ಹೊಸತನ್ನು ಸ್ವಾಗತಿಸುವ ಕ್ಷಣ ಮತ್ತೊಮ್ಮೆ ಬಂದಿದೆ. ನಾವು ಅದನ್ನು ಸಂತೋಷದಿಂದ ಸ್ವೀಕರಿಸಬೇಕಷ್ಟೆ!

ಹಳೆಯದು ಮರೆಯಾಗುತ್ತಲೇ ಇರುತ್ತದೆ; ಹೊಸತಾಗಿರುವುದು ಹುಟ್ಟುತ್ತಲೇ ಇರುತ್ತದೆ. ಆದರೆ ಈ ಬದಲಾವಣೆ ಸುಲಭವಾಗಿ ನಮ್ಮ ಗಮನಕ್ಕೆ ಬರುವುದಿಲ್ಲ. ಇದನ್ನು ನಾವು ಪ್ರಕೃತಿಯ ಜಾಡನ್ನು ಹಿಡಿದು ಕಂಡುಕೊಳ್ಳಬಹುದು. ಒಣಗಿದ ಮರವೊಂದು ಮತ್ತೆ ಚಿಗುರನ್ನು ಪಡೆಯವುದು ನಮ್ಮ ಕಣ್ಣಿಗೆ ಗೋಚರಿಸುತ್ತದೆ; ಆ ಚಿಗುರು ಮತ್ತೆ ಬಲಿತು, ಒಣಗಿ ಮತ್ತೆ ಉದುರುತ್ತವೆ. ಪ್ರಕೃತಿಯ ಈ ಏಳು–ಬೀಳುಗಳ ಚಕ್ರಕ್ಕೂ ಯುಗಾದಿಯ ಹಬ್ಬಕ್ಕೂ ನಂಟಿರುವುದು ಸ್ವಾರಸ್ಯಕರವಾಗಿದೆ.

ಯುಗದ ಆದಿ ‘ಯುಗಾದಿ’. ಆದಿ ಎಂದರೆ ಮೊದಲು. ‘ಮೊದಲು’ ಎಂಬುದು ಮೊದಲಾಗಬೇಕು ಎಂದರೆ ಇನ್ನೊಂದು ಕೊನೆಯನ್ನು ಕಂಡಿರಬೇಕಾಗುತ್ತದೆ. ಆದರೆ ಆ ಕೊನೆ, ದಿಟವಾದ ಕೊನೆಯಲ್ಲ; ಇನ್ನೊಂದು ಮೊದಲಿನ ಆರಂಭವೇ ಈ ಕೊನೆ. ಹೀಗೆ ಕೊನೆ–ಮೊದಲು–ಕೊನೆಗಳ ಚಕ್ರವೇ ಯುಗಾದಿಯ ಕಲ್ಪನೆಯಲ್ಲಿರುವುದು. ಕೊನೆಯಾಯಿತೆಂದು ಕುಗ್ಗಬೇಕಿಲ್ಲ; ಮೊದಲುಗೊಂಡಿತು ಎಂದು ಹಿಗ್ಗಬೇಕಿಲ್ಲ. ಒಂದು ಇನ್ನೊಂದರಂತೆ ಈ ಚಕ್ರದ ಏಳುಬೀಳುಗಳು ನಿರಂತರವಾಗಿರುತ್ತವೆ. ಈ ನಿರಂತರ ಸುತ್ತಾಟವನ್ನು ನಾವು ಗಮನಿಸಬೇಕು, ಗಮನಿಸಿ ಒಪ್ಪಿಕೊಳ್ಳಬೇಕು. ಇದೇ ಯುಗಾದಿಯ ಸಂದೇಶ.

ಸೃಷ್ಟಿಯಲ್ಲಿ ಇಂಥ ಹಲವು ಕೊನೆ–ಮೊದಲುಗಳ ಚಕ್ರ ಸುತ್ತುತ್ತಲೇ ಇರುತ್ತದೆ; ಹಗಲು–ರಾತ್ರಿ, ಋತುಗಳು – ಹೀಗೆ. ಹೀಗೆಯೇ ನಮ್ಮ ಜೀವನದಲ್ಲೂ ಹಲವು ವಿವರಗಳು ಸುತ್ತುತ್ತಲೇ ಇರುತ್ತವೆ: ಸುಖ–ದುಃಖ, ಸೋಲು–ಗೆಲವು, ಹುಟ್ಟು–ಸಾವು. ಇವನ್ನು ಸಮನಾಗಿ ಸ್ವೀಕರಿಸಬೇಕೆಂಬ ವಿವೇಕಕ್ಕೆ ನಮ್ಮನ್ನು ಸಜ್ಜುಗೊಳಿಸುತ್ತದೆ, ಯುಗಾದಿಯ ಸಂದೇಶ.

ಸೃಷ್ಟಿಯ ಮೊದಲ ದಿನವೇ ಯುಗಾದಿ ಎಂಬ ಕಲ್ಪನೆಯೂ ಇದೆ. ಸೃಷ್ಟಿ ಎಂದರೆ ನಾಲ್ಕು ಯುಗಗಳನ್ನು ಒಳಗೊಂಡ ಮಹಾಸೃಷ್ಟಿಯೂ ಆಗುತ್ತದೆ; ನಮ್ಮ ಜೀವನದಲ್ಲಿ ತೋರಿಕೊಳ್ಳುತ್ತಿರುವ ಒಂದೊಂದು ಕ್ಷಣವೂ ಸೃಷ್ಟಿಯೇ ಎನಿಸಿಕೊಳ್ಳುತ್ತದೆ. ಹೀಗೆ ಒಂದೊಂದು ಕ್ಷಣವನ್ನೂ ಹಬ್ಬದಂತೆ ಸವಿಯಬೇಕು, ಸಂಭ್ರಮಿಸಬೇಕು ಎಂಬುದೇ ಯುಗಾದಿಯ ಸಂದೇಶ.

‘ಯುಗ’ ಎಂದರೆ ಜೋಡಿ ಎಂಬ ಅರ್ಥವೂ ಇದೆ; ಸುಖ–ದುಃಖ, ಒಳಿತು–ಕೆಡಕು ಎಂಬ ಭಾವಗಳೂ ಕತ್ತಲೆ–ಬೆಳಕು, ಹುಟ್ಟ–ಸಾವು ಎಂಬ ಜೋಡಿಗಳೂ ಸೃಷ್ಟಿನಿಯಮದ ಅನಿವಾರ್ಯ ತಥ್ಯಗಳು ಎಂಬುದನ್ನು ಈ ‘ಯುಗ’ದ ಕಲ್ಪನೆಯಲ್ಲಿ ಕಾಣಬಹುದು. ನೇಗಲಿನ ಮತ್ತು ಬಂಡಿಯ ನೊಗಕ್ಕೂ ‘ಯುಗ’ ಎಂದು ಹೆಸರು; ಇದು ಜೀವನಪಯಣವನ್ನೂ ಸಂಕೇತಿಸುತ್ತದೆ; ಜೀವನಾಧಾರವಾದ ಕೃಷಿಯನ್ನೂ ಸಂಕೇತಿಸುತ್ತದೆ. ಯುಗಗಳ ಕಲ್ಪನೆ, ಸೃಷ್ಟಿಚಕ್ರ, ಪ್ರಕೃತಿಯ ವಿನ್ಯಾಸ, ಕೃಷಿ – ಇವಾವುದೂ ಏಕಮುಖ ಸಂಚಾರವಲ್ಲ; ಇವೆಲ್ಲವೂ ಸುಖ–ದುಃಖ, ಹುಟ್ಟು–ಸಾವು, ರಾತ್ರಿ–ಹಗಲು – ಇಂಥ ಜೋಡಿಯ ಸಾಮರಸ್ಯದ ಕುಣಿತಗಳೇ ಹೌದು ಎಂಬುದು ಎದ್ದುಕಾಣುವ ವಿವರ. ಜೀವನಚಕ್ರದ ಓಟ ನಿರಂತರವಾಗಿರಬೇಕು; ಕತ್ತಲೆ–ಬೆಳಕುಗಳು ಈ ಓಟಕ್ಕೆ ಅಡ್ಡಿಗಳನ್ನಾಗಿಸಿಕೊಳ್ಳಬಾರದು ಎಂಬ ಪ್ರಕೃತಿಯ ಪಾಠವೇ ಯುಗಾದಿಯ ಸಂದೇಶವೂ ಆಗಿದೆ.

ಯುಗಾದಿಯಂದು ಪಂಚಾಗಶ್ರವಣವನ್ನು ಮಾಡುವುದುಂಟು. ನಮ್ಮ ಮುಂದಿರುವ ವರ್ಷದಲ್ಲಿ ಪ್ರಕೃತಿ ಹೇಗಿರುತ್ತದೆ ಎಂಬ ವಿವರಗಳೂ ಪಂಚಾಂಗದಲ್ಲಿರುತ್ತವೆ; ನಮ್ಮ ಮುಂದಿನ ದಿನಗಳ ಭವಿಷ್ಯ ಹೇಗಿರುತ್ತವೆ ಎಂಬ ವಿವರಗಳೂ ಇರುತ್ತವೆ. ಈ ಭವಿಷ್ಯಗಳು ವಾಸ್ತವದಲ್ಲಿ ನಡೆಯುತ್ತದೆಯೋ, ಇಲ್ಲವೋ – ಅದು ಇಲ್ಲಿ ಮುಖ್ಯವಲ್ಲ; ಈ ಕಲಾಪ ಪ್ರತಿನಿಧಿಸುವ ಸಾಂಕೇತಿಕತೆ ಬಹಳ ಮುಖ್ಯ. ಪ್ರಕೃತಿಯ ವಿವರಗಳನ್ನೂ ನಮ್ಮ ಶಕ್ತಿ–ಮಿತಿಗಳನ್ನೂ ಅರಿತುಕೊಂಡು, ಎರಡನ್ನೂ ಸಮನ್ವಯದಿಂದ ಅಳವಡಿಸಿಕೊಂಡು, ನಮ್ಮ ಜೀವನವನ್ನು ಸುಂದರವಾಗಿಸಿಕೊಳ್ಳುವ ವಿವೇಕ ನಮ್ಮಲ್ಲಿಯೇ ಇದೆ ಎಂಬುದನ್ನು ಯುಗಾದಿಯ ಸಂದೇಶ ಸಾರುತ್ತಿದೆ. ಬೇವು–ಬೆಲ್ಲಗಳ ಸಾಂಕೇತಿಕತೆಯೂ ಇದೇ: ನಮಗೆ ಪೂರಕ ಎನಿಸುವಂಥವೂ, ಮಾರಕ ಎನಿಸುವಂಥವೂ – ಎರಡೂ ನಮ್ಮ ಮುಂದಿವೆ. ಇವನ್ನು ನಮ್ಮ ಹೇಗೆ ಗ್ರಹಿಸಿ, ಸ್ವೀಕರಿಸುತ್ತೇವೆ – ಎಂಬುದರಲ್ಲಿಯೇ ನಮ್ಮ ಭವಿಷ್ಯ ನಿರ್ಧಾರವಾಗುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.