ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ಸೋತು ಹಿಂದಿರುಗಿದ ಮನ್ಮಥ

ಭಾಗ 136
ಅಕ್ಷರ ಗಾತ್ರ

ಶಿವ ಧ್ಯಾನ ಮಾಡುವ ತಾಣಕ್ಕೆ ಬಂದ ಮನ್ಮಥ ತನ್ನ ಪ್ರಭಾವವನ್ನು ಬೀರಿದ. ಇದರಿಂದ ಅಲ್ಲಿರುವ ಪ್ರಾಣಿಗಳೆಲ್ಲಾ ಕಾಮವಿಕಾರ ಹೊಂದಿದವು. ಆದರೆ ಶಿವ ಮಾತ್ರ ವಿಚಲಿತನಾಗಲಿಲ್ಲ. ಆಗ ವಸಂತ ತನ್ನ ಪ್ರಭಾವವನ್ನು ಬೀರಿ ಶಂಕರನನ್ನು ಮೋಹಗೊಳಿಸಲು ಯತ್ನಿಸಿದ. ಸುತ್ತಲಿನ ಮರಗಳಲ್ಲೆಲ್ಲ ಏಕಕಾಲದಲ್ಲಿ ಮೊಗ್ಗುಗಳು ಚಿಗುರಿ, ಹೂವುಗಳು ಅರಳಿದವು. ಆದರೆ ಮಹಾಯೋಗಿ ಶಿವ ಮಾತ್ರ ಧ್ಯಾನಸ್ಥಿತಿಯಿಂದ ಹೊರಬರಲಿಲ್ಲ. ಮನ್ಮಥ ತನ್ನ ಸತಿ ರತಿದೇವಿಯೊಡನೆ ಶಿವನನ್ನು ಮೋಹಗೊಳಿಸಲು ಅನೇಕ ಶೃಂಗಾರಪ್ರಯೋಗಗಳನ್ನು ಮಾಡಿದ. ಇದರಿಂದ ಅಲ್ಲಿರುವ ಪ್ರಾಣಿಗಳೆಲ್ಲ ಮತ್ತಷ್ಟು ಕಾಮದ ಮತ್ತಿನಲ್ಲಿ ತೇಲಿದವು. ಆದರೆ ಪ್ರಮಥಾಧಿಪತಿಯಾದ ಶಂಕರನು ಮಾತ್ರ ಮೋಹಗೊಳ್ಳಲೇ ಇಲ್ಲ. ರತಿ-ಮನ್ಮಥ ಮತ್ತು ವಸಂತರ ಪ್ರಯತ್ನಗಳೆಲ್ಲ ಸತತ ವ್ಯರ್ಥವಾದಾಗ ಮನ್ಮಥ ಹತಾಶನಾಗಿ ಬ್ರಹ್ಮನಿರುವ ಸಂಕೇತಸ್ಥಾನಕ್ಕೆ ಹಿಂತಿರುಗಿದ. ಏನಾಯಿತೆಂದು ಬ್ರಹ್ಮ ಕೇಳಿದಾಗ, ಮನ್ಮಥ ಬಹಳ ದುಃಖದಿಂದ ತೊದಲುತ್ತಾ ನುಡಿದ ‘ಓ ಬ್ರಹನೇ! ವಿರಕ್ತನಾಗಿ, ಯೋಗನಿರತನಾದ ಶಿವನನ್ನು ಮೋಹಗೊಳಿಸಲು ಸಾಧ್ಯವಿಲ್ಲ. ವಸಂತನೊಡನೆ ಮತ್ತು ರತಿಯೊಡನೆ ನಾನು ಶಿವನನ್ನು ಮೋಹಗೊಳಿಸಲು ಮಾಡಿದ ಪ್ರಯತ್ನಗಳೆಲ್ಲವೂ ವ್ಯರ್ಥವಾಯಿತು. ನಾವು ಶಿವನನ್ನು ಮೋಹಗೊಳಿಸಲು ಎಂತೆಂತಹ ಪ್ರಯತ್ನಗಳನ್ನು ಮಾಡಿದೆವೆಂಬುದನ್ನು ಹೇಳುವೆನು ಕೇಳು’ ಎಂದು ಮನ್ಮಥ ತಾನು ಮಾಡಿದ ಪ್ರಯತ್ನದ ವಿವರಗಳನ್ನು ತಿಳಿಸುತ್ತಾನೆ.

ಶಿವನು ಶರೀರೇಂದ್ರಿಯಗಳನ್ನೂ ಪ್ರಾಣಗಳನ್ನೂ ಬಂಧಿಸಿ ಯಾವಾಗ ಸಮಾಧಿಯಲ್ಲಿ ಕುಳಿತುಕೊಳ್ಳುವನೋ, ಆಗ ನಾನು ಮತ್ತು ವಸಂತ ಸೇರಿ ಸುವಾಸನೆಯುಳ್ಳ ಶೀತಲವಾದ ಮೋಹವನ್ನುಂಟುಮಾಡುವಂತಹ ಗಾಳಿಯನ್ನು ಮೆಲ್ಲಗೆ ಬೀಸಿಸಿ ಮಹಾದೇವನನ್ನು ಉದ್ವೇಗಗೊಳ್ಳುವಂತೆ ಮಾಡುತ್ತಿದ್ದೆವು. ನಂತರ ನನ್ನ ಐದು ಪುಷ್ಪಬಾಣಗಳನ್ನೂ ಪ್ರಯೋಗಿಸಿ ಆ ಶಿವನ ಸುತ್ತಲೂ ಸಂಚರಿಸುವ ಪ್ರಮಥಗಣಗಳನ್ನು ಮೋಹಗೊಳಿಸಲು ಪ್ರಯತ್ನಿಸಿದೆ. ಆದರೆ ಶಿವನಿರಲಿ, ಅವನ ಪ್ರಮಥಗಣಗಳೂ ಮರುಳಾಗಲಿಲ್ಲ.

ಧ್ಯಾನ ಮಾಡಲು ಶಿವನು ಮೇರುಪರ್ವತ, ನಾಟಕೇಶ್ವರ, ಕೈಲಾಸಪರ್ವತಗಳಿಗೆ ಹೋದಾಗಲೆಲ್ಲ ನಾವು ಅವನನ್ನು ಹಿಂಬಾಲಿಸುತ್ತಿದ್ದೆವು. ಅಲ್ಲಿ ಶಿವನು ಸಮಾಧಿಸ್ಥಿತಿಯ ಧ್ಯಾನವನ್ನು ಬಿಟ್ಟು ಬರುವವರೆಗು ಕಾಯುತ್ತಿದ್ದೆವು. ಮಹಾದೇವ ಧ್ಯಾನದಿಂದ ಎದ್ದು ಬಂದು ಶಾಂತವಾಗಿ ಕುಳಿತಿರುವಾಗ, ಅವನೆದುರಿಗೆ ಚಕ್ರವಾಕ ದಂಪತಿಗಳಿಂದ ಶೃಂಗಾರ ಆಟವಾಡಿಸುತ್ತಿದ್ದೆ. ಚಕ್ರವಾಕಗಳ ಜೋಡಿಯು ಶಿವನೆದುರಿನಲ್ಲಿ ಅನೇಕ ಬಗೆಯ ಶೃಂಗಾರಚೇಷ್ಟೆಗಳನ್ನು ಪ್ರದರ್ಶಿಸುತ್ತಿದ್ದವು. ಮಯೂರ ಮೊದಲಾದ ಪಕ್ಷಿಗಳೂ, ಜಿಂಕೆ, ಹುಲಿ ಮುಂತಾದ ಮೃಗಗಳೂ ಶಿವನೆದುರಿನಲ್ಲಿ ಕಾಮಭಾವವನ್ನು ಪ್ರಕಟಿಸುತ್ತಿದ್ದವು. ಮಯೂರ ದಂಪತಿಗಳಂತೂ ಶಿವನೆದುರಿನಲ್ಲಿ ಅನೇಕ ಚೇಷ್ಟೆಗಳನ್ನು ಮಾಡುತ್ತಾ, ನೋಡುಗರಲ್ಲಿ ಶೃಂಗಾರಸುಖದ ಆಸಕ್ತಿಯನ್ನು ಹುಟ್ಟಿಸುತ್ತಿದ್ದವು.

ಹೀಗಿದ್ದರೂ ಶಿವನ ಮನಸ್ಸು ಚಂಚಲಿತವಾಗಲಿಲ್ಲ. ಇದರಿಂದ ಶಿವನ ಮೇಲೆ ನನ್ನ ಬಾಣಗಳನ್ನು ಹೂಡಲು ಅವಕಾಶವೇ ಸಿಗಲಿಲ್ಲ. ಶಿವನನ್ನು ಮೋಹಗೊಳಿಸುವಂಥ ಶಕ್ತಿ ನನಗಿಲ್ಲ ಎಂದು ಮನ್ಮಥ ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಾನೆ. ಅಲ್ಲದೆ, ಶಿವನನ್ನು ಮೋಹಗೊಳಿಸಲು ವಸಂತ ಎಂತೆಂಥ ಪ್ರಯತ್ನಗಳನ್ನು ಮಾಡಿದನೆಂಬುದನ್ನು ವಿವರವಾಗಿ ಬ್ರಹ್ಮನಿಗೆ ಹೇಳುತ್ತಾನೆ.

ಶಿವನ ಸುತ್ತಾ ಇದ್ದ ಸಂಪಿಗೆ, ಕೇಸರ, ಮಾವು, ಸುರಗಿ, ವಸಲೆ, ಹಸಿರುಪಾದರಿ, ನಾಗಸಂಪಿಗೆ, ಪುನ್ನಾಗ, ಮುತ್ತುಗ, ಕೇದಗೆ, ಕಗ್ಗಲೀ, ಮಲ್ಲಿಗೆ, ಕಗ್ಗೋಲೆ, ಕೆಂಪುಗೋರಂಟಿಗೆ ಮುಂತಾದ ಹೂವುಗಳನ್ನು ವಸಂತ ಅರಳಿಸಿದ. ಸರಸ್ಸುಗಳಲ್ಲಿ ಕಮಲಗಳನ್ನು ಅರಳಿಸಿದ. ಮಲಯಪರ್ವತದ ಸುವಾಸನೆಯುಳ್ಳ ಗಾಳಿಯನ್ನು ಬೀಸಿಸಿ ಶಿವನ ಆಶ್ರಮದಲ್ಲೆಲ್ಲಾ ಸುವಾಸನೆ ಪಸರಿಸಿದ. ಸುಂದರವಾದ ಮಾಧವೀಯೇ ಮೊದಲಾದ ಲತೆಗಳು, ಅರಳಿದ ಚಿಗುರುಗಳುಳ್ಳಂತಹ ವೃಕ್ಷಗಳನ್ನು ಮನೋಹರವಾಗಿ ಸುತ್ತಿಕೊಳ್ಳುವಂತೆ ರಚಿಸಿದ. ಇಂಥ ಸುಂದರವಾದ ಅರಳಿದ ಹೂವುಗಳುಳ್ಳ ಲತೆ–ವೃಕ್ಷಗಳನ್ನು ಮತ್ತು ಸುವಾಸನೆಯಾದ ಗಾಳಿಯನ್ನು ಸವಿದ ಮುನಿಗಳು ಕಾಮವಿಕಾರವನ್ನು ಹೊಂದಿದರು. ಆದರೆ ಶಂಕರನಿಗೆ ಸ್ವಲ್ಪವೂ ಮೋಹವುಂಟಾಗಲಿಲ್ಲ. ನನ್ನ ಮೇಲೆ ಕೋಪವನ್ನೂ ಮಾಡಿಕೊಳ್ಳದೆ ಸ್ಥಿತಪ್ರಜ್ಞನಾಗಿದ್ದ. ಶಂಕರನ ದೃಢವಾದ ವಿರಕ್ತಭಾವನೆಯನ್ನೂ ತಿಳಿದ ನಂತರ ‘ಇನ್ನು ಪ್ರಯೋಜನವಿಲ್ಲವೆಂದು ಹಿಂತಿರುಗಿದೆ’ ಎಂದು ಮನ್ಮಥ ತಿಳಿಸುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT