ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾವಳಿ: ದೀಪಗಳ ಮಧ್ಯ ಸಗಣಿ ಪಾಂಡವರು

Published 10 ನವೆಂಬರ್ 2023, 23:52 IST
Last Updated 10 ನವೆಂಬರ್ 2023, 23:52 IST
ಅಕ್ಷರ ಗಾತ್ರ

‌ಉತ್ತರ ಕರ್ನಾಟಕದ ಲಿಂಗಾಯತರು, ಒಕ್ಕಲಿಗರು, ನೇಕಾರರು, ಬ್ರಾಹ್ಮಣರು ಸೇರಿದಂತೆ ಎಲ್ಲ ಸಮುದಾಯದವರೂ ಈ ಸಂಪ್ರದಾಯವನ್ನು ಆಚರಿಸುತ್ತಾರೆ. ಮನೆಯೊಡತಿಯರು ದೀಪಾವಳಿ ಹಬ್ಬಕ್ಕೂ ಪೂರ್ವ ಮೊದಲೆರಡು ದಿನ ಗೋವಿನ ಸಗಣಿಯನ್ನು ಸಂಗ್ರಹಿಸಿಡಲು ಶುರು ಮಾಡುತ್ತಾರೆ. ನರಕ ಚತುದರ್ಶಿಯ ದಿನದಿಂದ ಬಲಿ ಪಾಡ್ಯದವರೆಗೆ ಪಾಂಡವರನ್ನು ತಯಾರಿಸಲು ಆರಂಭಿಸುತ್ತಾರೆ. ಬೆಳಿಗ್ಗೆ ಬೇಗ ಎದ್ದು ದನದ ಕೊಠಡಿಯಲ್ಲಿ ಐದು ಚಿಕ್ಕ ಪಾಂಡವರನ್ನು ತಯಾರಿಸಿ ಇಡುತ್ತಾರೆ. ನರಕ ಚತುದರ್ಶಿ ದಿನ ಐದು ಪಾಂಡವರು, ಅಮವಾಸ್ಯೆ ದಿನ ಒಂಬತ್ತು ಪಾಂಡವರು, ಬಲಿಪಾಡ್ಯದಂದು ಹನ್ನೊಂದು ಪಾಂಡವರನ್ನು ತಯಾರಿಸಲಾಗುವುದು.

ಬಲಿಪಾಡ್ಯದಂದು ಬೆಳಿಗ್ಗೆ ಬೇಗ ಎದ್ದು ಪಾಂಡವರನ್ನು ತಯಾರಿಸಿ, ಅವುಗಳಿಗೆ ಉತ್ತರಾಣಿ ಕಡಿ, ಹಳದಿ ಬಣ್ಣದ ಹೊನ್ನಾರಿ ಹೂವು, ಬಿಳಿ ಹೊಣ್ಣೆ ಹೂವುಗಳನ್ನು ತಲೆಗೆ ಕೀರಿಟದಂತೆ ಹಾಕಿ, ಕುಂಕುಮ, ಭಂಡಾರ ಹಚ್ಚಿ, ಚೆಂಡು ಹೂವುಗಳಿಂದ ಸಿಂಗರಿಸಲಾಗುತ್ತದೆ. ಪಾಂಡವರ ಜೊತೆಗೆ ಬೀಸುವ ಕಲ್ಲು, ಕುಟ್ಟುವ ಕಲ್ಲು, ಕೋಣಗಳನ್ನು ತಯಾರಿಸುತ್ತಾರೆ. ಆ ದಿನ ಸುಣ್ಣದಿಂದ ಮನೆ ತುಂಬ ಪಾಂಡವರ ಹೆಜ್ಜೆ ಗುರುತುಗಳನ್ನು ಹಾಕಲಾಗುತ್ತದೆ. ಮನೆಯ ಮುಖ್ಯ ದ್ವಾರದ ಅಕ್ಕಪಕ್ಕ ಒಂದೊಂದು ಪಾಂಡವರನ್ನು ಈಡಲಾಗುತ್ತದೆ. 

ಸಿಂಗರಿಸಿಕೊಂಡ ಪಾಂಡವರಿಗೆ ಆ ದಿನ ವಿಶೇಷ ಖಾದ್ಯಗಳ ನೈವೇದ್ಯ. ಕಬ್ಬು ಗರಿಕೆ, ಜೋಳದ ದಂಟನ್ನು ಗೋಪುರದಂತೆ ನಿಲ್ಲಿಸಿ, ಅರ್ಧ ವೃತ್ತಾಕಾರದಲ್ಲಿ ಪಾಂಡವರನ್ನು ಜೋಡಿಸಿ ಇಡಲಾಗುತ್ತದೆ. ಅವುಗಳ ಮುಂದೆ ಬಣ್ಣ ಬಣ್ಣದ ರಂಗೋಲಿ ಹಾಕಿ, ಆರತಿ ಬೆಳಗಿ, ದೀಪ ಬೆಳಗಿಸಲಾಗುತ್ತದೆ. ಬೆಳಗಿಂದ ಅಲಂಕಾರಗೊಂಡು ಮನೆತುಂಬ ಸಂಭ್ರಮ ಮೂಡಿಸಿದ ಪಾಂಡವರು ಸಂಜೆಯಾಗುತ್ತಿದ್ದಂತೆ ಮನೆ ಏರಿ ಕೂಡುತ್ತಾರೆ.

ಸೂರ್ಯಾಸ್ತದ ಹೊತ್ತಿಗೆ ಪಾಂಡವರನ್ನು ಮನೆಯ ಮೇಲಿಟ್ಟು ದೀಪ ಬೆಳಗಿಸಲಾಗುತ್ತದೆ. ಪಾಂಡವರ ಜೊತೆಗೆ ಚಿಕ್ಕೆ ಪಣತಿಗಳಲ್ಲಿ ಗೋಧಿ, ಜೋಳದ ಬೀಜ ಹಾಕಿ ಬೆಳೆಸಲಾದ ಪುಟ್ಟ ಸಸಿಗಳನ್ನೂ ಇಡುತ್ತಾರೆ.

ವಿಷ್ಣುವು ನಂದ ರಾಕ್ಷಸನನ್ನು ಕೊಂದ ನೆನಪಿಗಾಗಿ ದೀಪಾವಳಿಯ ಪಾಡ್ಯದ ದಿವಸ ಪಾಂಡವರನ್ನು ಪ್ರತಿಷ್ಠಾಪಿಸಲಾಗುವುದು. ಈ ಸಂಪ್ರದಾಯ ದನಗಳಿಗೆ, ದನದ ಕೊಟ್ಟಿಗೆಗೆ ರೈತಾಪಿ ಜನ ತೋರುವ ಗೌರವವನ್ನೂ ಸಾರುತ್ತದೆ.

ಸಿಂಗಾರಗೊಂಡ ಪಾಂಡವರು
ಸಿಂಗಾರಗೊಂಡ ಪಾಂಡವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT