ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Merry Christmas 2022 | ಕ್ರಿಸ್ತನ ಶಾಂತಿ ಸಂದೇಶ

Last Updated 24 ಡಿಸೆಂಬರ್ 2022, 22:15 IST
ಅಕ್ಷರ ಗಾತ್ರ

ಕ್ರಿಸ್ತಜಯಂತಿ’ ಅಥವಾ ‘ಕ್ರಿಸ್‌ಮಸ್‌’ ಎಂದಾಗ ಮೊದಲ ನೋಟಕ್ಕೆ ನಮಗೆ ಕಂಡುಬರುವುದು ಮೇರಿಯ ಮುಗ್ದ ತಾಯ್ತನದ, ಜೋಸೆಫನ ನಿರ್ವ್ಯಾಜ ಪ್ರೇಮದ ಪುತ್ಥಳಿಗಳ ನಡುವೆ ಗೊಂದಳಿಗೆಯಲ್ಲಿ ಚಿಗುರುಹುಲ್ಲಿನ ಮೇಲೆ ಶಾಂತನೋಟ ಬೀರುತ್ತ ಮಲಗಿರುವ ಶಿಶುಯೇಸುವಿನ ನವಪಲ್ಲವದ ಚಿತ್ರಗಳು. ಕ್ರಿಸ್ತನ ಅನುಯಾಯಿಗಳು ಮಾತ್ರವಲ್ಲದೆ ಇತರರೂ ಸೇರಿದಂತೆ ಇಡೀ ಜಗತ್ತು ಕ್ರಿಸ್ತಜಯಂತಿಯನ್ನು ಉತ್ಸಾಹ ಮತ್ತು ಅಷ್ಟೇ ಆಪ್ತವಾಗಿ ಪರಿಭಾವಿಸುವುದೇಕೆ ಎಂಬುದರತ್ತ ನೋಟ ಬೀರಿದಾಗ, ಯೇಸುವಿನ ಬೋಧನೆ ಮತ್ತು ನಡೆನುಡಿಯ ಪ್ರಭಾವಳಿಯೇ ಎದ್ದುಕಾಣುತ್ತದೆ.

ಎರಡುಸಾವಿರ ವರ್ಷಗಳ ಹಿಂದೆ ಕೇವಲ ಮೂರುವರ್ಷಗಳ ಕಾಲ ಜುದೇಯ, ಗಲಿಲೇಯ ಮತ್ತು ಜೋರ್ದಾನ್ ನಾಡುಗಳಲ್ಲಿ ಹಗಲು ರಾತ್ರಿಯೆನ್ನದೆ ನಿರಂತರ ನಡೆದಾಡಿ ಮನುಜಪ್ರೇಮದ ನೂತನ ವಿಶ್ವವನ್ನು ಕಟ್ಟಲು ಶ್ರಮಿಸಿದ ‘ಯೇಸುಕ್ರಿಸ್ತ’ ಎಂಬ ಮಹಾಮಾನವನ ಬದುಕು ಮತ್ತು ಸಂದೇಶಗಳು ಇಂದು ಜಗತ್ತಿನ ಮೂರನೇ ಒಂದು ಭಾಗದಲ್ಲಿ ದಟ್ಟವಾದ ಪ್ರಭಾವ ಬೀರಿವೆ. ಪವಿತ್ರ ಬೈಬಲನ್ನು ನಿರುಕಿಸಿದಾಗ ಯೇಸುಕ್ರಿಸ್ತನ ಬರುವಿಕೆಯೇನೂ ಆಕಸ್ಮಿಕವಲ್ಲ ಅದಕ್ಕೆ ಸಹಸ್ರಾರು ವರ್ಷಗಳ ಪ್ರವಾದಿಗಳ ಭವಿಷ್ಯವಾಣಿ ಮತ್ತು ಕಾತರದ ಸಿದ್ಧತೆ ಇತ್ತು ಎಂದು ತಿಳಿದುಬರುತ್ತದೆ.

ದೇವನಿರ್ಮಿತ ಈಡನ್ ತೋಟದಲ್ಲಿ ಸರ್ವಶಕ್ತ ದೇವರ ಸತ್ಸಂಬಂಧದಲ್ಲಿ ಆದಿದಂಪತಿಯಾದ ಆದಾಮ ಮತ್ತು ಈವಾಳು ವಿಹರಿಸುತ್ತ ಒಂದು ದಿನ ತಿನ್ನಬಾರದ ಹಣ್ಣನ್ನು ತಿಂದು ದೇವರಿಂದ ಮಣ್ಣಿಗೆ ದೂಡಲ್ಪಡುವ ದುರಂತ ಕಥೆಯಿಂದ ಹಿಡಿದು, ಮಹಾಜಲಪ್ರಳಯ, ಅಂಕೆಯಿಲ್ಲದ ಅಲೆಮಾರಿ ಜೀವನ, ಪರದೇಶದಲ್ಲಿ ಗುಲಾಮಗಿರಿ, ಫಲವತ್ತಾದ ಭೂಮಿಯೆಡೆಗೆ ವಲಸೆಗಳು ಮತ್ತು ನಿರಂತರ ಯುದ್ಧಗಳ ನಡುವೆ ದೇವರ ಪ್ರತಿನಿಧಿಗಳೆನಿಸಿಕೊಂಡ ಪ್ರವಾದಿಗಳು ತೋರಿದ ಧರ್ಮದಾರಿಯಲ್ಲಿ ನಡೆದು ಪ್ರತಿದಿನ ಪ್ರತಿಕ್ಷಣ ದೇವರನ್ನು ನೆನೆಯುತ್ತಿದ್ದ ಧರ್ಮಭೀರು ಜನರ ಏಳುಬೀಳುಗಳ ಆಖ್ಯಾಯಿಕೆಗಳ ದಾಖಲೆಯೇ ಪವಿತ್ರ ಬೈಬಲ್. ಇದನ್ನು ದೇವರೊಡನೆ ಮಾನವನ ಅನುಸಂಧಾನ ಎಂದೂ ಕರೆಯಲಾಗುತ್ತದೆ.

ದೇವರ ಹತ್ತು ಕಟ್ಟಲೆಗಳನ್ನೂ ಪ್ರವಾದಿಗಳು ರೂಪಿಸಿದ ಸಾಮಾಜಿಕ ಕಟ್ಟುಪಾಡುಗಳನ್ನೂ ಮೀರಿ ಮಾನವಜನಾಂಗವು ಅಂಕೆ ತಪ್ಪಿ ಧರ್ಮವು ಅಧಃಪತನಕ್ಕಿಡಾದಾಗ ದೇವರು ಪದೇ ಪದೇ ಪ್ರವಾದಿಗಳ ಮುಖಾಂತರ ವಚನಿಸಿದ ಪ್ರಕಾರ ತಾವೇ ಬುವಿಗಿಳಿದು ಮಗುವಾಗಿ ಜನಿಸಿ ಲೋಕೋದ್ಧಾರ ಮಾಡಿದರು ಎಂಬುವ ಕಥನವೇ ಪವಿತ್ರ ಬೈಬಲಿನ ಎರಡನೇ ಭಾಗವಾಗಿ ‘ದೇವರೊಡನೆ ನೂತನಸಂಧಾನ’ ಎಂಬುದಾಗಿ ಹೆಸರುಗೊಂಡಿದೆ. ‘ಹೊಸ ಒಡಂಬಡಿಕೆ’ ಅಥವಾ ‘ನ್ಯೂ ಟೆಸ್ಟಮೆಂಟ್’ ಎಂದೂ ಕರೆಯಲಾಗುವ ಈ ಭಾಗದಲ್ಲಿ ಯೇಸುವಿನ ಜನನ ಮೊದಲ್ಗೊಂಡು ಆತನ ಬೋಧನೆ, ಶಿಲುಬೆಯಾತನೆ ಮತ್ತು ಅನಂತರದಲ್ಲಿ ಶಿಷ್ಯವೃಂದವು ಕ್ರಿಸ್ತಸಂದೇಶವನ್ನು ಜಗತ್ತಿನುದ್ದಕ್ಕೂ ಪಸರಿಸಿದ ಸಂಗತಿಗಳು ವಿವರವಾಗಿ ಪ್ರಸ್ತಾಪವಾಗುತ್ತದೆ.

ಯೇಸು ವೈಭವೋಪೇತ ಅರಮನೆಯಲ್ಲಿ ಹುಟ್ಟದೇ, ಹಸುಗಳ ನೆಲೆಯಾದ ಕೊಟ್ಟಿಗೆಯಲ್ಲಿ ಜನಿಸುತ್ತಾನೆ. ಅವನ ಜನನವು ಮಗುಮನಸ್ಸಿನ ಅಮಾಯಕರಿಗೆ ಮತ್ತು ಜ್ಞಾನಪಿಪಾಸುಗಳಿಗಷ್ಟೇ ತಿಳಿಯುತ್ತದೆ. ‘ಎಲ್ಲರೂ ದೇವರ ಮಕ್ಕಳು, ಮತ್ತೊಬ್ಬನನ್ನು ನಿನ್ನಂತೆಯೆ ಪರಿಭಾವಿಸು’ ಎಂಬ ಶುಭಸಂದೇಶವನ್ನು ಪ್ರತಿಪಾದಿಸಿ ಹುತಾತ್ಮನಾಗುತ್ತಾನೆ. ಅಂತಹ ಮಹಾತ್ಮನನ್ನು ಕುಲ ಕಾಲ ದೇಶವೆನ್ನದೆ ಜನರೆಲ್ಲರೂ ಸಂಭ್ರಮದಿಂದ ಬರಮಾಡಿಕೊಳ್ಳುವ ಹಬ್ಬ ಕ್ರಿಸ್‌ಮಸ್‌ ಹಬ್ಬ. ಯುದ್ಧ, ದ್ವೇಷ ಅಶಾಂತಿಗಳು ದಾಂಗುಡಿಯಿಡುತ್ತಿರುವ ಇಂದಿನ ಜಗತ್ತಿನಲ್ಲಿ ಯೇಸುಕ್ರಿಸ್ತನ ಶಾಂತಿಸಂದೇಶ ಅತ್ಯಗತ್ಯವಾಗಿದೆ. ಕ್ರಿಸ್ತನ ನೆನಪಿನಲ್ಲಿ ಮನೆಯ ಮುಂಬಾಗಿಲ ಬಳಿ ನಕ್ಷತ್ರ ಕಟ್ಟಿ, ಅದರಲ್ಲಿ ದೀಪವಿರಿಸುವಾಗ ‘ವಸುಧೈವ ಕುಟುಂಬಕಮ್’ ಎಂಬ ಹಿರಿದಾದ ಭಾವ
ಸ್ಫುರಣೆಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT