ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Eid al-Adha 2024 | ಬಕ್ರೀದ್: ಭಕ್ತಿ ತ್ಯಾಗಗಳ ಅನುಸಂಧಾನ

Published 16 ಜೂನ್ 2024, 23:30 IST
Last Updated 16 ಜೂನ್ 2024, 23:30 IST
ಅಕ್ಷರ ಗಾತ್ರ

ಪ್ರವಾದಿ ಇಬ್ರಾಹಿಂ ಅವರ ಜೀವನದಲ್ಲಿ ನಡೆದ ಘಟನೆಗಳನ್ನು ಸ್ಮರಿಸುವ ಹಬ್ಬವಾಗಿದೆ ಬಕ್ರೀದ್ ಅಥವಾ ಈದ್‌–ಉಲ್– ಅಳ್‌ಹಾ. ಅವರ ತ್ಯಾಗ, ಸಹನೆ, ಧರ್ಮನಿಷ್ಠೆಯನ್ನು ಕೊಂಡಾಡುವ ಸಲುವಾಗಿಯೇ ಈ ಅವಧಿಯಲ್ಲಿ ಮಕ್ಕಾಗೆ ತೆರಳುವ ಮುಸ್ಲಿಮರು, ಇಸ್ಲಾಮ್‌ನ ಐದು ಕಡ್ಡಾಯ ಆರಾಧನೆಗಳಲ್ಲಿ ಒಂದಾಗಿರುವ ‘ಹಜ್’ ಕರ್ಮವನ್ನು ನಿರ್ವಹಿಸುತ್ತಾರೆ. ಇಸ್ಲಾಮಿಕ್ ಕ್ಯಾಲೆಂಡರ್‌ನ ಅಂತಿಮ ತಿಂಗಳಾದ ‘ದುಲ್ ಹಿಜ್ಜಾ’ದ 10ನೇ ದಿನದಂದು ಬಕ್ರೀದ್ ಆಚರಿಸಲಾಗುತ್ತದೆ. ಆ ದಿನ ಪ್ರತಿಯೊಬ್ಬರೂ ‘ಲಬ್ಬೈಕಲ್ಲಾಹುಮ್ಮ ಲಬ್ಬೈಕ್’ ಎನ್ನುವ ಮಂತ್ರ ಜಪಿಸುತ್ತಾರೆ. ಮಸೀದಿಯ ಮಿನಾರಗಳಲ್ಲಿ ಸಂಭ್ರಮದ ತರಂಗಗಳು ಮೊಳಗುತ್ತವೆ.

ವಾರ್ಧಕ್ಯದಲ್ಲಿ ಮಡಿಲಿಗೆ ಬಿದ್ದ ಮಗು ಇಸ್ಮಾಯಿಲರನ್ನು ತಾಯಿ ಹಾಜರಾ ಸಮೇತ ಜನವಾಸವಿಲ್ಲದ ಅಂದಿನ ಮಕ್ಕಾ ಮರುಭೂಮಿಯ ಕಾಡಿನಲ್ಲಿ ಬಿಟ್ಟು ಬರಬೇಕು ಎನ್ನುವ ದೇವಸಂದೇಶವನ್ನು ಇಬ್ರಾಹಿಂ ವಿಧೇಯರಾಗಿ ಪಾಲಿಸುತ್ತಾರೆ. ತಂದಿದ್ದ ಅಲ್ಪ ಖರ್ಜೂರ ಹಾಗೂ ನೀರು ಖಾಲಿಯಾಗಿ, ದಾಹದಿಂದ ಪುಟ್ಟ ಮಗು ಇಸ್ಮಾಯಿಲ್ ಕಾಲನ್ನು ನೆಲಕ್ಕೆ ಬಡಿಯುತ್ತಿದ್ದರೆ, ತಾಯಿ ಹಾಜರಾ ನೀರು ಅರಸಿ ಸಫಾ-ಮರ್‌ವಾ ಎಂಬ ಬೆಟ್ಟಗಳ ನಡುವೆ ಓಡುತ್ತಾರೆ. ನೀರು ಸಿಗದೆ ನಿರಾಸೆಯಿಂದ ಹಿಂದಿರುಗುವಾಗ ಅಲ್ಲಿನ ದೃಶ್ಯವನ್ನು ಕಂಡು ಹಾಜರಾ ಚಕಿತರಾಗುತ್ತಾರೆ. ಮಗುವಿನ ಕಾಲ ಬುಡದಲ್ಲಿ ನೀರು ಒಂದೇ ಸಮನೆ ಒಸರುತ್ತಿದೆ! ‘ಝಂ ಝಂ’.. (ನಿಲ್ಲು..ನಿಲ್ಲು) ಹಾಜರಾರ ಬಾಯಲ್ಲಿ ಉದ್ಗಾರ. ಅಂದು ಮರುಭೂಮಿಯಲ್ಲಿ ಚಿಮ್ಮಿದ ನೀರು ಇಂದಿಗೂ ಬತ್ತದೆ ಇರುವುದು ವಿಶೇಷ. ಈ ನೀರು ಮುಸಲ್ಮಾನರಿಗೆ ಪವಿತ್ರ ಜಲ. ಅದರಲ್ಲಿ ರೋಗಶಮನದ ಗುಣವಿದೆ ಎನ್ನುವುದು ವಿಶ್ವಾಸ. ಹಾಜರಾರ ಆ ಓಟವನ್ನು ನೆನಪಿಸಲೋಸುಗ ಹಜ್‌ನ ಪ್ರಕ್ರಿಯೆಯಲ್ಲಿ ಸಫಾ-ಮರ್‌ವಾ ಬೆಟ್ಟಗಳ ನಡುವೆ ಓಡುವುದು ಕಡ್ಡಾಯ. ಅಂದು ಚಿಮ್ಮಿದ ನೀರು ಅರಬ್ ನಾಗರಿಕತೆಯ ಉಗಮಕ್ಕೂ ಕಾರಣವಾಯಿತು. 

ಜೀವನವೇ ಪರೀಕ್ಷೆಯಾಗಿದ್ದ ಇಬ್ರಾಹಿಂ ಅವರಿಗೆ ಮತ್ತೊಂದು ಸಂಕಷ್ಟದ ಸಮಯ. ಹದಿಮೂರು ವರ್ಷದ ಮಗ ಇಸ್ಮಾಯಿಲರನ್ನು ಬಲಿಕೊಡಬೇಕೆನ್ನುವ ದೇವಾಜ್ಞೆ. ಅಪ್ರತಿಮ ದೈವಭಕ್ತರಾಗಿದ್ದ ಇಬ್ರಾಹಿಂ ದೇವನ ಆಜ್ಞೆ ಮುಂದೆ ಪುತ್ರವಾತ್ಸಲ್ಯ ಮಿಗಿಲಲ್ಲವೆಂದು ಕಂದನ ಕತ್ತಿಗೆ ಕತ್ತಿ ಇಡಲು ಅಣಿಯಾದರು! ಮಗನನ್ನು ಬಲಿ ಕೊಡಲು ಕರೆದುಕೊಂಡು ಹೋಗುವಾಗ ಪ್ರಲೋಭನೆಗೆ ಒಳಪಡಿಸಲು ಬಂದ ಪಿಶಾಚಿಗೆ ಅಂದು ಇಸ್ಮಾಯಿಲರು ಕಲ್ಲು ಬಿಸಾಡಿದ್ದರ ಸ್ಮರಣೆಗಾಗಿ, ಹಜ್ ಕರ್ಮದಲ್ಲಿ ಕಲ್ಲೆಸೆಯುವ ಪ್ರಕ್ರಿಯೆ ಇದೆ.

ಬಂಡೆಯೊಂದರ ಮೇಲೆ ಮಲಗಿಸಿ ಮಗನನ್ನು ಬಲಿ ನೀಡಲು ಇಬ್ರಾಹಿಂ ಅವರು ಮುಂದಾಗುತ್ತಾರೆ. ಆದರೆ ಕತ್ತಿ ಹರಿಯುತ್ತಿಲ್ಲ. ಆಗ ದೇವದೂತ ಜಿಬ್ರೀಲ್ ಪ್ರತ್ಯಕ್ಷಗೊಂಡು ‘ನೀವು ಜಯಶಾಲಿಯಾಗಿದ್ದೀರಿ. ನನಗೆ ಬೇಕಾದುದು ರಕ್ತವೋ ಮಾಂಸವೋ ಅಲ್ಲ; ನಿಮ್ಮೊಳಗಿನ ಭಕ್ತಿ. ನೀವು ಇದನ್ನು ಬಲಿಯರ್ಪಿಸಿ‘ ಎಂಬ ಅಲ್ಲಾಹನ ಸಂದೇಶವನ್ನೂ ಜೊತೆಗೆ ಆಡೊಂದನ್ನೂ ನೀಡುತ್ತಾರೆ. ಇದರ ಸಂಕೇತವಾಗಿ ಬಕ್ರೀದ್‌ಗೆ ಮೃಗಗಳನ್ನು ಬಲಿಕೊಡಲಾಗುತ್ತದೆ. ಇದನ್ನೇ ‘ಉಳುಹಿಯ್ಯತ್’ ಅರ್ಥಾತ್ ‘ಕುರ್ಬಾನಿ’ ಎನ್ನುತ್ತಾರೆ. ಆಡುಗಳನ್ನು ಹೆಚ್ಚಾಗಿ ಬಲಿ ಕೊಡುವುದರಿಂದ ಈ ಹಬ್ಬಕ್ಕೆ ‘ಬಕ್ರೀದ್’ ಎಂಬ ಹೆಸರು ಬಂದಿದೆ.

ಬಕ್ರೀದ್‌ನ ಹಿಂದಿನ ದಿನ ‘ಅರಫಾ ದಿನ’ಕ್ಕೆ ಭಾರಿ ಮಹತ್ವವಿದೆ. ಅಂದು ಹಜ್‌ಗೆ ತೆರಳಿದ ಕೋಟ್ಯಂತರ ಮಂದಿ ಅರಫಾ ಮೈದಾನದಲ್ಲಿ ಒಗ್ಗೂಡಿ ಸಾಮೂಹಿಕ ಪ್ರಾರ್ಥನೆ ನೆರವೇರಿಸುತ್ತಾರೆ. ಇದು ವಿಶ್ವದ ಅತಿ ದೊಡ್ಡ ಸಂಗಮಗಳಲ್ಲಿ ಒಂದು. ಅಂದು ವ್ರತವಿರುವುದು ಪುಣ್ಯದಾಯಕವಾದುದು ಎನ್ನುವುದು ಮುಸ್ಲಿಮರ ನಂಬಿಕೆ. 14 ಶತಮಾನಗಳ ಹಿಂದೆ ಪ್ರವಾದಿ ಮೊಹಮ್ಮದ್ ಪೈಗಂಬರರು, ತಮ್ಮ ಜೀವನದ ಕೊನೆಯ ಹಜ್ ನೆರವೇರಿಸಿ ಈ ಮೈದಾನದಲ್ಲಿ ಮಾಡಿದ ಭಾಷಣಕ್ಕೆ ಇಸ್ಲಾಮಿನಲ್ಲಿ ಮಹತ್ತರ ಸ್ಥಾನವಿದೆ. ಹಜ್ ವೇಳೆ ಇಬ್ರಾಹಿಂ ಅವರು ಹಾಗೂ ಇಸ್ಮಾಯಿಲರು ಪುನರುಜ್ಜೀವನಗೊಳಿಸಿದ ಕಾಬಾಗೆ ಹಜ್ ಯಾತ್ರಿಗಳು ಪ್ರದಕ್ಷಿಣೆ ಹಾಕುತ್ತಾರೆ; ದೇವಸ್ಮರಣೆಯಲ್ಲಿ ತಲ್ಲೀನರಾಗುತ್ತಾರೆ.

ತ್ಯಾಗ, ಸಹನೆಗಿಂತ ಮಿಗಿಲಾದುದ್ದು ಯಾವುದೂ ಇಲ್ಲ. ದೈವಭಕ್ತಿಯೇ ಪರಮೋಚ್ಚ ಎನ್ನುವುದನ್ನು ಪ್ರವಾದಿ ಇಬ್ರಾಹಿಂ ಅವರ ಜೀವನದ ಮೂಲಕ ತಿಳಿಯಪಡಿಸಲಾಗಿದೆ. ಅದಕ್ಕಾಗಿಯೇ ಇಸ್ಲಾಮಿನ ಪ್ರಮುಖ ಆರಾಧನೆಗಳಾದ ನಮಾಜ್ ಹಾಗೂ ಹಜ್‌ನಲ್ಲಿ ಅವರನ್ನು ನೆನಪಿಸಿಕೊಳ್ಳುವುದು ಕಡ್ಡಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT