ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಶಿವರಾತ್ರಿ | ಪ್ರಳಯರುದ್ರನ ಮಂದಹಾಸ

Last Updated 19 ಫೆಬ್ರುವರಿ 2020, 20:00 IST
ಅಕ್ಷರ ಗಾತ್ರ

ಹರಿಹರರಿಬ್ಬರ ಭಕ್ತಪಂಥ ದೊಡ್ಡದು. ಸಮುದ್ರರಾಜಕುಮಾರಿ ಲಕ್ಷ್ಮಿ ಹರಿಪ್ರೀತೆಯಾದರೆ, ಪರ್ವತರಾಜಕುಮಾರಿ ಪಾರ್ವತಿ ಶಿವನ ಪತ್ನಿ. ಹರಿಹರರಿಬ್ಬರೂ ತಂತಮ್ಮ ಮಾವಂದಿರ ಮನೆಯಲ್ಲೇ ಬೀಡುಬಿಟ್ಟವರು. ಆದರೂ ಉತ್ತರದ ಹಿಮಶೈಲಗಳಲ್ಲಿ ನೆಲೆಸಿದ ಶಿವ ‘ನಮ್ಮವ’ನೆಂಬ ಹೆಮ್ಮೆ ದಕ್ಷಿಣದವರದು. ‘ತೆನ್ನಾಡುಡೈಯ ಶಿವನೇ ಪೋಟ್ರಿ’ ಎಂದೇ ತೇವಾರಗಳ ಕೊಂಡಾಟ. ಶಿವನ ಘೋರರೂಪವನ್ನಾರಾಧಿಸುವ ಅಘೋರಪಂಥದಿಂದ ಹಿಡಿದು, ಶಿವನನ್ನು ಮನೋನಿಯಾಮಕನಾಗಿ ಪೂಜಿಸುವ ಮಾಧ್ವಪಂಥದವರೆಗೆ, ಶಿವನನ್ನು ಆರಾಧಿಸುವ ಪಂಥಗಳೂ, ರೂಪವೈವಿಧ್ಯದ ಹರಹೂ ದೊಡ್ಡದೇ.

ತಮಿಳುನಾಡಿನ ಶೈವಪಂಥವು ಭಕ್ತಿಪ್ರಧಾನವಾದರೆ, ಕನ್ನಡದ ಶರಣಪಂಥಲ್ಲಿ ಭಕ್ತಿಯೊಂದಿಗೆ ಅನುಭಾವವೂ ಸೇರಿದೆ. ಗುರು-ಲಿಂಗ-ಜಂಗಮಗಳು ಸಂಕೇತಮಾತ್ರ, ಇಲ್ಲಿ ‘ಚಿಕ್ಕಚಿಕ್ಕ ಜಡೆಗಳ ಸುಲಿಪಲ್ಲ ಗೊರವನು’ ಕನಸಿನಲ್ಲಿ ಮಾತ್ರ ಕಂಡಾನು. ಈ ನಾಮರೂಪಭೇದಗಳನ್ನು ಕಳೆದುಕೊಂಡು, ‘ಕಪ್ಪುರದ ಗಿರಿಯನುರಿಗೊಂಡಂತೆ’ ಬಯಲಾಗುವುದೇ ಮುಕ್ತಿ.

ವೈಷ್ಣವಪಂಥದ ಹರಿದಾಸರಲ್ಲೂ ಶಿವನ ಕೊಂಡಾಟವಿದೆ. ಇಲ್ಲಿ ಶಿವ ಮನೋನಿಯಾಮಕ ದೈವ, ಹರಿಭಕ್ತಿಪ್ರೇರಕ. ‘ಧವಳ ಗಂಗೆಯ ಗಂಗಾಧರ ಮಹಾಲಿಂಗ ಮಾಧವನ ತೋರಿಸಯ್ಯ ಗುರುಕುಲೋತ್ತುಂಗಾ’ ಎಂದು ಸ್ತುತಿಸುತ್ತಾರೆ ವಾದಿರಾಜರು. ದಾಸಸಾಹಿತ್ಯಕ್ಕೆ ವಿಶಿಷ್ಟವಾದ ಸಲುಗೆಯ, ಕಾವ್ಯಮಯಶೈಲಿಯ ಶಿವಸ್ತುತಿಗಳೂ ಬಹಳಷ್ಟಿವೆ. ಉದಾಹರಣೆಗೆ, ಶ್ರೀಪಾದರಾಯರ ‘ವೃಷಭಾನೇರಿದ ವಿಷಧರನಿವನಾರೇ’ ಎಂಬ ಕೀರ್ತನೆ ಮನೋಜ್ಞವಾಗಿದೆ. ಹರಿಯ ಲೀಲಾವಿನೋದಗಳನ್ನು ಬಣ್ಣಿಸುವಂತೆಯೇ ಇಲ್ಲಿ ಶಿವನ ಲೀಲಾವಿನೋದಗಳ ಬಣ್ಣನೆಯಿದೆ. ಶಿವನನ್ನು ಕೊಂಡಾಡದ ದಾಸರಿಲ್ಲ.

ಇವೆಲ್ಲಾ ಲೀಲಿಗಳು ಮಂಗಳ ಸ್ವರೂಪನಾದ ಶಿವನದಾಯಿತು. ಆದರೆ ಪ್ರಳಯರೂಪದ ರುದ್ರನ ಸ್ತುತಿ ಹೇಗೆ. ‘ಧಗದ್ಧಗದ್ಧಗಜ್ವಲಲ್ಲಲಾಟಪಟ್ಟಪಾವಕ’ದೊಂದಿಗೆ ನಿಗಿನಿಗಿಸುತ್ತಿರುವ ರುದ್ರನ ಹತ್ತಿರ ಸುಳಿಯುವುದಾದರೂ ಉಂಟೇ? ಅಲ್ಲೇನಿದ್ದರೂ ‘ಪ್ರಚಂಡ ಚಂಡತಾಂಡವ’ವನ್ನು ನೋಡುತ್ತಾ ಒಂದು ‘ದೂರ’ದಲ್ಲಿ ನಿಂತು ಸ್ತುತಿಸುವುದಷ್ಟೇ. ಜಗನ್ನಾಥದಾಸರ ಹರಿಕಥಾಮೃತಸಾರದಲ್ಲೂ, ಈ ಬಿಗುವನ್ನು ಬಿಟ್ಟುಕೊಡದ, ಆದರೆ ಸೊಗಸಾದ ಭಾಮಿನೀಷಟ್ಪದಿಯ ಶಿವಸ್ತುತಿಯಿದೆ.

ವಾಮದೇವ ವಿರಿಂಚಿ ತನಯ ಉಮಾಮನೋಹರ ಉಗ್ರ ಧೂರ್ಜಟಿ

ಸಾಮಜಾಜಿನವಸನ ಭೂಷಣ ಸುಮನಸೋತ್ತಂಸ

ಕಾಮಹರ ಕೈಲಾಸ ಮಂದಿರಸೋಮಸೂರ್ಯಾನಳವಿಲೋಚನ

ಕಾಮಿತಪ್ರದ ಕರುಣಿಸೆಮಗೆ ಸದಾ ಸುಮಂಗಳವ

ಇಂತಹ ಪ್ರಳಯರುದ್ರನ ಮೊಗದಲ್ಲಿ ಎಳೆನಗೆಯನ್ನು ಚಿತ್ರಿಸುವುದು ಸಾಧ್ಯವೇ? ಹಣೆಯಲ್ಲಿ ಜಗತ್ತನ್ನೇ ಸುಟ್ಟುಬಿಡುವ ಪ್ರಳಯಾಗ್ನಿ ಧಗಧಗಿಸುತ್ತಿದ್ದಾಗ, ಅಂತಹ ಮುಖಕ್ಕೆ ಮಂದಹಾಸ ಶೋಭಿಸೀತೇ? ಅಂಥದ್ದೊಂದು ಮನೋಜ್ಞಚಿತ್ರಣವನ್ನು ನಮ್ಮ ಶಕ್ತ-ಭಕ್ತಕವಿ ರಾಘವಾಂಕನು ಕಟ್ಟಿಕೊಡುತ್ತಾನೆ - ಹೇಗೆ?: ಭುಗಿಲೇಳುವ ಹಣೆಗಣ್ಣಿನ ಮೇಲೆಯೇ ಶೀತಕಿರಣನಾದ ಚಂದ್ರನೂ ಇದ್ದಾನೆ. ಬಿರು ಬೆಂಕಿಯಮೇಲೇ ಕುಳಿತೂ ಆತ ಶೀತಕಿರಣನಾಗಿಯೇ ಉಳಿದಿರಬೇಕಾದರೆ, ಆ ಚಂದ್ರನ ಶೀತಲತೆಯಾದರೂ ಎಂಥದು, ಅದು ದಾವಾಗ್ನಿಗೂ ಜಗ್ಗದ ಹಿಮದ ಗಟ್ಟಿಯೇ. ಆದರೂ ಬೆಂಕಿಗೆ ಕರಗುವುದು ಹಿಮದ ಸ್ವಭಾವ. ಹೀಗೆ ಕರಗಿದ ಹಿಮ ತೊಟ್ಟುತೊಟ್ಟಾಗಿ ಶಿವನ ಜಟಾಜೂಟದ ಹಿಣಿಲುಗಳಲ್ಲಿ ಇಳಿದಿಳಿದು ಹಣೆಗಣ್ಣಿನ ಬೆಂಕಿಗೆ ಬೀಳುತ್ತಿದೆ. ಹೀಗೆ ಚಂದ್ರನ ಅಮೃತಬಿಂದುವನ್ನು ಕುಡಿಕುಡಿದು ದಣಿದು ಆ ಪ್ರಳಯಾಗ್ನಿಯ ತೀಕ್ಷ್ಣತೆಯುಡುಗಿ, ದೇವರ ಮುಂದಿನ ನಂದಾದೀಪದ ಕುಡಿಯಂತಾಗಿಬಿಟ್ಟಿದೆ. ಆ ‘ನಡುಗಣ್ಣಿನ ಕುಡಿವೆಳಗಿಂದೊಪ್ಪುವ ನಗೆಮೊಗದೊಡೆಯ’ ಹಂಪೆಯ ಮೃಢನು ನಮ್ಮೆಲ್ಲರನ್ನು ರಕ್ಷಿಸಲಿ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT