ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿನ್ನು- ತಿನ್ನಿಸು

Last Updated 13 ಡಿಸೆಂಬರ್ 2019, 20:00 IST
ಅಕ್ಷರ ಗಾತ್ರ

ಸ್ವರ್ಗಾಕಾಂಕ್ಷಿಯೊಬ್ಬ ಒಮ್ಮೆ ಸತ್ತು ಮೇಲೆ ಹೋಗುತ್ತಾನೆ. ಆತನ ಪಾಪಪುಣ್ಯಗಳೆರಡನ್ನೂ ತೂಗಿದ ಯಮರಾಯ, ಸ್ವರ್ಗ ಅಥವಾ ನರಕದ ಆಯ್ಕೆಯನ್ನು ಅವನಿಗೇ ಬಿಡುತ್ತಾನೆ. ಆಯ್ಕೆಗೆ ಮೊದಲು ನರಕವನ್ನು ಸುತ್ತಿನೋಡಲು ಹೋದ ಸ್ವರ್ಗಾಕಾಂಕ್ಷಿಗೆ ನರಕದ ಬಗೆಗೆ ತಾನು ಇದುವರೆಗೆ ಮಾಡಿಕೊಂಡಿದ್ದ ಕಲ್ಪನೆಯೆಲ್ಲವೂ ಬುಡವಿಲ್ಲದ್ದೆಂದು ಅರ್ಥವಾಗುತ್ತದೆ - ಕಾದ ಎಣ್ಣೆ, ಉರಿಗಂಬ, ಕುಕ್ಕಿ ತಿನ್ನುವ ವಜ್ರದ ಕೊಕ್ಕಿನ ಹದ್ದುಗಳು ಒಂದೂ ಇಲ್ಲ. ಬದಲಿಗೆ ಎಲ್ಲೆಲ್ಲೂ ಸಮೃದ್ಧಿ, ಗಿಡಮರ, ಹಣ್ಣು ಹೂ, ಜೊತೆಗೆ ಅವರು ಸುತ್ತಾಡಿಬರಲು ಹೊರಟದ್ದು ಊಟದ ಹೊತ್ತು - ನರಕವಾಸಿಗಳಿಗಾಗಿ ಭರ್ಜರಿ ಭೋಜನದ ವ್ಯವಸ್ಥೆ. ಮೇಜಿನ ಮೇಲೆ ಬಗೆಬಗೆಯ ಭಕ್ಷ್ಯಭೋಜ್ಯಗಳು - ಅರೆಕ್ಷಣ ದಿಗ್ಭ್ರಮೆಯಾಗುತ್ತದೆ ಸ್ವರ್ಗಾಕಾಂಕ್ಷಿಗೆ. ಮಾರ್ಗದರ್ಶಿ ಸ್ವಲ್ಪ ಹೊತ್ತು ಕಾದು ನೋಡಲು ಹೇಳುತ್ತಾನೆ. ಊಟದ ಘಂಟೆ ಬಾರಿಸಿದೊಡನೆ ನರಕವಾಸಿಗಳೆಲ್ಲಾ ಲಗುಬಗೆಯಿಂದ ಓಡಿಬರುತ್ತಾರೆ, ಊಟದ ಮುಂದೆ ಕುಳಿತು ಆಸೆಗಣ್ಣಿನಿಂದ ನೋಡುತ್ತಾ ಗೋಳಾಡುತ್ತಿದ್ದಾರೆ. ಅವರ ಎರಡೂ ಕೈಗಳಿಗೆ ಉದ್ದನೆಯ ಚಮಚ ಕಟ್ಟಿದೆ, ಬಗ್ಗಿಸುವಂತಿಲ್ಲ, ತಿನ್ನುವಂತಿಲ್ಲ. ಇಡೀ ಜಗದ ಹಸಿವೆಯೇ ಮೈವೆತ್ತಂತೆ ಹೊರಹೊಮ್ಮುವ ಆ ರೌರವವನ್ನು ಕೇಳಿ ಕಂಗೆಟ್ಟ ನರಕವನ್ನು ತಿರಸ್ಕರಿಸಿ ಸ್ವರ್ಗವನ್ನಾಯ್ದುಕೊಳ್ಳುತ್ತಾನೆ. ನೋಡಿದರೆ ಸ್ವರ್ಗವೂ ಬಹುತೇಕ ನರಕದಂತೆಯೇ! ವ್ಯತ್ಯಾಸವೆಂದರೆ, ಇಲ್ಲಿ ಎಲ್ಲೆಲ್ಲೂ ಲವಲವಿಕೆ, ಸಂತಸಗಳು ತುಂಬಿವೆ. ಇವತ್ತು ಇಲ್ಲೂ ಊಟದ ಸಮಯ, ಮೇಜಿನ ಮೇಲೆ ಊಟಕ್ಕೆ ಎಲ್ಲ ಅಣಿಯಾಗಿದೆ. ನೋಡುತ್ತಾನೆ, ಏನಿದೆ ಅಲ್ಲಿ? ನರಕದಲ್ಲಿ ಕಂಡ ಬಗೆಬಗೆಯ ಭಕ್ಷ್ಯಭೋಜ್ಯಗಳಿರಲಿ, ಭೂಮಿಯಲ್ಲಿವನು ನಿತ್ಯ ಉಣ್ಣುತ್ತಿದ್ದ ಮೃಷ್ಟಾನ್ನವೂ ಇಲ್ಲ! ಅಲ್ಲಿದ್ದುದೆಲ್ಲಾ ಕೇವಲ ಬಿಸಿಬಿಸಿ ಗಂಜಿ ಉಪ್ಪಿನಕಾಯಿ! ನೋಡಿದರೆ ಅವರ ಕೈಗೂ ಉದ್ದನೆಯ ಚಮಚೆ ಕಟ್ಟಲಾಗಿದೆ. ಊಟ ಆರಂಭವಾಗುತ್ತದೆ - ಹೇಗೆ? ಸ್ವರ್ಗವಾಸಿಗಳು ಪರಸ್ಪರರ ಬಟ್ಟಲಿಗೆ ಚಮಚೆಯಿಟ್ಟು ಅದರಿಂದೆತ್ತಿ ಪರಸ್ಪರರಿಗೆ ಉಣಿಸತೊಡಗುತ್ತಾರೆ. ಪರಸ್ಪರ ಪ್ರೀತಿ, ಆರೈಕೆ - ಗಂಜಿಯ ಸವಿಯನ್ನು ಇಮ್ಮಡಿಗೊಳಿಸುತ್ತದೆ. ಮಾರ್ಗದರ್ಶಿ ಸ್ವರ್ಗಾಕಾಂಕ್ಷಿಯ ಕಿವಿಯಲ್ಲಿ ಪಿಸಿಗುಡುತ್ತಾನೆ - ‘ಇದೇ ನೋಡು, ಅಮೃತ’; ಅಮೃತವೆಂದರೆ ಮೃಷ್ಟಾನ್ನದಂತೆ ಒಂದು ಭೌತಿಕ ವಸ್ತು, ಸಾವಿಲ್ಲದಂತೆ ಮಾಡುವ ಔಷಧವೆಂದು ತಿಳಿದಿದ್ದ ಸ್ವರ್ಗಾಕಾಂಕ್ಷಿಗೆ ದೈವತ್ವದ, ಅಮರತ್ವದ, ಆನಂದದ ಮಹತ್ತ್ವ ಅರಿವಾಗುತ್ತದೆ.

ವಿವಿಧರೂಪಗಳಲ್ಲಿ ಅನೇಕರಿಗೆ ಸುಪರಿಚಿತವಾಗಿರುವ ಈ ಕತೆಯಲ್ಲಿ ನಮ್ಮ ಆರ್ಷೇಯ ಚಿಂತನೆಯೊಂದು ಅಡಗಿದೆಯೆಂಬ ಕಾರಣಕ್ಕಾಗಿ ಇದನ್ನಿಲ್ಲಿ ಲಂಬಿಸಬೇಕಾಯಿತು. ಆನಂದವೇ ಬ್ರಹ್ಮನೆನ್ನುವ ಉಪನಿಷತ್ತು, ಆ ಆನಂದವೆನ್ನುವುದು ಧುತ್ತನೆ ಸಿಗುವ ವಸ್ತುವಲ್ಲ ಎಂಬುದನ್ನೂ ಮನಗಾಣಿಸುತ್ತದೆ. ಪ್ರಜ್ಞೆಯು ಅನ್ನಮಯಕೋಶದಿಂದ ಪ್ರಾಣಮಯಕೋಶಕ್ಕೆ, ಮನೋಮಯಕೋಶಕ್ಕೆ, ವಿಜ್ಞಾನಮಯಕೋಶಕ್ಕೆ ಪಯಣಿಸಿ ದಾಟಿದಮೇಲಷ್ಟೇ ಆನಂದಬ್ರಹ್ಮನ ಸಾಕ್ಷಾತ್ಕಾರ. ಆನಂದಕ್ಕೆಳಸುವವನು ಅನ್ನವನ್ನು ಕಡೆಗಣಿಸಬಹುದೇ, ಕೃಪಣತೆಗೆಡೆಗೊಡಬಹುದೇ - ಅನ್ನಂ ನ ನಿಂದ್ಯಾತ್ ಎನ್ನುವ ಉಪನಿಷತ್ತು, ಅನ್ನಂ ಬಹುಕುರ್ವೀತ ಎಂದೂ ಉಪದೇಶಿಸುತ್ತದೆ. ಸಮೃದ್ಧಿ, ದಾನ ಇವೆರಡು ಆರ್ಷವಾದ ಸಂತೃಪ್ತ ಜೀವನಶೈಲಿಯ ಹಾಸುಹೊಕ್ಕಾಗಿವೆ. ಸಮೃದ್ಧಿಗಾಗಲೀ ದಾನಕ್ಕಾಗಲೀ ಬೇಕಾದ್ದು ಸಂತೃಪ್ತಿ ಎಂಬ ಮೂಲಭೂತ ಮನಃಸ್ಥಿತಿ. ಇದು ತಿಂದು ತೇಗುವುದರಿಂದ ಬರುವುದಲ್ಲ, ತಿನ್ನಿಸಿ ತೇಗಿಸುವುದರಿಂದ ಬರುವಂಥದ್ದು, ಕೂಡಿಡುವುದರಿಂದಲ್ಲ, ಕೊಡುವುದರಿಂದ ಬರುವಂಥದ್ದು. ‘ಸಾಲ ಮಾಡಲು ಬೇಡ, ಸಾಲದೆಂದೆನಬೇಡ, ನಾಳೆಗೆ ಇಡಬೇಡ’ ಎನ್ನುವುದು ಕೇವಲ ದಾಸನೊಬ್ಬನ ದೀಕ್ಷೆಯಲ್ಲ, ಸಂತೃಪ್ತಿಯ ಬದುಕಿನಿಂದ ಆನಂದದೆಡೆಗೆ ಪಯಣಿಸಬೇಕೆನ್ನುವ ಪ್ರತಿಯೊಬ್ಬನಿಗೂ ಇರಲೇಬೇಕಾದ ವಿವೇಕ - ‘ಹಾಸಿಗೆಯಿದ್ದಷ್ಟು ಕಾಲುಚಾಚು’ ಎನ್ನುವ ನಾಣ್ನುಡಿ ಸಾರುವುದು ಈ ವಿವೇಕವನ್ನೇ. ಸಮೃದ್ಧಿ, ಸಂಗ್ರಹದಿಂದಲ್ಲ ಅಸಂಗ್ರಹದಿಂದ ಎಂಬುದು ವಿಚಿತ್ರವಾದರೂ ಸತ್ಯ. ತಲೆಮಾರುಗಳಿಗಾಗುವಷ್ಟು ಸೇರಿಸಿಟ್ಟುಬಿಡಬೇಕು, ಸಾಧ್ಯವಿದ್ದಷ್ಟು ತಿಂದುಬಿಡಬೇಕು ಎನ್ನುವ ಹಪಹಪಿ ರೋಗವನ್ನು ತರಬಲ್ಲುದಷ್ಟೇ, ಯೋಗವನ್ನಲ್ಲ. ಒಂದು ಸೂರ್ಯಕಿರಣ, ಒಂದು ಗಾಳಿಯ ಸೆಳಕು, ಒಂದು ಅಪ್ಪುಗೆ, ಒಂದು ಮುತ್ತಿಗೆ ಸಂತೃಪ್ತಿಹೊಂದುವ ಮಗುವಿನ 'ಅಲ್ಪತೃಪ್ತಿ' ಈ ಭೋಗಯುಗದಲ್ಲಿ ಎಷ್ಟು ಪ್ರಸ್ತುತವೋ, ಆದರೆ ನಮ್ಮ ಬಹಳಷ್ಟು ಸಮಸ್ಯೆಗಳಿಗೆ ಪರಿಹಾರ ಎಂಬುದಂತೂ ಸತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT