ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ರಾಂತಿ: ಪ್ರಕೃತಿಯ ಮಹಾಬದಲಾವಣೆ

Last Updated 14 ಜನವರಿ 2020, 10:35 IST
ಅಕ್ಷರ ಗಾತ್ರ

ಚಿಗುರಿನ ಚುನಾವಣೆ ಹೂ ಮಿಡಿ ಸವಿ ಸಂಕಲ್ಪ
ಬಿಳಿ ಜೋಳ, ಗೋದಿ, ಕುಸುಬೆ ಹತ್ತಿಗೆ ಭೂತಲ್ಪ
ಬಯಕೆ ಬದಲಾವಣೆ ಸಂಕ್ರಾಂತಿ ಎಳ್ಳು ಬೀರಿ
ಉತ್ತರಾಯಣ ಮಹಾಪರ್ವ ಉತ್ತರವೆಲ್ಲ


ಚೆನ್ನವೀರ ಕಣವಿಯವರ ಕವಿತೆ ಹೇಳುವಂತೆ ಇಡೀ ಪ್ರಕೃತಿ ಒಂದು ಮಹಾ ಬದಲಾವಣೆಗೆ ತನ್ನನ್ನು ತಾನು ಸಜ್ಜುಗೊಳಿಸಿಕೊಳ್ಳಬೇಕಿದೆ. ಏಕೆಂದರೆ ಅದೇ ಆಗ ಪುಷ್ಯ ಕಳೆಯುತ್ತಿದೆ. ಮುಂದೆ ಕಾಲಿಡಲಿರುವ ಮಾಘವೆಂದರೆ ಮಂಜಿನ ಮಾಸ. ಎಲ್ಲೆಲ್ಲೂ ಕುಳಿರು ಚಳಿ ತನ್ನ ಕಚಗುಳಿಯಿಟ್ಟು ರಾತ್ರಿಗಳನ್ನು ಗದಗದ ನಡುಗಿಸಿ ನಸುಕಿನ ಝಾವಗಳನ್ನು ಕಂಬಳಿಯ ಅಪ್ಪುಗೆಯಲ್ಲಿಯೇ ಕಳೆಯಬೇಕೆಂಬ ಆಸೆಯನ್ನು ದಟ್ಟೈಸುವಂತಹ ಕಾಲ. ಆಗ ಕಾಲಿಡುತ್ತದೆ ಮಕರ ಸಂಕ್ರಾಂತಿ.

ಹಗಲು ಸೂರ್ಯನ ಬೆಳಕು ಉಜ್ವಲಗೊಳ್ಳುತ್ತದೆ. ಆದರೆ ಸಂಜೆ-ಮುಂಜಾನೆಗಳು ಮಾತ್ರ ಚಳಿಯ ತೆಕ್ಕೆಯನ್ನು ಬಿಡಿಸಿಕೊಳ್ಳುವುದಿಲ್ಲ. ಉತ್ತರ ಕರ್ನಾಟಕದ ಮಂದಿಗಿದು ಭೂಮಿಯನ್ನು ಪೂಜಿಸುವ ಹಬ್ಬ. ಹೊಲದಲ್ಲಿ ಶೆಂಗಾ, ಎಳ್ಳು, ಸಜ್ಜೆಗಳು ಫಸಲು ತಯಾರಾಗಿರುತ್ತದೆ. ವರ್ಷವಿಡೀ ದುಡಿದ ಎತ್ತುಗಳು ದಣಿವಿನ ಬೇಸರ ಕಳೆದುಕೊಳ್ಳಲು ಕಾತರಗೊಂಡಿರುತ್ತವೆ. ಆದ್ದರಿಂದ ರೈತರಿಗೆ ಹುರುಪಿನಿಂದ ಆಚರಿಸಲು ಸುವರ್ಣ ಅವಕಾಶವೇ ಸಂಕ್ರಾಂತಿ.

ಹಬ್ಬ ಇನ್ನೂ ವಾರವಿದೆ ಎನ್ನುವಾಗಲೇ ಹೆಣ್ಣು ಮಕ್ಕಳು ಸಜ್ಜೆಯನ್ನು ಬೀಸಿ ಹಿಟ್ಟು ತಯಾರಿಸಿಕೊಂಡು ರೊಟ್ಟಿ ಬಡಿಯಲು ಶುರುವಿಟ್ಟುಕೊಳ್ಳುತ್ತಾರೆ. ಕೆಂಡದ ಝಳದಲ್ಲಿ ಕಟಿಕಟಿಯಾಗಿ ತಯಾರಾಗುವ ತೆಳ್ಳನೆಯ ರೊಟ್ಟಿಗಳ ಮೇಲೆ ಉದುರಿಸಿದ ಎಳ್ಳಿನಿಂದಾಗಿ ರೊಟ್ಟಿಯ ರುಚಿ ಇನ್ನಷ್ಟು ಹೆಚ್ಚುತ್ತದೆ. ಎಣ್ಣೆಯುಕ್ಕುವ ಶೆಂಗಾ ಹುರಿದು ಪುಡಿ ಮಾಡಿಕೊಂಡು ಆಗಷ್ಟೇ ಬಂದ ಕಬ್ಬಿನ ಫಸಲಿನಿಂದ ತಯಾರಾದ ಬೆಲ್ಲವನ್ನು ಸೇರಿಸಿ ಶೆಂಗಾ ಹೋಳಿಗೆ ತಯಾರಿಸುತ್ತಾರೆ. ಎಳ್ಳಿನ ಹೋಳಿಗೆಯೂ ತಯಾರಾಗುತ್ತದೆ. ಗೋಧಿ ಚಪಾತಿಯನ್ನು ಕಟಿಕಟಿಯಾಗಿ ಮಾಡಿಕೊಂಡು ಪುಡಿಪುಡಿಯಾಗುವಂತೆ ಚೂರು ಮಾಡಿ ನಂತರ ಪುಡಿ ಬೆಲ್ಲ, ಯಾಲಕ್ಕಿ, ಪುಟಾಣಿ, ಕೊಬ್ಬರಿಗಳನ್ನು ಸೇರಿಸಿ ಮಾದಲಿ ಎಂಬ ವಿಶಿಷ್ಟ ಸಿಹಿ ತಯಾರಾಗುತ್ತದೆ. ರೊಟ್ಟಿಗೆ ಸಂಗಾತಿಯಾಗಿ ಶೆಂಗಾ ಚಟ್ನಿ, ಗುರೆಳ್ಳಿನ ಚಟ್ನಿ, ಅಗಸಿ ಚಟ್ನಿಗಳು ಸಿದ್ಧಗೊಳ್ಳುತ್ತವೆ. ಹೊಲದಲ್ಲಿ ಬೆಳೆದ ಗಜ್ಜರಿ, ಸೌತಿಕಾಯಿ, ಮೂಲಂಗಿ, ಮೆಂತೆತೊಪ್ಪಲುಗಳಂತೂ ಸದಾ ಸಿದ್ಧವಿರುತ್ತವೆ.

ಸಂಕ್ರಾಂತಿಯ ಬೆಳಿಗ್ಗೆ ಬುತ್ತಿ ಕಟ್ಟಿಕೊಂಡು ಚಕ್ಕಡಿಗಳನ್ನು ಹತ್ತಿಕೊಂಡು ಹೊಲಕ್ಕೆ ಹೋಗುವವರ ಸಂಭ್ರಮವೋ ಸಂಭ್ರಮ. ಅಲ್ಲಿ ಹೊಲದ ಪೂಜೆ ಮಾಡಿ ಬುತ್ತಿ ಉಂಡು ಮನೆಗೆ ಬಂದ ಮೇಲೆ ಎತ್ತುಗಳನ್ನು ಸಿಂಗರಿಸುವ ಸಡಗರ. ಕೋಡುಗಳಿಗೆ ಗೊಂಡೆಗಳನ್ನು ಕಟ್ಟುವುದೇನು, ಹಣೆಗೆ ಆಭರಣ ಇಡುವುದೇನು, ಮೈಗೆ ಬಣ್ಣ ಬಳಿಯುವುದೇನು. ಅದೆಲ್ಲ ಮುಗಿದ ನಂತರ ಹಳ್ಳಿಯ ಮುಂದಣ ಗುಡಿಗಳ ಎದುರು ಕಟ್ಟಿಗೆಯ ಕುಂಟೆಗಳನ್ನು ಎಸೆದು ಮಾಡಿದ ಬೆಂಕಿಯಲ್ಲಿ ಚೆನ್ನಾಗಿ ಉರಿದು ತಯಾರಾದ ಕೆಂಡದ ರಾಶಿಯ ಮೇಲೆ ಎತ್ತುಗಳನ್ನು ಹಾರಿಸುವ ಸಡಗರ. ಕೆಲವು ಹಳ್ಳಿಗಳಲ್ಲಿ ಹೋರಿಗಳ ಕುತ್ತಿಗೆಗೆ ಕಟ್ಟಿದ ಕೊಬ್ಬರಿ ಸರಗಳನ್ನು ಚುರುಕಾದ ಯುವಕರು ಹರಿಯುವ ಸ್ಪರ್ದೆ ಏರ್ಪಡಿಸುತ್ತಾರೆ. ಚೂಪಾದ ಕೋಡುಗಳ ಬಲಿಷ್ಠ ಎತ್ತುಗಳು ತಮ್ಮೆದುರು ಬಂದ ಯುವಕರನ್ನು ಇರಿದು ಗಾಯಗೊಳಿಸುವ ಸಂದರ್ಭಗಳೂ ಇರುತ್ತವೆ. ಇದೊಂದು ರೀತಿಯಲ್ಲಿ ಯುವಕರ ಧೈರ್ಯ ಸಾಹಸಗಳನ್ನು ಪರೀಕ್ಷಿಸುವ ಕ್ರೀಡೆಯಿದ್ದಂತೆ.

ಸಂಕ್ರಾಂತಿಯ ಮರುದಿನವನ್ನು ಕರಿ ಎಂದು ಕರೆಯುತ್ತಾರೆ. ಕರಿ ಹರಿಯುವುದು ವರ್ಷದ ಸಂಪ್ರದಾಯ. ಎಂದರೆ ಹಿಂದಿನ ದಿನದ ಅಡುಗೆಯೆಲ್ಲವೂ ಮಿಕ್ಕಿರುವುದರಿಂದ ಅವನ್ನೆಲ್ಲ ಕಟ್ಟಿಕೊಂಡು ಯಾವುದಾದರೂ ಪುಣ್ಯಕ್ಷೇತ್ರಗಳಿಗೆ, ನದಿದಂಡೆಯ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಅಲ್ಲಿ ನದಿಸ್ನಾನ, ದೇವದರ್ಶನ, ಬುತ್ತಿಊಟ – ಇವೆಲ್ಲವುಗಳ ಮೂಲಕ ದೇಹ, ಮನಸ್ಸುಗಳನ್ನು ಮತ್ತಷ್ಟು ಹುರುಪುಗೊಳಿಸಿಕೊಂಡು ದೈನಿಕದ ನೊಗಕ್ಕೆ ಹೆಗಲು ಕೊಡಲು ತಯಾರಾಗುತ್ತಾರೆ.

ಹೀಗಾಗಿ ಸಂಕ್ರಾಂತಿಯೆಂದರೆ ಉತ್ತರ ಕರ್ನಾಟಕದವರಿಗೆ ಕನಿಷ್ಠ ಎರಡು ದಿನಗಳ ಆಚರಣೆ ಮತ್ತು ವಾರಗಟ್ಟಲೆ ತಯಾರಿಯ ಸಡಗರದ ಹಬ್ಬ. ನಗರಗಳಲ್ಲಿ ವಾಸಿಸುವ ನೌಕರದಾರರಿಗೂ ಹಬ್ಬದ ಸಡಗರ ಕಡಿಮೆಯಿರುವುದಿಲ್ಲ. ದುಡಿಯುವ ಮಹಿಳೆಯರಿಗಾಗಿ ಎಲ್ಲ ಅಂಗಡಿಗಳಲ್ಲೂ ಸಜ್ಜೆ ರೊಟ್ಟಿ, ಗುರೆಳ್ಳು-ಅಗಸೆ-ಶೆಂಗಾ ಚಟ್ನಿಗಳು, ಮಾದಲಿ, ಶೆಂಗಾಹೋಳಿಗೆ ಪ್ಯಾಕೆಟುಗಳು ಕಾಯುತ್ತಿರುತ್ತವೆ. ಗಡದ್ದಾಗಿ ಹಬ್ಬದ ಊಟ ಮಾಡಿ ಎಲ್ಲರೂ ಕಾರು, ಜೀಪು, ವ್ಯಾನುಗಳಲ್ಲಿ ತುಂಬಿಕೊಂಡು ಕರಿಹರಿಯಲು ಪ್ರವಾಸ ಹೋಗುತ್ತಾರೆ. ಎರಡು ದಿನ ತಮ್ಮ ತಮ್ಮ ಮನೆ-ಊರು-ದೈನಿಕದ ಮಾಮೂಲಿ ಜಡತ್ವದಿಂದ ದೂರವಿದ್ದು ಮತ್ತೆ ಹೊಸ ಮನುಷ್ಯರಾಗಿ ಬರುತ್ತಾರೆ. ಸಂಕ್ರಾಂತಿಯ ವೇಳೆಗೆ ಕಡಲೆಗಿಡ ಕೂಡ ಹಸಿ ಹಸಿಯಾಗಿ ಬೆಳೆದು ನಿಂತಿರುತ್ತದೆ. ಗಿಡದೊಳಗಿನ ಕಡಲೆ ಕಾಳಿನ ಸಿಪ್ಪೆ ಸುಲಿದು ತಿನ್ನುವ ಮಜವನ್ನೂ ಎಲ್ಲ ವಯೋಮಾನದವರೂ ಅನುಭವಿಸಲು ಕಾತುರರಾಗಿರುತ್ತಾರೆ.

ಇನ್ನು ಕೆಲದಿನಗಳಿಗೇ ಮುಗಿಯುವ ಚಳಿ, ಬರಲಿರುವ ಅತಿ ಬಿಸಿಲಿನ ಝಳದ ಸೆಕೆ – ಇವುಗಳ ನಡುವಿನ ಸಂಕ್ರಾಂತ ಸ್ಥಿತಿಯನ್ನು ದೇಹಕ್ಕೂ ಮನಸ್ಸಿಗೂ ರೂಢಿ ಮಾಡಿಸಬೇಕೆಂದರೆ ನಮ್ಮ ದೇಹಕ್ಕೆ ಎಣ್ಣೆಯ ಅಂಶವಿರುವ ಆಹಾರ ಬೇಕೇ ಬೇಕು. ಸಜ್ಜೆ, ಅಗಸೆ, ಶೆಂಗಾ, ಎಳ್ಳು – ಇವೆಲ್ಲ ದೇಹದಲ್ಲಿ ಕಾವನ್ನು ಹುಟ್ಟಿಸಿ ಹುರಿಗೊಳಿಸುತ್ತದೆ. ತೀವ್ರ ಚಳಿಯನ್ನು ಅನುಭವಿಸಿ ಹಣ್ಣಾದ ದೇಹಕ್ಕೆ ಇಂತಹ ಆಹಾರವು ಕಾವನ್ನು ನೀಡಿ ಪುಷ್ಟಿಯಾಗಿಸುತ್ತದೆ. ಪ್ರಕೃತಿಯೇ ಹೊಸದೊಂದು ಹವಾಮಾನವನ್ನು ಎದುರಿಸಲು ಸಜ್ಜಾಗುತ್ತಿರುವಾಗ ಮನುಷ್ಯನೂ ಕೂಡ ಪ್ರಕೃತಿಯೊಂದಿಗೆ ಒಂದಾಗಿ ಬದಲಾವಣೆಗೆ ಸನ್ನದ್ಧನಾಗಬೇಕೆಂಬುದು ಇದರ ಹಿಂದಿನ ಆಶಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT