ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ | ದೇವತೆಗಳೆದುರು ಪ್ರತ್ಯಕ್ಷಳಾದ ದುರ್ಗ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅಂಕಣ
Last Updated 11 ಆಗಸ್ಟ್ 2022, 22:15 IST
ಅಕ್ಷರ ಗಾತ್ರ

ಜಗನ್ಮಾತೆಯನ್ನು ದೇವತೆಗಳೆಲ್ಲ ಸ್ತುತಿಸಿದಾಗ, ಪ್ರಸನ್ನಳಾದ ದುರ್ಗಾಮಾತೆಯು ರತ್ನಮಯವಾದ ಕಿರುಗೆಜ್ಜೆಗಳ ಮಾಲೆಯನ್ನು ಧರಿಸಿ, ಸುಂದರವಾದ ರತ್ನಗಂಬಳಿಯುಳ್ಳ ರತ್ನಪೀಠದಲ್ಲಿ ಅವಿರ್ಭವಿಸಿ ಪ್ರತ್ಯಕ್ಷಳಾದಳು. ದೇವಿಯ ಅವಯವಗಳೆಲ್ಲವೂ ಕೋಟಿಸೂರ್ಯನಷ್ಟು ಪ್ರಕಾಶಿಸುತ್ತಿದ್ದವು. ದೇವತೆಗಳು ದೇವಿಯನ್ನು ನಮಸ್ಕರಿಸಿ ಹೀಗೆ ಸ್ತುತಿಸಿದರು:

‘ಓ ದೇವಿ, ನಿನ್ನ ಮಹಿಮೆಯನ್ನು ವೇದಗಳು, ಶಾಸ್ತ್ರಗಳು ಸಂಪೂರ್ಣವಾಗಿ ತಿಳಿಸಲಾರವು. ನಿನ್ನ ಮಹಿಮೆಯು ಧ್ಯಾನಕ್ಕೆ ನಿಲುಕುವಂತಹುದಲ್ಲ. ಶ್ರುತಿಯೂ ನೀನು ಅಸತ್ಯವಾದ ಜಡವಸ್ತುವಿಗಿಂತಲೂ ಭಿನ್ನಳು ಎಂದು ಭೇದರೂಪವಾಗಿ ಹೇಳುತ್ತದೆ. ನಿನ್ನ ಸ್ವರೂಪವು ಇಂತಹುದೇ ಎಂದು ಪ್ರತ್ಯಕ್ಷವಾಗಿ ಹೇಳಲು ಆ ಶ್ರುತಿಯು ಅಶಕ್ತವಾಗಿದೆ. ಹೀಗಿರಲು ಸಾಮಾನ್ಯರು ನಿನ್ನ ಸ್ವರೂಪವನ್ನು ಹೇಳುವುದೆಂತು? ತಿಳಿಯುವುದೆಂತು? ಆದರೆ ನಿನ್ನ ಭಕ್ತರು ನಿನ್ನ ಅನುಗ್ರಹದಿಂದಲೇ ನಿನ್ನ ಸ್ವರೂಪವನ್ನು ತಿಳಿಯಬಲ್ಲರು. ನಿನ್ನನ್ನು ಮೊರೆಹೊಕ್ಕ ಭಕ್ತರಿಗೆ ಯಾವ ಭಯವೂ ಇಲ್ಲ. ಈಗ ನಿನ್ನ ದಾಸರಾದ ನಾವು ಒಂದು ವಿಷಯವನ್ನು ವಿಜ್ಞಾಪಿಸಿಕೊಳ್ಳುವೆವು. ಹಿಂದೆ ನೀನು ದಕ್ಷಪುತ್ರಿ ಸತೀದೇವಿಯಾಗಿ ಜನಿಸಿ ಹರನ ಪ್ರಿಯಭಾರ್ಯೆಯಾಗಿ ನಮ್ಮೆಲ್ಲರ ದುಃಖವನ್ನು ಪರಿಹರಿಸಿದ್ದೆ. ಆದರೆ ದಕ್ಷನಿಂದಾದ ಅವಮಾನವನ್ನು ಸಹಿಸದೆ ಶರೀರವನ್ನು ತ್ಯಜಿಸಿರುವೆ. ನಿನ್ನ ಅವತಾರದಿಂದಾಗಬೇಕಾದ ದೇವಕಾರ್ಯವು ಪೂರ್ಣವಾಗಿ ಆಗಲೇ ಇಲ್ಲ. ಅದಕ್ಕಾಗಿ ದೇವತೆಗಳ ಮನೋರಥವನ್ನು ಪೂರ್ಣಗೊಳಿಸು. ಸನತ್ಕುಮಾರನ ವಾಕ್ಯವು ಸಫಲವಾಗುವಂತೆ ಮಾಡು. ಭೂಮಿಯಲ್ಲಿ ನೀನು ಮತ್ತೆ ಅವತರಿಸಿ ರುದ್ರನ ಪತ್ನಿಯಾಗು’ ಎಂದು ಸ್ತೋತ್ರ ಮಾಡಿದರು.

ಆಗ ಮಹೇಶ್ವರಿಯು ‘ಎಲೈ ದೇವತೆಗಳೇ! ಮುನಿಗಳೇ!! ವ್ಯಥೆಯನ್ನು ಬಿಡಿ. ನನ್ನ ಪ್ರತಿಯೊಂದು ಕಾರ್ಯವೂ ಜಗತ್ತಿಗೆ ಸುಖವನ್ನುಂಟು ಮಾಡುವುದೇ ಆಗಿರುವುದು. ನೀವೀಗ ಹೇಳಿದಂತೆ ಭೂಮಿಯಲ್ಲಿ ಮತ್ತೆ ಅವತರಿಸುವೆ. ಇದಕ್ಕೆ ಇನ್ನೂ ಅನೇಕ ಕಾರಣಗಳುಂಟು. ಹಿಂದೆ ಸತೀದೇವಿಯಾಗಿದ್ದಾಗ ನನ್ನನ್ನು ಹಿಮವಂತ ಮತ್ತು ಮೇನಾದೇವಿ ಇಬ್ಬರೂ ಮಗಳಂತೆ ಪ್ರೀತಿಯಿಂದ ನೋಡಿಕೊಂಡಿದ್ದರು. ಈಗಲೂ ಸಹ ಭಕ್ತಿಯಿಂದ ಮೇನಾದೇವಿಯು, ನಾನು ಮಗಳಾಗಬೇಕೆಂದು ಬಯಸಿ ವಿಶೇಷವಾಗಿ ಅರ್ಚಿಸುತ್ತಲಿರುವಳು. ರುದ್ರನು ಹಿಮಾಲಯದಲ್ಲಿ ವಾಸ ಮಾಡುವುದರಿಂದ ನಾನು ಹಿಮವಂತನ ಮನೆಯಲ್ಲಿ ಅವತರಿಸುವೆ. ಶಿವನ ಲೀಲೆಯು ಅದ್ಭುತವಾದುದು.

ಜ್ಞಾನಿಗಳನ್ನೂ ಮೋಹ ಗೊಳಿಸುವಂತಹುದು. ತಂದೆಯ ಅವಮಾನದಿಂದ ನಾನು ಯಾವಾಗ ದೇಹವನ್ನು ತ್ಯಜಿಸಿದೆನೋ, ಆಗಿನಿಂದ ಕಾಲಾಗ್ನಿಯಾಗಿ ರುದ್ರನು ನನ್ನನ್ನೇ ಚಿಂತಿಸುತ್ತಾ ದಿಗಂಬರನಾದನು; ಯೋಗಿಯಾದನು. ಆದರೂ ಅವನು ಸತೀದೇವಿಯ ವಿರಹವನ್ನು ಸಹಿಸಲಾರದವನಾಗಿದ್ದಾನೆ. ನನಗಾಗಿ ಮಹಾದುಃಖವನ್ನನುಭವಿಸಿಸುತ್ತಿದ್ದಾನೆ. ಸತಿಯ ಎಲುಬಿನಿಂದ ಮಾಲೆಯನ್ನು ಮಾಡಿ, ಅದನ್ನು ಪ್ರೀತಿಯಿಂದ ಧರಿಸಿಕೊಂಡಿದ್ದಾನೆ. ಜ್ಞಾನಿಯಾದರೂ ಅವನು ಹುಚ್ಚನಂತೆ ಅಲ್ಲಿ ಇಲ್ಲಿ ತಿರುಗುತ್ತಾ ರೋದಿಸುತ್ತಿದ್ದಾನೆ. ಇದೆಲ್ಲವೂ ಮಾಯೆ.

ವಸ್ತುತಃ ಆ ಶಿವ ಯಾವ ವಿಕಾರಗಳೂ ಇಲ್ಲದ ಜಿತೇಂದ್ರಿಯ. ಅವನ ವಿರಹದ ಹಿಂದೆ ಒಂದು ಲೋಕಕಲ್ಯಾಣದ ವಿಷಯವಿರುತ್ತದೆ. ಹೀಗಾಗಿ ರುದ್ರ ಮತ್ತೆ ನನ್ನನ್ನು ಮದುವೆಯಾಗಲಿಚ್ಛಿಸಿದ್ದಾನೆ. ರುದ್ರನ ಸಂತೋಷಕ್ಕಾಗಿ ಹಿಮವಂತನ ಮನೆಯಲ್ಲಿ ಮೇನಾದೇವಿಯ ಗರ್ಭದಲ್ಲಿ ಅವತರಿಸುವೆ. ರುದ್ರಪ್ರಿಯಳಾಗಿ ಘೋರವಾದ ತಪವನ್ನಾಚರಿಸಿ ರುದ್ರನನ್ನು ಮದುವೆಯಾಗುವೆ. ಈಗ ಎಲ್ಲರೂ ನಿಮ್ಮ ಮನೆಗಳಿಗೆ ಹೋಗಿ ನಿತ್ಯವೂ ಶಂಕರನನ್ನು ಭಜಿಸಿರಿ. ಶಿವನ ಅನುಗ್ರಹದಿಂದ ದುಃಖವೆಲ್ಲವೂ ನಾಶವಾಗುವುದು’ ಎಂದು ಹೇಳಿದ ಪರಮೇಶ್ವರಿಯು ಅಂತರ್ಧಾನಳಾದಳು. ಶ್ರೀ ಶಿವಮಹಾಪುರಾಣದಲ್ಲಿ ಪಾರ್ವತೀಖಂಡದ ನಾಲ್ಕನೆಯ ಅಧ್ಯಾಯ ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT