ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವರ್ಣಗೌರೀವ್ರತ, ಲೋಕಜನನಿಯ ಆರಾಧನೆ

Last Updated 20 ಆಗಸ್ಟ್ 2020, 5:29 IST
ಅಕ್ಷರ ಗಾತ್ರ

ಜಗಜ್ಜನನಿಯಾದ ಮಹಾಶಕ್ತಿಯ ಆರಾಧನೆಗೆ ಮೀಸಲಾಗಿರುವ ವ್ರತವೇ ಸ್ವರ್ಣಗೌರೀವ್ರತ. ಕುಟುಂಬದ ಒಳಿತಿಗಾಗಿ ಆಚರಿಸುವ ಈ ವ್ರತ ನಮಗೆ ಸಂಭ್ರಮದ ಹಬ್ಬವೂ ಹೌದು. ಈ ವರ್ಷ ಇದನ್ನು ಸರಳವಾಗಿ, ಆದರೆ ಶ್ರದ್ಧಾಭಕ್ತಿಗಳಿಂದ ಲೋಕಹಿತಕ್ಕಾಗಿ ಆಚರಿಸೋಣ.

*

ಜಗತ್ತಿನ ಆದಿದಂಪತಿ ಪಾರ್ವತೀ–ಪರಮೇಶ್ವರರು. ಅವರ ದಾಂಪ ತ್ಯವೇ ನಮಗೆ ಆದರ್ಶ. ಮಾತ್ರವಲ್ಲ, ಅವರ ಕುಟುಂಬವೂ ನಮಗೆ ದೊಡ್ಡ ಆದರ್ಶ. ಒಂದು ಕುಟುಂಬವಾಗಿ ಹೇಗೆ ಅನ್ಯೋನ್ಯವಾಗಿ ರಬೇಕೆಂಬುಕ್ಕೆ ಮೇಲ್ಪಂಕ್ತಿಯಾಗಿರುವುದೇ ಶಿವನ ಸಂಸಾರ. ಮನೆಯ ಯಜಮಾನ ಶಿವ, ಒಡತಿ ಪಾರ್ವತಿ, ಮಕ್ಕಳು ಗಣೇಶ–ಸುಬ್ರಹ್ಮಣ್ಯ; ಇರುವುದು ನಾಲ್ಕು ಮಂದಿಯಾದರೂ ಒಬ್ಬೊಬ್ಬರಲ್ಲೂ ಹಲವು ವಿಶಿಷ್ಟತೆಗಳು; ಜೊತೆಗೆ ಅಷ್ಟೇ ವೈರುದ್ಧ್ಯ ಗಳು! ಹೀಗಿದ್ದರೂ ಅದು ಅತ್ಯಂತ ಸೌಹಾರ್ದದ ಕುಟುಂಬ; ನೆಮ್ಮದಿಯ ಕುಟುಂಬ; ಆದರ್ಶ ಕುಟುಂಬ.

ಸಂಸಾರವನ್ನು ನೆಮ್ಮದಿಯಾಗಿ ನಿರ್ವಹಿಸುವುದರಲ್ಲಿ ಮನೆಯ ಒಡ ತಿಯ ಭೂಮಿಕೆ ತುಂಬ ದೊಡ್ಡದು. ಈ ಮಾತು ಶಿವನ ಸಂಸಾರಕ್ಕೂ ಅನ್ವಯವಾಗುತ್ತದೆಯೆನ್ನಿ! ಅವಳು ಶಿವ ಸಂಸಾರದ ಶಕ್ತಿ; ಅವಳ ಮತ್ತು ಶಿವನ ತಾದಾತ್ಮ್ಯ ಎಷ್ಟೆಂದರೆ ಬೆಳದಿಂಗಳು ಮತ್ತು ಚಂದ್ರನ ಸಂಬಂಧದಂತೆ, ಮಾತು ಮತ್ತು ಅರ್ಥಗಳಂತೆ – ಒಂದು ಇನ್ನೊಂದನ್ನು ಬಿಟ್ಟು ಕ್ಷಣವಾದರೂ ಇರಲಾರದಂಥ ಏಕತೆ. ತಾಯಿಯಾಗಿಯೂ ಅವಳ ವಾತ್ಸಲ್ಯ ಅಪೂರ್ವ. ಅವಳ ಕರುಣೆ–ವಾತ್ಸಲ್ಯಗಳು ಎಷ್ಟು ವಿಶಾಲವಾದುದುಎಂದರೆ ಇಡಿಯ ಲೋಕಕ್ಕೇ ತಾಯಿಯಾಗುವಷ್ಟು; ಅನ್ನಪೂರ್ಣೆಯಾಗುವಷ್ಟು. ಇಂಥ ಲೋಕಜನನಿಯ ಆರಾಧನೆಗೆ ಒದಗಿರುವ ಹಲವು ವ್ರತಗಳಲ್ಲಿ ತುಂಬ ಮುಖ್ಯವಾದುದು ಸ್ವರ್ಣಗೌರೀವ್ರತ.

ಗೌರೀ – ಇದು ಪಾರ್ವತಿಯ ಹಲವು ಹೆಸರುಗಳಲ್ಲಿ ಒಂದು. ಗೌರೀ ಎಂದರೆ ಬಿಳಿಯ ಬಣ್ಣ; ಬಂಗಾರದ ಬಣ್ಣ; ಸಂಪಿಗೆಯ ಬಣ್ಣ. ಜಗಜ್ಜನನಿಯಾದ ಪಾರ್ವತಿಯು ಸಂಹಾರಕಾರ್ಯದಲ್ಲಿ ಕೃಷ್ಣವರ್ಣದಲ್ಲಿ ಕಾಣಿಸಿಕೊಂಡು ‘ಕಾಳಿ’ಯಾಗುತ್ತಾಳೆ; ಸೌಭಾಗ್ಯಸಂಪತ್ತನ್ನು ಅನುಗ್ರಹಿಸುವಾಗ ‘ಗೌರಿ‘ಯಾಗುತ್ತಾಳೆ. ಇದು ಅವಳ ಸೌಮ್ಯರೂಪ, ಸುಂದರರೂಪ; ಭಕ್ತರಿಗೆ ಸುಲಭವಾಗಿ ಒಲಿಯಬಲ್ಲ ರೂಪ. ಹೀಗಾಗಿ ಸ್ವರ್ಣಗೌರೀವ್ರತಕ್ಕೆ ವಿಶೇಷ ಸ್ಥಾನವಿದೆ.

ಗೌರೀಹಬ್ಬದ ಜೊತೆಯಲ್ಲಿಯೇ ಗಣೇಶನ ಹಬ್ಬ ಬರುವುದೂ ಸ್ವಾರಸ್ಯಕರವಾದುದು. ಪಾರ್ವತಿಯು ತನ್ನ ಮಗನಾದ ಗಣೇಶನ ಜೊತೆಯಲ್ಲಿಯೇ ನಮ್ಮ ಮನೆಗಳಿಗೆ ಬರುತ್ತಾಳೆ. ಇದು ಒಂದು ವಿಧದಲ್ಲಿ ಜಗನ್ಮಾತೆ ಮಗನ ಜೊತೆಯಲ್ಲಿ ತನ್ನ ತವರಿಗೆ ಬಂದುಹೋಗುವಂತೆ; ಅವಳಿಗೆ ಈ ಜಗತ್ತೇ ಮನೆಯಲ್ಲವೆ? ಪಂಚಭೂತಾತ್ಮಕವಾದ ಪ್ರಕೃತಿಯೇ ಅವಳಲ್ಲವೆ? ಹೀಗಾಗಿ ಅವಳ ಆರಾಧನೆ ಎಂದರೆ ಅದು ಪ್ರಕೃತಿಯ ಶಕ್ತಿಗೂ ಸೌಂದರ್ಯಕ್ಕೂ ಸಲ್ಲುವ ಪೂಜೆಯೇ ಹೌದು.

ವ್ರತದ ಆಚರಣೆ ಹೇಗೆ?
ಭಾದ್ರಪದ ಮಾಸ ಶುಕ್ಲಪಕ್ಷದ ತದಿಗೆಯಂದು ಸ್ವರ್ಣಗೌರೀ ವ್ರತವನ್ನು ಆಚರಿಸಲಾಗುತ್ತದೆ. ಲೋಹದಲ್ಲಿ ಮಾಡಿದ ಪುತ್ಥಳಿಯಲ್ಲಿ, ಅಥವಾ ಕಳಶದಲ್ಲಿ ದೇವಿಯನ್ನು ಆಹ್ವಾನಿಸಿ ಪೂಜಿಸಬೇಕು. ಅರಿಸಿಣದಲ್ಲಿ ಮಾಡಿದ ಬಿಂಬಕ್ಕೆ ಪೂಜಿಸುವುದು ಶ್ರೇಷ್ಠ. ಮಣ್ಣಿನ ಮೂರ್ತಿರೂಪದಲ್ಲೂ ಅರ್ಚಿಸಬಹುದು. ಗೌರೀ–ಗಣೇಶ – ಇಬ್ಬರನ್ನೂ ಪೂಜಿಸಿ, ಬಳಿಕ ಗೊತ್ತಾದ ಶುಭದಿನದಂದು ನೀರಿನಲ್ಲಿ ವಿಸರ್ಜಿಸುವ ಸಂಪ್ರದಾಯ ಇರುವುದರಿಂದ ಅರಿಸಿಣ ಅಥವಾ ಮಣ್ಣಿನ ಮೂರ್ತಿಯನ್ನು ಪೂಜಿಸುವುದೇ ಹೆಚ್ಚು ಪ್ರಚಲಿತ.

ಈ ವ್ರತವನ್ನು ಗಂಡಸರೂ ಆಚರಿಸಬಹುದಾದರೂ ಹೆಣ್ಣುಮಕ್ಕಳೇ ಆಚರಿಸುವುದು ಹೆಚ್ಚು ರೂಢಿಯಲ್ಲಿದೆ. ಕುಟುಂಬದ ಕ್ಷೇಮಕ್ಕಾಗಿ ಸಂಕಲ್ಪಪೂರ್ವಕ ವ್ರತವನ್ನು ಆರಂಭಿಸುವುದು ರೂಢಿ. ಪೀಠದಲ್ಲಿ ಸ್ಥಾಪಿಸಿ, ಪ್ರಾಣಪ್ರತಿಷ್ಠೆಯನ್ನು ಮಾಡಿದ ದೇವಿಯ ಸ್ವರೂಪಕ್ಕೆ ಷೋಡಶೋಪಚಾರ ವಿಧಿಯಲ್ಲಿ ಜಗನ್ಮಾತೆಯನ್ನು ಪೂಜಿಸಬೇಕು. ಕೆಲವರು ಮಂತ್ರಪೂರ್ವಕವಾಗಿ ಪೂಜಿಸುವುದುಂಟು; ಮತ್ತೆ ಕೆಲವರು ಸಂಪ್ರದಾಯದ ಹಾಡುಗಳ ಮೂಲಕವೂ ಪೂಜಿಸುವುದುಂಟು. ಭಕ್ತಿ–ಶ್ರದ್ಧೆಗಳೇ ವ್ರತಾಚರಣೆಯಲ್ಲಿ ಮುಖ್ಯವಾದುದರಿಂದ ಅವರವರ ಕುಲಾಚಾರ–ದೇಶಾಚಾರಗಳಿಗೆ ತಕ್ಕಂತೆ ವ್ರತವನ್ನು ಆಚರಿಸಬೇಕು.

ಹಾಡುಗಳಿಂದಲೂ ಅಷ್ಟೋತ್ತರಶತನಾಮವಾಳಿಯಿಂದಲೂ ಗೌರಿಯನ್ನು ಪೂಜಿಸಿ, ಧೂಪ ದೀಪ ನೈವೇದ್ಯ ತಾಂಬೂಲ ಫಲ ದಕ್ಷಿಣೆ ನೀರಾಜನಗಳನ್ನು ಅರ್ಪಿಸಬೇಕು. ಬಳಿಕ ಪ್ರದಕ್ಷಿಣ ನಮಸ್ಕಾರಗಳನ್ನು ಸಲ್ಲಿಸಿ, ಇಷ್ಟಾರ್ಥಕ್ಕಾಗಿ ಭಕ್ತಿಯಿಂದ ಪ್ರಾರ್ಥಿಸಬೇಕು. ಸೌಭಾಗ್ಯದ ಸಂಕೇತವಾಗಿ ಮರದ ಬಾಗಿನವನ್ನು ಸ್ತ್ರೀಯರು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಾರೆ.

ಹದಿನಾರು ಗಂಟುಗಳುಳ್ಳ ದಾರವನ್ನು ಪೂಜಿಸಿ, ಅದನ್ನು ಕೈಯಲ್ಲಿ ಧರಿಸುವುದು ಪೂಜೆಯ ಮುಖ್ಯವಾದ ಆಚರಣೆಗಳಲ್ಲೊಂದು.

ದೋರಬಂಧನ
ಹದಿನಾರು ಗಂಟುಗಳ ಪವಿತ್ರ ದಾರದ ಒಂದೊಂದು ಗಂಟಿಗೆ ಕ್ರಮವಾಗಿ ಈ ನಾಮಗಳನ್ನು ಪಠಿಸುತ್ತ ಪೂಜಿಸಬೇಕು: ಸ್ವರ್ಣಗೌರೀ, ಮಹಾಗೌರೀ, ಕಾತ್ಯಾಯಿನೀ, ಕೌಮಾರೀ, ಭದ್ರಾ, ವಿಷ್ಣುಸೋದರೀ, ಮಂಗಳದೇವತಾ, ರಾಕೇಂದುವದನಾ, ಚಂದ್ರಶೇಖರಪ್ರಿಯಾ, ವಿಶ್ವೇಶ್ವರಪತ್ನೀ, ದಾಕ್ಷಾಯಿಣೀ, ಕೃಷ್ಣವೇಣೀ, ಭವಾನೀ, ಲೋಲೇಕ್ಷಣಾ, ಮೇನಕಾತ್ಮಜಾ, ಸ್ವರ್ಣಗೌರೀ.

ಕೈಗೆ ಕಟ್ಟಿಕೊಳ್ಳುವಾಗ ಹೇಳಿಕೊಳ್ಳಬೇಕಾದ ಸ್ತೋತ್ರ:

ಷೋಡಶಗ್ರಂಥಿಸಹಿತಂ ಗುಣೈಃ ಷೋಡಶಸಂಯುತಮ್‌|
ಧಾರಯಾಮಿ ಮಹಾದೇವಿ ಸೂತ್ರಾಂತೇ ಸರ್ವಮಂಗಳೇ||
ಭಕ್ತಪ್ರಿಯೇ ಮಹಾದೇವಿ ಸರ್ವೈಶ್ವರ್ಯಪ್ರದಾಯಿನಿ|
ಸೂತ್ರಂ ತೇ ಧಾರಯಿಷ್ಯಾಮಿ ಮಮಾಭೀಷ್ಟಂ ಸದಾ ಕುರು||

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT