ಭಾನುವಾರ, ಜನವರಿ 17, 2021
20 °C

ಮೊಹರಂ: ಭಾವೈಕ್ಯದ ಸಂದೇಶ

ಎನ್‌. ಮಹಮ್ಮದ್ Updated:

ಅಕ್ಷರ ಗಾತ್ರ : | |

Prajavani

ಇಸ್ಲಾಮಿನ ಇತಿಹಾಸದಲ್ಲಿ ಮೊಹರಂ ತಿಂಗಳಲ್ಲಿ ಹಲವು ಐತಿಹಾಸಿಕ ಘಟನೆಗಳು ಸಂಭವಿಸಿವೆ. ಆ ಘಟನೆಗಳ ಸ್ಮರಣೆಗಾಗಿ ಇಂದು ವಿವಿಧ ಆಚರಣೆಗಳು ನಡೆಯುತ್ತಿವೆ. ಕರ್ನಾಟಕದ ಹಲವೆಡೆ ಹಿಂದೂ–ಮುಸ್ಲಿಮರು ಒಟ್ಟಾಗಿ ಮೊಹರಂ ಆಚರಿಸುವರು.

ಇಸ್ಲಾಮಿಕ್‌ ಕ್ಯಾಲೆಂಡರಿನ ಮೊದಲ ತಿಂಗಳೇ ಮೊಹರಂ. ಐತಿಹಾಸಿಕ ಹಿನ್ನೆಲೆ ಹೊಂದಿದ ತಿಂಗಳು ಇದು. ಈ ಬಾರಿ ಮೊಹರಂ ಆ.21ರಂದು ಆರಂಭವಾಗಿದೆ. ಈ ತಿಂಗಳ ಮೊದಲ 10 ದಿನ (ಆ.30ರ ವರೆಗೆ) ವಿಶ್ವದ ವಿವಿಧ ಭಾಗಗಳಲ್ಲಿ ಮುಸ್ಲಿಮರು ತಮ್ಮ ನಾಡಿನ ಸಂಸ್ಕೃತಿಗೆ ಅನುಗುಣವಾಗಿ ಭಿನ್ನ ರೀತಿಯಲ್ಲಿ ಆಚರಣೆ ಮಾಡುವರು. 

ಮೊಹರಂ 10ರಂದು ಪ್ರವಾದಿ ಮಹಮ್ಮದ್‌ ಅವರ ಮೊಮ್ಮಗ (ಮಗಳ ಮಗ) ಇಮಾಮ್ ಹುಸೇನ್‌ ಅವರು ಯುದ್ಧದಲ್ಲಿ ಹುತಾತ್ಮರಾಗುವರು. ಶಿಯಾ ಮುಸ್ಲಿಮರು ಹುಸೇನ್‌ ಹುತಾತ್ಮರಾದ ದಿನದಂದು ಶೋಕಾಚರಣೆ ಮಾಡುವರು. ಸುನ್ನಿ ಮುಸ್ಲಿಮರು ಈ ತಿಂಗಳ 9 ಮತ್ತು 10ರಂದು ಉಪವಾಸ ಆಚರಿಸುವರು. 

ಏನಿದು ಯುದ್ಧ?: ಪ್ರವಾದಿ ಮಹಮ್ಮದ್‌ ಅವರ ಮರಣದ ಬಳಿಕ ಅವರ ಸಂಗಾತಿಗಳಾದ ಅಬೂಬಕರ್‌, ಉಮರ್‌, ಉಸ್ಮಾನ್‌ ಮತ್ತು ಅಲಿ ಅವರು ಅರೇಬಿಯಾದಲ್ಲಿ ಸುಮಾರು 40 ವರ್ಷಗಳವರೆಗೆ ಆಳ್ವಿಕೆ ನಡೆಸುವರು. ಆ ಬಳಿಕ ಮುಆವಿಯಾ ಎಂಬವರು ಅಧಿಕಾರಕ್ಕೆ ಬರುವರು. ಇವರೆಲ್ಲರೂ ಪ್ರಜಾಸತ್ತಾತ್ಮಕ ರೀತಿಯಲ್ಲಿ ಆಡಳಿತ ನಡೆಸಿದ್ದರು. 

ಆದರೆ ಮುಆವಿಯಾ ಅವರು ತನ್ನ ಅಧಿಕಾರದ ಅವಧಿಯ ಬಳಿಕ ಮಗ ಯಜೀದ್‌ಗೆ ಪಟ್ಟ ಕಟ್ಟುತ್ತಾರೆ. ಅದುವರೆಗೂ ಇದ್ದ ಪ್ರಜಾಸತ್ತಾತ್ಮಕ ವ್ಯವಸ್ಥೆಯು ಬದಲಾಗುತ್ತದೆ. ಇದನ್ನು ಇಮಾಂ ಹುಸೇನ್‌ ಅವರು ವಿರೋಧಿಸುತ್ತಾರೆ. ಕೇವಲ 72 ಮಂದಿಯಷ್ಟೇ ಹುಸೇನ್‌ ಬೆಂಬಲಕ್ಕೆ ನಿಲ್ಲುತ್ತಾರೆ. ಇಸ್ಲಾಮಿನ ಆದರ್ಶಗಳು ಮತ್ತು ಮೌಲ್ಯಗಳ ಉಳಿವಿಗಾಗಿ ಅವರು ಯುದ್ಧಕ್ಕೆ ಮುಂದಾಗುತ್ತಾರೆ. ಕರ್ಬಲಾದಲ್ಲಿ (ಇರಾಕ್‌ನಲ್ಲಿದೆ) ನಡೆದ ಯುದ್ಧದಲ್ಲಿ ಇಮಾಂ ಹುಸೇನ್ ಹುತಾತ್ಮರಾಗುತ್ತಾರೆ. 

ವಿವಿಧ ರೀತಿಯ ಆಚರಣೆ:  ಸಾವಿರಕ್ಕೂ ಅಧಿಕ ವರ್ಷಗಳ ಹಿಂದೆ ಕರ್ಬಲಾದಲ್ಲಿ ನಡೆದಿದ್ದ ಘಟನೆಯೊಂದನ್ನು ಇಲ್ಲಿನ ಸಂಸ್ಕೃತಿಯೊಂದಿಗೆ ಬೆರೆಸಿ ಜನರು ಮೊಹರಂ ಆಚರಿಸುವರು. ಶೋಕಗೀತೆಯ ರಚನೆ, ಕುಣಿತ, ವೇಷಗಾರಿಕೆ ಹಾಗೂ ಮೆರವಣಿಗೆಗಳನ್ನು ಸೃಷ್ಟಿಸಿಕೊಂಡಿರುವುದು ಮೊಹರಂ ವಿಶೇಷತೆಯಾಗಿದೆ. 

ಮೊಹರಂ ತಿಂಗಳ 8,9 ಮತ್ತು 10ನೇ ದಿನ ಉತ್ತರ ಕರ್ನಾಟಕದ ಹಲವು ಊರುಗಳಲ್ಲಿ ಜಾತಿ, ಧರ್ಮ ಎಂಬ ಭೇದಭಾವ ಇಲ್ಲದೆ ಎಲ್ಲರೂ ವಿವಿಧ ಆಚರಣೆಯಲ್ಲಿ ಪಾಲ್ಗೊಳ್ಳುವರು. ಕೆಲವೆಡೆ ಹಿಂದೂ-ಮುಸ್ಲಿಮರು ಒಂದಾಗಿ ಆಚರಣೆಯಲ್ಲಿ ಭಾಗವಹಿಸುವರು. ಆಲಾಯಿ ಕುಣಿತ, ಮೊಹರಂ ಪದಗಳು ಹಾಡುವ ಮತ್ತು ಬೆಂಕಿಯಲ್ಲಿ ನಡೆದಾಡುವ ಆಚರಣೆ ರೂಢಿಯಲ್ಲಿದೆ. 

ದೇಶದ ವಿವಿಧ ಭಾಗಗಳಲ್ಲಿ ನೆಲೆಸಿರುವ ಶಿಯಾ ಮುಸ್ಲಿಮರು ಮೆರವಣಿಗೆ ನಡೆಸುವರು. ಶೋಕಾಚರಣೆ ಸಂಕೇತವಾಗಿ ಕಪ್ಪು ಬಟ್ಟೆ ಧರಿಸುವರು. ದೇಹ ದಂಡಿಸುವ ಆಚರಣೆಯನ್ನೂ ಮಾಡುವರು. ಮಕ್ಕಳು, ಯುವಕರು ಮತ್ತು ವೃದ್ಧರು ಚೂಪಾದ ವಸ್ತುಗಳಿಂದ ಎದೆ ಹಾಗೂ ಬೆನ್ನಿಗೆ ಬಡಿದುಕೊಳ್ಳುವರು. ಬಹುತೇಕರು ಎದೆಗೆ ಕೈಗಳಿಂದ ಬಡಿದುಕೊಂಡು ಶೋಕ ಗೀತೆಗಳನ್ನು ಹಾಡುವರು.

ಕೊರೊನಾ ಕಾರಣ ಈ ಬಾರಿ ಮೊಹರಂ ಆಚರಣೆಗೆ ಸಂಬಂಧಿಸಿದಂತೆ ಕೆಲವೊಂದು ನಿರ್ಬಂಧ ವಿಧಿಸಲಾಗಿದೆ. ಸರ್ಕಾರದ ಮಾರ್ಗಸೂಚಿಯನ್ವಯ ಆಚರಣೆಗೆ ಸಿದ್ಧತೆ ನಡೆದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು