ಶುಕ್ರವಾರ, ಅಕ್ಟೋಬರ್ 30, 2020
27 °C

ದಿನದ ಸೂಕ್ತಿ: ಜೀವನವೇ ವ್ಯರ್ಥವಾದೀತು, ಎಚ್ಚರ!

ಎಸ್. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ವೃಥಾ ವೃಷ್ಟಿಃ ಸಮುದ್ರೇಷು ವೃಥಾ ತೃಪ್ತಸ್ಯ ಭೋಜನಮ್‌ ।
ವೃಥಾ ದಾನಂ ಸಮರ್ಥೇಭ್ಯೋ ವೃಥಾ ದೀಪೋ ದಿವಾಪಿ ಚ ।।

ಇದರ ತಾತ್ಪರ್ಯ ಹೀಗೆ:

‘ಸಮುದ್ರದಲ್ಲಿ ಮಳೆಯೂ, ಹೊಟ್ಟೆ ತುಂಬಿದವನಿಗೆ ಊಟವೂ ವ್ಯರ್ಥ; ಸಮರ್ಥರಿಗೆ ದಾನಮಾಡುವುದು ವ್ಯರ್ಥ; ಹಗಲು ಹೊತ್ತಿನಲ್ಲಿ ದೀಪ ವ್ಯರ್ಥ.’

ಸೃಷ್ಟಿಯಲ್ಲಿ ಪ್ರತಿಯೊಂದು ವಸ್ತುವಿಗೂ ಅದರದ್ದೇ ಆದ ಮಹತ್ವವಿದೆ; ಯಾವ ವಸ್ತುವೂ ವ್ಯರ್ಥ ಅಲ್ಲ. ಆದರೆ ಕೆಲವೊಮ್ಮೆ ವ್ಯರ್ಥವೂ ಆಗಬಲ್ಲದು. ಇದು ಯಾವಾಗ? ಯಾವ ವಸ್ತು ಎಲ್ಲಿರಬಾರದೋ ಅಲ್ಲಿ ಅದು ಇದ್ದರೆ ಆಗ ಅದು ವ್ಯರ್ಥವೇ ಅಗುತ್ತದೆ. ಸುಭಾಷಿತ ಇಂಥದ್ದೇ ವಿಷಯವನ್ನು ಹೇಳುತ್ತಿರುವುದು.

ಮಳೆ ಬೇಕು. ಏಕೆಂದರೆ ನೀರು ಇಲ್ಲದೆ ನಮ್ಮ ಜೀವನವೇ ಇಲ್ಲ. ಆದರೆ ಮಳೆ ಎಲ್ಲಿ ಬರಬೇಕೋ ಅಲ್ಲೇ ಬೀಳಬೇಕು. ಮಳೆ ಸಮುದ್ರದಲ್ಲಿ ಬಿದ್ದರೆ ಏನು ಪ್ರಯೋಜನ? ಅದು ನೆಲದ ಮೇಲೆ ಬೀಳಬೇಕು; ಆಗಲೇ ಉಪಯೋಗ, ಸಾರ್ಥಕತೆ.

ಅನ್ನ ಎಲ್ಲರಿಗೂ ಬೇಕು, ದಿಟ; ಆದರೆ ಯಾವಾಗ ಬೇಕು? ಹಸಿದಿರುವಾಗ ಅನ್ನ ಬೇಕೇ ಹೊರತು ಹೊಟ್ಟೆ ತುಂಬಿರುವಾಗ ಬೇಡ. ಒಬ್ಬ ವ್ಯಕ್ತಿಗೆ ಹೊಟ್ಟೆ ತುಂಬಿ ತೃಪ್ತನಾಗಿರುವಾಗ ಎಂಥ ಪರಮಾನ್ನವನ್ನು ಅವನಿಗೆ ಬಡಿಸಿದರೂ ಅದನ್ನು ಅವನು ತಿನ್ನಲಾರ, ಬಡಿಸಿದ ಅನ್ನ ಆಗ ವ್ಯರ್ಥವೇ ಸರಿ.

ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕೇ ವಿನಾ ಸುಖದಲ್ಲಿರುವವರಿಗೆ ಅಲ್ಲ. ಸುಭಾಷಿತ ಅದನ್ನೇ ಹೇಳುತ್ತಿರುವುದು. ದಾನವನ್ನು ಯೋಗ್ಯರಿಗೆ ಮಾಡಬೇಕು ಎಂದು ಶಾಸ್ತ್ರಗಳು ಕೂಡ ಹೇಳುತ್ತವೆ. ಯೋಗ್ಯರು ಎಂದರೆ ಗುಣದಿಂದಲೂ ಯೋಗ್ಯರಾಗಿರಬೇಕು; ಅವರಿಗೆ ದಾನದ ಆವಶ್ಯಕತೆಯೂ ಇರಬೇಕು. ಅಂಥವರಿಗೆ ಮಾತ್ರವೇ ನಮ್ಮ ದಾನ ಸಲ್ಲಬೇಕು. ಹೀಗಲ್ಲದೆ ಯಾರಿಗೋ ಒಬ್ಬರಿಗೆ ದಾನ ಕೊಟ್ಟರೆ ಆಯಿತು ಎಂದು ಹೊಟ್ಟೆ ತುಂಬಿರುವವರಿಗೂ ಕೊಟ್ಟರೆ ಅದು ವ್ಯರ್ಥದಾನವಾಗುತ್ತದೆ ಅಷ್ಟೆ.

ಬೆಳಗಿನ ಹೊತ್ತಿನಲ್ಲಿ ದೀಪದ ಆವಶ್ಯಕತೆ ಇರುವುದಿಲ್ಲ. ಸೂರ್ಯನ ಮುಂದೆ ಎಂಥ ದೀಪವಾದರೂ ಎಷ್ಟಾದರೂ ಬೆಳಕನ್ನು ಕೊಟ್ಟೀತು? ಹೀಗಾಗಿ ಸೂರ್ಯನ ಬೆಳಕಿನಲ್ಲಿ ದೀಪವನ್ನು ಬೆಳಗಲು ಸಿದ್ಧರಾದರೆ ಲೋಕ ನಮ್ಮನ್ನು ಹುಚ್ಚರು ಎಂದು ಕರೆಯುವುದು ಖಂಡಿತ.

ಹೀಗೆಯೇ ಮನೆಯಲ್ಲಿ ಯಾವ ವಸ್ತು ಎಲ್ಲಿರಬೇಕೋ ಅಲ್ಲಿದ್ದರೆ ಮಾತ್ರವೇ ಅದಕ್ಕೆ ಬೆಲೆ, ಮರ್ಯಾದೆ. ತರಕಾರಿ ಎಲ್ಲಿರಬೇಕೋ ಅಲ್ಲಿಯೇ ಇರಬೇಕು; ಒಲೆ ಎಲ್ಲಿರಬೇಕೋ ಅಲ್ಲಿಯೇ ಇರಬೇಕು; ಊಟವನ್ನು ಎಲ್ಲಿ ಮಾಡಬೇಕೋ ಅಲ್ಲಿಯೇ ಮಾಡಬೇಕು. ಹೀಗೆಯೇ ನಾವು ಎಲ್ಲೆಲ್ಲಿ ಹೇಗಿರಬೇಕೋ ಅಲ್ಲಲ್ಲಿ ಹಾಗೆಯೇ ಇರಬೇಕು. ಇಲ್ಲವಾದಲ್ಲಿ ನಮ್ಮ ವ್ಯಕ್ತಿತ್ವಕ್ಕೆ ಬೆಲೆಯೂ ಇರುವುದಿಲ್ಲ; ಮಾತ್ರವಲ್ಲ, ನಮ್ಮ ಜೀವನವೇ ವ್ಯರ್ಥವಾಗುವುದು ಖಂಡಿತ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.