ಶುಕ್ರವಾರ, ಜುಲೈ 1, 2022
23 °C

ಸಚ್ಚಿದಾನಂದ ಸತ್ಯಸಂದೇಶ: ಛಲವೇ ಜೀವನದ ಬಲ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ Updated:

ಅಕ್ಷರ ಗಾತ್ರ : | |

ಬದುಕುವ ಛಲವಿಲ್ಲದಿದ್ದರೆ ಯಾವ ಜೀವಿಯೂ ಭೂಮಿ ಮೇಲೆ ಒಂದಿಂಚು ಚಲಿಸಲಾರವು. ಹಾಗೇ ಒಂದು ನಿಮಿಷವೂ ಬದುಕುಳಿಯಲಾರವು. ಏಕೆಂದರೆ ಪ್ರತಿಯೊಂದು ಜೀವಿಯೂ ಬದುಕುವ ಛಲದಿಂದಲೇ ಭೂಮಿಗೆ ಬಂದಿರುತ್ತವೆ. ಭಗವಂತ ಸಾವನ್ನ ಬೆನ್ನಿಗೆ ಕಟ್ಟಿ ಕಳುಹಿಸಿದ್ದರೂ, ಬದುಕುವ ಛಲವನ್ನ ಕೊನೆ ಉಸಿರಿರುವವರೆಗೂ ಬಿಟ್ಟುಕೊಡಲಾರವು. ಹೀಗಾಗಿಯೇ ಕೋಟ್ಯಂತರ ವರ್ಷಗಳಿಂದ ಭೂಮಿಯ ಮೇಲೆ ಜೀವಿಗಳ ಸಾವು-ಬದುಕಿನ ನಿರಂತರ ಯಾತ್ರೆ ಮುಂದುವರೆದಿದೆ. ಛಲವೇ ಜೀವನದ ಬಲವಾಗಿರುವುದರಿಂದ ಛಲವಿಲ್ಲದೆ ಬದುಕಿಲ್ಲ ಎಂಬುದು ಸತ್ಯ.

ಮನುಷ್ಯನ ಹೊರತು ಬೇರಾವ ಜೀವಿಗೂ ಬದುಕಿನ ಪಾಠ ಕಲಿಸಬೇಕಾಗಿಲ್ಲ. ಅವು ಹುಟ್ಟುತ್ತಲೇ ಬದುಕುವ ಮಾರ್ಗ ಕಂಡುಕೊಂಡುಬಿಡುತ್ತವೆ. ಆದರೆ ಮಾನವಜೀವಿಗೆ ಮಾತ್ರ ವೃದ್ಧಾಪ್ಯವಾಗುತ್ತಬಂದರೂ ಬದುಕುವ ಮಾರ್ಗವನ್ನು ಕಲಿಸುತ್ತಲೇ ಇರಬೇಕು. ಮನುಷ್ಯನಿಗೆ ಬದುಕುವ ಮಾರ್ಗ ಕಲಿಸಲು ಶಾಲೆ-ಕಾಲೇಜುಗಳಿವೆ. ಇವ್ಯಾವುದೂ ಮನುಷ್ಯನನ್ನ ಪರಿಪೂರ್ಣವಾಗಿ ಬದುಕಿನ ಪಾಠ ಕಲಿಸಲಾರವು. ಏಕೆಂದರೆ, ಬದುಕಿನ ಪಾಠ ಹೇಳಿಕೊಟ್ಟು ಕಲಿಯುವಂಥದ್ದಲ್ಲ. ಅದು ಸ್ವಾನುಭವದಿಂದ ಕಲಿಯುವಂಥದ್ದು. ಈ ಕಲಿಕೆಗೆ ಕೊನೆ ಎಂಬುದಿಲ್ಲ.

ಕಲಿಕೆ ಅಥವ ಶಿಕ್ಷಣ ಎಂದರೆ; ಬದುಕುವ ಛಲ. ಕಲಿಯಬೇಕೆನ್ನುವ ಛಲಗಾರನಿಗೆ ಬದುಕು ಒಲಿಯುತ್ತದೆ. ಛಲವಿಲ್ಲದವನಿಗೆ ಬದುಕು ಮುನಿಯುತ್ತದೆ. ಇದನ್ನ ಮನುಷ್ಯ ಎಷ್ಟು ಬೇಗ ಅರ್ಥ ಮಾಡಿಕೊಳ್ಳುತ್ತಾನೋ, ಅಷ್ಟು ಬೇಗ ಅವನ ಬದುಕು ಬೆಳಗುತ್ತದೆ. ಇದಕ್ಕಾಗೇ ಛಲಬೇಕು ಪ್ರತಿ ಮನುಷ್ಯನಿಗೆ. ಆದರೆ ಈ ಛಲದ ಬಲದ ಮರ್ಮ ಮಾತ್ರ ಎಲ್ಲಾ ಮನುಷ್ಯರಿಗೂ ಅರ್ಥವಾಗೋಲ್ಲ. ಸರಿಯಾಗಿ ಅರ್ಥ ಮಾಡಿಕೊಂಡವರು ಮಾತ್ರ ಬಹುಬೇಗ ಸಾಧನೆಯ ಹಾದಿ ತುಳಿಯುತ್ತಾರೆ. ಸಾಧನೆಯ ಹಾದಿ ತುಳಿದವರೆಲ್ಲಾ ಯಶಸ್ಸಿನ ಶಿಖರ ಮುಟ್ಟುವುದಿಲ್ಲ. ಸಾಧನೆ ಹಾದಿಯಲ್ಲಿ ಎದುರಾಗುವ ಕಡು ಕಷ್ಟಗಳನ್ನು ಸಹಿಸಿದವರು ಮಾತ್ರವೇ ಯಶಸ್ಸಿನ ಶಿಖರ ಏರಿ ರಾರಾಜಿಸುತ್ತಾರೆ.
ಶ್ರಮವಿಲ್ಲದೆ ಭೂಮಿ ಮೇಲೆ ಹುಲ್ಲುಕಡ್ಡಿಯೂ ಚಿಗುರಲಾರದು. ಆನೆ ಭಾರ ಆನೆಗೆ ಇರುವೆ ಭಾರ ಇರುವೆಗೆ ಎಂಬಂತೆ ಪ್ರತಿಜೀವಿಯೂ ಶ್ರಮದ ಮೇಲೆ ಬದುಕು ಕಟ್ಟಿಕೊಳ್ಳುತ್ತವೆ. ಮೊಟ್ಟೆ ಇಡುವ ಮುನ್ನ ಸಣ್ಣಪುಟ್ಟ ಹಕ್ಕಿ, ಹುಳುಹುಪ್ಪಟ್ಟೆಗಳು ಸಹ ಗೂಡು ಕಟ್ಟಲು ಅದೆಷ್ಟು ಕಷ್ಟಪಡುತ್ತವೆ. ಆದರೆ ಲೋಭಿಮನುಷ್ಯರು ಮಾತ್ರ ಯಾವುದೇ ಶ್ರಮವಿಲ್ಲದೆ ಬದುಕು ಕಟ್ಟಿಕೊಳ್ಳಲು ಯೋಚಿಸುತ್ತಾರೆ. ಇವರಾರೂ ಭವಿಷ್ಯದಲ್ಲಿ ಉತ್ತಮ ಬದುಕನ್ನು ಕಟ್ಟಿಕೊಳ್ಳಲಾರರು. ಯಾವುದೇ ಕಲೆ ಕಲಾವಿದನ ಶ್ರಮದಿಂದ ಅರಳಬೇಕು. ಶ್ರಮವಿಲ್ಲದ ಬಣ್ಣದ ಎರಕದಿಂದ ಉತ್ತಮ ಕಲೆ ರೂಪುಗೊಳ್ಳಲಾರದು. ಕವಿ ಬರೆಯುವಾಗಲೂ ಬೌದ್ಧಿಕಶ್ರಮ ಹಾಕದೆ ಉತ್ತಮ ಕವಿತೆ ರೂಪುಗೊಳ್ಳಲಾರದು. ಆದ್ದರಿಂದ ಯಾವುದೇ ಯೋಜನೆ ಕಾರ್ಯಕ್ಕಿಳಿಸುವಾಗ ಶ್ರಮದ ಪಟ್ಟನ್ನು ಹಾಕಲೇಬೇಕು.

ಎಷ್ಟೋ ಜನ ತಮ್ಮಿಂದ ಏನೂ ಸಾಧಿಸಲಾಗಲ್ಲ ಅಂತ ಹತಾಶರಾಗುತ್ತಾರೆ. ದುಡ್ಡಿದ್ದರೆ ಮಾತ್ರ ಸಾಧನೆಯ ಗುರಿ ಮುಟ್ಟಬಹುದು ಅಂತ ತಮ್ಮಲ್ಲಿರುವ ಕೊರತೆಗಳ ಬಗ್ಗೆಯೇ ಜಾಲಾಡಿಕೊಂಡಿರುತ್ತಾರೆ. ವಾಸ್ತವವಾಗಿ ಯಾವುದೇ ಸಾಧನೆಗೆ ದುಡ್ಡು ಮುಖ್ಯವಲ್ಲ; ಹಣ ಸಾಧನೆಯ ಸಾಧನದೊಳಗಿರುವ ಒಂದು ಭಾಗವಷ್ಟೆ. ಹಣವಿಲ್ಲ ಅಂತ ನಾನು 55 ವರ್ಷಗಳ ಹಿಂದೆ ಯೋಚಿಸುತ್ತಾ ಕೂತಿದ್ದರೆ, ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮ ಇಂದು ವಿಶ್ವಾದ್ಯಂತ 87 ಆಶ್ರಮಗಳಷ್ಟು ವಿಸ್ತಾರಗೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿರುವಂತೆ ಕೆಲಸ ನಾವು ಮಾಡುತ್ತಾ ಇರಬೇಕು; ಅದರ ಫಲಾಫಲಗಳನ್ನ ಭಗವಂತನಿಗೆ ಬಿಡಬೇಕು. ಒಂದಲ್ಲ ಒಂದು ದಿನ ನಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತೆ. ನಿಃಸ್ವಾರ್ಥವಾದ ಸಾತ್ವಿಕ ಸಾಧಕನಿಗೆ ‘ಸಚ್ಚಿದಾನಂದ’ದ ಕೃಪೆ ಸದಾ ಇರುತ್ತದೆ.⇒.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು