ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನಾಮೃತ | ಪಾಕಶಾಲೆಯೇ ಪಾಠಶಾಲೆ

Last Updated 15 ಜುಲೈ 2020, 19:30 IST
ಅಕ್ಷರ ಗಾತ್ರ

ಕಾದ ಹಾಲ ನೊಣ ಮುಟ್ಟಬಲ್ಲುದೆ?
ಕಿಚ್ಚಿನೊಳಗಣ ಗುಂಡ ಬೆಕ್ಕು ಮುಟ್ಟಬಲ್ಲುದೆ?
ಮರುಜವಣಿಯ ಕಡ್ಡಿ ಕಯ್ಯಲಿದ್ದವಂಗೆ ಸರ್ಪ ಕಡಿಯಬಲ್ಲುದೆ?
ಈ ತ್ರಿವಿಧವನರಿದವಂಗೆ ಹಿಂದೆ ಶಂಕೆಯಿಲ್ಲ! ಮುಂದೆ ಭೀತಿಯಿಲ್ಲ
ಕಳಂಕು ಇಲ್ಲದೆ ಅಮುಗೇಶ್ವರಲಿಂಗವು ಅಪ್ಪಿಕೊಂಡಿತ್ತು.

ನಿಷ್ಠುರವಾದಿಯಾಗಿದ್ದ ಅಮುಗೆ ರಾಯಮ್ಮನ ವಚನವಿದು. ಭಾಷೆಯ ಒರಟುತನದಿಂದಲೇ ಅಭಿವ್ಯಕ್ತಿಯ ನಾವಿನ್ಯತೆಯನ್ನು ಮೈಗೂಡಿಸಿಕೊಂಡಿದ್ದ ಈಕೆಯ 115 ವಚನಗಳು ಲಭ್ಯವಿದ್ದಾವೆ.

ಭಕ್ತಿಸಾಧನೆಯ ಹಾದಿಯಲ್ಲಿ ಮುಖ್ಯವಾಗಿ ಬೇಕಾಗಿರುವುದು ನಂಬಿಕೆ. ನಂಬಿಕೆ ಇಂಬುಗೊಳಬೇಕೆಂದರೆ ಮನಸ್ಸು ಶಂಕಾರಹಿತವಾಗಿರಬೇಕು. ಅನುಮಾನಕ್ಕೆ ಆಸ್ಪದ ಕೊಟ್ಟರೆ ಮನುಷ್ಯನ ಮನಸ್ಸು ಹಾವಿನ ಹುತ್ತದಂತೆ ನಿಗೂಢವಾಗುತ್ತದೆ. ಆಗ ಅಲ್ಲಿ ಬಂದು ನೆಲೆಗೊಳ್ಳುವುದೇ ಭೀತಿ ಅಥವಾ ಭಯ. ಅಪನಂಬಿಕೆ-ಭಯ ಇವೆಲ್ಲ ನಕಾರಾತ್ಮಕ ಭಾವಗಳು. ಇವು ಬೇರು ಬಿಟ್ಟಮೇಲೆ ಅಂತಹ ಮನದಲ್ಲಿ ಭಕ್ತಿಯ ಭಾವಕ್ಕೆ ಜಾಗವಿರುವುದಿಲ್ಲ; ಭಗವದ್ ಸಾಕ್ಷಾತ್ಕಾರವೂ ಸಾಧ್ಯವಿಲ್ಲ. ವಿದ್ಯಾರ್ಥಿಯಾಗಲೀ ಅಥವಾ ಕಲಾ ಸಾಧಕನಾಗಲೀ ತಮ್ಮ ಜ್ಞಾನದಾಹದ ಹಾದಿಯಲ್ಲಿ ಯಶಸ್ಸು ಪಡೆಯಬೇಕೆಂಬ ಹಂಬಲವಿದ್ದರೆ ಅದಕ್ಕೆ ಮುಖ್ಯವಾಗಿ ಬೇಕಾಗಿರುವುದು ಸಕಾರಾತ್ಮಕ ಭಾವನೆಯಿಂದ ತುಂಬಿದ ದೃಢಚಿತ್ತ. ಈ ಸಂದೇಶವನ್ನು ಅಮುಗೆ ರಾಯಮ್ಮ ಬಹಳ ಸೊಗಸಾದ ಉದಾಹರಣೆಗಳೊಂದಿಗೆ ನಿರೂಪಿಸುತ್ತಾಳೆ.

ಅಡುಗೆಮನೆಯಲ್ಲಿರುವ ತಿನಿಸು ಪದಾರ್ಥಗಳ ಮೇಲೆ ನೊಣ ಕುಳಿತುಕೊಂಡು ಹೊಲಸು ಮಾಡುವುದು ಸಾಮಾನ್ಯ ಸಂಗತಿ. ಆದರೆ ಕಾಯಿಸಿಟ್ಟ ಹಾಲು ಬಿಸಿಯಾಗಿರುವುದರಿಂದ ನೊಣ ಅದರ ಸಮೀಪವೂ ಸುಳಿಯುವುದಿಲ್ಲ. ಬಿಸಿಯಾಗಿರುವ ಪದಾರ್ಥಗಳಿಗೆ ನೊಣದ ಕಾಟವಿರುವುದಿಲ್ಲ. ನಮ್ಮ ಮನಸ್ಸಿನಲ್ಲಿ ಸುಳಿಯುವ ವಿಚಾರಗಳನ್ನು ಚಿಂತನ-ಮಂಥನದ ಬೆಂಕಿಯಿಂದ ಕಾಯಿಸಿದಾಗ ಅದು ಅನುಮಾನದ ಕಾಟದಿಂದ ಮುಕ್ತವಾಗುತ್ತದೆ.

ಅಡುಗೆಮನೆಯಲ್ಲಿ ತೊಂದರೆ ಕೊಡುವ ಇನ್ನೊಂದು ಜೀವಿಯೆಂದರೆ ಬೆಕ್ಕು. ನೊಣಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಆಹಾರ ವಸ್ತುಗಳನ್ನು ತಿಂದು ಹಾನಿಯುಂಟುಮಾಡುತ್ತದೆ. ಒಲೆಯ ಬೆಂಕಿಯೊಳಗೇ ಇಟ್ಟು ಸಾರು ಅಂಬಲಿಗಳನ್ನು ಕುದಿಸುವ ಪಾತ್ರೆಗೆ ಗುಂಡ ಎನ್ನುತ್ತಾರೆ. ಕೆಲವು ಪ್ರದೇಶಗಳಲ್ಲಿ ಗುಂಡಗಡಿಗೆ ಎಂದೂ ಕರೆಯುತ್ತಾರೆ. ಬೆಕ್ಕು ದಾಳಿಯಿಡುವ ಮುನ್ನ ಆಹಾರವಸ್ತುವನ್ನು ಎಲ್ಲಿ ಇಡಲಾಗಿದೆಯೆಂದು ನೋಡಿಕೊಳ್ಳುತ್ತದೆ. ಒಲೆಯ ಮೇಲೆ ಬೇಯುತ್ತಿರುವ ಅಥವಾ ಕುದಿಯುತ್ತಿರುವ ಯಾವ ಪದಾರ್ಥವನ್ನೂ ಅದು ಮುಟ್ಟುವುದಿಲ್ಲ. ನಮ್ಮ ಮನಸ್ಸು ಸದಾ ಜಾಗೃತವಾಗಿದ್ದರೆ ಅರ್ಥಾತ್ ಚಿಂತನೆ-ಮಂಥನಗಳಿಂದ ಉರಿಯುತ್ತಿದ್ದರೆ ಅದನ್ನು ಬಿಸಿಯಾದ ಒಲೆಗೆ ಹೋಲಿಸಬಹುದು. ಹಾಗೆ ಕ್ರಿಯಾಶೀಲವಾದ ಮನಸ್ಸು ಹೊಸ ಕನಸಿಗೆ, ಹೊಸ ಅನ್ವೇಷಣೆಗೆ ತುಡಿಯುತ್ತಿರುತ್ತದೆ. ಆದ್ದರಿಂದಲೇ ಅದು ನಕಾರಾತ್ಮಕ ಭಾವಗಳಿಗೆ ಅಂದರೆ ಶಂಕಾ-ಭಯಗಳಿಗೆ ಜಾಗ ಕೊಡುವುದಿಲ್ಲ.

ಮರುಜವಣಿ ಅಂದರೆ ಸಂಜೀವಿನಿ. ಮರಣಿಸಿದವರನ್ನು ಬದುಕಿಸುವ ಸಸ್ಯ. ಇದನ್ನು ಕೈಯಲ್ಲಿ ಹಿಡಿದರೆ ಹಾವು ಕಚ್ಚುವುದಿಲ್ಲವೆಂಬುದು ಜನಪದೀಯ ನಂಬಿಕೆ. ಕಳಂಕರಹಿತವಾದ ಶುದ್ಧಮನದಿಂದ ಭಕ್ತಿಯನ್ನು ಅರ್ಪಣೆ ಮಾಡುವವನಿಗೆ ಶಿವನೊಲಿಯುತ್ತಾನೆ, ಕಾರ್ಯಸಿದ್ಧಿಯಾಗುತ್ತದೆ. ನಾವು ಯಾವುದೇ ಕೆಲಸವನ್ನು ಮಾಡಲು ಆರಂಭಿಸಿದಾಗ ಮೊದಲು ಮನಸ್ಸನ್ನು ಸ್ವಚ್ಛ ಮಾಡಿಕೊಳ್ಳಬೇಕು. ಆ ಕೆಲಸದ ಬಗ್ಗೆ ನಮಗೆ ನಂಬಿಕೆ ಇರಬೇಕು. ಅದರಿಂದ ನಮಗೆ ಅಥವಾ ಸಮಾಜಕ್ಕೆ ಒಳ್ಳೆಯದಾಗುತ್ತದೆ ಎಂಬ ದೃಢಚಿತ್ತವಿದ್ದರೆ ಮುಂದೆ ಯಾವ ವಿಘ್ನಗಳೂ ತಲೆದೋರುವುದಿಲ್ಲ. ಸಲೀಸಾಗಿ ವಿಜಯವು ಪ್ರಾಪ್ತಿಯಾಗುತ್ತದೆ.

ಪಾಶ್ಚಾತ್ಯ ಚಿಂತಕರು ’ಮ್ಯಾನೇಜ್‌ಮೆಂಟ್‌ ಪ್ರಿನ್ಸಿಪಲ್ಸ್‌‘ ಎಂದು ಆಧುನಿಕ ಯುಗದಲ್ಲಿ ಹೇಳುವ ಮಾತನ್ನು ಹನ್ನೆರಡನೆಯ ಶತಮಾನದ ನಿರಕ್ಷರಿ ಶರಣೆಯರು ತಮ್ಮ ಆಳವಾದ ಜೀವನಾನುಭವ ಮತ್ತು ಸದ್ವಿಚಾರ ಮಂಥನಗಳಿಂದ ಕಂಡುಕೊಂಡು ತಮ್ಮ ಅಡುಗೆಮನೆಯ ದಿನಚರಿಯ ಉದಾಹರಣೆಗಳಿಂದಲೇ ಅದೆಷ್ಟು ಚೆನ್ನಾಗಿ ವಿವರಿಸಿದ್ದಾರೆ, ಎಂಬ ಸಂಗತಿ ಹೆಮ್ಮೆಯನ್ನೂ, ರೋಮಾಂಚನವನ್ನೂ ಏಕಕಾಲದಲ್ಲಿ ಉಂಟುಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT