ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈವಿಧ್ಯ | ಸಾವಿನ ಬದುಕು

Last Updated 24 ಜೂನ್ 2020, 19:30 IST
ಅಕ್ಷರ ಗಾತ್ರ

‘ನಾನು ಬದುಕಿಗೆಂದೆ: ‘‘ಸಾವಿನ ದನಿ ಕೇಳಬೇಕು.’’

‘ಆಗ ಬದುಕು ತನ್ನ ಧ್ವನಿಯನ್ನು ಕೊಂಚ ಎತ್ತರಿಸಿ ಹೇಳಿತು: ‘‘ಇದೀಗ ನೀನು ಅದನ್ನು ಆಲಿಸುತ್ತಿರುವೆ.’’

ಖಲೀಲ್ ಗಿಬ್ರಾನ್‍ನ ಸಾವಿನ ಮೀಮಾಂಸೆ ಅವನ ಇತರ ಎಲ್ಲ ವಿಚಾರಗಳಂತೆ ದಾರ್ಶನಿಕ ನೆಲೆಯಲ್ಲಿ ಪ್ರಾಕಾಶಿಸುತ್ತದೆ. ಅವರೆಡೂ ಒಂದೇ ಎಂಬರ್ಥದಲ್ಲಿ ಅವನು ಪ್ರತಿಪಾದಿಸುತ್ತಾನೆ. ಅವನ ಒಂದು ಪ್ರಸಿದ್ಧ ಕೃತಿಯಾದ ‘ಮುರಿದ ರೆಕ್ಕೆಗಳು’ (The Broken Wings) ಒಂದು ಸಾವಿನ ದೃಶ್ಯವನ್ನು ನಮ್ಮ ಮುಂದಿಡುತ್ತದೆ.

ಕಥಾನಾಯಕಿ ಸಲ್ಮಾ ಕರಾಮಿ ಮಗುವೊಂದಕ್ಕೆ ಜನ್ಮ ನೀಡುತ್ತಾಳೆ. ಆದರೆ ಅದು ಕೆಲವೇ ನಿಮಿಷಗಳಲ್ಲಿ ಸಾವನ್ನಪ್ಪುತ್ತದೆ. ಸ್ವಲ್ಪ ಹೊತ್ತಿನಲ್ಲಿ ಆಕೆಯೂ ಮರಣ ಹೊಂದುತ್ತಾಳೆ. ಆ ಮಗುವಿನ ಸಾವನ್ನು ಕುರಿತು ಅವನು ನೀಡುವ ಕಾವ್ಯಾತ್ಮಕ ಚಿತ್ರಣ ಸೊಗಸಾಗಿದೆ. ‘ಅವನು ಮುಂಜಾವಿನಲ್ಲಿ ಹುಟ್ಟಿ, ಉದಯದಲ್ಲಿ ಮರಣ ಹೊಂದಿದೆ . . . ಅವನು ಒಂದು ಆಲೋಚನೆಯಂತೆ ಹುಟ್ಟಿ ನಿಟ್ಟುಸಿರಿನಂತೆ ಸತ್ತು, ನೆರಳಿನಂತೆ ಮರೆಯಾದ . . . ರಾತ್ರಿಯ ಅಂತ್ಯದೊಂದಿಗೆ ಆರಂಭವಾದ ಅವನ ಬದುಕು, ದಿನದ ಆರಂಭದಲ್ಲಿ ಅಂತ್ಯಗೊಂಡಿತು; ಕತ್ತಲಿನ ಕಣ್ಣು ಹನಿಸಿದ ಹಿಮಮಣಿ ಬೆಳಕ ಸ್ಪರ್ಶದಿಂದ ಆವಿಯಾದಂತೆ . . . ಮುತ್ತೊಂದನ್ನು ದಡಕ್ಕೆ ಎಸೆದ ತೆರೆ ಹಿಂದೆ ಸರಿವಾಗ ಮತ್ತೆ ಅದನ್ನು ತನ್ನ ಒಡಲಾಳಕ್ಕೆ ಸೆಳೆದುಕೊಂಡಂತೆ . . .’

ಗಿಬ್ರಾನನ ದೃಷ್ಟಿಯಲ್ಲಿ ನದಿ ಮತ್ತು ಸಮುದ್ರಗಳಂತೆ ಬದುಕು ಮತ್ತು ಸಾವು ಒಂದೇ. ಮತ್ತೂ ಮುಂದೆ ಸರಿದು ನೋಡುವಾಗ ಗಿಬ್ರಾನ್ ಬದುಕಿಗಿಂತ ಸಾವನ್ನೇ ಸಂಭ್ರಮಿಸುತ್ತಾನೇನೋ ಎಂಬ ಸಂದೇಹ ಕಾಡದಿರದು.

ಈ ವಾಕ್ಯಗಳನ್ನು ಗಮನಿಸಿ: ‘ನೀವು ಮೌನದ ನದಿಯಿಂದ ಪಾನ ಮಾಡಿದಾಗ ಮಾತ್ರ ಹಾಡಲು ಸಾಧ್ಯ. ನೀವು ಪರ್ವತದ ತುದಿ ತಲುಪಿದಾಗ ಮಾತ್ರ ನೀವು ಆರೋಹಣ ಆರಂಭಿಸಿರುವಿರಿ ಮತ್ತು ನೀವು ಮಣ್ಣಿನಲ್ಲಿ ಕರಗಿಹೋದಾಗ ಮಾತ್ರ ನಿಜವಾದ ನರ್ತನ ಮಾಡುವಿರಿ.’

ಗಿಬ್ರಾನನ ಕೃತಿಗಳನ್ನು ಗಮನಿಸುವಾಗ ಸಾವನ್ನು ಕುರಿತಂತೆ ಅವನ ಚಿಂತನೆಯನ್ನು ಹೀಗೆ ಕ್ರೋಡೀಕರಿಸಬಹುದು: ಸಾವು ಬದುಕನ್ನು ಕಬಳಿಸುತ್ತದೆ; ಸಾವು ಒಂದು ಮುಕ್ತಿ-ಬಿಡುಗಡೆ; ಸಾವು-ಬದುಕು ಒಂದೇ; ಸಾವಿನಲ್ಲಿ ಅತೀಂದ್ರಿಯ ಅಂಶವಿದೆ; ಸಾವು ಸಹಜ ಅನಿವಾರ್ಯ; ಸಾವು ಸಾರ್ವತ್ರಿಕ; ಸಾವು ಒಂದು ಸೋಜಿಗ ಮತ್ತು ಸಾವು ಒಂದು ಜಾಗೃತಿ.

ಅವನು ಬರೆಯುತ್ತಾನೆ: ‘ಮನುಷ್ಯ ಸಮುದ್ರದ ನೀರ ಮೇಲಣ ನೊರೆಯಂತೆ. ಗಾಳಿ ಬೀಸಿದಾಗ ನೊರೆ ಕರಗಿ ಮಾಯವಾಗುತ್ತದೆ. ಅಂತೆಯೇ ನಮ್ಮ ಬದುಕೂ ಸಾವಿನ ಗಾಳಿಯಲ್ಲಿ ಹಾರಿಹೋಗುತ್ತದೆ.’

ಸಾವು-ಬದುಕಿನ ಈ ಸಂಕೀರ್ಣ ಅನುಭವವನ್ನು ಇದೇ ಮಾದರಿಯಲ್ಲಿ ದಟ್ಟವಾಗಿ ಕಟ್ಟಿಕೊಡುತ್ತಾರೆ, ಬೇಂದ್ರೆಯವರು ತಮ್ಮ ಈ ಸಾಲುಗಳಲ್ಲಿ: ‘ಬದುಕು ಮಾಯೆಯ ಮಾಟ, ಮಾತು ನೊರೆತೆರೆಯಾಟ, ಜೀವಮಾನದ ತುಂಬ ಗುಂಭ ಮುನ್ನೀರು.’ ಹಾಗೆಂದ ಮಾತ್ರಕ್ಕೆ ಗಿಬ್ರಾನ್ ಜೀವನಪ್ರೀತಿಯ ವಿರೋಧಿಯಲ್ಲ. ಅವನು ನನ್ನ ‘ಹುಟ್ಟುಹಬ್ಬ’ (My Birthday) ಕೃತಿಯಲ್ಲಿ ಹೇಳುತ್ತಾನೆ: ‘ನಾನು ಬದುಕನ್ನೂ ಪ್ರೀತಿಸುತ್ತೇನೆ. ಬದುಕು ಮತ್ತು ಸಾವುಗಳೆರಡೂ ನನ್ನಲ್ಲಿ ಒಂದೇ ಬಗೆಯ ಸೌಂದರ್ಯಾನುಭೂತಿ ಮೂಡಿಸುತ್ತವೆ, ಸಮಾನ ಸಂತೋಷ ನೀಡುತ್ತವೆ, ನನ್ನ ಹಂಬಲ ಮತ್ತು ಹಾರೈಕೆಗಳ ಬೆಳವಣಿಗೆಗೆ ಬದುಕು-ಸಾವುಗಳೆರಡೂ ಸಮಾನ ಭಾಗಿದಾರವಾಗಿವೆ.’ ಬದುಕಿನ ಬಗೆಗಿನ ಎಲ್ಲ ಕುತೂಹಲಗಳು ಕರಗಿದ ಬಳಿಕ ಸಾವು ನಮ್ಮ ಬಯಕೆಯಾಗುತ್ತದೆ. ‘ನಿಮ್ಮ ಬದುಕಿನ ರಹಸ್ಯಗಳೆಲ್ಲ ಕರಗಿದ ಬಳಿಕ, ನೀವು ಸಾವನ್ನು ಬಯಸುತ್ತೀರಿ. ಏಕೆಂದರೆ ಅದೂ ಕೂಡ ಬದುಕಿನ ರಹಸ್ಯವೇ.’

ಗಿಬ್ರಾನ್ ಸಾವಿನ ಬಗೆಗಿನ ರಮ್ಯವಾದ ಚಿತ್ರಣವನ್ನು ನಮ್ಮ ಮುಂದಿರಿಸುತ್ತಾನೆ. ಅವನ ಕೃತಿಗಳ ಮುಖ್ಯ ಶಕ್ತಿಯಾದ ರೂಪಕಗಳ ಅನ್ವಯತೆ ಸಾವಿನ ವಿಚಾರದಲ್ಲಿ ವಿಜೃಂಭಿಸುತ್ತದೆ. ಮನುಷ್ಯ ಸಾವಿಗೆ ಹೆದರಬೇಕಿಲ್ಲ ಎಂಬುದನ್ನು ಅವನು ನಿಜ ಜೀವನದಲ್ಲೂ ನಿರೂಪಿಸಿದ. ಸಾವು ಹತ್ತಿರವಾದಾಗಲೂ, ತೀರ ಪ್ರಜ್ಞೆ ತಪ್ಪುವವರೆಗೂ ಅವನನ್ನು ಆಸ್ಪತ್ರೆಗೆ ಸಾಗಿಸಲು ಅವನು ಒಪ್ಪಲಿಲ್ಲ. ಏಕೆಂದರೆ, ಅವನು ಆ ಅನುಭವವನ್ನು ಪೂರ್ಣ ಪ್ರಮಾಣದಲ್ಲಿ ಅನುಭವಿಸಲು ಸಿದ್ಧನಾಗಿದ್ದನೆಂದು ತೋರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT