ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಗಾದಿ | ಪಾಲ್ಗೊಳ್ಳುವಿಕೆಯ ಸಂಭ್ರಮವಿರಲಿ

ಸುಚಿತ್ರಾ ಹೆಗಡೆ
Published 5 ಏಪ್ರಿಲ್ 2024, 23:30 IST
Last Updated 5 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ತಿಳಿವಾವುದಿಳೆಗೆ ಯುಗಯುಗದ ಬೆಳಕಾಗಿತ್ತೊ
ಹಳದೆಂದು ನೀನದನು ಕಳೆಯುವೆಯ, ಮರುಳೆ
ತಳಹದಿಯದಲ್ತೆ ನಮ್ಮೆಲ್ಲ ಹೊಸ ತಿಳಿವಿಂಗೆ?
ಹಳೆ ಬೇರು ಹೊಸ ತಳಿರು - ಮಂಕುತಿಮ್ಮ

‘ಯುಗ’ ವೆಂದರೆ ಎರಡು ಎನ್ನುವ ಅರ್ಥವೂ ಇದೆ. ಯುಗಾದಿಯೆಂದರೆ ಎರಡು ಯುಗಗಳ ಸಂಧ್ಯಾಕಾಲ. ಶಿಶಿರದಲ್ಲಿ ಬರಿದಾದ ಪ್ರಕೃತಿ ನವವಸಂತನ ಆಗಮನದಿಂದಾಗಿ ಹೊಸ ಚಿಗುರು, ಹೊಸ ಬಣ್ಣ ತಳೆದು ಬೆಳಗುವ ಸಮಯ. ಋತು, ಮಾಸಗಳು ಸರಿದಂತೆ ಪ್ರಕೃತಿ ಬದಲಾವಣೆಯ ಕೈಗನ್ನಡಿಯಾಗುತ್ತದೆ. ಭೂಮಿ ತನ್ನ ಭ್ರಮಣದೊಂದಿಗೆ ಸೂರ್ಯನ ಚಲನೆಗೆ ಸಾಕ್ಷಿ ಹೇಳುತ್ತದೆ. ಸುರಿವ ಮಳೆಯ ದಟ್ಟ ಹಸಿರು ಹೊದಿಕೆ, ಕಡು ಚಳಿಯಲ್ಲಿ ಜಾಳಾಗಿ, ಬಿರು ಬೇಸಿಗೆಯನ್ನು ಸ್ವಾಗತಿಸುವಂತೆ ಎಳೆ ಚಿಗುರಿನ ನಗು ಬೀರುತ್ತದೆ. ಅಲ್ಲಿಗೆ ಸುತ್ತಲಿನ ಪ್ರಕೃತಿಗೆ ಚೈತ್ರದಾಗಮನವನ್ನು ಸಾರುವ ಯುಗಾದಿ ಹಬ್ಬ ಕಾಲಿಡುತ್ತದೆ.

ಹಾಗೆಯೇ ರುಚಿ ರುಚಿಯಾದ ಭಕ್ಷ ಭೋಜ್ಯಗಳಿಲ್ಲದ, ತನ್ನದೇ ವಿಶಿಷ್ಟವಾದ ಆಚರಣೆಗಳಿಲ್ಲದ ಹಬ್ಬಗಳನ್ನು ಕಲ್ಪಿಸಿಕೊಳ್ಳಲಾಗದು. ಸಿಹಿಯಾದ ಹೋಳಿಗೆಯ ಜೊತೆಗೆ ಹುಳಿಯಾದ ಮಾವಿನಕಾಯಿಯ ಚಿತ್ರಾನ್ನದ ಸಾಂಗತ್ಯ. ಸಿಹಿ ಹುಳಿ, ಖಾರವೆನಿಸುವ ಹೋಳಿಗೆಯ ಸಾರಿನೊಡನೆ ಪೈಪೋಟಿಗಿಳಿವ ಹುಳಿ, ಸಿಹಿ, ಖಾರ, ಕಹಿ, ಒಗರು ಎಲ್ಲ ಷಡ್ರಸಭರಿತವಾದ ಪಚಡಿ ಯುಗಾದಿಯ ದಿನ ಇರಲೇಬೇಕು.

ಆದರೆ ಇಂದಿಗೂ ಪ್ರತಿ ಹಬ್ಬದಲ್ಲೂ ತೆರೆಯ ಹಿಂದಿನ ಪಾತ್ರಧಾರಿಗಳಾಗಿ ತಮ್ಮ ಜೀವ ತೇಯುವ ನಮ್ಮ ಹೆಂಗಳೆಯರನ್ನು ದಿಟ್ಟಿಸುವಾಗ ಮನಸ್ಸು ಬೇವು-ಬೆಲ್ಲದ ಬೇವಾಗುತ್ತದೆ. ಹಬ್ಬವೆಂದರೆ ನಿಜವಾಗಲೂ ಸಂಭ್ರಮಿಸುವ, ತಮ್ಮ ಹಿರಿತನವನ್ನು, ದಕ್ಷತೆಯನ್ನು ಎಲ್ಲರ ಮುಂದೆ ಸಾರಿಕೊಳ್ಳುವ ಬಹಳಷ್ಟು ಹೆಂಗಳೆಯರು ಇರಬಹುದು. ಎಲ್ಲ ಕೆಲಸಗಳಲ್ಲೂ ಹೆಣ್ಣಿಗೆ ಸಾಥ್ ಕೊಡುವ ಗಂಡುಗಳೂ ಇರಬಹುದು. ಆದರೆ ಬಹುತೇಕ ಮನೆಗಳಲ್ಲಿ ಕೈಲಾಗದಿದ್ದರೂ ಮನೆಯವರ ಆಸೆಗಳನ್ನು ಈಡೇರಿಸಲು ಒದ್ದಾಡುವ ಹೆಣ್ಣುಮಕ್ಕಳಿಗೆ, ಹೊರಗೆ ದುಡಿಯುವ ಮಹಿಳೆಯರಿಗೆ, ಕೂಲಿನಾಲಿ ಮಾಡಿ ಆವತ್ತಿನ ಖರ್ಚಿಗಾಗಿ ದುಡಿಯುವ ಕೈಗಳಿಗೆ ಹಬ್ಬವೆಂದರೆ ಬರಿಯ ಸಡಗರವಲ್ಲ. ಅದು ಮನೆಯವರೆಲ್ಲರ, ಸುತ್ತಲಿನ ಸಮಾಜದ ನಿರೀಕ್ಷೆಗಳಿಗೆ ತಕ್ಕಂತೆ ನಡೆದುಕೊಂಡು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ಹೆಣಗಾಟದಂತೆ ತೋರುತ್ತದೆ.

ಪ್ರತಿ ಹಬ್ಬದ ಯಶಸ್ಸು ಮನೆಯ ಹೆಂಗಳೆಯರ ಶ್ರಮದ ಮೇಲೆ ನಿಂತಿರುವುದನ್ನು ಅಲ್ಲಗಳೆಯಲಾಗದು. ಸಾಮಾನ್ಯವಾಗಿ ನಮ್ಮ ಸಮಾಜ ಕೂಡ ಈ ವಿಶೇಷವಾದ ದಿನಗಳ ಹೆಚ್ಚುವರಿ ಕೆಲಸಗಳನ್ನು ನಿಭಾಯಿಸುವ ಹೊಣೆ ಕೇವಲ ಹೆಂಗಸರದ್ದೆಂದು ನಂಬಿದಂತಿದೆ. ಇದು ಹಬ್ಬದ ದಿನವೊಂದೇ ಅಲ್ಲ, ಹಬ್ಬ ಬರುವ ಕೆಲವು ದಿನಗಳ ಮೊದಲೇ ಹೆಣ್ಣು ಮಕ್ಕಳು ಮನೆಯನ್ನು ಸ್ವಚ್ಛಗೊಳಿಸುವ, ಶೃಂಗರಿಸುವ, ಅತಿಥಿಗಳನ್ನು ಸ್ವಾಗತಿಸುವ ಕೈಂಕರ್ಯಗಳಲ್ಲಿ ನಿರತರಾಗುತ್ತಾರೆ. ನೆರೆದ ಅತಿಥಿಗಳಾದಿಯಾಗಿ ಇಡೀ ಮನೆಯವರೆಲ್ಲರೂ ಹಬ್ಬದ ಗೌಜು ಗದ್ದಲಗಳಲ್ಲಿ ಆನಂದವಾಗಿ ಮೈ ಮರೆತಿರುವಾಗ ಮನೆಯ ಹೆಣ್ಣುಗಳಿಗೆ ಹಬ್ಬವೆಂದರೆ ಬರಿಯ ಸ್ವಚ್ಛಗೊಳಿಸು, ತಯಾರಿಸು, ನಿರ್ವಹಿಸು, ಪಾಲಿಸು, ಜೋಡಿಸು, ಈಡೇರಿಸು, ಮುಂದುವರಿಸು… ಗಳಂತಹ ಎಂದೂ ಮುಗಿಯದ ಜವಾಬ್ದಾರಿಗಳ ಸರಮಾಲೆಯಾಗಿ ಪರಿಣಮಿಸುವುದೇ ಜಾಸ್ತಿ.

ಹೆಣ್ಣು ಹೊಸ ಬಟ್ಟೆ, ಹೊಸ ಒಡವೆಗಳಿಗೆ ತೃಪ್ತಿಪಟ್ಟುಕೊಳ್ಳುವ ಬದಲಾಗಿ, ನಮ್ಮ ಪುರುಷ ಪ್ರಧಾನ ಸಮಾಜ ತನ್ನ ಸುತ್ತಲೂ ಕಟ್ಟಿದ ಚೌಕಟ್ಟನ್ನು ಮೀರುವ ಪ್ರಯತ್ನಗಳನ್ನು ಮಾಡಬೇಕಿದೆ. ಅವಳು ತನ್ನ ಸ್ವಂತದ ಸುಖವನ್ನು ತ್ಯಾಗ ಮಾಡಿ ಬರೀ ಬೇರೆಯವರಿಗಾಗಿ ಶ್ರಮಿಸುವ ಮನಸ್ಥಿತಿಯಿಂದ ಹೊರಬರಬೇಕಾಗಿದೆ. ಈ ಸಲದ ಯುಗಾದಿಗೆ ಹೆಣ್ಣಿನ ಕಷ್ಟಗಳು ಅಂತ್ಯವಾಗಿ ಸಮಬಾಳು, ಸಮಪಾಲುಗಳೆಂಬ ಚಿಗುರುಗಳು ಪಲ್ಲವಿಸಲಿ. ಎಲ್ಲರೂ ಸಮಾನವಾಗಿ ಹಬ್ಬದ ಕೆಲಸಗಳನ್ನು ಹಂಚಿಕೊಂಡು ನಿರ್ವಹಿಸಿ, ಮನೆಯವರೆಲ್ಲರೂ ಒಟ್ಟಾಗಿ ಆನಂದಿಸುವ ವಾತಾವರಣ ನಿರ್ಮಾಣವಾಗಲಿ. ಎಲ್ಲ ಹೆಂಗಳೆಯರೂ ಮನೆಯ ಇತರ ಸದಸ್ಯರಷ್ಟೇ ಖುಷಿಯಿಂದ ಹಬ್ಬಗಳನ್ನು ಎದುರುನೋಡುವಂತಾಗಲಿ. ಅಂದಹಾಗೆ ಇದನ್ನು ಪುರುಷರೂ ಓದುತ್ತಿದ್ದರೆ ನೀವೇನು ಮಾಡಬೇಕೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ ಅಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT