ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷತ್ರಿಯರ ನವರಾತ್ರಿ ವೈಭವ ‘ಪಾಚಿ ಫುಲಾರೊ’

Last Updated 23 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ
ADVERTISEMENT
""
""

ನವರಾತ್ರಿಯೆಂದರೆ ಶಕ್ತಿದೇವತೆಯ ಪೂಜೆ. ಉತ್ತರ ಭಾರತದಲ್ಲಿ, ದಕ್ಷಿಣದಲ್ಲಿ ಇದನ್ನು ಆಚರಿಸುವ ರೀತಿ ವಿಭಿನ್ನವಾಗಿದ್ದರೂ ಆರಾಧನೆ ನಡೆಯುವುದು ದೇವಿಗೇ. ಈ ನಿಟ್ಟಿನಲ್ಲಿ ಹುಬ್ಬಳ್ಳಿಯ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ(ಎಸ್.ಎಸ್.ಕೆ) ಸಮುದಾಯದವರು ನವರಾತ್ರಿ ಅಂಗವಾಗಿ ಆಚರಿಸುವ ‘ಪಾಚಿ ಫುಲಾರೊ’ ಹಲವು ವೈಶಿಷ್ಟ್ಯಗಳಿಂದ ಕೂಡಿ ಬೆರಗು ಮೂಡಿಸುತ್ತದೆ.

ಏನಿದು ಪಾಚಿ ಫುಲಾರೊ?

ವಿಶ್ವನಾಥ್ ಇರಕಲ್

ಈ ಸಮುದಾಯದವರು ಆರಾಧಿಸುವ ತುಳಜಾಭವಾನಿ, ಅಂಬಾಭವಾನಿ ಹಾಗೂ ದುರ್ಗಾದೇವಿ ದೇಗುಲಗಳ ಒಳಭಾಗಗಳಲ್ಲಿ ನವರಾತ್ರಿಯ ಐದನೇ ದಿನ ಸಾಲು ಸಾಲಾಗಿ ಬಗೆ ಬಗೆಯ ತಿನಿಸುಗಳನ್ನು ಕಟ್ಟಲಾಗುತ್ತದೆ. ಖಾರದ ಪೂರಿ, ಸಿಹಿ ಪೂರಿ, ಕರ್ಚಿಕಾಯಿ, ಹೋಳಿಗೆ ಮುಂತಾದವು ಅಲ್ಲಿರುತ್ತವೆ. ಇವುಗಳನ್ನು ದೇವಿಗೆ ನೈವೇದ್ಯವಾಗಿ ಅರ್ಪಿಸುವ ಸಂಪ್ರದಾಯವಿದೆ. ಇದೇ ‘ಪಾಚಿ ಫುಲಾರೊ’. ಕೆಲವರ ಮನೆಗಳ ಪೂಜಾ ಮಂದಿರದಲ್ಲಿಯೂ ವಿಜಯದಶಮಿಯ ಮರುದಿನದವರೆಗೂ ಈ ಖಾದ್ಯಗಳ ಸಾಲು ರಾರಾಜಿಸುತ್ತಿರುತ್ತದೆ.‌ ದಶಮಿಯ ಮರುದಿನ ಇದನ್ನು ತೆಗೆಯಲಾಗುತ್ತದೆ.

ಒಂಬತ್ತು ದಿನ ಒಂಬತ್ತು ವಿಶೇಷ: ಗುಜರಾತ್ ಹಾಗೂ ರಾಜಸ್ತಾನ ಪ್ರಾಂತ್ಯಗಳಿಂದ ಕರ್ನಾಟಕಕ್ಕೆ ಬಂದಿರುವ ಈ ‘ಸಾವಜಿ’ ಸಮುದಾಯದವರ ನವರಾತ್ರಿ ಉತ್ಸವವು ಉತ್ತರ ಭಾರತೀಯರ ದುರ್ಗಾದೇವಿಯ ಆರಾಧನೆಯನ್ನು ನೆನಪಿಸುತ್ತದೆ.

ನವಧಾನ್ಯಗಳನ್ನು ಚಿಕ್ಕ ಪಾತ್ರೆಯಲ್ಲಿ‌ ಹಾಕಿ ಘಟಸ್ಥಾಪನೆ ಮಾಡುವುದರೊಂದಿಗೆ ಹಬ್ಬದ ಸಂಭ್ರಮಕ್ಕೆ ಚಾಲನೆ ಸಿಗುತ್ತದೆ. ಈ ಧಾನ್ಯಗಳಿಂದ ಸಸಿಗಳು ಚಿಗುರೊಡೆಯುವ ಪರಿಯನ್ನು ಕುಟುಂಬದ ನೆಮ್ಮದಿ ಹಾಗೂ ಪ್ರಗತಿಯ ಸಂಕೇತವಾಗಿ ಕಾಣಲಾಗುತ್ತದೆ. ಮನೆಗಳಲ್ಲಿ ನವದುರ್ಗೆಯರ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ದಸರೆಯ ಕೊನೆಯ ಮೂರು ದಿನಗಳಾದ ಅಷ್ಟಮಿ, ನವಮಿ ಹಾಗೂ ದಶಮಿಯ ಪೂಜಾ ಕೈಂಕರ್ಯಗಳು ಬಹು ವಿಜೃಂಭಣೆಯಿಂದ ಜರುಗುತ್ತವೆ.

ಹುಬ್ಬಳ್ಳಿಯ ದಾಜಿೂಬಾನ್ ಪೇಟೆಯಲ್ಲಿನ ದ್ಯಾಮವ್ವ-ದುರ್ಗವ್ವ ದೇವಸ್ಥಾನದಲ್ಲಿ ಬೆಳೆಸಿರುವ ನವಧಾನ್ಯಗಳ ಸಸಿ.

ಟಗರು ಕಾಳಗ: ‘ಹುಬ್ಬಳ್ಳಿಯ ಕಮರಿಪೇಟೆಯಲ್ಲಿ ಐದು ಸಾವಿರಕ್ಕೂ ಹೆಚ್ಚಿನ‌ ‘ಸಾವಜಿ’ಗಳ ಮನೆಗಳಿದ್ದವು. ಅವರೆಲ್ಲರಿಗೂ ಖಂಡೆ ಪೂಜೆ (ಮಹಾನವಮಿ)ಗಾಗಿ ಟಗರು, ಕುರಿಗಳನ್ನು ಖರೀದಿ‌ಸುವುದು ಪ್ರತಿಷ್ಠೆಯಾಗಿತ್ತು. ಈ ಟಗರುಗಳ ಕಾಳಗ ವೀಕ್ಷಿಸಲು ಸಾವಿರಾರು‌ ಜನರು ಸೇರುತ್ತಿದ್ದರು. ನಾನಾ ಕಾರಣಗಳಿಗಾಗಿ ಈ‌ಗ ಈ ಆಚರಣೆ ಇಲ್ಲ’ ಎನ್ನುತ್ತಾರೆ ಸಮಾಜದ ಹಿರಿಯರಾದ ವಿಶ್ವನಾಥ್ ಇರಕಲ್.

‘ಹುಬ್ಬಳ್ಳಿ ಮಾತ್ರವಲ್ಲ ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ನಮ್ಮ ಸಮುದಾಯದವರು ಇದ್ದಾರೆ. ಸಮಾಜದ ಸಂಪ್ರದಾಯಗಳನ್ನು ಕಾಲಕ್ಕೆ ತಕ್ಕಂತೆ ಸಣ್ಣಪುಟ್ಟ ಬದಲಾವಣೆ ಮಾಡಿ ಆಚರಿಸುತ್ತಿದ್ದೇವೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT