ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ನವನಿಧಿ ಅಧಿಪತಿ ಕುಬೇರ

ಅಕ್ಷರ ಗಾತ್ರ

ಪಾರ್ವತಿಯನ್ನು ನೆಟ್ಟ ನೋಟದಿಂದ ನೋಡಿ ಎಡಗಣ್ಣು ಕಳೆದುಕೊಂಡ ಕುಬೇರ. ಮತ್ತೆ ಬಲಗಣ್ಣಿನಿಂದಲೂ ಪಾರ್ವತಿ ದೇವಿಯನ್ನು ನೆಟ್ಟ ನೋಟದಿಂದಲೇ ನೋಡುವುದನ್ನು ಮುಂದುವರೆಸಿದ. ಶಿಕ್ಷೆ ಅನುಭವಿಸಿದರೂ, ಬುದ್ಧಿ ಬಾರದ ಕುಬೇರನ ದುರ್ವರ್ತನೆಯಿಂದ ಪಾರ್ವತಿ ಮತ್ತಷ್ಟು ಕೋಪಗೊಂಡು, ‘ನಾಥ! ಈ ದುಷ್ಟ ತಪಸ್ವಿಯು ನನ್ನನ್ನು ಪುನಃ ಪುನಃ ನೋಡುತ್ತಾ ಏನು ಹೇಳುತ್ತಿದ್ದಾನೆ? ತನಗೆ ತಪಶ್ಶಕ್ತಿಯನ್ನು ನೀಡು ಅಂತ ಅವನು ಮತ್ತೆ ಮತ್ತೆ ಬಲಗಣ್ಣಿನಿಂದ ನನ್ನನ್ನೇ ನೋಡುತ್ತಿದ್ದಾನೆ. ಇವನು ನನ್ನ ರೂಪವನ್ನೂ ಪ್ರೇಮವನ್ನೂ ಸೌಭಾಗ್ಯವನ್ನೂ ಸಂಪತ್ತನ್ನೂ ಕಂಡು ಸಹಿಸದೆ ಕರುಬುತ್ತಿದ್ದಾನೆ’ ಎಂದು ಸಿಡುಕಿದಳು.

ಮಡದಿ ಪಾರ್ವತಿ ಆಡಿದ ಮಾತನ್ನು ಕೇಳಿ ಪ್ರಭುವಾದ ಶಿವನು ನಗುತ್ತಾ, ‘ಉಮೆ, ಇವನು ನಿನ್ನ ಮಗನು. ಇವನು ಕೆಟ್ಟ ದೃಷ್ಟಿಯಿಂದ ನೋಡುತ್ತಿಲ್ಲ. ಬದಲಿಗೆ ನೀನು ಮಾಡಿದ ತಪಸ್ಸಿನ ವೈಭವವನ್ನು ಆಶ್ಚರ್ಯದಿಂದ ವರ್ಣಿಸುತ್ತಲಿದ್ದಾನೆ’ ಎಂದು ದೇವಿಯನ್ನು ಸಂತೈಸಿದ. ನಂತರ ಆ ಕುಬೇರನಿಗೆ ಹೇಳಿದ. ‘ಓ ಯಜ್ಞದತ್ತಪುತ್ರ, ನೀನು ಮಹಾಭಕ್ತ! ನಿನ್ನ ಈ ತಪಸ್ಸಿಗೆ ನಾನು ಮೆಚ್ಚಿದೆ. ನಿನಗೆ ಬೇಕಾದ ವರಗಳನ್ನೀಯುವೆನು. ನೀನು ನವವಿಧಿಗಳಿಗೂ ಒಡೆಯನಾಗು. ಗುಹ್ಯಕರಿಗೂ ಯಕ್ಷರಿಗೂ ಕಿನ್ನರರಿಗೂ ಅಧಿಪತಿಯಾಗಿರು. ರಾಜರಿಗೂ ರಾಜನಾಗು. ನೀನು ವ್ರತಶೀಲನೂ ರಾಕ್ಷಸರಿಗೆಲ್ಲಾ ಪ್ರಭುವೂ, ಎಲ್ಲರಿಗೂ ಹಣವನ್ನು ಕೊಡುವವನೂ ಆಗು. ನಿನಗೂ ನನಗೂ ಶಾಶ್ವತವಾದ ಸ್ನೇಹವುಂಟಾಗಲಿ. ನಿನ್ನ ಪ್ರೀತಿಯು ಹೆಚ್ಚಾಗಲೆಂದು ಅಲಕಾನಗರದ ಬಳಿಯಲ್ಲಿಯೇ ನಿನ್ನ ಹತ್ತಿರದಲ್ಲೇ ನಾನು ವಾಸಮಾಡುವೆ. ಇಲ್ಲಿ ಬಾ, ಇವಳ ಕಾಲಿಗೆ ಬೀಳು. ಇವಳು ನಿನಗೆ ತಾಯಿ, ಹರ್ಷಚಿತ್ತವನ್ನು ತಾಳು’ ಎಂದು ಶಿವನು, ಶ್ರೀದನಿಗೆ ವರಗಳನ್ನಿತ್ತ.

‘ಧನ್ಯನಾದೆ‘ ಎನ್ನುತ್ತಾ ಕುಬೇರನು ಪಾರ್ವತಿಯ ಕಾಲಿಗೆ ಬಿದ್ದು ನಮಸ್ಕರಿಸಿದ. ಆಗ ಶಿವನು ಸರ್ವಮಂಗಳೆಗೆ ‘ದೇವಿ, ಈ ಬಡಪಾಯಿಯಾದ ನಿನ್ನ ಮಗನಲ್ಲಿ ಪ್ರಸನ್ನಳಾಗು. ಇವನು ಕೆಟ್ಟವನಲ್ಲ. ಅತಿಯಾದ ಸಂತೋಷದಿಂದ ಮೈಮರೆತು ನೋಡಿದ್ದಾನೆ ಅಷ್ಟೆ‘ ಎಂದು ಉಮಾಮಹೇಶ್ವರಿಯನ್ನು ಸಾಂತ್ವನಪಡಿಸಿದ.

ಉಮೆಯು ಪ್ರಸನ್ನಹೃದಯಳಾಗಿ ಆ ಯಜ್ಞದತ್ತ ಸುತನನ್ನು ‘ವತ್ಸ, ಯಾವಾಗಲೂ ನಿನಗೆ ಶಿವನಲ್ಲಿ ನಿಷ್ಕಳಂಕವಾದ ಭಕ್ತಿಯುಂಟಾಗಲಿ, ನಿನ್ನ ಎಡಗಣ್ಣು ಬಿರಿದು ಹೋದುದರಿಂದ ಏಕಪಿಂಗನೆಂಬ ಹೆಸರಿನಿಂದಲೇ ಪ್ರಖ್ಯಾತನಾಗು. ಪ್ರಭುವಾದ ಶಿವನು ಅನುಗ್ರಹಿಸಿದ ವರಗಳೆಲ್ಲವೂ ಈಡೇರಲಿ. ನನ್ನ ರೂಪವನ್ನು ಕಂಡು ಅಸೂಯೆಪಟ್ಟುದರಿಂದ ನೀನು ಕುಬೇರನೆಂದೇ ಹೆಸರಾಗು’ ಎಂದು ಆಶೀರ್ವಾದಿಸುತ್ತಾಳೆ.

ಪಾದ್ಮಕಲ್ಪದಲ್ಲಿ ಯಜ್ಞದತ್ತ ದೀಕ್ಷಿತನ ಮಗನಾಗಿ ಜನಿಸಿದ ಗುಣನಿಧಿ ಮಹಾಜೂಜುಗಾರನಾಗಿ ಪಾಪ ಮಾಡಿದರೂ, ಸಾಯುವ ಕೊನೆ ಗಳಿಗೆಯಲ್ಲಿ ತನ್ನ ಬಟ್ಟೆ ಅಂಚಿನಿಂದ ಶಿವದೇಗುಲದ ದೀಪ ಬೆಳಗಿ ಕೈಲಾಸವಾಸಿಯಾದ. ಈ ಪುಣ್ಯದಿಂದ ಕಳಿಂಗದ ರಾಜನಾಗಿ, ರಾಜ್ಯದೆಲ್ಲೆಡೆ ಶಿವದೇಗುಲದಲ್ಲಿ ದೀಪ ಬೆಳಗುವಂತೆ ಮಾಡಿ ಮತ್ತಷ್ಟು ಪುಣ್ಯ ಸಂಪಾದಿಸಿದ, ಬ್ರಹ್ಮನ ಮಾನಸಪುತ್ರನಾದ ಪುಲಸ್ತ್ಯನ ಮಗನಾದ ವಿಶ್ರವಸ್ಸುಗೆ ವೈಶ್ರವಣ ಎಂಬ ಮಗನಾಗಿ ಜನಿಸಿ, ವಿಶ್ವಕರ್ಮ ನಿರ್ಮಿಸಿದ ಅಲಕಾನಗರಿಯಲ್ಲಿ ಸುಖವಾಗಿ ಬದುಕಿದ. ಪದ್ಮಕಲ್ಪ ಕಳೆದ ಮೇಲೆ, ಮೇಘವಾಹನ ಕಲ್ಪದಲ್ಲಿ ಶ್ರೀದ ಎಂಬುವನಾಗಿ ಹುಟ್ಟಿ, ತನ್ನ ಪುಣ್ಯಫಲ ಮತ್ತಷ್ಟು ಹೆಚ್ಚಿಸಿಕೊಳ್ಳಲು ಘೋರ ತಪಸ್ಸನ್ನು ಮಾಡಿ ಶಿವ-ಪಾರ್ವತಿಯರ ದರ್ಶನ ಮಾಡಿದ. ಇದರ ಫಲದಿಂದ ಅವನ ಅಲಕಾನಗರಿ ಪಕ್ಕದಲ್ಲೆ ಕೈಲಾಸಪರ್ವತ ಸೃಷ್ಟಿಯಾಗಿದ್ದಲ್ಲದೆ, ಅತುಲೈಶ್ವರ್ಯಕ್ಕೆ ಒಡೆಯನಾಗಿ ‘ಕುಬೇರ’ ಎನಿಸಿದ.

ಈ ರೀತಿ ಕುಬೇರನು ಶಿವನ ಸಖ್ಯವನ್ನು ಸಂಪಾದಿಸಿದ ಮತ್ತು ಶಂಕರನೂ ತನ್ನ ಮಾತಿನಂತೆ ಅಲಕಾನಗರಿಯ ಬಳಿಯಲ್ಲಿಯೇ, ತನ್ನ ನಿವಾಸವಾದ ಕೈಲಾಸವನ್ನು ಸ್ಥಾಪಿಸಿದ ಕಥೆಯನ್ನು ಬ್ರಹ್ಮ ನಾರದನಿಗೆ ಹೇಳುವಲ್ಲಿಗೆ ಶ್ರೀ ಶಿವಮಹಾಪುರಾಣದಲ್ಲಿ, ಎರಡನೆಯ ಸಂಹಿತೆಯಾದ ರುದ್ರಸಂಹಿತೆಯಲ್ಲಿ ಮೊದಲನೆಯ ಖಂಡವಾದ ಸೃಷ್ಟಿ ಉಪಾಖ್ಯಾನದಲ್ಲಿ ಕುಬೇರ-ಶಿವಸಖ್ಯ ವರ್ಣನ ಎಂಬ ಹತ್ತೊಂಬತ್ತನೆಯ ಅಧ್ಯಾಯ ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT