ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Ganesh Chaturthi | ಗೌರೀ ಗಣೇಶ: ಸಂಸ್ಕೃತಿಯ ಸಂಭ್ರಮ

Published 18 ಸೆಪ್ಟೆಂಬರ್ 2023, 5:16 IST
Last Updated 18 ಸೆಪ್ಟೆಂಬರ್ 2023, 5:16 IST
ಅಕ್ಷರ ಗಾತ್ರ

ಸಾಮಾನ್ಯವಾಗಿ ಗೌರೀವ್ರತವನ್ನು ಒಂದು ದಿನ ಮತ್ತು ಗಣೇಶಹಬ್ಬವನ್ನು ಅದರ ಮರುದಿನ ಆಚರಿಸುವುದು ವಾಡಿಕೆ. ಆದರೆ ಈ ಸಲ ಒಂದೇ ದಿನ ಗೌರೀ–ಗಣೇಶ ಹಬ್ಬ ಎರಡೂ ಬಂದಿವೆ. ನಾಡಿನಾದ್ಯಂತ ಹಲವರು ಎರಡನ್ನೂ ಒಟ್ಟಾಗಿ ಆಚರಿಸುತ್ತಿದ್ದಾರೆ. ಇಲ್ಲೂ ಒಂದು ಸಂದೇಶವನ್ನು ಕಾಣಬಹುದು. ಅಮ್ಮ ಮತ್ತು ಮಗ ಈ ಬಾರಿ ಜೊತೆಯಾಗಿ ಬರುತ್ತಿದ್ದಾರೆ. ಶಿವನ ಒಟ್ಟು ಕುಟುಂಬವೇ ಕೌಟುಂಬಿಕ ಸಾಮರಸ್ಯಕ್ಕೆ ಸೊಗಸಾದ ಉದಾಹರಣೆ. ಕೌಟುಂಬಿಕ ಮೌಲ್ಯಗಳು ಶಿಥಿಲವಾಗುತ್ತಿರುವ ಈ ಕಾಲದಲ್ಲಿ ಮತ್ತೆ ಮತ್ತೆ ಸ್ಮರಣೆಗೆ ತಂದುಕೊಳ್ಳಬೇಕಾದದ್ದು ಎಂದರೆ ಶಿವನ ಸಂಸಾರದ ಆದರ್ಶ. ಮನೆಯಲ್ಲಿ ಎಷ್ಟೆಲ್ಲ ವೈರುದ್ಧ್ಯಗಳು ಇದ್ದರೂ ಎಲ್ಲ ಸದಸ್ಯರೂ ಒಟ್ಟಾಗಿ ಇರಬಹುದು; ಸಂತೋಷದಲ್ಲೂ ಇರಬಹುದು; ಆದರ್ಶದಿಂದಲೂ ಇರಬಹುದು ಎಂಬುದಕ್ಕೆ ಒಳ್ಳೆಯ ಉದಾಹರಣೆ ಶಿವನ ಸಂಸಾರ.

ಶಿವ–ಪಾರ್ವತಿ ಎಂದರೆ ಜಗತ್ತಿನ ಆದಿದಂಪತಿಗಳು; ಜಗತ್ತಿಗೇ ತಂದೆ–ತಾಯಿ. ಅವರ ದಾಂಪತ್ಯ ಆದರ್ಶ ದಾಂಪತ್ಯಕ್ಕೆ ನಿದರ್ಶನ. ಮಾತು–ಅರ್ಥ ಹೇಗೆ ಒಂದನ್ನು ಬಿಟ್ಟು ಇನ್ನೊಂದು ಇರಲಾರದೋ ಹಾಗೆ ಅವರ ದಾಂಪತ್ಯವೂ ಸಾಮರಸ್ಯದಿಂದ ಬೆರೆತುಕೊಂಡಿದೆ. ಅರ್ಧನಾರೀಶ್ವರತತ್ತ್ವದ ಕಲ್ಪನೆಯಲ್ಲಿ ಇದರ ಸೊಗಸನ್ನು ಕಾಣಬಹುದು. ಶಿವನಿಗೆ ಹಲವು ಹೆಸರುಗಳಿರುವಂತೆ, ಪಾರ್ವತಿಗೂ ಹಲವು ಹೆಸರುಗಳು; ಒಂದೊಂದು ತತ್ತ್ವಕ್ಕೆ ಒಂದೊಂದು ಹೆಸರು. ಹೀಗೆಯೇ ‘ಗೌರೀ’ ಎಂಬುದೂ ಅವಳ ಹೆಸರು; ಬೆಳ್ಳಗಿರುವವಳು ಎಂದು ಇದರ ಅರ್ಥ; ಪರಿಪೂರ್ಣತೆಗೂ ಶುದ್ಧತೆಗೂ ಸಂಕೇತ. ದೇವಿಯ ಈ ಸ್ವರೂಪದ ಆರಾಧನೆಗೆ ಮೀಸಲಾದ ವ್ರತವೇ ಗೌರೀವ್ರತ; ಇದನ್ನು ‘ಸ್ವರ್ಣಗೌರೀವ್ರತ’ ಎಂದೂ ಕರೆಯುವುದುಂಟು. ದಾಂಪತ್ಯದ ಸುಖ–ಸಂತೋಷಗಳಿಗಾಗಿ ಇವಳನ್ನು ಪೂಜಿಸಲಾಗುತ್ತದೆ. 

ಗಣೇಶನ ಹಬ್ಬ: ಶಿವ–ಪಾರ್ವತಿಯರ ಮಗನೇ ಗಣೇಶ. ಇವನ ಹುಟ್ಟು–ಆಕಾರ–ಗುಣ–ಸ್ವಭಾವ – ಒಂದೊಂದು ಕೂಡ ಸಂಕೇತಮಯ. ಅವನ ಹುಟ್ಟಿನಲ್ಲಿ ಕಾಮಾತೀತ ತತ್ತ್ವವನ್ನೂ, ರೂಪದಲ್ಲಿ ಸೃಷ್ಟಿಮೂಲವಾದ ಓಂಕಾರ ತತ್ತ್ವವನ್ನೂ, ಗುಣದಲ್ಲಿ ವಿದ್ಯಾ ತತ್ತ್ವವನ್ನೂ, ಸ್ವಭಾವದಲ್ಲಿ ಹಾಸ್ಯ ತತ್ತ್ವವನ್ನೂ ಪ್ರಧಾನವಾಗಿ ಕಾಣಲಾದೀತು. ಹೀಗೆಂದು ಇಷ್ಟೇ ತತ್ತ್ವಗಳನ್ನು ಅವನು ಪ್ರತಿನಿಧಿಸುತ್ತಾನೆ ಎಂದೇನೂ ಅಲ್ಲ; ಗಣಪತಿಯು ಪ್ರತಿನಿಧಿಸದ ತತ್ತ್ವಗಳೇ ಇಲ್ಲ ಎಂದರೂ ತಪ್ಪಾಗದು. ನಮ್ಮ ಪರಂಪರೆಯಲ್ಲಿ ಗಣಪತಿಗೆ ಇರುವ ಸ್ಥಾನ ಅನನ್ಯವಾದದ್ದು. ಅವನ ಒಂದೊಂದು ತತ್ತ್ವಕ್ಕೆ ಒಂದೊಂದು ಹೆಸರು; ಅನಂತನಾಮಗಳು. ಹೀಗೆಯೇ ಸೃಷ್ಟಿಯಲ್ಲಿಯ ಯಾವ ಆಕಾರಕ್ಕೂ ಒಗ್ಗಬಲ್ಲ ದೇವರು ಅವನು.

ನಮ್ಮಲ್ಲಿ ಯಾವುದೇ ಶುಭಕಾರ್ಯದ ಆರಂಭಕ್ಕೂ ಮೊದಲು ಗಣಪತಿಯನ್ನು ಪೂಜಿಸುವುದು ವಾಡಿಕೆ; ನಮಗೆ ಒದಗಬಹುದಾದ ಎಲ್ಲ ವಿಘ್ನಗಳನ್ನೂ ದೂರಮಾಡಬಲ್ಲವನು ಅವನು. ಹೀಗಾಗಿಯೇ ಅವನು ವಿಘ್ನವಿನಾಶಕ. ನಮಗೆ ಬೇಕಾದ ಎಲ್ಲ ವರಗಳನ್ನೂ ದಯಪಾಲಿಸುವ ಕರುಣಾಮಯಿಯೂ ಅವನೇ. ಹೀಗಾಗಿಯೇ ಅವನು ನಮ್ಮ ಪಾಲಿಗೆ ವರಸಿದ್ಧಿವಿನಾಯಕ. ವಿದ್ಯೆಯನ್ನೂ ಬುದ್ಧಿಯನ್ನೂ, ಜೊತೆಗೆ ಎಲ್ಲ ಕಾರ್ಯಗಳ ಸಿದ್ಧಿಯನ್ನೂ ಕೊಡಬಲ್ಲವನು ಅವನೇ.

ಗಣೇಶನ ಶರೀರಾಕೃತಿಯೂ ಅಪೂರ್ವ ಸಂಕೇತಗಳಿಂದ ಕೂಡಿದೆ. ಅವನದ್ದು ಆನೆಯ ಮುಖ. ಆನೆ ಎಂಬುದು ಧೀಶಕ್ತಿಗೂ ದೇಹಶಕ್ತಿಗೂ ಸಂಕೇತ. ಅವನ ಸೊಂಡಿಲು ಸಾಕ್ಷಾತ್‌ ಪ್ರಣವದ ಆಕಾರದಲ್ಲಿದೆ; ಅವನ ಕಿವಿಗಳು ಶ್ರುತಿಗಳಿಗೂ ಶ್ರವಣಶಕ್ತಿಯ ಧಾರಣಕ್ಕೂ ಸಂಕೇತ. ಅವನ ದೊಡ್ಡದಾದ ಹೊಟ್ಟೆಯು ಇಡಿಯ ಬ್ರಹ್ಮಾಂಡವನ್ನೇ ಸೂಚಿಸುತ್ತದೆ. ಅದಕ್ಕೆ ಸುತ್ತಿಕೊಂಡಿರುವ ಹಾವು ಯೋಗದ ಕುಂಡಲಿನೀಶಕ್ತಿಯನ್ನು ಸಾರುತ್ತದೆ. ಅವನ ವಾಹನ ಇಲಿ. ಇಲಿಯನ್ನು ವಾಹನವಾಗಿ ಸ್ವೀಕರಿಸಿರುವುದು ಅವನ ಕಾರುಣ್ಯಗುಣಕ್ಕೂ ಲೀಲಾತತ್ತ್ವಕ್ಕೂ ಸಂಕೇತ. ಕೈಯಲ್ಲಿ ಹಿಡಿದಿರುವ ಮೋದಕ ಅವನ ಆನಂದಸ್ವರೂಪವನ್ನು ಎತ್ತಿಹಿಡಿಯುತ್ತದೆ. ಹೀಗೆ ಅನಂತತತ್ತ್ವಗಳ ಸಾಕಾರ ಮೂರ್ತಿ ನಮ್ಮ ವಿನಾಯಕ.

ಗಣೇಶನ ಪೂಜೆಯೂ ಬಹಳ ಸರಳವಾಗಿಯೂ ಮಾಡಬಹುದು. ಅವನ ಪೂಜೆಗೆ ಹೂವುಗಳಷ್ಟೆ ಅಲ್ಲ; ಗರಿಕೆಯ ಹುಲ್ಲೂ ಒದಗುತ್ತದೆ. ಮಾತ್ರವಲ್ಲ, ಗರಿಕೆಯೇ ಅವನಿಗೆ ಅತ್ಯಂತ ಪ್ರಿಯ. ಹೀಗೆ ಸುಲಭವಾದ ಪೂಜೆಗೆ ಒಲಿಯಬಲ್ಲ ದೇವರು ಗಣೇಶ. ಮಕ್ಕಳು, ದೊಡ್ಡವರು, ಸಂಸಾರಿಗಳು, ಸನ್ಯಾಸಿಗಳು, ಗಂಡಸರು, ಹೆಂಗಸರು – ಎಲ್ಲರ ಪೂಜೆಗೂ ದಕ್ಕುತ್ತಾನೆ. ಅವನ ವಿದ್ಯಾವಿನೋದಗಳೂ ನಮಗೆ ಎಂದಿಗೂ ಸ್ಫೂರ್ತಿ. ಮಹಾಭಾರತದ ಲಿಪಿಕಾರ ಅವನು. ಹೆತ್ತವರನ್ನೇ ಜಗತ್ತು ಎಂದು ಪೂಜಿಸಿ, ಆದಿದಂಪತಿಗಳಿಂದ ವರವನ್ನು ಸಂಪಾದಿಸಿದ ಜ್ಞಾನಿ ಅವನು. 

ಗಣೇಶನ ಕಲ್ಪನೆಯಲ್ಲಿ ನಮ್ಮ ಸಂಸ್ಕೃತಿ ಸಾಧಿಸಿರುವ ಧಾರ್ಮಿಕತೆ ಮತ್ತು ಆಧ್ಯಾತ್ಮಿಕತೆಗಳ ಸಾಮರಸ್ಯ ಹರಳುಗಟ್ಟಿದೆ; ಭಾವಶ್ರೀಮಂತಿಕೆಯೂ ಕಲಾತತ್ತ್ವಗಳೂ ಅದರಲ್ಲಿ ಸೇರಿಕೊಂಡಿವೆ. ಕಾಲಾನಂತರದಲ್ಲಿ ಸಾಮಾಜಿಕ ಸಾಮರಸ್ಯಗಳೂ ಜೊತೆಯಾಗಿ, ಗಣೇಶನ ಕಲ್ಪನೆ ವೈಶ್ವಿಕತತ್ತ್ವವಾಗಿ ಸ್ಥಿರಗೊಂಡಿದೆ. ಕೆಲವರು ಆಗಾಗ ಭಾರತೀಯ ಧಾರ್ಮಿಕ ಪರಂಪರೆಯನ್ನು ಟೀಕಿಸುತ್ತಿರುತ್ತಾರೆ. ಅವರ ಈ ಸಂಕುಚಿತ ಬುದ್ಧಿಗೆ ಕಾರಣ ಎಂದರೆ ನಮ್ಮ ಪುರಾಣಪ್ರಪಂಚದ ಸರಿಯಾದ ತಿಳಿವಳಿಕೆ ಇಲ್ಲದಿರುವುದೇ ಹೌದು. ಪುರಾಣಗಳ ಸಂಕೇತಗಳ ಅರಿವು ನಮಗೆ ಒದಗಿದರೆ, ಆಗ ನಮ್ಮ ‘ಮಿಥ್‌’ಗಳಿಗೂ ನಮ್ಮ ಜೀವನದ ಸತ್ಯ–ಶಿವ–ಸೌಂದರ್ಯಗಳಿಗೂ, ಸಂಸ್ಕೃತಿಯ ವೈವಿಧ್ಯಕ್ಕೂ, ವಿಶ್ವಸಾಮರಸ್ಯದ ಕಾಣ್ಕೆಗೂ ಇರುವ ನಂಟು ಸ್ಪಷ್ಟವಾಗುತ್ತದೆ. ಗಣೇಶನ ಕಲ್ಪನೆಯಲ್ಲಿ ಈ ಎಲ್ಲ ತತ್ತ್ವಗಳನ್ನೂ ಕಾಣಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT