ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣ ಸಾರ: ಮನ್ಮಥನಿಗೆ ಶಾಪವಿತ್ತ ಬ್ರಹ್ಮ

ಅಕ್ಷರ ಗಾತ್ರ

ಬ್ರಹ್ಮನ ಬೆವರಿನಿಂದ ಅಗ್ನಿಷ್ವಾತ್ತರು ಎಂಬ ಪಿತೃದೇವತೆಗಳೂ ಬರ್ಹಿಷದರು ಎಂಬ ಪಿತೃಗಣಗಳೂ ಜನಿಸಿದವು. ಈ ಸಂದರ್ಭದಲ್ಲಿ ದಕ್ಷಪ್ರಜಾಪತಿ ಬೆವರಿನಿಂದ ರತಿದೇವಿ ಜನಿಸಿದಳು. ಅವಳನ್ನು ನೋಡಿದ ಮರೀಚಿ ಸೇರಿದಂತೆ ಆರು ಜನ ಮುನಿಗಳು ತಮ್ಮ ಇಂದ್ರಿಯಗಳನ್ನು ನಿಗ್ರಹಿಸಿದರು. ಆದರೆ ಕ್ರತುಮುನಿ, ವಸಿಷ್ಠ , ಪುಲಸ್ತ್ಯ, ಅಂಗಿರಸ್ಸು ಕಾಮವಿಕಾರಕ್ಕೆ ತುತ್ತಾದರು. ಈ ನಾಲ್ವರ ವೀರ್ಯವು ಭೂಮಿ ಮೇಲೆ ಬಿದ್ದಾಗ, ಕ್ರತುಮುನಿಯಿಂದ ಸೋಮಪರು, ವಸಿಷ್ಠನಿಂದ ಸುಕಾಲಿಪಿತೃಗಳು, ಪುಲಸ್ತ್ಯನಿಂದ ಆಜ್ಯಪರು, ಮತ್ತು ಅಂಗಿರಸ್ಸು ವೀರ್ಯದಿಂದ ಹವಿಷ್ಮಂತ ಎಂಬ ನಾಲ್ಕು ವಿಧದ ಪಿತೃದೇವತೆಗಳು ಜನಿಸಿದರು. ಇವರೆಲ್ಲರೂ ಶ್ರಾದ್ಧದಲ್ಲಿನ ಕವ್ಯವನ್ನು ಸೇವಿಸುವವರು.

ಬ್ರಹ್ಮನ ಬೆವರಿನಿಂದ ಹುಟ್ಟಿದ ಅಗ್ನಿಷ್ವಾತ್ತರು ಎಂಬ ಪಿತೃದೇವತೆಗಳಿಗೆ ಸಂಧ್ಯೆಯೇ ತಾಯಿಯಾದಳು. ಏಕೆಂದರೆ, ಬ್ರಹ್ಮನ ಬೆವರಿನಲ್ಲಿ ಅವರು ಹುಟ್ಟಲು ಪ್ರೇರಣೆ ನೀಡಿದ್ದೆ ಸಂಧ್ಯೆಯಾಗಿದ್ದರಿಂದ ಅಗ್ನಿಷ್ವಾತ್ತರುಗಳಿಗೆ ತಾಯಿಯಾದಳು. ಅಲ್ಲದೆ, ಅವಳು ಶಂಕರನಿಂದ ಅನುಗ್ರಹಿಸಲ್ಪಟ್ಟವಳಾಗಿದ್ದರಿಂದ ಧರ್ಮಕರ್ಮಗಳಲ್ಲಿ ನಿರತಳಾಗಿ ಪರಿಶುದ್ಧಳಾಗಿದ್ದಳು. ಈ ಘಟನೆಗಳೆಲ್ಲ ನಡೆದ ನಂತರ ಮಹಾಶಿವ ಧರ್ಮಮಾರ್ಗದಿಂದ ನಡೆಯುವಂತೆ ಬ್ರಹ್ಮ ಮತ್ತವನ ಪರಿವಾರಕ್ಕೆ ಮತ್ತೆ ತಿಳಿವಳಿಕೆ ಹೇಳಿ ಅಂತರ್ಧಾನನಾದ.

ಶಿವನ ನಿರ್ಗಮನದ ನಂತರ ಜಗತ್ಪಿತಾಮಹನಾದ ಬ್ರಹ್ಮನ ಕೋಪ ಮನ್ಮಥನ ಕಡೆಗೆ ತಿರುಗಿತು. ತನ್ನನ್ನು ಮತ್ತು ತನ್ನ ಮಕ್ಕಳನ್ನು ಕಾಮವಿಕಾರಗೊಳಿಸಿ, ಶಿವನ ಮುಂದೆ ತಲೆತಗ್ಗಿಸುವಂತೆ ಮಾಡಿದ ಮನ್ಮಥನನ್ನು ಶಪಿಸಿದ. ‘ಮುಂದೊಂದು ದಿನ ನಿನ್ನ ಬಾಣಗಳು ಮಹಾದೇವನ ಮೇಲೆ ಎರಗಿದಾಗ, ಆ ಶಿವನ ಮೂರನೆ ನೇತ್ರಾಗ್ನಿಯಿಂದ ಸುಟ್ಟುಹೋಗು’ ಎಂದು ಶಾಪಕೊಟ್ಟ.

ಬ್ರಹ್ಮನ ಶಾಪವನ್ನು ಕೇಳಿ ಭಯಭೀತನಾದ ಮನ್ಮಥ ಕೂಡಲೇ ಬ್ರಹ್ಮನ ಮುಂದೆ ಪ್ರತ್ಯಕ್ಷನಾಗಿ ‘ಓ ಬ್ರಹ್ಮದೇವನೇ! ನೀನು ನ್ಯಾಯಮಾರ್ಗದಲ್ಲಿ ನಡೆಯುವವನು. ನನ್ನನ್ನು ಕ್ರೂರವಾಗಿ ಏಕೆ ಶಪಿಸಿದೆ? ನೀನು ಯಾವ ಕಾರ್ಯವನ್ನು ನನಗೆ ನಿಯೋಜಿಸಿರುವೆಯೋ ಅದನ್ನೇ ನಾನು ಮಾಡಿರುವೆ. ಇನ್ನಾವ ತಪ್ಪನ್ನೂ ನಾನು ಮಾಡಿಲ್ಲ. ಹೀಗಿದ್ದು ನೀನು ನನ್ನನ್ನು ಶಪಿಸಿದ್ದು ಸರಿಯಲ್ಲ. ನೀನೂ ಸೇರಿದಂತೆ ವಿಷ್ಣು, ರುದ್ರ ಎಲ್ಲರೂ ನನ್ನ ಬಾಣಗಳಿಗೆ ಅಧೀನರಾಗಿರುವರೆಂದು ನೀನೇ ಹೇಳಿದ್ದೆ. ಈ ನಿನ್ನ ಮಾತು ನಿಜವೋ ಅಲ್ಲವೋ ಎಂದು ಪರೀಕ್ಷಿಸಲು ನಿನ್ನ ಮೇಲೆ ಬಾಣ ಪ್ರಯೋಗಿಸಿದೆ ಅಷ್ಟೆ. ಆದುದರಿಂದ ನನ್ನಲ್ಲಿ ಅಪರಾಧವಿಲ್ಲ. ನಿರಪರಾಧಿಯಾದ ನನ್ನಲ್ಲಿ ಕ್ರೂರವಾದ ನಿನ್ನ ಶಾಪವು ಯುಕ್ತವಾದುದಲ್ಲ’ ಎಂದು ಪ್ರಲಾಪಿಸಿದ.

ಈ ರೀತಿ ಮನ್ಮಥ ದುಃಖಭರಿತನಾಗಿ ಹೇಳಿದ ಮಾತುಗಳನ್ನು ಕೇಳಿದ ಜಗದೊಡೆಯನಾದ ಬ್ರಹ್ಮನಿಗೆ ಒಂದಿಷ್ಟು ಕೋಪ ತಣ್ಣಗಾಯಿತು. ವಿನೀತನಾಗಿ ತನ್ನ ಮುಂದೆ ತಲೆತಗ್ಗಿಸಿ ನಿಂತಿದ್ದ ಮನ್ಮಥನನ್ನು ಉದ್ದೇಶಿಸಿ ಹೇಳಿದ ‘ಎಲೈ ಕಾಮನೇ! ಈ ಸಂಧ್ಯೆ ನನ್ನ ಪುತ್ರಿ. ಇವಳಲ್ಲಿ ನನಗೆ ಅನುರಾಗ ಬರುವಂತೆ ನೀನು ಬಾಣವನ್ನು ಪ್ರಯೋಗಿಸಿದ್ದು ಸರಿಯೇ? ಇದು ನ್ಯಾಯವಲ್ಲವಾದುದರಿಂದ ನಿನ್ನನ್ನು ಶಪಿಸಿದೆ. ಈಗ ನಾನು ಕೋಪವಿಲ್ಲದೆ ಶಾಂತನಾಗಿರುವೆ. ಈಗ ನಿನಗೆ ಹಿತವಾದುದನ್ನು ಹೇಳುವೆನು ಕೇಳು, ಸಂದೇಹವನ್ನು ಬಿಟ್ಟು ನಿಶ್ಚಿಂತನಾಗಿರು. ಭಯವನ್ನು ತ್ಯಜಿಸು’ ಎಂದು ಸಮಾಧಾನಿಸಿದ.

ಮಾತು ಮುಂದುವರೆಸಿದ ಬ್ರಹ್ಮ ‘ಎಲೈ ಮನ್ಮಥ! ಮುಂದೆ ನೀನು ಶಂಕರನ ತೃತೀಯ ನೇತ್ರಾಗ್ನಿಯಿಂದ ದಗ್ಧನಾಗುವೆ. ಆದರೆ ಸ್ವಲ್ಪ ಕಾಲಾನಂತರದಲ್ಲಿಯೇ ಶಿವನ ಕರುಣೆಯಿಂದ ಮತ್ತೆ ನಿನ್ನ ಶರೀರವನ್ನು ಪಡೆಯುವೆ. ಶಂಕರ ಯಾವಾಗ ಮದುವೆ ಮಾಡಿಕೊಳ್ಳುವನೋ, ಆಗ ಶಂಕರನೇ ನಿನಗೆ ಪುನಃ ಶರೀರವನ್ನು ಕರುಣಿಸುವನು’ ಎಂದು ಹೇಳಿದ ಬ್ರಹ್ಮ, ತನ್ನ ಮಾನಸಪುತ್ರರಾದ ಮರೀಚಿ ಮೊದಲಾದವರು ನೋಡುತ್ತಿರುವಂತೆಯೇ ಅಲ್ಲಿಂದ ಅಂತರ್ಧಾನನಾದ.

ಬ್ರಹ್ಮನ ಮಾತುಗಳನ್ನು ಕೇಳಿದ ಮನ್ಮಥ ಹರ್ಷಚಿತ್ತನಾದರೆ, ಬ್ರಹ್ಮನ ಮಾನಸಪುತ್ರರೂ ಸಂತೋಷಗೊಂಡು ತಮ್ಮ ತಮ್ಮ ಸ್ಥಾನಗಳಿಗೆ ತೆರಳಿದರು ಎಂಬಲ್ಲಿಗೆ ಸತೀಖಂಡದ ಮೂರನೆ ಅಧ್ಯಾಯ ಮುಕ್ತಾಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT