮೂರ್ತಿ ಅವರು ಏರಿದ ಧ್ವನಿಯಲ್ಲಿ ಮೊಮ್ಮಗ ಅಜಯನನ್ನು ಸಮರ್ಥಿಸಿಕೊಳ್ಳುತ್ತಿದ್ದರು. ಅಸಲಿಗೆ ಆದದ್ದು ಇಷ್ಟೇ.

ದೇವರಪೂಜೆ ಮುಗಿಸಿ ಅಜ್ಜ ಹೊರಗೆ ಬಂದು ಮಡಿ ಬಟ್ಟೆ ಬದಲಿಸುವುದೇ ತಡ, ತೀಟೆಮಲ್ಲ ಮೊಮ್ಮಗ ಒಳಗೆ ನುಗ್ಗಿ ದೇವರ ವಿಗ್ರಹಗಳನ್ನು ಹಾಲಿನಲ್ಲಿ ಜೋಡಿಸಿಟ್ಟು ಪೂಜೆಯ ಆಟ ಶುರು ಮಾಡಿದ್ದ. 'ಅಯ್ಯೋ ಮಡಿಯಿಲ್ಲ ಮೈಲಿಗೆಯಿಲ್ಲ, ಸಾಲಿಗ್ರಾಮ ಮುಟ್ಟಿಬಿಟ್ಟ' ಅಂತ ಮನೆಮಂದಿಯೆಲ್ಲಾ ಮಗುವನ್ನು ದೂರಿದಾಗ ಹಿರೀಕರಾದ ನರಸಿಂಹಮೂರ್ತಿ ಮೊಮ್ಮಗನ ಪರ ಬ್ಯಾಟಿಂಗ್ ಆರಂಭಿಸಿದ್ದರು.

ಅಂದು ಅವರು ಆಡಿದ ಮಾತುಗಳು ಮಾತ್ರ ಎಂದೆಂದಿಗೂ ಪ್ರಸ್ತುತ ಎನಿಸಿತು ನನಗೆ. ಹೀಗಾಗಿಯೇ ಅವನ್ನು ಇಲ್ಲಿ ದಾಖಲಿಸಿದ್ದೇನೆ.

'ಮಕ್ಕಳಿಗೆ ದೇವರು ಅಂದ್ರೆ ಪ್ರೀತಿ ಬರೋ ಥರ ಮಾಡಿ. ಮಡಿಮಡಿ ಅಂತ ಹೆದರಿಸಬೇಡಿ. ನಿಮಗಾದರೂ ಅಷ್ಟೇ, ಭಕ್ತಿ ಅನ್ನೋದು ಪ್ರೀತಿಯಿಂದ ಬರಬೇಕು. ಇಷ್ಟೆಲ್ಲಾ ಕೊಟ್ಯಲ್ಲಾ ನಮ್ಮಪ್ಪ ಅಂತ ದೇವರಿಗೆ ಕೃತಜ್ಞತೆಯಿಂದ ಕೈಮುಗೀಬೇಕು. ಅದು ಬಿಟ್ಟು ಕೈಮುಗೀದಿದ್ರೆ ಕೆಟ್ಟದಾಗುತ್ತೆ ಅನ್ನೋ ಹೆದರಿಕೆಯಿಂದ ಅಲ್ಲ.

ನಮ್ಮನ್ನ ಭೂಮಿಗೆ ಕಳಿಸುವಾಗಲೇ ನಮಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿಟ್ಟಿದ್ದಾನೆ ಅವನು.'ದೇವರಪೂಜೆ ಅನ್ನೋದು ಜೀವನವಿಡೀ ಪಾಲಿಸಬೇಕಾದ ವ್ರತ. ದೇವರು ಅಂದ್ರೆ ಇಂಥ ಪೂಜೆಗೆ ಇಂಥ ಫಲ ಅಂತ ನಮಗೆ ಬೇಕಾದ್ದು ಕೊಡೋಕೆ ಇರೋ ವೆಂಡಿಂಗ್ ಮಿಷಿನ್ ಅಲ್ಲ. ಮಕ್ಕಳ ಮನಸ್ಸನ್ನೇ ಅರ್ಥ ಮಾಡಿಕೊಳ್ಳದವರಿಗೆ ದೇವರಾದರೂ ಹೇಗೆ ಅರ್ಥವಾದಾನು? ದೇವರು ಅರ್ಥವಾಗಬೇಕು ಅಂದ್ರೆ ನಾವೆಲ್ಲರೂ ಮಕ್ಕಳಾಗಬೇಕು.

'ದೇವರಪೂಜೆ, ತುಳಸಿಪೂಜೆ ಮಾಡುವಾಗ ಮಕ್ಕಳನ್ನೂ ಜೊತೆಗೆ ಹಾಕ್ಕೊಳಿ. ಮಡಿ ಅಂತ ದೂರ ಮಾಡಬೇಡಿ. ನಿಮ್ಮನ್ನು ನೋಡಿ, ನಿಮ್ಮ ವರ್ತನೆ ಗಮನಿಸಿ ಅವರು ನಿಮ್ಮಂತೆ ಆಗುತ್ತಾರೆ. ನಿನ್ನ ಮಗನ ಸ್ವಭಾವ ಹೇಗಾಗಬೇಕು ಅಂತ ನಿನಗೆ ಆಸೆಯಿದೆಯೋ ಅಂಥ ಸ್ವಭಾವ ನೀನು ರೂಢಿಸಿಕೊಳ್ಳಬೇಕು. ದೇವರಪೂಜೆಗೆ ಕೂತವನು ಕೆಟ್ಟ ಮುಖ ಮಾಡಿಕೊಂಡು ಮಗುನ ಬೈತಿದ್ರೆ ಹೇಗೆ? ಅವನಿಗೆ ಎಂದಾದರೂ ದೇವರ ಬಗ್ಗೆ ಇರಲಿ, ಅವನ ಅಪ್ಪನ ಬಗ್ಗೆಯಾದ್ರೂ ಪ್ರೀತಿ ಹುಟ್ಟೀತೆ?'

ದೊಡ್ಡವರು ಅಷ್ಟೆಲ್ಲಾ ಮಾತಾಡ್ತಿದ್ರೂ ಮಗು ಮಾತ್ರ ತನಗೆ ಕೊಟ್ಟಿದ್ದ ಹಾಲಿನ ಲೋಟದಲ್ಲಿ ಚಮಚ ಅದ್ದಿ ಕೃಷ್ಣನ ತಲೆಗೆ ತನ್ಮಯತೆಯಿಂದ ತೊಟ್ಟು ಬಿಡುತ್ತಿತ್ತು. ಅದನ್ನು ಕಂಡ ಮನೆಮಂದಿ ಕೈಮುಗಿದರು. ಅದೊಂದು ಕ್ಷಣ ಅವರೆಲ್ಲರೂ ಮಕ್ಕಳೇ ಆಗಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು