ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರಂಗ ಬಹಿರಂಗದ ಸಿರಿ

Last Updated 26 ಅಕ್ಟೋಬರ್ 2019, 7:13 IST
ಅಕ್ಷರ ಗಾತ್ರ

ದೀಪಾವಳಿಯ ಮೂರು ದಿನಗಳ ಆಚರಣೆಯಲ್ಲಿ ಅಮಾವಾಸ್ಯೆಯಂದು ಮಾಡುವ ಲಕ್ಷ್ಮೀಪೂಜೆಯೂ ಒಂದು.

ಲಕ್ಷ್ಮೀಯನ್ನು ‘ಶ್ರೀ’ ಎಂದು ಕೂಡ ಕರೆಯುವುದುಂಟು. ಶ್ರೀ ಎಂದರೆ ಸಂಪತ್ತು ಎಂಬ ಅರ್ಥ ಮಾತ್ರವಲ್ಲದೆ, ಒಳಿತು ಮಂಗಳಕರ ಶ್ರೇಷ್ಠ ಸುಂದರ – ಎಂಬೆಲ್ಲ ಅರ್ಥಗಳೂ ಇವೆ. ಹೀಗಾಗಿ ಲಕ್ಷ್ಮೀಪೂಜೆ ಎಂದರೆ ಕೇವಲ ಸಂಪತ್ತಿನ ಪೂಜೆ ಮಾತ್ರವಲ್ಲ, ನಮಗೆ ಒಳಿತನ್ನು ಉಂಟುಮಾಡುವ ಎಲ್ಲ ಗುಣ–ವಸ್ತುಗಳ ಪೂಜೆಯೂ ಹೌದು; ನಮ್ಮ ಅಂತರಂಗ ಮತ್ತು ಬಹಿರಂಗದ ಸೌಂದರ್ಯವನ್ನು ಹೆಚ್ಚಿಸುವ ಎಲ್ಲ ವಿವರಗಳ ಆರಾಧನೆಯೂ ಹೌದು. ನಮ್ಮ ಶಕ್ತಿ, ಬುದ್ಧಿ, ವಿದ್ಯೆ, ಸೌಂದರ್ಯ, ಸಂತೋಷ – ಈ ಎಲ್ಲ ಸುಗುಣಗಳಿಗೂ ಲಕ್ಷ್ಮಿಯೇ ಒಡತಿ. ಅವಳು ಕೇವಲ ಧನಕ್ಕೆ ಮಾತ್ರವೇ ಅಧಿದೇವತೆ ಅಲ್ಲ.

ಋಗ್ವೇದದ ಖಿಲಭಾಗದಲ್ಲಿರುವ ‘ಶ್ರೀಸೂಕ್ತ’ ಲಕ್ಷ್ಮಿಯ ಸ್ತೋತ್ರಕ್ಕೆ ಮೀಸಲಾಗಿದೆ. ಅಲ್ಲಿ ಬರುವ ಮಂತ್ರವೊಂದು ಹೀಗಿದೆ:

ಕ್ಷುತ್‌ಪಿಪಾಸಾಮಲಾಂ ಜ್ಯೇಷ್ಠಾಂ ಅಲಕ್ಷ್ಮೀಂ ನಾಶಯಾಮ್ಯಹಮ್‌ |
ಅಭೂತಿಮಸಮೃದ್ಧಿಂಚ ಸರ್ವಾ ನಿರ್ಣುದ ಮೇ ಗೃಹಾತ್‌ ||

ಇದರ ಸಾರಾಂಶ: ‘ಹಸಿವು, ಬಯಾರಿಕೆಗಳೇ ಮೊದಲಾದ ಕಷ್ಟಗಳನ್ನೂ ದೌರ್ಭಾಗ್ಯವನ್ನೂ ನಿನ್ನ (ಲಕ್ಷ್ಮಿಯ) ಅನುಗ್ರಹದಿಂದ ತೊಲಗಿಸಿಕೊಳ್ಳುವೆವು; ನೋವನ್ನೂ ಬಡತನವನ್ನೂ ನನ್ನ ಮನೆಯಿಂದ ಹೊರಗಟ್ಟು!’

ಇಲ್ಲಿ ಹಸಿವು, ಬಯಾರಿಕೆ ಮೊದಲಾದ ಕಷ್ಟಗಳನ್ನೂ ನೋವು–ಬಡತನಗಳನ್ನೂ ‘ಅಲಕ್ಷ್ಮೀ’ ಎಂದೂ ‘ಜ್ಯೇಷ್ಠಾಲಕ್ಷ್ಮೀ’ ಎಂದೂ ಸೂಚಿಸಲಾಗಿದೆ. ಜ್ಯೇಷ್ಠಾಲಕ್ಷ್ಮೀ ಇರುವ ಕಡೆ ಲಕ್ಷ್ಮೀ ನೆಲೆ ನಿಲ್ಲುವುದಿಲ್ಲ; ಇವರಿಬ್ಬರೂ ಅಕ್ಕ–ತಂಗಿಯರು, ದಿಟ. ಆದರೆ ಒಬ್ಬರ ನೆಲೆಯನ್ನು ಇನ್ನೊಬ್ಬರು ಸಹಿಸಲಾರರು.

ಸೋಮಾರಿತನ, ಜಗಳ, ಸುಳ್ಳು, ಕಸ, ಕಲ್ಮಷ ಮುಂತಾದ ಕೆಟ್ಟ ಗುಣಗಳು ಜ್ಯೇಷ್ಠಾಲಕ್ಷ್ಮಿಯ ವಾಸಕ್ಕೆ ನೆರವಾಗುವಂಥವು. ಯಾವ ಮನೆಯು ಈ ದುರ್ಗುಣಗಳಿಗೆ ಆಶ್ರಯವಾಗಿರುತ್ತದೆಯೋ ಅಲ್ಲಿ ಜ್ಯೇಷ್ಠಾಲಕ್ಷ್ಮೀ ಇರುತ್ತಾಳೆ; ಅಲ್ಲಿ ಲಕ್ಷ್ಮಿಗೆ ಸ್ಥಾನ ಇರದು.

ಎಂದರೆ ನಮ್ಮಲ್ಲಿ ಸಂಪತ್ತು – ಅದು ನಮ್ಮ ಅಂತರಂಗದ ಸಂಪತ್ತೂ ಹೌದು, ಬಹಿರಂಗದ ಸಂಪತ್ತೂ ಹೌದು – ಸೇರಬೇಕೆಂದರೆ ನಾವು ಕ್ರಿಯಾಶೀಲರಾಗಿರಬೇಕು; ಸೋಮಾರಿಗಳಾಗಿರಬಾರದು. ಮನಸ್ಸು ಸ್ವಚ್ಛವಾಗಿರಬೇಕು; ಬಗ್ಗಡವಾಗಿರಬಾರದು. ಮನೆಯೂ ಶುಭ್ರವಾಗಿರಬೇಕು; ಮನಸ್ಸೂ ಶುಭ್ರವಾಗಿರಬೇಕು. ಹೀಗಾಗಿ ಲಕ್ಷ್ಮಿಯ ಪೂಜೆ ಎಂದರೆ ಅದು ನಮ್ಮಲ್ಲಿರುವ ಒಳ್ಳೆಯ ಗುಣಗಳ ಕ್ರಿಯಾಶೀಲತೆಯೇ ಹೌದು; ಕೆಟ್ಟಗುಣಗಳ ವಿಸರ್ಜನೆ, ಒಳ್ಳೆಯ ಗುಣಗಳ ಆಹ್ವಾನವೇ ಹೌದು.

ನರಕಾಸುರನನ್ನು ಮಹಾವಿಷ್ಣು ಸಂಹರಿಸಿದ ದಿನವೇ ‘ನರಕಚತುರ್ದಶಿ’. ನರಕ ಎನ್ನುವುದು ಮನುಷ್ಯರನ್ನು ಕಾಡುವ ದುಃಖ. ಇದರಿಂದ ಬಿಡುಗಡೆಯನ್ನು ಹೊಂದುವುದೇ ಹಬ್ಬ ಎಂದೂ ಅರ್ಥಮಾಡಬಹುದು.

ಬಲಿಚಕ್ರವರ್ತಿಯು ತಾನು ಮಹಾದಾನಶೀಲ, ಸತ್ಯವಂತ ಎಂಬ ಅಹಂಕಾರ ಇತ್ತು. ಮಹಾವಿಷ್ಣುವು ವಾಮನಾವತಾರದಲ್ಲಿ ಬಂದು ಅವನಿಂದ ಮೂರು ಹೆಜ್ಜೆಗಳಷ್ಟು ಭೂಮಿಯನ್ನು ಬೇಡಿದ. ಪುಟ್ಟ ಹುಡುಗ – ಎಂಬ ಎಣಿಕೆಯಲ್ಲಿ ಬಲಿ ಅವನ ಕೋರಿಕೆಗೆ ಒಪ್ಪಿದ. ಬಳಿಕ ವಾಮನನು ಬೃಹತ್ತಾಗಿ ಬೆಳೆದ. ಅವನು ಒಂದು ಹೆಜ್ಜೆಯಿಂದ ಭೂಮಿಯನ್ನೂ ಮತ್ತೊಂದು ಹೆಜ್ಜೆಯಿಂದ ಆಕಾಶವನ್ನೂ ಆಕ್ರಮಿಸಿದ. ಮೂರನೆಯ ಹೆಜ್ಜೆಯನ್ನು ಬಲಿಯ ತಲೆಯ ಮೇಲಿಟ್ಟು ಅವನನ್ನು ಅಡಗಿಸಿದ.

ಇಲ್ಲಿ ‘ಬಲಿ’ ಎಂದರೆ ನಮ್ಮೊಳಗಿನ ಅಹಂಕಾರ. ಅದನ್ನು ಅಡಗಿಸದ ಹೊರತು ಜೀವನಕ್ಕೆ ಸೊಗಸು ಒದಗದು. ಅಹಂಕಾರದ ದಮನವೇ ಬಲಿಪಾಡ್ಯಮಿಯ ಹಿಂದಿರುವ ತಾತ್ವಿಕತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT