ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ಜ್ಞಾನಮಾರ್ಗಕ್ಕೆ ಒಲಿಯುವ ಶಿವ

ಅಕ್ಷರ ಗಾತ್ರ

ಕ್ಷಮೆ ಬೇಡಿದ ದಕ್ಷಬ್ರಹ್ಮನಿಗೆ ‘ನಾನು ಸದಾ ಭಕ್ತರ ಅಧೀನನು. ನಾಲ್ಕು ವಿಧದ ಪುಣ್ಯಶಾಲಿಗಳು ನನ್ನನ್ನು ಭಜಿಸುವರು. ದುಃಖಪೀಡಿತನು ಮೊದಲನೆಯವರು, ಜ್ಞಾನವನ್ನು ಪಡೆಯಲಿಚ್ಛೆಯುಳ್ಳವನು ಎರಡನೆಯವನು. ಮೂರನೆಯವನು ಧನವನ್ನಪೇಕ್ಷಿಸುವನು. ಜ್ಞಾನಿಯು ನಾಲ್ಕನೆಯವನು. ಇದರಲ್ಲಿ ಮೊದಲಿನ ಮೂವರು ಸಾಮಾನ್ಯರು. ಅಂದರೆ, ಮೊದಲನೆಯವನಿಗಿಂತ ಎರಡನೆಯವನೂ, ಎರಡನೆಯವನಿಗಿಂತ ಮೂರನೆಯವನು ಶ್ರೇಷ್ಠ. ನಾಲ್ಕನೆಯವನಾದ ಜ್ಞಾನಿಯು ಎಲ್ಲರಿಗಿಂತಲೂ ಶ್ರೇಷ್ಠ. ಆ ಜ್ಞಾನಿಯು ನನಗೆ ತುಂಬಾ ಪ್ರಿಯನು. ನನ್ನ ಸ್ವರೂಪವೇ ಅವನಾಗಿರುವನು. ವೇದಾಂತವನ್ನು ಬಲ್ಲ ಆತ್ಮಜ್ಞರು ನನ್ನನ್ನು ಜ್ಞಾನದಿಂದ ತಿಳಿಯಬಲ್ಲರು. ಜ್ಞಾನವಿಲ್ಲದೇ ನನ್ನನ್ನು ಪಡೆಯಲು ಮೂಢರು ಯತ್ನಿಸುವರು. ಆದರೆ ಅದು ಸಿದ್ಧಿಸುವುದಿಲ್ಲ. ಜ್ಞಾನಮಾರ್ಗವನ್ನು ಬಿಟ್ಟು ವೇದಗಳು, ಯಜ್ಞಗಳು, ದಾನಗಳು, ತಪಸ್ಸು ಮುಂತಾದವುಗಳಿಂದ ನನ್ನನ್ನು ಪಡೆಯಲು ಅಸಾಧ್ಯ. ದಕ್ಷನೆ ನೀನು, ಕೇವಲ ಕರ್ಮದಿಂದ ಸಂಸಾರವನ್ನು ದಾಟಲು ಪ್ರಯತ್ನಪಟ್ಟೆ. ಆದಕಾರಣ ನಿನ್ನ ಯಜ್ಞವನ್ನು ನಾಶ ಮಾಡಿದೆ.

‘ನಾನು ಬ್ರಹ್ಮನೂ ಹರಿಯೂ ಜಗತ್ತಿಗೆ ಕಾರಣರು. ವಸ್ತುತಃ ಬ್ರಹ್ಮ ವಿಷ್ಣು ಮಹೇಶ್ವರರು ಒಂದೇ ಆತ್ಮಸ್ವರೂಪರು. ಭೇದವಿಲ್ಲದ ಆ ಆತ್ಮವಸ್ತುವಿನಲ್ಲಿ ಭಿನ್ನವೆಣಿಸಬೇಡ. ಹೀಗಿದ್ದರೂ ಮೂಢರು ವಿಷ್ಣು ಬೇರೆ, ಬ್ರಹ್ಮ ಬೇರೆ, ಈಶ್ವರ ಬೇರೆ ಎಂದು ಇಲ್ಲದ ಭೇದವನ್ನೆಣಿಸುವರು.
ಶಿರಸ್ಸು, ಕೈ ಮೊದಲಾದ ಅಂಗಗಳು ತನ್ನ ಶರೀರದಿಂದ ಬೇರೆಯಲ್ಲ ಎಂದು ಹೇಗೆ ತಿಳಿಯುವರೋ, ಅದರಂತೆ ಸರ್ವಾತ್ಮರಾದ ತ್ರಿಮೂರ್ತಿಗಳಿಗೆ ಪರಸ್ಪರ ಭೇದವನ್ನು ಕಲ್ಪಿಸಬಾರದು. ಹಾಗೆ ಭೇದವನ್ನ ಎಣಿಸಿದವನು ಅಶಾಂತಿಯನ್ನು ಹೊಂದುವನು. ನನ್ನ ಭಕ್ತನು ಎಲ್ಲ ದೇವತೆಗಳನ್ನೂ ಪೂಜಿಸಬೇಕು. ಬ್ರಹ್ಮನಲ್ಲಿ ಭಕ್ತಿಯಿಲ್ಲದೆ ಹರಿಯಲ್ಲಿ ಭಕ್ತಿಯು ಉದಯಿಸಲಾರದು. ಹರಿಭಕ್ತಿಯಿಲ್ಲದೆ ನನ್ನಲ್ಲಿ ಭಕ್ತಿಯು ಹುಟ್ಟಲಾರದು. ಹರಿಭಕ್ತನಾಗಲೀ ಶಿವಭಕ್ತನಾಗಲೀ ಯಾರನ್ನು ಯಾರು ನಿಂದಿಸಿದರೂ ಘನಘೋರ ಪಾಪ ತಟ್ಟುವುದು. ಅವರಿಗೆ ಎಂದೆಂದಿಗೂ ಮುಕ್ತಿ ಇರುವುದಿಲ್ಲ’ ಎಂದ ಪರಮೇಶ್ವರ.

ನಂತರ ಶಿವನ ಅಪ್ಪಣೆಯಂತೆ ದಕ್ಷನು ಯಜ್ಞವನ್ನು ಸಂಪೂರ್ಣಗೊಳಿಸಿದ. ದೇವತೆಗಳಿಗೆ ಹವಿರ್ಭಾಗವನ್ನು ಯೋಗ್ಯವಾಗಿ ಕೊಟ್ಟ. ಶಿವನಿಗೆ ಸಂಪೂರ್ಣವಾದ ಭಾಗವನ್ನು ಕೊಟ್ಟ. ಸತೀದೇವಿಯನ್ನು ನೆನೆದು ಶಿವ ಚಿಂತಿಸಿದ. ತನ್ನ ಪ್ರಧಾನ ಗಣಗಳೆದುರಿಗೆ ಅವಳ ಪ್ರಿಯವಾದ ಕಥೆಗಳನ್ನು ಹೇಳಿದ. ಹೀಗೆ ಶಿವನು ಲೋಕಗತಿಯನ್ನಾಶ್ರಯಿಸಿ ಸತಿಯಲ್ಲಿ ಅನುರಾಗವನ್ನು ಪ್ರಕಟಿಸುತ್ತಾ ಅವಳ ಚರಿತ್ರವನ್ನು ಹೇಳುತ್ತಾ ಬಹಳ ಕಾಲವನ್ನು ಕಳೆದ.

ಶಿವನಿಗೆ ವಿರಹ, ಮೋಹ, ಯಾವ ವಿಕಾರವೂ ಇಲ್ಲ. ಆದರೂ ಅವನು ಮಾಯೆಯಿಂದ ಲೋಕಗತಿಯನ್ನನುಸರಿಸಿ ವಿಕಾರಗಳನ್ನು ಪ್ರದರ್ಶಿಸುವವನು. ಅವನ ಸ್ವರೂಪವನ್ನು ಬ್ರಹ್ಮ-ವಿಷ್ಣು ಸಹ ತಿಳಿಯಲಾರರು. ಆದರೆ ಶಿವಭಕ್ತರು ಶಿವನ ಅನುಗ್ರಹದಿಂದ ಶಿವಮಹಿಮೆಯನ್ನು ತಿಳಿಯಬಲ್ಲರು.

ಸತೀದೇವಿಯು ದಕ್ಷಯಜ್ಞದಲ್ಲಿ ಶರೀರವನ್ನು ತ್ಯಜಿಸಿ, ಮತ್ತೆ ಹಿಮವಂತನ ಪತ್ನಿಯಾದ ಮೇನಕಾ ದೇವಿಯಲ್ಲಿ ಜನಿಸಿದಳು. ಆ ಪಾರ್ವತಿಯು ತಪಸ್ಸನ್ನು ಮಾಡಿ ಶಿವನ ಪತ್ನಿಯಾದಳು. ಶಿವನ ಅನುಗ್ರಹದಿಂದ ಗೌರಿಯಾಗಿ ಅವನ ಅರ್ಧದೇಹವನ್ನಾಕ್ರಮಿಸಿ ಅದ್ಭುತವಾದ ಅನೇಕ ಲೀಲೆಗಳನ್ನು ಪ್ರದರ್ಶಿಸಿದಳು.

‘ಎಲೈ ನಾರದ, ನಿನಗೆ ಅತ್ಯದ್ಭುತವಾದ ಸತೀಚರಿತ್ರವನ್ನು ಹೇಳಿರುವೆ. ಇದನ್ನು ಭಕ್ತಿಯಿಂದ ಓದಿದರೆ, ಕೇಳಿದರೆ, ಇತರರಿಗೆ ಹೇಳಿದರೆ ಮುಕ್ತಿಯನ್ನು ಪಡೆಯಬಹುದು’ ಎಂದು ಬ್ರಹ್ಮ ಹೇಳುತ್ತಾನೆ. ಇಲ್ಲಿಗೆ ಶಿವಪುರಾಣದ ಸತೀಖಂಡ ಸಮಾಪ್ತವಾಯಿತು.⇒l

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT