ಗುರುವಾರ , ಅಕ್ಟೋಬರ್ 21, 2021
28 °C

ದಸರಾ ಮಹೋತ್ಸವ: ನವತ್ವದ ನವರಾತ್ರಿ

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಮತ್ತೆ ನವರಾತ್ರಿ ಬಂದಿದೆ. ಇದು ಒಂಬತ್ತು ದಿನಗಳ ಹಬ್ಬವಾಗಿ ‘ನವರಾತ್ರ’ ಎಂದೆನಿಸಿಕೊಂಡಿದೆ, ದಿಟ. ಆದರೆ ಇದನ್ನು ಇನ್ನೊಂದು ವಿಧದಲ್ಲೂ ಅರ್ಥೈಸಿಕೊಳ್ಳಬಹುದು: ನಮ್ಮ ಜೀವನದಲ್ಲಿ ನವತ್ವವನ್ನು, ಎಂದರೆ ಹೊಸತನವನ್ನು ತುಂಬಬಲ್ಲ ಹಬ್ಬವಾದುದರಿಂದ ‘ನವರಾತ್ರ’. ಇಲ್ಲಿ ರಾತ್ರಿಯೇ ಏಕೆ ಎಂದರೆ, ರಾತ್ರಿ ಎಂಬುದು ಕತ್ತಲೆಗೆ ಸಂಕೇತ, ಕಷ್ಟಕ್ಕೆ ಸಂಕೇತ. ಹೀಗಾಗಿ ನಮಗೆ ಒದಗಿರುವ ಕಷ್ಟಗಳಿಂದ ನಮ್ಮನ್ನು ಪಾರುಮಾಡಿ, ದಣಿದಿರುವ ಬದುಕಿಗೆ ಹೊಸತನವನ್ನು ತುಂಬಬಲ್ಲದ್ದು ನವರಾತ್ರ. ಈಗಂತೂ ಇಡುಯ ಜಗತ್ತಿಗೇ ನವತ್ವ ಬೇಕಿದೆ. ಕೋವಿಡ್‌ನ ಉಪಟಳದಿಂದ ಎಲ್ಲರೂ ದಣಿದಿದ್ದಾರೆ; ಎಲ್ಲರಿಗೂ ಹುರುಪು–ಉತ್ಸಾಹ–ಚೈತನ್ಯಗಳು ಬೇಕಿವೆ.

ನವರಾತ್ರಿಯನ್ನು ನಮ್ಮಲ್ಲಿ ‘ದಸರಾ‘ ಎಂದೂ ಆಚರಿಸಲಾಗುತ್ತದೆಯಷ್ಟೆ. ಇದು ‘ದಶಾಹ‘ ಎಂಬುದರ ರೂಪಾಂತರ; ಹತ್ತು ದಿನಗಳು ಎಂದು ಇದರರ್ಥ. ‘ನವರಾತ್ರಿ‘ಯ ಹತ್ತನೆಯ ದಿನವನ್ನು ‘ವಿಜಯದಶಮಿ‘ ಎಂದು ಆಚರಿಸಲಾಗುತ್ತದೆ. ಹೀಗಾಗಿ ಒಟ್ಟು ಹತ್ತು ದಿನಗಳ ಹಬ್ಬವೇ ‘ದಶಾಹ’; ಇದೇ ‘ದಸರಾ’ ಆಗಿರುವುದು. ಇದು ನಮ್ಮ ನಾಡಹಬ್ಬ.

ಪ್ರಕೃತಿಯಿಂದಲೇ ನಮ್ಮ ಎಲ್ಲ ಶಕ್ತಿಗಳ ಮೂಲಸ್ರೋತ. ಅವಳು ನಮಗೆ ಒಲಿದಾಗಲೇ ನಮ್ಮ ಬದುಕು ಹಗುರ, ಸುಖ, ಸಂತೋಷ, ಸುಂದರ; ಅವಳು ಮುನಿದಾಗ ಬದುಕು ಭಾರ, ನೋವು, ದುಃಖ, ಭಯಂಕರ. ಅವಳನ್ನು ಒಲಿಸಿಕೊಳ್ಳುವುದು ಎಂದರೆ ಶಕ್ತಿಯ ಸ್ವರೂಪವನ್ನು ಚೆನ್ನಾಗಿ ಅರಿತುಕೊಂಡು, ಅದಕ್ಕೆ ತಕ್ಕಂತೆ ಜೀವನವನ್ನು ರೂಪಿಸಿಕೊಳ್ಳುವುದು. ಹೀಗಾಗಿಯೇ ನವರಾತ್ರಿಯ ಮೊದಲ ಮೂರು ದಿನಗಳನ್ನು ಲಕ್ಷ್ಮಿಯ ಪೂಜೆಗೂ, ಅನಂತರದ ಮೂರು ದಿನಗಳನ್ನು ಸರಸ್ವತಿಯ ಪೂಜೆಗೂ, ಕೊನೆಯ ಮೂರು ದಿನಗಳನ್ನು ದುರ್ಗೆಯ ಪೂಜೆಗೂ ವಿನಿಯೋಗಿಸಲಾಗುತ್ತದೆ.

ಪ್ರಕೃತಿ ಎಂದರೆ ತಾಯಿ. ನಮಗೆ ಜೀವವನ್ನು ಕೊಟ್ಟು, ನಮ್ಮ ಜೀವನವನ್ನು ಮುನ್ನಡೆಸುವವಳು ಅವಳು. ಹೀಗಾಗಿಯೇ ನಮ್ಮ ಸಂಸ್ಕೃತಿಯಲ್ಲಿ ಪ್ರಕೃತಿಯ ಆರಾಧನೆಗೂ ಮಾತೃಶಕ್ತಿಯ ಪೂಜನಕ್ಕೂ ವಿಶೇಷ ಮನ್ನಣೆ. ತಾಯಿಯನ್ನು ಪ್ರಕೃತಿಗೆ ಸಂಕೇತವಾಗಿಯೂ, ಪ್ರಕೃತಿಯನ್ನು ತಾಯ್ತನಕ್ಕೆ ಪ್ರತಿಮೆಯಾಗಿಯೂ ನಮ್ಮ ಪರಂಪರೆ ಕಾಣಿಸಿದೆ. ಮಾತೃತ್ವದ ಎಲ್ಲ ಆಯಾಮಗಳೂ ಲಕ್ಷ್ಮೀ, ಸರಸ್ವತೀ ಮತ್ತು ದುರ್ಗೆ – ಈ ಮೂರು ರೂಪಗಳಲ್ಲಿ ಕಂಡರಿಸಲ್ಪಟ್ಟಿದೆ.

ನಮ್ಮ ಜೀವನಕ್ಕೆ ಮುಖ್ಯವಾಗಿ ಏನು ಬೇಕು? ಮೊದಲಿಗೆ ಪ್ರಾಣ ಇರಬೇಕು; ಆ ಪ್ರಾಣಕ್ಕೆ ತ್ರಾಣ ಒದಗಬೇಕು. ಪ್ರಾಣ–ತ್ರಾಣಗಳ ಸಂಯೋಗವನ್ನೇ ಬಲ ಎನ್ನಬಹುದು. ಇದು ದೇಹಕ್ಕೆ ಅಸ್ತಿತ್ವವನ್ನು ಒದಗಿಸುವ ಮೊದಲ ಹಂತ. ಈ ಬಲವೊಂದೇ ಇದ್ದರೆ ನಮ್ಮ ಜೀವನಕ್ಕೆ ಸಾಕಾಗದು; ಹಲವು ಬಲಗಳ ಬೆಂಬಲ ನಮಗೆ ಬೇಕಾಗುತ್ತದೆ; ದೈಹಿಕ ಮಾನಸಿಕ ಬೌದ್ಧಿಕ ಬಲಗಳಲ್ಲದೆ, ಆರ್ಥಿಕ, ಸಾಮಾಜಿಕ, ಭಾವನಾತ್ಮಕ ಬಲಗಳೂ ಬೇಕಾಗುತ್ತವೆ. ಈ ಎಲ್ಲ ಬಗೆಯ ಬಲಗಳನ್ನೂ ಒಂದಾಗಿ ಸೇರಿಸಿ ‘ಶಕ್ತಿ’ ಎಂದು ಕರೆಯಬಹುದು. ಶಕ್ತಿಯ ವಿವಿಧ ಆಯಾಮಗಳ ಆರಾಧನೆಗೆ ಮೀಸಲಾಗಿರುವ ಹಬ್ಬವೇ ನವರಾತ್ರಿ. ಇದು ಶಕ್ತಿಶಾರದೆಯ ಉತ್ಸವ.

ಇಲ್ಲಿ ಲಕ್ಷ್ಮೀ ನಮಗೆ ಬೇಕಾದ ಎಲ್ಲ ವಿಧದ ಭೌತಿಕ ಶಕ್ತಿ, ಎಂದರೆ ಸಂಪತ್ತನ್ನು ಸಂಕೇತಿಸುತ್ತಾಳೆ; ಸರಸ್ವತಿಯು ನಮಗೆ ಬೇಕಾದ ಬೌದ್ಧಿಕ ಶಕ್ತಿಯನ್ನು, ಎಂದರೆ ವಿದ್ಯಾಬುದ್ಧಿಗಳನ್ನು ಸಂಕೇತಿಸುತ್ತಾಳೆ; ದುರ್ಗೆಯು ನಮಗೆ ಬೇಕಾದ ದೈಹಿಕ ಶಕ್ತಿಯನ್ನು, ಎಂದರೆ ಆರೋಗ್ಯ–ಧೈರ್ಯಗಳನ್ನು ಸಂಕೇತಿಸುತ್ತಾಳೆ. ಆಧಿಭೌತಿಕ, ಆಧಿದೈವಿಕ ಮತ್ತು ಆಧ್ಯಾತ್ಮಿಕ ಶಕ್ತಿಗಳನ್ನೂ ಈ ಮೂರು ತತ್ತ್ವಗಳು ಸಂಕೇತಿಸುತ್ತವೆ.

ಇಂದು ಜಗತ್ತು ಅನಾರೋಗ್ಯ, ಅವಿದ್ಯೆ, ದಾರಿದ್ರ್ಯಗಳಿಂದ ಬಳಲುತ್ತಿದೆ. ಇವು ಎಲ್ಲ ಕಾಲದ ಸಮಸ್ಯೆಗಳೂ ಹೌದು. ಈ ಕಷ್ಟಗಳಿಂದ ನಮ್ಮನ್ನು ಕಾಪಾಡಬಲ್ಲದ್ದು ಪ್ರಕೃತಿ. ಇದು ನಮ್ಮ ಒಳಗಿನ ಪ್ರಕೃತಿಯೂ ಹೌದು, ನಮ್ಮ ಹೊರಗಿನ ಪ್ರಕೃತಿಯೂ ಹೌದು. ಇದು ನಮ್ಮ ಅಂತರಂಗದ ಚೈತನ್ಯವೂ ಹೌದು, ಬಹಿರಂಗದ ಚೈತನ್ಯವೂ ಹೌದು. ಹೀಗೆ ನಮ್ಮನ್ನೂ ನಮ್ಮ ಪರಿಸರವನ್ನೂ ನಮ್ಮ ಏಳಿಗೆಗೆ ಒದಗುವಂತೆ, ನಮ್ಮ ಬದುಕನ್ನು ಹೊಸತನ್ನಾಗಿಸಿಕೊಳ್ಳುವಂತೆ ನಡೆಸುವ ಅಂತರಂಗ–ಬಹಿರಂಗದ ಶಕ್ತಿಪೂಜೆಯೇ ‘ನವರಾತ್ರಿ’.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು