ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇಂದು ಚೌತಿ: ಗಣೇಶ ಸಾಮರಸ್ಯದ ದೇವರು

Published : 7 ಸೆಪ್ಟೆಂಬರ್ 2024, 2:30 IST
Last Updated : 7 ಸೆಪ್ಟೆಂಬರ್ 2024, 2:30 IST
ಫಾಲೋ ಮಾಡಿ
Comments

ಜಗತ್ತಿನ ಇಂದಿನ ಹಲವು ಸಮಸ್ಯೆಗಳಿಗೆ ಮೂಲವೇ ‘ಧರ್ಮ’ ಎಂದಾಗಿಬಿಟ್ಟಿದೆ; ಎಂದರೆ ಧರ್ಮವನ್ನು ತಪ್ಪಾಗಿ ತಿಳಿದುಕೊಳ್ಳುತ್ತಿರುವುದೇ ನಮ್ಮ ಎಲ್ಲ ಸಮಸ್ಯೆಗಳಿಗೂ ಮೂಲ. ಧರ್ಮವನ್ನು ಮತವನ್ನಾಗಿ ಅರ್ಥಮಾಡಿಕೊಳ್ಳುತ್ತಿದ್ದೇವೆ; ಮತವನ್ನು ಧರ್ಮವನ್ನಾಗಿಸಲು ಹವಣಿಸುತ್ತಿದ್ದೇವೆ. ನಮ್ಮ ಬುದ್ಧಿಗೆ ಒದಗಿರುವ ಇಂಥ ವೈಕಲ್ಯವೇ ಜಗತ್ತಿನಲ್ಲಿ ಅಶಾಂತಿಯನ್ನು ಸೃಷ್ಟಿಸುತ್ತಿದೆ. ‘ನನ್ನ ದೇವರೇ ಶ್ರೇಷ್ಠ, ನಿನ್ನ ದೇವರು ನೀಚ’ ಎಂಬ ವಿಕೃತ ಮನೋಧರ್ಮವೇ ಈ ಸಮಸ್ಯೆಯ ಕೇಂದ್ರಬಿಂದು. ಯಾವುದೋ ಒಂದು ಸಮುದಾಯವನ್ನಷ್ಟೆ ಉದ್ಧಾರಮಾಡುವವನೂ, ಉಳಿದವರನ್ನು ದಂಡಿಸುವವನೂ ‘ದೇವರು’ ಹೇಗಾದಾನು? ಎಲ್ಲರನ್ನೂ ಸಲಹುವವನೂ, ಎಲ್ಲರಲ್ಲೂ ಇರುವವನೂ, ಎಲ್ಲೆಲ್ಲಿಯೂ ಇರುವವನೂ, ಎಲ್ಲ ಕಾಲದಲ್ಲೂ ಇರುವವನೂ, ಎಲ್ಲ ತತ್ತ್ವಗಳನ್ನೂ ಎತ್ತಿಹಿಡಿಯುವವನೂ ಯಾರೋ ಅವನಷ್ಟೆ ‘ದೇವರು’ ಎನಿಸಿಕೊಂಡಾನು, ಅಲ್ಲವೆ? ಗಣಪತಿಯ ಕಲ್ಪನೆಯಲ್ಲಿ ಇಂಥದೊಂದು ಸಮಗ್ರತೆಯನ್ನು ಕಾಣಬಹುದೆನ್ನಿ.

ಗಣಪತಿಯ ತತ್ತ್ವವನ್ನು ನಾವು ವೇದದಲ್ಲಿ ಕಾಣುತ್ತೇವೆ. ‘ವೇದ’ ಎಂದರೆ ಅರಿವು, ಅನಾದಿ, ಅನಂತ – ಎಂದೇ ಅರ್ಥ; ಈ ಸಂಗತಿಗಳೇ ನಮ್ಮ ಆನಂದಕ್ಕೂ ಆಲೋಚನೆಗೂ ಮೂಲಕಾರಣ. ಗಣಪತಿಯ ಕಲ್ಪನೆಯಲ್ಲಿ ಈ ಎಲ್ಲ ವಿವರಗಳೂ ವಿಗ್ರಹರೂಪವನ್ನು ತಾಳಿವೆ. ಕಾಲದಿಂದ ಕಾಲಕ್ಕೆ ಗಣಪತಿಯ ತತ್ತ್ವವನ್ನು ನಮ್ಮ ಸಂಸ್ಕೃತಿ ಹಲವು ಆಯಾಮಗಳಲ್ಲಿ ಹಿಗ್ಗಿಸಿರುವುದು ದಿಟ. ಗಣಪತಿಯ ಆಕಾರವನ್ನು ಒಮ್ಮೆ ಗಮನಿಸಿದರೂ ತಿಳಿಯುತ್ತದೆ, ಅವನ ವೈಶ್ವಿಕ ಸ್ವರೂಪ. ಸೃಷ್ಟಿಯಲ್ಲಿ ಕಾಣುವ ಯಾವ ಆಕಾರವನ್ನು ನೋಡಿದರೂ ಅದು ಗಣಪತಿಯ ಆಕಾರದಂತೆಯೇ ಕಂಡರೆ, ಈ ‘ದರ್ಶನ’ವೇನೂ ಅಚ್ಚರಿಯ ವಿದ್ಯಮಾನ ಎನಿಸದು. ‘ಗಣಪತಿ’ ಎಂದರೆ ಅದು ವಿಷ್ಣುತತ್ತ್ವವೂ ಹೌದು ತಾನೆ? ಎಂದರೆ ಎಲ್ಲೆಲ್ಲೂ ಇರುವಂಥದ್ದು. ಎಲ್ಲೆಲ್ಲೂ ಇದ್ದರಷ್ಟೆ ಅದನ್ನು ಪರಮಾತ್ಮವಸ್ತು ಎನ್ನಲಾದೀತು. ಅತ್ಯಂತ ಸೂಕ್ಷ್ಮವಾಗಿರುವ ‘ಪರಮಾತ್ಮ’ವನ್ನು ನಮಗೆ ಸ್ಥೂಲವಾಗಿ ಕಾಣಿಸಿಕೊಡುತ್ತಿದ್ದಾನೆ, ಗಣಪತಿ. ಹೀಗಾಗಿಯೇ ನಾವು ಸುತ್ತಲೂ ಎಲ್ಲಿ ನೋಡಿದರೂ ಗಣಪತಿಯ ಆಕಾರವೊಂದು ರೂಪುಗೊಂಡಂತೆ ಭಾಸವಾಗುತ್ತದೆ; ಕಾಣುವ ಸಹೃದಯತೆಯೂ ಬೇಕೆನ್ನಿ!

ಗಣಪತಿಯು ಪ್ರತಿನಿಧಿಸುವ ತತ್ತ್ವಗಳು ಕೂಡ ಅವನ ಈ ವಿಶ್ವಾತ್ಮಗುಣಕ್ಕೆ ಸಂಕೇತಗಳಾಗಿವೆ. ಅವನನ್ನು ಕಂಡರೆ ಮಕ್ಕಳಿಗೂ ಆನಂದ, ಹಿರಿಯರಿಗೆ ಗೌರವ; ಹೆಣ್ಣುಮಕ್ಕಳಿಗೆ ಪ್ರೀತಿ. ಅವನು ಸ್ನೇಹಿತನಾಗಿ ನಮ್ಮನ್ನು ನಗಿಸಬಲ್ಲ, ಹಿರಿಯನಾಗಿ ಬೆಳಕನ್ನು ಕಾಣಿಸಬಲ್ಲ, ಪ್ರೀತಿಪಾತ್ರನಾಗಿ ನಮ್ಮನ್ನು ಕಾಪಾಡಬಲ್ಲ. ಅವನು ವಿಘ್ನಕಾರಕನೂ ಹೌದು, ವಿಘ್ನನಾಶಕನೂ ಹೌದು. ಅವನನ್ನು ಬ್ರಹ್ಮಚಾರಿಯಾಗಿಯೂ ಆರಾಧಿಸಬಹುದು; ಸಿದ್ಧಿ–ಬುದ್ಧಿಗಳ ಒಡೆಯನಂತೆಯೂ ಪೂಜಿಸಬಹುದು. ಅವನು ಗೃಹಸ್ಥರಿಗೂ ಒಲಿಯುತ್ತಾನೆ, ಯೋಗಿಗಳ ಧ್ಯಾನಕ್ಕೂ ಒದಗುತ್ತಾನೆ, ತಾಂತ್ರಿಕರ ಸಾಧನೆಗೂ ದಾರಿ ತೋರುತ್ತಾನೆ; ಮೋಕ್ಷಮಾರ್ಗದಲ್ಲಿರುವವರಿಗೆ ತಾನೇ ಓಂಕಾರರೂಪದಲ್ಲಿ ಎದುರುಗೊಳ್ಳುತ್ತಾನೆ. ಗಣಪತಿಯನ್ನು ಒಲಿಸಿಕೊಳ್ಳುವುದೂ ಸುಲಭ; ಹೂವು ಇದ್ದರೆ, ಅಷ್ಟೇ ಸಾಕು; ಬೇಡ, ಹುಲ್ಲು ಇದ್ದರೆ? ಅದೇ ಸಾಕು! ಕಾಯೊಂದನ್ನು ಅರ್ಪಿಸಿದರೂ ಸಾಕು, ಅವನು ನಮ್ಮನ್ನು ಕಾಯುತ್ತಾನೆ. ಅವನು ನಮಗೆ ಒಲಿಯಬೇಕಾದರೆ ನಾವು ನಮ್ಮ ಕಾಯವನ್ನು ಬಗ್ಗಿಸಬೇಕು, ಮನವನ್ನು ಹಿಗ್ಗಿಸಬೇಕು, ಅಷ್ಟೆ!

ಗಣಪತಿಗೆ ಜಾತಿ–ಮತ–ಪ್ರಾಂತ–ಲಿಂಗ–ಭಾಷೆಗಳ ಗೊಡವೆ ಇಲ್ಲ; ಅವನ ಕಲ್ಪನೆಯ ಸೊಗಸು ಇಡಿಯ ಜಗತ್ತನ್ನು ಹರಡಿಕೊಂಡಿದೆ. ಹೀಗೆ ಎಲ್ಲರನ್ನೂ ಬೆಸೆಯಬಲ್ಲ ಸಾಮರ್ಥ್ಯ ಇರುವ ದೈವ ಎಂದರೆ ಅದು ಗಣಪತಿಯೇ ಹೌದು. ಪರತತ್ತ್ವ, ಎಂದರೆ ‘ದೈವ’ ಎಂಬುದು ಇರುವುದು ಒಂದೇ; ಅದು ಬೇರೆ ಬೇರೆ ಕೋನಗಳಲ್ಲಿ ಬೇರೆ ಬೇರೆ ರೂಪಗಳಲ್ಲಿ ಕಾಣಿಸುತ್ತದೆಯಷ್ಟೆ. ನಾವು ಧ್ಯಾನಸ್ಥರಾಗಿ ನೋಡಿದಾಗ ಈ ಏಕತತ್ತ್ವದ ದರ್ಶನವಾಗುತ್ತದೆ. ಇರುವುದು ಒಂದೇ ತತ್ತ್ವ; ಅದು ಸೃಷ್ಟಿಯ ಅನಿವಾರ್ಯಗಳಿಗೆ ತಕ್ಕಂತೆ ಬೇರೆ ಬೇರೆ ಗುಣಗಳಲ್ಲಿ ಪ್ರಕಟವಾಗುತ್ತಿರುತ್ತದೆಯಷ್ಟೆ. ನಮ್ಮ ಉದ್ದೇಶದಲ್ಲಿ ತಿಳಿತನ ಇದ್ದಾಗ ಈ ಗುಣಗಳು ನಮಗೆ ಬೇಕಾದ ರೂಪದಲ್ಲಿ ಕಾಣಿಸಿಕೊಳ್ಳುತ್ತದೆಯಷ್ಟೆ. ಇಂಥದೊಂದು ಮಹಾನಂದದ ಮಹಾದರ್ಶನಕ್ಕೆ ಕಾರಣವಾಗಬಲ್ಲ ಸಾಮರಸ್ಯದ ದೈವವೇ ಗಣಪತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT