ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವರಾತ್ರಿಯ ಸಂಭ್ರಮ: ಶಕ್ತಿ ದೇವತೆಯ ದೇಗುಲಗಳತ್ತ ಒಂದು ನೋಟ

ವಿವಿಧ ದೇಗುಲಗಳಿಗೆ ಬೆಂಗಳೂರಿನಿಂದ ಇರುವ ದೂರ
Last Updated 23 ಸೆಪ್ಟೆಂಬರ್ 2022, 19:39 IST
ಅಕ್ಷರ ಗಾತ್ರ

ನವರಾತ್ರಿ ಸಮೀಪಿಸಿದೆ. ನಾಡಿನಾದ್ಯಂತ ಹಬ್ಬದ ಸಂಭ್ರಮ ಮನೆ ಮಾಡಿದೆ. ದೇಶದ ವಿವಿಧ ಭಾಗಗಳಲ್ಲಿಯೂ ನವರಾತ್ರಿ ಆಚರಿಸಲಾಗುತ್ತದೆ. ಪಶ್ಚಿಮ ಬಂಗಾಳದಲ್ಲಿ ಇದು ದುರ್ಗಾ ಪೂಜೆ ಎಂದೇ ಪ್ರಸಿದ್ಧ. ನವರಾತ್ರಿ ಶಕ್ತಿ ದೇವತೆಯ ಆರಾಧನೆಯ ಹಬ್ಬ. ಕರ್ನಾಟಕದಲ್ಲಿ ಹೆಚ್ಚು ಪ್ರಸಿದ್ಧವಾದ, ಅಪಾರ ಭಕ್ತರನ್ನು ಹೊಂದಿರುವ ಶಕ್ತಿ ದೇವತೆಯ ದೇವಾಲಯಗಳು ಹಲವಿವೆ. ಅವುಗಳಲ್ಲಿ ಕೆಲವು ದೇಗುಲಗಳತ್ತ ಒಂದು ನೋಟ ಇಲ್ಲಿದೆ

ಕಟೀಲಿನಲ್ಲಿ ನವರಾತ್ರಿ ಯಕ್ಷ ವೈಭವ

ನಂದಿನಿ ನದಿಯ ತಟದಲ್ಲಿ ಇರುವ ಕಟೀಲು ದುರ್ಗಾಪರಮೇಶ್ವರಿ ದೇವಾಲಯವು ದಕ್ಷಿಣ ಕನ್ನಡ ಜಿಲ್ಲೆ ಮೂಲ್ಕಿ ತಾಲ್ಲೂಕಿನಲ್ಲಿದೆ. ನವರಾತ್ರಿ ಅಂಗವಾಗಿ ಸೆ.26ರಿಂದ ಅಕ್ಟೋಬರ್ 5ರ ವಿಜಯ ದಶಮಿಯವರೆಗೆ ಧಾರ್ಮಿಕ, ಸಾಂಸ್ಕೃತಿಕ ವೈಭವ ಮೇಳೈಸಲಿದೆ. ಲಲಿತಾ ಪಂಚಮಿ (ಸೆ.30), ಮೂಲನಕ್ಷತ್ರ ಬರುವ ದಿನ ಶಾರದಾ ಪೂಜೆ (ಅ.2), ಮಹಾನವಮಿ (ಅ.4), ವಿಜಯ ದಶಮಿ (ಅ.5) ಇಲ್ಲಿ ವೈಭವದಿಂದ ನಡೆಯುತ್ತದೆ. ಪ್ರತಿನಿತ್ಯ ಸಂಜೆ 5.30ರಿಂದ ಭಕ್ತಿ ಸಂಗೀತ, ಹರಿಕಥೆ, ಭರತನಾಟ್ಯದ ಜತೆಗೆ, ಸೇವೆಯ ಯಕ್ಷಗಾನ, ಬಯಲಾಟ ಪ್ರದರ್ಶನಗೊಳ್ಳಲಿವೆ.

ಪುಷ್ಪಗಳಿಂದ ಮನಸೆಳೆಯುವ ಮಾರಿಕಾಂಬೆ

ಶಿರಸಿ: ನಾಡಿನ ಶಕ್ತಿಪೀಠಗಳಲ್ಲಿ ಒಂದೆನಿಸಿರುವ ಇಲ್ಲಿನ ಮಾರಿಕಾಂಬಾ ದೇವಾಲಯದಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ಅದ್ಧೂರಿ ಜಾತ್ರೆ ನಡೆಯುತ್ತದೆ. ನವರಾತ್ರಿ ಉತ್ಸವವನ್ನೂ ಇಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತದೆ.

ದೇವಿಯ ಸನ್ನಿಧಾನದಲ್ಲಿ ನವಧಾನ್ಯ ಬಳಸಿ ‘ಘಟ ಸ್ಥಾಪನೆ’ ಮಾಡಿ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಪ್ರತಿ ಮೂರು ದಿನಕ್ಕೊಮ್ಮೆ ದೇವಿಯ ಗರ್ಭಗುಡಿ, ಹೊರಾಂಗಣಕ್ಕೆ ಲಕ್ಷಾಂತರ ಹೂಗಳನ್ನು ಬಳಸಿ ಅಲಂಕರಿಸಲಾಗುತ್ತದೆ. ನವರಾತ್ರಿ ವೇಳೆ ಉಡಿ ಸೇವೆಯ ಹೊರತಾಗಿ ಉಳಿದ ಪೂಜಾ ಸೇವೆಗಳು ಸ್ಥಗಿತಗೊಂಡಿರುತ್ತವೆ.

ಪ್ರತಿದಿನ ಸಂಜೆ ದೇವಸ್ಥಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಜರುಗುತ್ತದೆ. ಭಕ್ತರಿಗೆ ಕ್ರೀಡೆ, ಮನರಂಜನಾ ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ನಾಡಿನ ವಿವಿಧೆಡೆಗಳಿಂದ ಲಕ್ಷಾಂತರ ಭಕ್ತರು ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.

ಪೊಳಲಿಯಲ್ಲಿ ನಿತ್ಯ ಚಂಡಿಕಾ ಹೋಮ

ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಕರಿಯಂಗಳ ಗ್ರಾಮದ ದೇವಿ ಪೊಳಲಿ ರಾಜರಾಜೇಶ್ವರಿ ಸನ್ನಿಧಿಯಲ್ಲಿ ನವರಾತ್ರಿಯ ವೇಳೆ ಭಕ್ತರ ಹರಕೆಯ ಭಾಗವಾಗಿ ಪ್ರತಿದಿನ ಮಧ್ಯಾಹ್ನ ಚಂಡಿಕಾ ಹೋಮ ನಡೆಯಲಿದೆ. ಸೆ.26ರಂದು ಪ್ರಾರಂಭವಾಗುವ ನವರಾತ್ರಿ ಮಹೋತ್ಸವ ಅ.3ರಂದು ಮುಕ್ತಾಯಗೊಳ್ಳುತ್ತದೆ. ಸೆ.30ರ ಲಲಿತಾ ಪಂಚಮಿಯಂದು ಮಹಿಳೆಯರಿಗೆ ವಿಶೇಷ ಸಡಗರ. ಅಂದು ಬೆಳಿಗ್ಗೆ 9ರಿಂದ 12 ಗಂಟೆಯವರೆಗೆ ದೇವಿಗೆ ಹರಕೆಗೆ ಬಂದ ಸೀರೆಗಳನ್ನು ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ. ಪ್ರತಿದಿನ ಸಂಜೆ 6 ಗಂಟೆಯಿಂದ ಸಾಂಸ್ಕೃತಿಕ ಹಬ್ಬವನ್ನು ಆಯೋಜಿಸಲಾಗಿದೆ. ಸಂಗೀತ, ನೃತ್ಯದೊಂದಿಗೆ ಯಕ್ಷಗಾನ, ತಾಳಮದ್ದಳೆ, ಅ.3ರಂದು ನವರಾತ್ರಿಯ ವೇಷಗಳ ಸಂಭ್ರಮ ಇರುತ್ತದೆ.

ವರವ ಕೊಡುವ ಚಾಮುಂಡಿ

ಮೈಸೂರಿನ ಚಾಮುಂಡೇಶ್ವರಿ ಬೆಟ್ಟವನ್ನು ಮಹಾಬಲಗಿರಿ ಎಂತಲೂ ಕರೆಯುತ್ತಾರೆ. ಚಂಡ–ಮುಂಡ ರಾಕ್ಷಸರನ್ನು ಸಂಹಾರ ಮಾಡಿದ ನಂತರ ಚಾಮುಂಡೇಶ್ವರಿ ಇಲ್ಲಿ ನೆಲೆಸಿದಳೆಂದು ಪ್ರತೀತಿಯಿದ್ದು, ಮಾರ್ಕಂಡೇಯ ಮಹರ್ಷಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿದರೆಂಬ ಐತಿಹ್ಯವೂ ಇದೆ.

ಯದುವಂಶದ ಮೈಸೂರು ಒಡೆಯರು ದೇವಾಲಯವನ್ನು ಅಭಿವೃದ್ಧಿಗೊಳಿಸಿದ್ದು, ಕಳೆದ 500 ವರ್ಷಗಳಿಂದ ದೇಗುಲವು ಗರ್ಭಗುಡಿ, ನವರಂಗ, ವಿಮಾನ, ರಾಜಗೋಪುರ ಹಂತ ಹಂತವಾಗಿ ಬೆಳೆದಿದೆ. ಶರನ್ನವರಾತ್ರಿಯಲ್ಲಿ ನವದುರ್ಗೆಗೆ ಪೂಜೆ ಸಲ್ಲಿಸಿದರೆ ಕೇಳಿದ ವರವನ್ನು ಕೊಡುವಳೆಂಬ ನಂಬಿಕೆ ಭಕ್ತರಲ್ಲಿದೆ.ನವರಾತ್ರಿ ನ.26ರಿಂದ ಅ.4ರವರಗೆ ಇರಲಿದ್ದು, ಪ್ರತಿ ದಿನ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಟಾ, ಕೂಷ್ಮಾಂಡಾ, ಸ್ಕಂದಮಾ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ, ಸಿದ್ಧಿಧಾತ್ರಿ ಅಲಂಕಾರವನ್ನು ಮಾಡಲಾಗುತ್ತದೆ.

ವಿಜಯದಶಮಿಯಂದು ಚಾಮುಂಡೇಶ್ವರಿ ಮೂರ್ತಿಯನ್ನು ಬೆಟ್ಟದ ದರ್ಬಾರ್‌ ಮಂಟಪದಲ್ಲಿ ಕೂರಿಸಿ ವಿಜಯ ಉತ್ಸವ ಮಾಡಲಾಗುತ್ತದೆ.

ಹೊರನಾಡು ಅನ್ನಪೂರ್ಣೇಶ್ವರಿ

ಚಿಕ್ಕಮಗಳೂರು ಜಿಲ್ಲೆ ಕಳಸ ಸಮೀಪದ ಹೊರನಾಡಿನ ಅನ್ನಪೂರ್ಣೇಶ್ವರಿ ದೇಗುಲದಲ್ಲಿ ನವರಾತ್ರಿ ಆಚರಣೆ ವಿಶಿಷ್ಟವಾಗಿ ಜರುಗುತ್ತದೆ.

ನವರಾತ್ರಿಯ ಎಲ್ಲ ದಿನ ದೇವಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ. ಪ್ರತಿದಿನ ಬೆಳಿಗ್ಗೆ ಧಾರ್ಮಿಕ ವಿಧಿ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಇರುತ್ತದೆ.

ವಿಜಯದಶಮಿ ಪ್ರಯುಕ್ತ ವಿಜಯೋತ್ಸವ ಆಚರಣೆ ನಡೆಯುತ್ತದೆ. ದಸರಾ ಮುಗಿದ ಕೂಡಲೇ ಜರುಗುವ ಮಹಾಚಂಡಿಕಾ ಹೋಮ ಪ್ರಸಿದ್ಧಿ ಪಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಶಾರದಾಂಬೆ ಸನ್ನಿಧಿಯಲ್ಲಿ ಶರನ್ನವರಾತ್ರಿ ಉತ್ಸವ 12 ದಿನ ಜರುಗುತ್ತದೆ. ಜಗತ್ಪ್ರಸೂತಿಕಾ, ಹಂಸವಾಹಿನಿ, ಮಾಹೇಶ್ವರಿ, ಕೌಮಾರಿ, ವೈಷ್ಣವಿ ಇಂದ್ರಾಣಿ, ವೀಣಾ ಶಾರದೆ. ಮೋಶೃಂಗೇರಿಯ ಶಾರದಾಂಬೆಹಿನಿ, ರಾಜರಾಜೇಶ್ವರಿ, ಚಾಮುಂಡಿ, ಗಜಲಕ್ಷ್ಮಿ ಅಲಂಕಾರಗಳಿಂದ ದೇವಿ ಕಂಗೊಳಿಸುವುದು ವಿಶೇಷ.

ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲು ವಿವಿಧೆಡೆಗಳಿಂದ ಭಕ್ತರು ಬರುತ್ತಾರೆ. ದೇವಾಲಯ ಅಂಗಳದಲ್ಲಿ ಸ್ವರ್ಣ ರಥ ಉತ್ಸವ ನೆರವೇರುತ್ತದೆ. ಬೀದಿ ಉತ್ಸವ ನಡೆಯುತ್ತದೆ. ನವರಾತ್ರಿಯ ವಿಶೇಷ ಕಾರ್ಯಕ್ರಮದಲ್ಲಿ ದರ್ಬಾರು ಒಂದು. 11ನೇ ದಿನ ಮಹಾರಥೋತ್ಸವ ಜರುಗುತ್ತದೆ. ರಥೋತ್ಸವದಲ್ಲಿ ಉಭಯ ಸ್ವಾಮೀಜಿ ಅಡ್ಡಪಲ್ಲಕ್ಕಿ ಉತ್ಸವ ನಡೆಯುತ್ತದೆ.

ಕೊಲ್ಲೂರು ದೇವಸ್ಥಾನದಲ್ಲಿ ನವರಾತ್ರಿ ರಂಗು

ಉಡುಪಿ ಜಿಲ್ಲೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಸೆ.29ರಿಂದ ನವರಾತ್ರಿ ಉತ್ಸವದ ಆಚರಣೆಗಳು ಆರಂಭಗೊಂಡು ಅ.5ರವರೆಗೆ ನಡೆಯಲಿವೆ. ಕಟ್ಟಕಟ್ಟಳೆ ಪೂಜೆಗಳ ಜತೆ ನವರಾತ್ರಿ ವಿಶೇಷ ಪೂಜೆ, ಉತ್ಸವಗಳು ನಡೆಯಲಿವೆ. ಅ.4ರಂದು ಮಹಾನವಮಿ ನಡೆಯಲಿದ್ದು, ಬೆಳಿಗ್ಗೆ 11.30ಕ್ಕೆ ಚಂಡಿಕಾಯಾಗ, ಮಧ್ಯಾಹ್ನ 1ಕ್ಕೆ ರಥೋತ್ಸವ ಜರುಗಲಿದೆ.
ಅ.5 ರಂದು ವಿಜಯದಶಮಿಯ ಪ್ರಯುಕ್ತ ಬೆಳಿಗ್ಗೆ ವಿದ್ಯಾರಂಭ, ನವಾನ್ನ ಪ್ರಾಶನ, ಸಂಜೆ 5.30ಕ್ಕೆ ಮೂಕಾಂಬಿಕಾ ದೇವಿಯ ವಿಜಯೋತ್ಸವ ನಡೆಯಲಿದೆ. ನವರಾತ್ರಿ ಅಂಗವಾಗಿ ಪ್ರತಿನಿತ್ಯ ದೇವಳದ ಸ್ವರ್ಣಮುಖಿ ರಂಗಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ.

‌ದೇಶದ ಒಂಬತ್ತು ಶಕ್ತಿಪೀಠಗಳಲ್ಲಿ ಕೊಲ್ಲೂರು ಸ್ಥಾನ ಪಡೆದುಕೊಂಡಿದೆ. ದೇವಸ್ಥಾನದಲ್ಲಿ ಚಂಡಿಕಾ ಹೋಮದ ಸೇವೆ ಸಲ್ಲಿಸುವುದು ಅತ್ಯಂತ ಪ್ರಸಿದ್ಧವಾಗಿದ್ದು ಭಕ್ತರು ಹೋಮಕ್ಕಾಗಿ ವರ್ಷಾನುಗಟ್ಟಲೆ ಸರದಿಯಲ್ಲಿ ಕಾಯುವುದು ವಿಶೇಷ.

ಶಕ್ತಿದೇವತೆ ಬನಶಂಕರಿದೇವಿ

ಬಾದಾಮಿ: ಚಾಲುಕ್ಯರ ರಾಜಧಾನಿಯಾಗಿದ್ದ ಐತಿಹಾಸಿಕ ಬಾದಾಮಿ ಸಮೀಪದ ನಿಸರ್ಗ ಸೌಂದರ್ಯ ಬನದ ಮಡಿಲಿನಲ್ಲಿರುವ ಶಕ್ತಿಪೀಠ ಬನಶಂಕರಿದೇವಿಗೆ ವಿಜಯದಶಮಿ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

ವಿಜಯನಗರ ಅರಸರ ಕಾಲದಲ್ಲಿ ಬನಶಂಕರಿ ದೇವಾಲಯ ನಿರ್ಮಾಣವಾಗಿದೆ. ಆಗ ಪ್ರತಿಷ್ಠಾಪಿಸಿದ್ದ ಮೂರ್ತಿ ಈಗಿಲ್ಲ. ಹೊಸದಾಗಿ 17ನೇ ಶತಮಾನದಲ್ಲಿ ಬನಶಂಕರಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ ಎಂದು ಇತಿಹಾಸಕಾರರು ಹೇಳುತ್ತಾರೆ. ಚಾಲುಕ್ಯರು ಈ ಶಕ್ತಿದೇವತೆಯನ್ನು ಆರಾಧಿಸುತ್ತಿದ್ದರು.ಸೆ.26ರಂದು ಘಟಸ್ಥಾಪನೆ ನೆರವೇರಿಸಿ, ಲಲಿತಾ ಪಂಚಮಿ. ದುರ್ಗಾಷ್ಟಮಿ, ಮಹಾನವಮಿ, ನವಚಂಡಿ ಹವನ ಪೂರ್ಣಾಹುತಿ ಮಾಡಲಾಗುತ್ತದೆ. ಅ. 4ರಂದು ಸಂಜೆ ಬನ್ನಿ ಮುಡಿಯಲಾಗುತ್ತದೆ.

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲದೆ, ಮಹಾರಾಷ್ಟ್ರ, ಗೋವಾ ಮತ್ತು ಆಂಧ್ರಪ್ರದೇಶ ರಾಜ್ಯದಿಂದ ಭಕ್ತರು ದೇವಿ ದರ್ಶನಕ್ಕೆ ಬರುತ್ತಾರೆ.

ಬೃಹತ್‌ ಜಾತ್ರೆಗೆ ಸಾಕ್ಷಿಯಾಗುವ ಯಲ್ಲಮ್ಮನಗುಡ್ಡ

ಉಗರಗೋಳ: ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಪೀಠಗಳಲ್ಲಿ ಒಂದಾದ ಸವದತ್ತಿ ತಾಲ್ಲೂಕಿನ ಯಲ್ಲಮ್ಮನಗುಡ್ಡದಲ್ಲಿ ನವರಾತ್ರಿ ಅಂಗವಾಗಿ 9 ದಿನಗಳ ಕಾಲ ಬೃಹತ್‌ ಜಾತ್ರೆ ಜರುಗುತ್ತದೆ.

ಮೊದಲ ದಿನದಂದು ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ‘ಘಟ್ಟಸ್ಥಾಪನೆ’ ಕಾರ್ಯಕ್ರಮ ನೆರವೇರುತ್ತದೆ. ಗರ್ಭಗುಡಿ ಎದುರು ಹಾಗೂ ದೇವಾಲಯ ಆವರಣದಲ್ಲಿ ದೀಪಗಳನ್ನು ಅಳವಡಿಸಲಾಗುತ್ತದೆ. ಕರ್ನಾಟಕ, ಮಹಾರಾಷ್ಟ್ರ, ಗೋವಾದಿಂದ ಲಕ್ಷಾಂತರ ಭಕ್ತರು ಆಗಮಿಸಿ ಇಲ್ಲಿನ ದೀಪಗಳಿಗೆ ಎಣ್ಣೆ ಹಾಕುತ್ತಾರೆ. ನಿತ್ಯ ಬೆಳಿಗ್ಗೆ ಮತ್ತು ಸಂಜೆ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ, ಅಭಿಷೇಕ ಮತ್ತು ನೈವೇದ್ಯನೆರವೇರುತ್ತದೆ. ಸಾವಿರಾರು ಸೀರೆಗಳೊಂದಿಗೆ ಯಲ್ಲಮ್ಮ ದೇವಿಗೆ ಅಲಂಕಾರ ಮಾಡಲಾಗುತ್ತದೆ.ಈ ಬಾರಿ 80 ಬ್ಯಾರೆಲ್‌ ಎಣ್ಣೆ ಸಂಗ್ರಹವಾಗುವ ನಿರೀಕ್ಷೆಯಿದೆ.

ಸಿಗಂದೂರು ಚೌಡೇಶ್ವರಿ

ಶಿವಮೊಗ್ಗ: ಮಲೆನಾಡಿನ ಅಧಿದೇವತೆ ಚೌಡೇಶ್ವರಿಯ ನೆಲೆಸಿಗಂದೂರಿನ ದೇವಸ್ಥಾನ ಪರಿಸರದಲ್ಲಿ ಈಗ ನವರಾತ್ರಿಯ ಸಂಭ್ರಮ ಗರಿಗೆದರಿದೆ. ಬೇಡಿದ ವರ ಕರುಣಿಸುವ ತಾಯಿ, ಶಿಷ್ಟರ ರಕ್ಷಿಸುವಳು ಎಂಬ ನಂಬಿಕೆ ಭಕ್ತರದ್ದು. ಸಾಗರ ತಾಲ್ಲೂಕಿನ ತುಮರಿ ಬಳಿಯ ಸಿಗಂದೂರಿಗೆ ಶರಾವತಿ ಹಿನ್ನೀರು ದಾಟಿ ಹೋಗಬೇಕಿದೆ. ಸಾಗರ ಪಟ್ಟಣದಿಂದ ಅಂಬಾರಗೋಡ್ಲಿಗೆ 20 ಕಿ.ಮೀ ದೂರ ತೆರಳಿ ಅಲ್ಲಿಂದ ಐದು ಕಿ.ಮೀ ಲಾಂಚ್‌ನಲ್ಲಿ ಸಾಗುವುದೇ ಚೇತೋಹಾರಿ ಸಂಗತಿ. ಸೆ. 26ರಿಂದ ಅ. 5ರವರೆಗೆ ಪ್ರಸಕ್ತ ನವರಾತ್ರಿ ಉತ್ಸವದ ವಿಭಿನ್ನ ಆಚರಣೆಗೆ ಆಡಳಿತ ಮಂಡಳಿ ಸಿದ್ಧತೆ ನಡೆಸಿದೆ. 9 ದಿನ ನಾಡಿನ ಮಠಾಧೀಶರು ಆಶೀರ್ವಚನ ನೀಡಲಿದ್ದಾರೆ. ಪ್ರತಿದಿನ ಸಂಜೆ 6.30 ರಿಂದ 7.30ರವರೆಗೆ ದೀಪೋತ್ಸವ, ಯಕ್ಷಗಾನ, ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT