ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವರಾತ್ರಿ: ಜಗನ್ಮಾತೆಯ ಅರ್ಚನೆ

Published 14 ಅಕ್ಟೋಬರ್ 2023, 20:46 IST
Last Updated 14 ಅಕ್ಟೋಬರ್ 2023, 20:46 IST
ಅಕ್ಷರ ಗಾತ್ರ

ಈಶ್ವರನು ಮಾಯೆಯ ಗುಣತ್ರಯಗಳಿಗೆ ಅನುಗುಣವಾಗಿ ಬ್ರಹ್ಮ-ವಿಷ್ಣು-ರುದ್ರ ಎಂದೆನಿಸಿಕೊಂಡು ಸೃಷ್ಟಿ-ಸ್ಥಿತಿ-ಲಯಕಾರ್ಯವನ್ನು ಮಾಡುವನು. ಇಂತಹ ಸಗುಣಬ್ರಹ್ಮದ ಅನಿರ್ವಚನೀಯ ಶಕ್ತಿಯನ್ನು ಸರಸ್ವತೀ-ಲಕ್ಷ್ಮೀ-ಪಾರ್ವತೀ ಎಂದು ಕರೆಯಲಾಗಿದೆ. ಈ ಶಕ್ತಿತ್ರಯದ ತಾದಾತ್ಮ್ಯ ಅನುಸಂಧಾನ ವಿಶೇಷವಾಗಿ ಶರನ್ನವರಾತ್ರಿಯಲ್ಲಿ ಅನಾದಿಯಿಂದಲೂ ನಡೆದುಕೊಂಡು ಬಂದಿದೆ. ಈ ಸಂದರ್ಭದಲ್ಲಿ ಜಗತ್ತಿನ ಮೂಲಸ್ವರೂಪಿಣಿಯೂ ನಿಯಾಮಕಳೂ ಆದ ತ್ರಿಪುರಸುಂದರಿಯನ್ನು ಒಂಬತ್ತು ದಿನಗಳ ಕಾಲ ನಾನಾ ಪ್ರಕಾರದಲ್ಲಿ ನಾನಾ ರೂಪದಲ್ಲಿ ಧ್ಯಾನ ಅರ್ಚನ ಪೂಜೆ ಉಪಾಸನಾದಿಗಳೊಂದಿಗೆ ಆಸ್ತಿಕರು ಅರ್ಚಿಸುವರು, ಭಜಿಸುವರು. ಶಾರದಾತಿಲಕ, ಪ್ರಪಂಚಸಾರ, ಮಂತ್ರಮಹೋದಧಿ, ನಿರ್ಣಯಸಿಂಧು, ನವರಾತ್ರಕಲ್ಪ ಮುಂತಾದ ಗ್ರಂಥಗಳಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಮ್ಮ ಪೂರ್ವಜರು ನೀಡಿರುವರು. 

ಸನಾತನಧರ್ಮಾವಲಂಬಿಗಳಿಗೆ ವೇದಗಳೇ ಮೂಲಾಧಾರ. ಈ ವೇದಗಳನ್ನು ಸ್ವರೂಪ, ಪ್ರಯೋಜನ ಮುಂತಾದ ದೃಷ್ಟಿಗಳಿಂದ ಋಗಾದಿ ನಾಲ್ಕು ವಿಧವಾಗಿ ವಿಭಾಗಿಸಿ ಲೋಕೋಪಕಾವನ್ನು ಪರಮಕಾರುಣಿಕರಾದ ವೇದವ್ಯಾಸಮುನಿಗಳು ಮಾಡಿದರು. ಸಂಹಿತೆ, ಆರಣ್ಯಕ, ಬ್ರಾಹ್ಮಣ, ಉಪನಿಷತ್ತುಗಳೆಂದು ಆ ಗ್ರಂಥಭಾಗಗಳು ಪ್ರಸಿದ್ಧವಾಗಿವೆ. ವೇದಗಳ ತಾತ್ಪರ್ಯಭಾಗಗಳಾದ ಉಪನಿಷತ್ತುಗಳು ಜೀವ ಜಗತ್ತು ಈಶ್ವರನ ಕುರಿತು ಸರಿಯಾದ ಮಾರ್ಗದರ್ಶನವನ್ನು ಮಾಡುತ್ತವೆ. ಸಮಸ್ತ ವೇದೋಪನಿಷತ್ತುಗಳ ತಾತ್ಪರ್ಯವನ್ನು ಗಮನಿಸಿ ಬಾದರಾಯಣ ಮುನಿಗಳು ಶಾರೀರಕ ಮೀಮಾಂಸಾಸೂತ್ರಗಳನ್ನು ರಚಿಸಿದರು. ಇವು ಸಂಖ್ಯೆಯಲ್ಲಿ555 ಆಗುತ್ತವೆ. ಈ ಪರಂಪರೆಯಲ್ಲಿ ಬಂದ ಆಚಾರ್ಯ ಶಂಕರ ಭಗವತ್ಪಾದರು ಹತ್ತು ಉಪನಿಷತ್ತುಗಳು, ಭಗವದ್ ಗೀತೆ, ಶಾರೀರಕ ಮೀಮಾಂಸಾಸೂತ್ರಗಳಿಗೆ ಪ್ರಸನ್ನ ಗಂಭೀರವಾದ ಭಾಷ್ಯವನ್ನು ರಚಿಸಿದರು. ಈ ಮೂರನ್ನು ಸೇರಿಸಿ ಪ್ರಸ್ಥಾನತ್ರಯವೆಂದು ಕರೆಯುವರು. ಈ ಪ್ರಸ್ಥಾನತ್ರಯಗಳೇ ಭಾರತೀಯ ಸಮಸ್ತ ಸನಾತನ ಧರ್ಮಾವಲಂಬಿಗಳಿಗೆ ಆಧಾರ, ಆಕರ ಗ್ರಂಥ. ಈ ಹಿನ್ನೆಲೆಯಲ್ಲಿ ನಾನಾ ಉಪಾಖ್ಯಾನ, ಕಥೆ ಮುಂತಾದವುಗಳ ಮೂಲಕ ಜೀವ, ಜಗತ್ತಿನ ಹಾಗೂ ಪರಬ್ರಹ್ಮದ ನಿಜವಾದ ತತ್ವವನ್ನು ಇವು ತಿಳಿಸುತ್ತವೆ‌. ವೇದೋಕ್ತವಾದ ಈ ತಿಳಿವಳಿಕೆಯನ್ನು ಶಾಸ್ತ್ರೀಯವಾದ ಭಾಷೆಯಲ್ಲಿ ತತ್ವಜ್ಞಾನವೆಂದು ಕರೆಯುವರು. ತತ್ವವೆಂದರೆ ವಸ್ತವಿನ ನಿಜವಾದ ಸ್ವರೂಪ.

ಉದಾಹರಣೆಗೆ, ಮಣ್ಣಿನಿಂದ ಮಾಡಿದ ಮಡಕೆ, ಕುಡಿಕೆ, ಹೂಜಿ, ಹಂಡೆ, ಬಾನಿ ಮುಂತಾದ ವಸ್ತುಗಳ ಮೂಲವನ್ನು ಗಮನಿಸಿದಾಗ ಇವುಗಳ ಆಕಾರ, ರೂಪ, ಹೆಸರುಗಳು ಬೇರೆ ಬೇರೆಯಾಗಿದ್ದರೂ ಅವುಗಳ ಮೂಲ ಮಾತ್ರ ಮಣ್ಣೇ ಆಗಿದೆ. ಹಾಗೆಯೇ ಚಿನ್ನದಿಂದ ತಯಾರಿಸಿದ ನಾನಾ ಆಭರಣಗಳು ಬೇರೆ ಬೇರೆಯಾದರೂ ಅವುಗಳ ಮೂಲ ಚಿನ್ನವೇ ಆಗಿದೆ. ಇದೇ ರೀತಿಯಲ್ಲಿ ಜೀವ, ಜಗತ್ತಿನ ಮೂಲ ರಹಸ್ಯವನ್ನು ನಮ್ಮ ಹಿಂದಿನ ಜ್ಞಾನಿಗಳು ತಮ್ಮ ತಪಃಪ್ರಭಾವದಿಂದ ತಮ್ಮ ಅಂತರಂಗದ ಬೆಳಕಿನಲ್ಲಿ ಕಂಡುಕೊಂಡರು. ಈ ಜಗತ್ತಿನ ಪರಮಮೂಲ ಪರಬ್ರಹ್ಮ ವಸ್ತು. ಅದನ್ನು ಉಪನಿಷತ್ತುಗಳು ಬ್ರಹ್ಮವೆಂದು ಕರೆದವು. ಬ್ರಹ್ಮವೆಂದರೆ ದೊಡ್ಡದು, ಬೃಹತ್ತಾದುದು ಎಂದರ್ಥ. ಮಾನವನ ಕಲ್ಪನೆಗೆ ಮೀರಿದ ದೊಡ್ಡತನ ಅದರದು. ಅದಕ್ಕೆ ಮೇರೆ ಎಂಬುದು ಇಲ್ಲ. ಇಂತಹ ಬ್ರಹ್ಮವೇ ಜಗತ್ತಿನ ಪರಮಮೂಲ; ವಿಶ್ವದ ಪರಮ ಹಾಗೂ ಚರಮ ತತ್ವ ಇದಾಗಿದೆ. ಇದನ್ನು ಉಪನಿಷತ್ತುಗಳು ಅದ್ವಯ, ಅದ್ವೈತ, ಅದ್ವಿತೀಯ, ಏಕಂ, ಸತ್‌ ಎಂದೆಲ್ಲ ಕರೆದವು. ಈ ಬ್ರಹ್ಮವೇ ಅಂಡ ಪಿಂಡ ಬ್ರಹ್ಮಾಂಡದ ಮೂಲ. ಇದೇ ಆತ್ಮ. ಇದನ್ನೇ ತಿಳಿಯ ಬೇಕಾದದು ಎಂದು ಮಾಂಡೂಕ್ಯೋಪನಿಷತ್ತು ತಿಳಿಸುತ್ತದೆ. ‘ಏಷಃ ಸರ್ವೇಶ್ವರಃ ಏಷಃ ಸರ್ವಜ್ಞಃ ಸರ್ವಸ್ಯ....ಹಿ.....ಭೂತಾನಾಮ್’ ( ಮಾ.ಉ.6), ‘.... ಸ ಆತ್ಮಾ ಸ ವಿಜ್ಞೇಯಃ’ (ಮಾ.ಉ.7) ಎಂದು. ಆದ್ದರಿಂದ ಬ್ರಹ್ಮಜ್ಞಾನ, ಆತ್ಮಜ್ಞಾನ, ಅದ್ವೈತಾತ್ಮಜ್ಞಾನ ಎಂದೆಲ್ಲ ಪರ್ಯಾಯ ಪದಗಳು ಅಥವಾ ಸಮಾನಾರ್ಥಕ ಪದಗಳು. ಉಪನಿಷತ್ತುಗಳು ತಿಳಿಸುವಂತೆ ಸೃಷ್ಟಿಗಿಂತ ಮುಂಚೆ ಒಂದೇ ಒಂದಾದ ಸದ್ವಸ್ತು ಇತ್ತು. ಅದು ಬಹುವಾಗಬೇಕೆಂದು ಬಯಸಿ ತಪಸ್ಸನ್ನು ಮಾಡಿತು. ಇಲ್ಲಿ ತಪಸ್ಸೆಂದರೆ ಸೃಷ್ಟಿಯನ್ನು ಮಾಡಬೇಕೆಂಬ ಆಲೋಚನೆ. ಹೀಗೆ ಆಲೋಚಿಸಿದ ಅದು ಮೊದಲು ಆಕಾಶವಾಗಿ ತೋರಿಕೊಂಡಿತು. ಆಕಾಶವೆಂದರೆ ಅವಕಾಶ, ಖಾಲಿಯಾದ ಜಾಗ, ಸ್ಥಳವೆಂದರ್ಥ. ಹೀಗೆ ಆಕಾಶವಾಗಿ ತೋರಿಕೊಂಡ ಸದ್ವಸ್ತುವಿನಿಂದ ವಾಯುವಿನ ಚಲನೆಯು ಉಂಟಾಯಿತು. ಹೀಗೆ ಕ್ರಮೇಣ ತೇಜಸ್ಸು, ಜಲ, ಪೃಥ್ವಿ, ವನಸ್ಪತಿಗಳು ಉಂಟಾದವು. ಇವುಗಳಲ್ಲಿ ಆಯಾ ರೂಪವಾಗಿ ಸದ್ವಸ್ತುವೇ ತೋರಿಕೊಂಡಿತು. ಅನಂತರ ಆ ಸದ್ವಸ್ತುವೇ ಈ ವಿಶ್ವವನ್ನು ಜೀವರೂಪದಿಂದ ಪ್ರವೇಶಿಸಿ ನಾಮ ರೂಪವಾಗಿ ವಿಂಗಡಿಸುತ್ತೇನೆ ಎಂದುಕೊಂಡು ಅದರಂತೆ ಎಲ್ಲ ವಸ್ತುಗಳಿಗೆ ಆಕಾರ ಹಾಗೂ ಹೆಸರನ್ನು ನೀಡಿತು.

ವಸ್ತುತಃ ಪರಬ್ರಹ್ಮವು ನಿರ್ಗುಣ, ನಿರಾಕಾರ, ಸರ್ವವ್ಯಾಪೀ ಎಂದು ಮುಂತಾಗಿ ಶ್ರುತಿಗಳು ಬಣ್ಣಿಸಿವೆ. ಇಂತಹ ಪರಬ್ರಹ್ಮವಸ್ತು ಪ್ರಪಂಚಾಕಾರವಾಗಿ ಹೇಗೆ ಬದಲಾವಣೆ ಹೊಂದಿತು ಎಂಬ ಸಂದೇಹಕ್ಕೆ ಶಾಸ್ತ್ರೀಯ ಸಮಾಧಾನ ಹೀಗಿದೆ. ಪ್ರಪಂಚಕ್ಕೆ ಬ್ರಹ್ಮ ಉಪಾದಾನ ಕಾರಣ, ಮತ್ತು ನಿಮಿತ್ತ ಕಾರಣ. ವಸ್ತುತಃ ಪರಬ್ರಹ್ಮದಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲ. ಹಾಗಿದ್ದರೂ ಅದರಲ್ಲಿ ಪ್ರಪಂಚ ತೋರುತ್ತದೆ. ಈ ತೋರಿಕೆಗೆ ಮಾಯೆಯೇ ಕಾರಣ. ಮಾಯೆ ಬ್ರಹ್ಮದ ಅನಿರ್ವಚನೀಯ ಶಕ್ತಿ. ಪರಬ್ರಹ್ಮವು (ಪರಮಾತ್ಮನು) ಮಾಯೆಯಿಂದಾಗಿ ನಾನಾ ರೂಪದಲ್ಲಿ ಅಥವಾ ನಾನಾ ರೂಪವಾಗಿ ತೋರುತ್ತಾನೆ. ಈ ಮಾಯೆಯೇ ವಿಶ್ವದ ಮೂಲ ಪ್ರಕೃತಿ. ಈ ಮಾಯೆಯನ್ನು ಶಾಸ್ತ್ರದಲ್ಲಿ ಅವಿದ್ಯಾ, ಅವ್ಯಾಕೃತ, ಅವ್ಯಕ್ತ, ಮೂಲಪ್ರಕೃತಿ ಮುಂತಾದ ಹೆಸರಿನಿಂದ ಕರೆಯಲಾಗಿದೆ. ಈ ಮಾಯೆಯು ಸತ್ವ, ರಜ, ತಮೋಗುಣಗಳಿಂದ ಕೂಡಿದೆ. ಮಾಯೆಗೆ ಆಶ್ರಯವಾದ ಪರಬ್ರಹ್ಮದಲ್ಲಿ ಯಾವುದೇ ಗುಣಗಳಿಲ್ಲ. ಅದು ನಿರವಯವ ನಿರಾಕಾರ ನಿರ್ಗುಣ. ಈ ನಿರ್ಗುಣವು ಮಾಯೆಯಿಂದೊಡಗೂಡಿದಾಗ ಸಗುಣವೆನಿಸುವುದು. ಆಗ ಅದನ್ನು ಸರ್ವವ್ಯಾಪಿ, ಸರ್ವಜ್ಞ, ಸರ್ವಶಕ್ತ, ಈಶ್ವರನೆಂದು ಶ್ರುತಿಯಲ್ಲಿ ಕರೆಯಲಾಗಿದೆ. ಬ್ರಹ್ಮದ ಶಕ್ತಿ ಮಾಯೆಯಾದ್ದರಿಂದ ಅದು ಬ್ರಹ್ಮಕ್ಕಿಂತ ಅತ್ಯಂತ ಭಿನ್ನವಲ್ಲ. ಶಂಕರಭಗವತ್ಪಾದಾಚಾರ್ಯರು ತಮ್ಮ ಸೌಂದರ್ಯಲಹರಿಯ ಆರಂಭದಲ್ಲಿ ‘ಶಿವಃ ಶಕ್ತ್ಯಾಯುಕ್ತಃ ಯದಿ ಭವತಿ ಶಕ್ತಃ ಪ್ರಭವಿತುಮ್’ ಎಂದು ಸ್ತೋತ್ರವನ್ನು ಆರಂಭಿಸುವರು. ಇಲ್ಲಿ ಶಿವನೆಂದರೆ ಪಾರ್ವತಿಯ ಪತಿ ಶಿವನಲ್ಲ; ಶಿವನೆಂದರೆ ಮಾಂಡೂಕ್ಯೋಪನಿಷತ್ತಿನಲ್ಲಿ ತಿಳಿಸಿದ ‘ಶಾಂತಂ ಶಿವಮದ್ವೈತಮ್....ಸ ಆತ್ಮಾ’ ಎಂಬುದಾಗಿದೆ. ಇಂತಹ ಬ್ರಹ್ಮವು ಸಚ್ಚಿದಾನಂದ ಸ್ವರೂಪವುಳ್ಳದ್ದಾಗಿದೆ. ಇದನ್ನು ಶಾಸ್ತ್ರೀಯ ಪರಿಭಾಷೆಯಲ್ಲಿ ಶುದ್ಧಬ್ರಹ್ಮವೆಂತಲೂ, ಮಾಯೆಯಿಂದ ಕೂಡಿದ ಬ್ರಹ್ಮನನ್ನು ಮಾಯಾಶಬಲಿತವೆಂತಲೂ ಸಗುಣಬ್ರಹ್ಮವೆಂತಲೂ ಕರೆಯುವರು. ಮಾಯಾಸಹಿತನಾದ ಈ ಈಶ್ವರನು ಮಾಯೆಯ ಗುಣತ್ರಯಗಳಿಗನುಗುಣವಾಗಿ ಬ್ರಹ್ಮ-ವಿಷ್ಣು-ರುದ್ರ ಎಂದೆನಿಸಿಕೊಂಡು ಸೃಷ್ಟಿ-ಸ್ಥಿತಿ-ಲಯಕಾರ್ಯವನ್ನು ಮಾಡುವನು.
ಇಂತಹ ಸಗುಣಬ್ರಹ್ಮದ ಅನಿರ್ವಚನೀಯ ಶಕ್ತಿಯನ್ನು ಸರಸ್ವತೀ-ಲಕ್ಷ್ಮೀ-ಪಾರ್ವತೀ ಎಂದು ಕರೆದಿದೆ. ಈ ಶಕ್ತಿತ್ರಯದ ತಾದಾತ್ಮ್ಯ ಅನುಸಂಧಾನ ವಿಶೇಷವಾಗಿ ಶರನ್ನವರಾತ್ರಿಯಲ್ಲಿ ಅನಾದಿಯಿಂದಲೂ ನಡೆದುಕೊಂಡು ಬಂದಿದೆ. ಈ ಸಂದರ್ಭದಲ್ಲಿ ಜಗನ್ಮೂಲಸ್ವರೂಪಿಣಿಯು ಜಗನ್ನಿಯಾಮಕಳೂ ಆದ ಆ ತ್ರಿಪುರಸುಂದರಿಯನ್ನು ಒಂಬತ್ತು ದಿನಗಳ ಕಾಲ ನಾನಾ ಪ್ರಕಾರದಲ್ಲಿ ನಾನಾ ರೂಪದಲ್ಲಿ ಧ್ಯಾನ ಅರ್ಚನ ಪೂಜೋಪಾಸನಾದಿಗಳೊಂದಿಗೆ ಅರ್ಚಿಸುವರು, ಭಜಿಸುವರು. ಶಾರದಾತಿಲಕ, ಪ್ರಪಂಚಸಾರ, ಮಂತ್ರಮಹೋದಧಿ, ನಿರ್ಣಯಸಿಂಧು, ನವರಾತ್ರಕಲ್ಪಮುಂತಾದ ಗ್ರಂಥಗಳಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಮ್ಮ ಪೂರ್ವಜರು ನೀಡಿರುವರು. ಅದರ ಅನುಸಾರ ಶ್ರೀ ದೇವಿ ಲಲಿತಾತ್ರಿಪುರಸುಂದರಿಯನ್ನು ಕಲ್ಪೋಕ್ತಪ್ರಕಾರ ವಿಧಿವದರ್ಚಿಸುವ ರೀತಿಯನ್ನು ಹೀಗೆ ಗಮನಿಸಬಹುದು. ‘ದೇವೀ ಕಲ್ಪೋಕ್ತಮಾರ್ಗೇಣ ಪೂಜಾಂ ಕೃತ್ವಾ ವಿಧಾನತಃ...........ಏವಂ ನವದಿನಾಂತಂ ತಾಂ ದುರ್ಗಾಮಾವಾಹ್ಯ ಪೂಜಯೇತ್. ಯೋಗನಿದ್ರಾ ದೇವಜಾತಾ ಮಹಿಷಾಸುರಮರ್ದಿನೀ. ಶೈಲಜಾ ಧೂಮ್ರಹಾ ಚಂಡಮುಂಡಹಾ ರಕ್ತಬೀಜಹಾ. ನಿಶುಂಭಹಾ ಶುಂಭಹೇತಿ ನವದುರ್ಗಾ ಪ್ರಕೀರ್ತಿತಾಃ’ – ಎಂದು. ಅಂದರೆ ನವರಾತ್ರಿಯ ಮೊದಲನೆಯ ದಿನ ಜಗನ್ಮಾತೆಯನ್ನು ಯೋಗನಿದ್ರಾದೇವಿ ಎಂದು ಪೂಜಿಸಬೇಕು. ಅವಳನ್ನು ಈ ರೀತಿಯಲ್ಲಿ ಅರ್ಚಿಸಬೇಕು, ಧ್ಯಾನಿಸಬೇಕು.

ಯೋಗನಿದ್ರಾದೇವಿಯು ಗಜಾರೂಢಳೂ ರಕ್ತವರ್ಣಳೂ ಕೆಂಪುಬಣ್ಣದಮಾಲೆಗಳಿಂದ ಅಲಂಕೃತಳೂ ನಾಲ್ಕು ಕೈಗಳಿಂದ ಶಕ್ತಿ, ಶೂಲ, ಗದಾಧಾರಿಣಿಯು, ಅಭಯಮುದ್ರೆಯನ್ನು ಧರಿಸಿದವಳೂ ಆಗಿರುವಳು. ಅಂತಹ ದುರ್ಗಾಂಬಿಕೆಯು ನಮಗೆ ಅಭಯವನ್ನು, ಶಕ್ತಿಯನ್ನು ಸದಾ ನೀಡಲೆಂದು ಪ್ರಾರ್ಥಿಸಬೇಕು. ಎರಡನೆಯ ದಿನ ದೇವಜಾತಾದೇವಿ ಎಂದು ಭಗವತಿಯನ್ನು ಪೂಜಿಸಬೇಕು. ಇವಳು ಹಂಸಾರೂಢಳು, ಬಿಳಿಬಣ್ಣದವಳು, ಬಿಳಿಯ ಬಟ್ಟೆಯನ್ನು ಧರಿಸಿದವಳು, ಶ್ವೇತಮಾಲೆಯಿಂದ ಅಲಂಕೃತಳು, ಸೃಕ್, ಸ್ರುವ, ಕಮಂಡಲು, ಜಪಮಾಲೆಯನ್ನು ಕ್ರಮವಾಗಿ ತನ್ನ ನಾಲ್ಕು ಕೈಗಳಲ್ಲಿ ಧರಿಸಿರುವಳು. ಈ ದಿನ ಚಿತ್ತಶುದ್ಧಿಗಾಗಿ ವಿಶೇಷವಾಗಿ ಪ್ರಾರ್ಥಿಸಬೇಕು. ಮೂರನೆಯ ದಿನ ಮಹಿಷಮರ್ದಿನೀ ದುರ್ಗಾರೂಪಳೆಂದು, ಅವಳು ಬಿಳಿಯ ಗೌರೀರೂಪಳು. ಎರಡು ಕೈಗಳಲ್ಲಿ ಎಳೆಗೆಂಪಿನ ಬಿಳಿನೈದಿಲೆಯನ್ನು ಧರಿಸಿರುವಳು; ಸಿಂಹವನ್ನು ಏರಿದವಳು, ಬಿಳಿಯ ವಸನವನ್ನು ಧರಿಸಿರುವಳು. ನಾಲ್ಕನೆಯ ದಿನ ಶೈಲಜಾದುರ್ಗಾದೇವಿಯು ವಿಂಧ್ಯಾಚಲನಿವಾಸಿನಿಯು, ಕೆಂಪುವರ್ಣದ ಬಟ್ಟೆಯನ್ನುಟ್ಟವಳು, ಮೂಷಕವಾಹಿನಿಯು, ಪಾಶಾಂಕುಶ ಮಾತುಲಿಂಗಧಾರಿಣಿಯು ಆಗಿರುವಳು. ಐದನೆಯ ದಿವಸ ಧೂಮ್ರಹಾದುರ್ಗೆಯೆಂದು ಮಕರವಾಹಿನಿಯಾಗಿ, ಶಂಖಚಕ್ರಗದಾಪದ್ಮಧಾರಿಣಿಯು, ಬಂಗಾರದ ಬಣ್ಣವನ್ನು ಹೊಂದಿದವಳು ಆಗಿರುವಳು. ಆರನೆಯ ದಿನ ಚಂಡಮುಂಡಹಾದುರ್ಗಾ ಎಂದು ಮಯೂರವಾಹಿನಿಯಾಗಿ ಸ್ವರ್ಣವಸ್ತ್ರ ಸ್ಫಟಿಕಗಳಿಂದ ಅಲಂಕೃತಳಾದವಳು, ಬಾಣಕೋದಂಡಶಕ್ತಿ ಖೇಟಾದಿಗಳನ್ನು ಧರಿಸಿರುವವಳಾದ ದುರ್ಗಾದೇವಿಯನ್ನು ಧ್ಯಾನಿಸಬೇಕು. ಏಳನೆಯ ದಿನದಂದು ರಕ್ತಬೀಜಹಳೆಂದು ಪ್ರಸಿದ್ಧಳು. ಅವಳು ರಥಾರೂಢಳಾಗಿ ಎರಡು ಕೈಗಳಲ್ಲಿ ಕಮಲದ ಹೂಗಳನ್ನು ಹಿಡಿದವಳು ಆಗಿರುವಳು. ಎಂಟನೆಯ ದಿವಸ ನಿಶುಂಭಹಾದೇವಿ ಎಂಬ ಹೆಸರಿನಿಂದಲೂ, ತ್ರಿಶೂಲ ಡಮರು ಚರ್ಮ ಖಟ್ವಾಂಗವನ್ನು ಧರಿಸಿ, ರಥಾರೂಢಳಾಗಿ ಶೋಭಿಸುವ ದುರ್ಗಾಂಬಿಕೆಯನ್ನು ಪೂಜಿಸಬೇಕು. ಒಂಬತ್ತನೆಯ ದಿನ ಶುಂಭಹಾದುರ್ಗಾ ಎಂದೂ, ಸಿಂಹಾರೂಢಳೂ ತ್ರಿನೇತ್ರಳೂ ಸೂರ್ಯಕೋಟಿಪ್ರಭಾಯುಕ್ತಳೂ ಆದ ಮಹಾದುರ್ಗೆಯನ್ನು ಪೂಜಿಸಬೇಕು ಎಂದು ತಿಳಿಸಿದೆ. ಇನ್ನೊಂದು ಗ್ರಂಥದ ಪ್ರಕಾರ ಮೊದಲ ದಿನ ದುರ್ಗಾದೇವಿ ಎಂದು, ಎರಡನೆಯ ದಿನ ಆರ್ಯಾದೇವಿ ಎಂದು, ಮೂರನೆಯ ದಿವಸ ಭಗವತಿ ಎಂದು, ನಾಲ್ಕನೆಯ ದಿನ ಕುಮಾರೀಯೆಂದು, ಐದನೆಯ ದಿನ ಅಂಬಿಕೆ ಎಂದು, ಆರನೆಯ ದಿನ ಮಹಿಷಮರ್ದಿನೀ ದುರ್ಗಾರೂಪಳೆಂದು, ಏಳನೆಯ ದಿನ ಚಂಡಿಕೆ ಎಂದು, ಎಂಟನೆಯ ದಿನ ಸರಸ್ವತಿ ಎಂದು, ಒಂಬತ್ತನೆಯ ದಿನ ವಾಗೀಶ್ವರಿ ಎಂದು ಅರ್ಚಿಸಬೇಕು.

ಇನ್ನೊಂದು ಪ್ರಕಾರ ಹೀಗಿದೆ: ಒಂದನೆಯ ದಿನ ಕುಮಾರಿ, ಎರಡನೆಯ ದಿನ ತ್ರಿಮೂರ್ತಿ, ಮೂರನೆಯ ದಿವಸ ಕಲ್ಯಾಣಿ, ನಾಲ್ಕನೆಯ ದಿನ ರೋಹಿಣಿ, ಐದನೆಯ ದಿನ ಕಾಳಿ, ಆರನೆಯ ದಿನ ಚಂಡಿ, ಏಳನೆಯ ದಿವಸ ಶಾಂಭವೀ, ಎಂಟನೆಯ ದಿನ ದುರ್ಗಾ, ಒಂಬತ್ತನೆಯ ದಿವಸ ಭದ್ರಾ ಎಂಬುದಾಗಿ ಪೂಜಿಸಬೇಕು. ಹೀಗೆ ಅಖಂಡ ಭಾರತದ ತುಂಬೆಲ್ಲ ನಾನಾ ವಿಧವಾಗಿ ನವದುರ್ಗಾ ಅನುಪಮ ಅನುಷ್ಠಾನವು ಅನಾದಿ ಕಾಲದಿಂದಲೂ ಸಾಗಿಬಂದಿದೆ. ‘ಉಪಾಸಕಾನಾಂ ಕಾರ್ಯಾರ್ಥಂ ಬ್ರಹ್ಮಣೋ ರೂಪ ಕಲ್ಪನಾ’ ಎಂಬ ಉಪನಿಷತ್ ವಾಕ್ಯದನ್ವಯ ನಮ್ಮ ನಮ ಶ್ರದ್ಧಾ, ಭಕ್ತಿ, ವಿಶ್ವಾಸಗಳಿಗನುಗುಣವಾಗಿ ಆ ಜಗನ್ಮಾತೆಯನ್ನು ಅರ್ಚಿಸುವರು. ಪ್ರಾಚೀನ ಕಾಲದಿಂದಲೂ ಜಗನ್ಮಾತೆಯನ್ನು ದುರ್ಗಾ, ನವದುರ್ಗಾ, ವನದುರ್ಗಾ, ಕಾಳಿ, ಮಹಾಕಾಳಿ ಎಂದೂ; ಮಂಕಾಳಿ, ಸಿರಿದೇವಿ, ಯಲ್ಲಮ್ಮ, ಮಲ್ಲಮ್ಮ , ಮಂಕಾಳಮ್ಮ, ಚೌಡಿ, ಹೊನ್ನಮ್ಮ – ಹೀಗೆ ಜಾನಪದೀಯ ಹೆಸರುಗಳಿಂದ ಎಲ್ಲರೂ ಭಜಿಸುವರು. ‘ಸರ್ವ ದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ’ ಎಂಬ ಉಕ್ತಿಯಂತೆ ಪರಬ್ರಹ್ಮಮಹಿಷಿಯಾದ ಜಗನ್ಮಾತೆಯ ಪೂಜೆ, ಅರ್ಚನೆ, ಭಜನೆ, ಧ್ಯಾನ, ಸ್ತುತಿ, ನುತಿಗಳು ಅವ್ಯಾಹತವಾಗಿ ಸಾಗುತ್ತಿವೆ. ಅವಳು ಆ ಜಾತಿ ಈ ಜಾತಿ ಕೆಂಪು ಕಪ್ಪು ಬಿಳಿ ಎಂಬ ಭೇದಗಳಿಲ್ಲದೆ ಎಲ್ಲರೂ ಪೂರ್ಣ ಪ್ರಮಾಣದಲ್ಲಿ ತಾಯಿಯ ರೂಪದಲ್ಲಿ ಪೂಜಿಸುವ ದೇವತೆ ಅಂಬಾಭವಾನಿ. ಯಾವ ಕಾಮನೆಯೇ ಇರಲಿ, ಸಮಾಹಿತ ಮನಸ್ಕರಾಗಿ ಆ ತಾಯಿಯನ್ನು ನಮ್ಮ ದೇಶದ ಅನೇಕ ಸಾಧು ಸಂತರು ಜೀವನ್ಮುಕ್ತರು, ಮಹಾಪ್ರತಿಭಾಶಾಲಿಗಳು ನಾನಾ ರೀತಿಯಲ್ಲಿ ಸ್ತುತಿಸಿರುವರು. ಅವರೆಲ್ಲರ ಧ್ಯೇಯ ಒಂದೇ – ತಾಯಿಯ ಅನುಗ್ರಹ, ದಿವ್ಯಾನುಗ್ರಹ, ಲೋಕಕ್ಷೇಮ ಅಥವಾ ಆನಂದಪ್ರಾಪ್ತಿ, ಇಷ್ಟಸಿದ್ಧಿ. ಅಂತಹ ಸಹಸ್ರಾರು ಭಗವದ್ಭಕ್ತರಲ್ಲಿ ಆಚಾರ್ಯ ಶಂಕರಭಗವತ್ಪಾದರು ನಮಗೆಲ್ಲ ಮೇಲ್ಪಂಕ್ತಿಯನ್ನು ಹಾಕಿಕೊಟ್ಟವರು. ನೂರಾರು ಸ್ತೋತ್ರಗಳ ಮೂಲಕ ಪರಬ್ರಹ್ಮವಸ್ತುವಿನ ಉಪಾನೆಯನ್ನು ಹೇಗೆ ಮಾಡಬೇಕು, ಹೇಗೆ ಮಾಡಿದರೆ ಫಲಸಿದ್ಧಿಸುವುದು ಎಂಬುದನ್ನು ನಾನಾ ರೀತಿಯಲ್ಲಿ ಉಪದೇಶ, ಅನುಷ್ಠಾನ, ಧ್ಯಾನ, ಮನನಗಳ ಮೂಲಕ ತಿಳಿಸಿಕೊಟ್ಟಿದ್ದಾರೆ. ಹೀಗೆಯೇ ದುರ್ಗಾಸಪ್ತಶತೀ, ದುರ್ಗಾಪೂಜಾ, ದೀಪನಮಸ್ಕಾರ, ಶ್ರೀಚಕ್ರಾರ್ಚನೆ, ಮಾನಸಪೂಜಾ ಮುಂತಾದವು ಅವರ ಅವರ ಅರ್ಹತೆಗೆ ಅನುಗುಣವಾಗಿ ವಿವಿಧ ರೀತಿಯ ಅರ್ಚನೆ ಪಠನ ಪಾರಾಯಣ ಪೂಜೆಗಳ ಮೂಲಕ ಸರ್ವಮಂಗಲೆಯಾದ ಶ್ರೀ ಅಂಬಾಭವಾನಿಯ ಅನುಗ್ರಹವನ್ನು ಪಡೆಯೋಣ. ಜೀವನದಲ್ಲಿ ಯಶೋವಂತರಾಗೋಣ, ಭಾಗ್ಯಶಾಲಿಗಳಾಗೋಣ. ಜಯತು ಶ್ರೀ ಲಲಿತಾ ಶ್ರೀಮಾತಾ, ಜಗನ್ಮಾತಾ – ಹೀಗೆ ಜಗನ್ಮಾತೆಯ ಅರ್ಚನೆ ಎಲ್ಲರಿಗೂ ಸರ್ವಮಾನ್ಯವಾಗಿದೆ. ಇದಕ್ಕೆ ಕಾರಣ ತಾಯಿಯನ್ನಾಗಿ ಕಾಣುವ ಪರಿ. ತಾಯಿಯಲ್ಲಿ ಎಲ್ಲವನ್ನೂ ನಿವೇದಿಸಿಕೊಳ್ಳಬಹುದು. ಕಾಡಿ ಬೇಡಿ ಅವಳ ವಾತ್ಸಲ್ಯಾಮೃತವನ್ನು ಸವಿಯಬಹುದು. ದೊರೆಯದೇ ಇದ್ದುದ್ದನ್ನು ತಾಯಿ ಕರುಣಿಸುವಳು.

ಜಗನ್ಮಾತೆಯಾದ ಬಾಲಾತ್ರಿಪುರಸುಂದರಿಯು ಲೋಕಕ್ಷೇಮಕ್ಕಾಗಿ ನಾನಾ ಅವತಾರಗಳನ್ನು ತಾಳಿ ದುಷ್ಟಮರ್ದನ, ಶಿಷ್ಟಪಾಲನವನ್ನು ಮಾಡಿದಳು. ಅವಳ ಲೋಕಸಂಗ್ರಹಕಾರ್ಯವನ್ನು ಸದಾ ಸ್ಮರಿಸುವುದು ಸನಾತನ ಭಾರತೀಯನ ಆದ್ಯ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಅವಳನ್ನು ಒಂಬತ್ತು ದಿನಗಳ ಕಾಲ ನಾನಾ ವಿಧದಲ್ಲಿ ಆಸ್ತಿಕರು ಭಜಿಸುವರು. ಈ ಹಿನ್ನೆಲೆಯಲ್ಲಿ ಅವಳ ಆರಾಧನೆಯನ್ನು ಜ್ಞಾನವಿಜ್ಞಾನ ಕೋವಿದರಾದ ತಪಸ್ವಿಗಳು, ಯೋಗಿಗಳು ಮೂಲಾಧಾರದಿಂದ ಸಹಸ್ರಾರದವರೆಗೆ ತಮಗೆ ಇಷ್ಟವಾದ ಪದ್ಧತಿಯ ಮೂಲಕ ಪೂಜಿಸುವ ವಿಧಾನ ನವರಾತ್ರಿಯ ವಿಶೇಷವಾಗಿದೆ. ನವರಾತ್ರಿಯ ಸಂದರ್ಭದಲ್ಲಿ ಮೊದಲ ದಿನ ಅವಳನ್ನು ಶೈಲಪುತ್ರಿಯಾಗಿ ಅರ್ಚಿಸುವರು. ಹಿಮವಂತನ ಕುವರಿಯಾದ ಲಲಿತಾದೇವಿ ಶೈಲಪುತ್ರಿ ಅಥವಾ ಹೈಮವತಿ; ವೃಷಾರೂಢಳು, ತನ್ನೆರಡು ಕರಗಳಲ್ಲಿ ಶೂಲ ಹಾಗೂ ಕಮಲವನ್ನು ಧರಿಸಿರುವಳು. ಯಶಸ್ವಿನಿಯಾದ ಶೈಲಪುತ್ರಿಯು ತಲೆಯಲ್ಲಿ ಅರ್ಧಚಂದ್ರನನ್ನು ಧರಿಸಿ, ಸಮಸ್ತ ಭಜಕರ ಇಷ್ಟಾರ್ಥವನ್ನು ಪೂರೈಸುವಲ್ಲಿ ಸದಾ ಅಗ್ರಗಣ್ಯಳಾಗಿರುವಳು. ಅವಳನ್ನು ಸದಾ ಏಕಾಗ್ರಚಿತ್ತದಿಂದ ಆಸ್ತಿಕರು ಪೂಜಿಸಬೇಕು.

ಎರಡನೆಯ ದಿನ ಸ್ವಾಧಿಷ್ಠಾನದ ಅಭಿಮಾನೀದೇವತೆಯಾದ ಬ್ರಹ್ಮಚಾರಿಣಿಯಾಗಿ ಒಂದು ಕೈಯಲ್ಲಿ ಕಮಂಡಲವನ್ನು ಇನ್ನೊಂದು ಕೈಯಲ್ಲಿ ಜಪಮಾಲೆಯನ್ನು ಧರಿಸಿರುವಳು. ಅಂತಹ ಜಗನ್ಮಾತೆಯನ್ನು ಭಕ್ತಿ–ಶ್ರದ್ಧೆಯಿಂದ ಅರ್ಚಿಸಬೇಕು.
ಇಲ್ಲಿ ಇನ್ನೊಂದು ವಿಶೇಷತೆಯನ್ನು ‘ಬ್ರಹ್ಮಚಾರಿಣೀ’ ಎಂಬ ಶಬ್ದವು ತಿಳಿಸುವುದು. ಹಿಮವಂತನ ಮಗಳಾಗಿ ಜನಿಸಿದ ಅಪರ್ಣಾದೇವಿಯು ಪರಶಿವನೇ ತನ್ನನ್ನು ವರಿಸಬೇಕು, ಹರಸಬೇಕೆಂದು ನಾರದಮುನಿಗಳಿಂದ ಶಿವಮಹಾಮಂತ್ರ ದೀಕ್ಷೆಯನ್ನು ಪಡೆದು ಅನೇಕ ಸಹಸ್ರವರ್ಷಗಳ ಪರಿಯಂತ ಕಠಿಣ ತಪಸ್ಸನ್ನು ಮಾಡಿದಳು. ಕ್ರಮೇಣ ಅನ್ನ ಆಹಾರವನ್ನು ತ್ಯಜಿಸಿ ಕೇವಲ ಬಿಲ್ವಾದಿ ಎಲೆಗಳನ್ನು ತಿಂದು ತಪಸ್ಸನ್ನು ಮಾಡಿದಳು. ಕೊನೆಗೆ ಅದನ್ನು ಸಹ ತ್ಯಜಿಸಿ ನಿರಾಹಾರಳಾಗಿ ತಪಸ್ಸನ್ನು ಮಾಡಿ ಶಿವನನ್ನು ವರಿಸಿದಳು. ಪರಿಪೂರ್ಣ ಜ್ಯೋತಿರ್ಮಯಳಾಗಿ ಕಂಗೊಳಿಸಿದಳು. ಇದರಿಂದಾಗಿ ದೇವಾನುದೇವತೆಗಳು ಹೆದರಿ ಶಿವನ ಮೊರೆಹೊಕ್ಕರು. ತತ್ಫಲವಾಗಿ ತಪಸ್ಸು, ತ್ಯಾಗ, ವೈರಾಗ್ಯ, ಸದಾಚಾರ, ಸಂಯಮಾದಿಗಳಿಗೆ ಸಾಕ್ಷೀಭೂತಳಾದಳು. ‘ಉಮಾ’ ಎಂಬ ನಾಮಾಂಕಿತವನ್ನು ಪಡೆದು ಲೋಕಕ್ಕೆ ಅಭಯವನ್ನು ನೀಡಿದಳು. ಹರಿ ಹರ ಬ್ರಹ್ಮಾದಿಗಳು ಇವಳ ತಪಸ್ಸನ್ನು ಕೊಂಡಾಡಿದರು. ‘ವೇದಸ್ತತ್ತ್ವಂ ತಪೋ ಬ್ರಹ್ಮ’ ಎಂಬ ಉಪನಿಷತ್ ಮಂತ್ರದಂತೆ ಸದಾ ಬ್ರಹ್ಮಚಾರಿಣಿಯಾಗಿ ಲೋಕಾನುಗ್ರಹವನ್ನು ಮಾಡಿದಳು. ಈ ಕಠಿಣ ನಿಯಮ ಸಂಯಮಾದಿಗಳನ್ನು ನೆನೆಯುತ್ತ ಯೋಗಿಗಳು ಸ್ವಾಧಿಷ್ಠಾನ ಚಕ್ರವರ್ತಿನಿಯಾದ ಅಂಬಿಕೆಯನ್ನು ಪೂಜಿಸಿ ಧನ್ಯರಾದರು. ಈ ಹಿನ್ನೆಲೆಯಲ್ಲಿ ಅವಳು ಬ್ರಹ್ಮಚಾರಿಣಿ.

ಮೂರನೆಯ ದಿನ ಚಂದ್ರಘಂಟಾದೇವಿ ಎಂಬ ಹೆಸರಿನ ಅಧಿಷ್ಠಾತೃದೇವತೆಯಾಗಿ ಯೋಗಿಗಳು ಅವಳನ್ನು ಭಜಿಸಿದರು. ಸಿಂಹವಾಹಿನಿಯಾಗಿ ಚಂಡಮುಂಡರನ್ನು ಸದೆಬಡಿದು ಕೋಪಾಗ್ನಿಜ್ವಾಲೆಯಿಂದ ತೋರಿ ಬಂದಳು. ದುಷ್ಟದಾನವವೃಂದಕ್ಕೆ ಭಯವನ್ನು ಸಜ್ಜನರಿಗೆ ಅಭಯವನ್ನು ನೀಡಿ ಮಣಿಪುರಚಕ್ರದಲ್ಲಿ ನೆಲೆನಿಂತು ದುರ್ಗಾದೇವಿ ಎನಿಸಿದಳು.

ನಾಲ್ಕನೆಯ ದಿನ, ಕೂಷ್ಮಾಂಡಾದೇವಿಯಾಗಿ ಲೋಕದಲ್ಲಿ ಕಂಗೊಳಿಸಿದಳು. ಇನ್ನೊಂದು ವಿಧಾನದ ಪ್ರಕಾರ ಅನಾಹತಚಕ್ರದ ಅಭಿಮಾನೀದೇವತೆ ಇವಳು. ಎಂಟು ಕೈಗಳಲ್ಲಿ ವಿವಿಧ ಆಯುಧಗಳನ್ನೂ ಧರಿಸಿ ರಕ್ತಸಿಕ್ತ ಶರೀರಧಾರಿಣಿಯಾಗಿ ಕುಂಬಳಕಾಯಿಯನ್ನು ಕೈಯಲ್ಲಿ ಹಿಡಿದು ಭಕ್ತಕೋಟಿಯನ್ನು ಅನುಗ್ರಹಿಸಿದಳು.

ಐದನೆಯ ದಿನ ಸ್ಕಂದಮಾತೆಯಾಗಿ ತೋರಿಬಂದಳು. ಸಿಂಹಾಸನದ ಮೇಲೆ ಕುಳಿತು ಕೈಯಲ್ಲಿ ಕಮಲಹಿಡಿದು ಭಕ್ತರ ಅಭೀಷ್ಟವನ್ನು ನೆರವೇರಿಸಿದಳು. ಮಣಿಪುರಚಕ್ರದಲ್ಲಿ ಇಂತಹ ಷೋಡಶಕಲಾಸುಂದರಿಯನ್ನು ಯೋಗಿಗಳು ತಮ್ಮ ತಮ್ಮ ಅಂತಃಕರಣದಲ್ಲಿ ಕಂಡರು. ಹೀಗಾಗಿ ಅವಳು ಸ್ಕಂದಮಾತೆ.

ಆರನೆಯ ದಿನದಂದು ಜಗನ್ಮಾತೆಯನ್ನು ಕಾತ್ಯಾಯನೀದೇವಿ ಎಂದು ಉಪಾಸನೆ ಮಾಡುವರು. ಇವಳು ಹುಣ್ಣಿಮೆಯಚಂದ್ರನಂತೆ ರಾರಾಜಿಸುತ್ತ ಕಾತ್ಯಾಯನೀ ಎಂಬ ಹೆಸರನ್ನು ಧರಿಸಿ ಶಾರ್ಧೂಲವನ್ನೇರಿ ಮಹಿಷಾಸುರಾದಿ ರಾಕ್ಷಸರನ್ನು ಸದೆ ಬಡಿದಳು. ಕಾತ್ಯಾಯನ ಮಹರ್ಷಿಗಳು ಅನೇಕ ವರ್ಷಗಳ ಕಾಲ ಜಗನ್ಮಾತೆಯನ್ನು ಅರ್ಚಿಸಿದರು, ಪೂಜಿಸಿದರು. ಅವರ ತಪಸ್ಸನ್ನು ಮೆಚ್ಚಿ ತ್ರಿಮೂರ್ತಿಗಳು ಅನುಗ್ರಹಿಸಿದರು. ಅವರ ತೇಜೋಬಲದ ಮಹಿಮೆಯಿಂದ ಕನ್ಯಾರತ್ನವೊಂದನ್ನು ಕಾತ್ಯಾಯನಮುನಿಗಳು ಭಾದ್ರಪದ ಕೃಷ್ಣ ಚತುರ್ದಶಿಯಂದು ಪಡೆದರು. ಆಶ್ವಯುಜ ಸಪ್ತಮಿಯಿಂದ ನವಮಿಯವರೆಗೆ ಅವಳನ್ನು ಸಮಸ್ತ ಲೋಕದ ಜನರು ಪೂಜಿಸುವರು. ಆಜ್ಞಾಚಕ್ರದಲ್ಲಿ ನೆಲೆನಿಂತು ಮಹಿಷಾಸುರಾದಿ ದಾನವರನು ನಾಶಮಾಡಿ ಲೋಕಾನುಗ್ರಹವನ್ನು ಮಾಡಿದಳು. ಶ್ರೀಕೃಷ್ಣ ಪರಮಾತ್ಮನನ್ನು ಪತಿಯನ್ನಾಗಿ ಪಡೆಯುವ ಉದ್ದೇಶದಿಂದ ಯಮುನಾನದಿಯ ತಟದಲ್ಲಿ ಕೆಲವು ಗೊಪಿಕೆಯರು ಕಾತ್ಯಾಯನಿಯನ್ನು ಪೂಜಿಸಿ ತಮ್ಮ ಇಷ್ಟಾರ್ಥಸಿದ್ಧಿಯನು ಪಡೆದರೆಂದು ಕೆಲವು ಪುರಾಣಗಳು ತಿಳಿಸುವುವು.

ಏಳನೆಯ ದಿನ ಕಾಳರಾತ್ರಿಯಂತಲೂ ಜಗದಂಬಿಕೆಯನ್ನು ಪೂಜಿಸುವರು. ಇದರ ಉದ್ದೇಶ ನಮ್ಮ ನಮ್ಮ ಅಜ್ಞಾನ, ಮೌಢ್ಯಗಳ ನಾಶ.

ಎಂಟನೆಯ ದಿನ ಮಹಾಗೌರಿಯ ರೂಪದಲ್ಲಿ ಅವಳನ್ನು ಪೂಜಿಸುವರು. ಎಂಟು ವರ್ಷ ವಯಸ್ಸಿನ ಕುವರಿಯಾಗಿ ಬಿಳಿಯ ಬಣ್ಣದ ವಸ್ತ್ರವನ್ನು ಧರಿಸಿ ಆಭಯಮುದ್ರೆಯ ಮೂಲಕ ಜ್ಞಾನವನ್ನು ಕರುಣಿಸುವಳು.

ಒಂಬತ್ತನೆಯ ದಿನ ಸಿದ್ಧಿದಾತ್ರಿ ಎಂಬ ಹೆಸರಿನಿಂದ ಅಣಿಮಾದಿ ಅಷ್ಟಸಿದ್ಧಿಗಳನ್ನು ಕರುಣಿಸುವಳು. ಯೋಗಿಗಳು ಮಾನಸಪೂಜೆಯ ಮೂಲಕ ಅವಳನ್ನು ಅರ್ಚಿಸಿ ಅವಳ ಅನುಗ್ರಹಕ್ಕೆ ಭಾಜನರಾಗುವರು.

ಹೀಗೆ ಒಂಬತ್ತು ದಿನಗಳ ಕಾಲ ನಾನಾ ವಿಧವಾಗಿ ಜಗನ್ಮಾತೆಯನ್ನು ಸ್ತುತಿಸಿ, ಅರ್ಚಿಸಿ, ಪೂಜಿಸಿ ಸಮಸ್ತ ಲೋಕದ ಕ್ಷೇಮವನ್ನು ಬಯಸಿ ನಾವೂ ಜೀವನದಲ್ಲಿ ಧನ್ಯತೆಯನ್ನು ಹೊಂದೋಣ. ನಮ್ಮ ಪೂರ್ವಜರು ಸುಮ್ಮನೆ ನವರಾತ್ರಿಯನ್ನು ಆಚರಿಸಲಿಲ್ಲ, ಆಚರಿಸುವುದೂ ಇಲ್ಲ. ಆಚಾರ್ಯ ಶಂಕರಭಗವತ್ಪಾದರಂತಹ ತತ್ವಜ್ಞಾನಿಗಳು, ರಾಮಕೃಷ್ಣ ಪರಮಹಂಸರಂತಹ ಕಾಳಿಕಾದೇವಿಯ ಉಪಾಸಕರು ಕೇವಲ ಲೋಕಸಂಗ್ರಹದ ದೃಷ್ಟಿಯಿಂದ ಇಂತಹ ಅನುಪಮ ಅನುಷ್ಠಾನವನ್ನು ಜೀವನಪರ್ಯಂತ ನಡೆಸಿ ಸಾರ್ಥಕತೆಯನ್ನು ಪಡೆದರು. ವ್ಯಕ್ತಿಶುದ್ಧಿಯಿಂದ ಸಮಾಜಶುದ್ಧಿ, ತನ್ಮೂಲಕ ರಾಷ್ಟ್ರಸಮೃದ್ಧಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT