ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತಿ ಸಂಭ್ರಮ | ಮರಳಿ ಬಾ ಎಂಬ ಮಹಾಮಂತ್ರ

Last Updated 13 ಮೇ 2020, 19:45 IST
ಅಕ್ಷರ ಗಾತ್ರ
ADVERTISEMENT
""

ಇಂದಿನ ಧಾವಂತದ ಜೀವನಶೈಲಿಯಲ್ಲಿ ಮಾನವೀಯ ಸಂಬಂಧಗಳು ಅವುಗಳ ಸೊಗಸನ್ನು ಕಳೆದುಕೊಳ್ಳುತ್ತಿವೆ. ಮನೆಗೆ ಬಂದವರನ್ನು ‘ಮತ್ತೊಮ್ಮೆ ಬನ್ನಿ’ ಎಂದು ಹೇಳುವುದಿರಲಿ, ‘ಇಂದು ಯಾಕಾದರೂ ಬಂದರು‘ ಎಂದೇ ಆಲೋಚಿಸುವ ಪರಿಸ್ಥಿತಿ ನಮ್ಮದು. ಆದರೆ ರಾಮಕೃಷ್ಣ ಪರಮಹಂಸರಂಥವರೇ ಬಾಂಧವ್ಯಗಳಿಗೆ ಹಾತೊರೆಯುತ್ತಿದ್ದವರು....

ಮಾನವೀಯ ಸಂಬಂಧಗಳ ಸ್ಥಾಪನೆಗೆ, ಸುಭದ್ರವಾದ ಸಂಬಂಧದ ಬೆಳವಣಿಗೆಗೆ ಕಾರಣವಾಗಬೇಕಾದ್ದೆ ನಾವು ಭೇಟಿಯಾದಾಗ, ವಿದಾಯ ಹೇಳುವಾಗ ಆಡುವ ನಾಲ್ಕು ಮಾತುಗಳು. ಇಂತಹ ಮಾತುಗಳ ಮಾದರಿಯಾಗಿ ಹಲವು ವ್ಯಕ್ತಿತ್ವಗಳನ್ನು ಅಧ್ಯಯನ ಮಾಡುವಾಗ, ಪ್ರಾಪಂಚಿಕ ದೃಷ್ಟಿಯಿಂದ ಏನನ್ನೂ ಹೊಂದಿರದ, ಏನನ್ನೂ ಕೊಡಲಾರದ ಸ್ಥಿತಿಯಲ್ಲಿದ್ದ ಶ್ರೀರಾಮಕೃಷ್ಣ ಪರಮಹಂಸರು ನಮಗೆ ಅತ್ಯುತ್ತಮ ಮಾದರಿಯಾಗಿ ಕಂಡುಬರುತ್ತಾರೆ.

ಶ್ರೀರಾಮಕೃಷ್ಣರು ಕಾಳಿ ದೇವಾಲಯದ ಅರ್ಚಕರು. ಅದೂ ಹೆಸರಿಗೆ ಅರ್ಚಕರು; ಆರಂಭದಲ್ಲಿ ಪೂಜೆಯನ್ನು ಕೈಗೊಂಡರಾದರೂ ಮುಂದೆ ದೇವಿಯನ್ನು ಒಲಿಸಿಕೊಂಡ ಮೇಲೆ ಪೂಜೆಯನ್ನೂ ಮಾಡಲಾಗದ ಮಾನಸಿಕ ಸ್ತರವನ್ನು ಮುಟ್ಟಿದ ಕಾರಣ ಪೂಜೆ ಮಾಡುವುದನ್ನೂ ನಿಲ್ಲಿಸಿದರು. ಆದರೆ ಆಡಳಿತ ಮಂಡಳಿ ಇಂತಹ ಭಗವದ್ಭಕ್ತನು ತನ್ನ ದೇವಾಲಯದಲ್ಲಿ ಇರುವುದೇ ಶೋಭೆ ಎಂದರಿತು, ಅವರ ಜೀವನಪರ್ಯಂತ ದೇವಸ್ಥಾನದ ಪೌಳಿಯೊಳಗೇ ಇರಲು ಅವಕಾಶ ಮಾಡಿಕೊಟ್ಟಿತ್ತು. ಜೊತೆಗೆ ಇತರ ಅರ್ಚಕರಿಗೆ ದೊರೆಯುತ್ತಿದ್ದಂತೆ ಇವರಿಗೂ ಅಲ್ಪ ಗೌರವಧನ ಸಲ್ಲುತ್ತಿತ್ತು. ಇವರು ಅವತಾರಪುರುಷ, ಪರಮಹಂಸರು, ಅತ್ಯುನ್ನತ ಆಧ್ಯಾತ್ಮಿಕ ಅನುಭವ ಪಡೆದವರು – ಎಂದು ತಿಳಿದ ಮೇಲೆ ಜನರು ಇವರನ್ನು ಕಾಣಲು ಬರತೊಡಗಿದರು. ಹೀಗೆ ಬಂದವರಲ್ಲಿ ಬಡವರು, ಬಲ್ಲಿದರು, ಅಕ್ಷರಸ್ಥರು, ಅನಕ್ಷರಸ್ಥರು, ಇತರ ಧರ್ಮೀಯರೂ – ಎಲ್ಲರೂ ಇದ್ದರು. ಅಂದಿನ ಪ್ರಸಿದ್ಧ ಸಮಾಜಮುಖಂಡರು, ವೈದ್ಯರು, ಮ್ಯಾಜಿಸ್ಟ್ರೇಟರು, ವಿದ್ಯಾರ್ಥಿಗಳು, ಸಾಧಕರು, ಗೃಹಸ್ಥರು – ಎಲ್ಲ ವರ್ಗದವರೂ ಬರುತ್ತಿದ್ದರೂ ಇಂತಹ ಸಂಕೀರ್ಣ ಸಮುದಾಯದೊಂದಿಗೆ ದಶಕಗಳ ಕಾಲ ಸಂಬಂಧಗಳನ್ನು ಅವರು ಉಳಿಸಿಕೊಂಡಿದ್ದಾದರೂ ಹೇಗೆ ಎಂಬುದು ಅತ್ಯಂತ ಕುತೂಹಲದ ವಿಷಯ.

ಇದು ಅತಿ ಸಾಮಾನ್ಯ ವಿಷಯ ಎಂದು ಭಾವಿಸಬಾರದು. ಏಕೆಂದರೆ ಮಾನವಸಂಬಂಧಗಳು ಕಾಲಕ್ರಮದಲ್ಲಿ ಹಳಸುತ್ತವೆ, ಕೆಡುತ್ತವೆ. ಸಮಾನಮನಸ್ಕರು ಎಂದುಕೊಂಡ ಬೆಸುಗೆಗಳಲ್ಲೇ ಈ ಬಿರುಕು ಕಾಣಿಸಿಕೊಳ್ಳುವಾಗ ಇನ್ನು ಇಂತಹ ಸಂಕೀರ್ಣ, ಸಂಕಲಿತ ಸಮಾಜವರ್ಗದವರನ್ನು ಶ್ರೀರಾಮಕೃಷ್ಣರು ದಶಕಗಳ ಕಾಲ ಜೊತೆಗಿರಿಸಿಕೊಂಡಿದ್ದು ಹೇಗೆ? ಶ್ರೀರಾಮಕೃಷ್ಣರು ತಮ್ಮನ್ನು ಭೇಟಿಯಾಗಲು ಬಂದವರಿಗೆಲ್ಲ ಕೊನೆಯಲ್ಲಿ ಹೇಳುತ್ತಿದ್ದ ಮಾತು, ‘ಮರಳಿ ಬಾ’ ಎಂದು. ಇದು ಕೇವಲ ನಾಲಗೆಯ ತುದಿಯ ಮಾತಲ್ಲ. ಹೃದಯಾಂತರಾಳದ ಕರೆ. ನರೇಂದ್ರನಂತೂ (ಮುಂದೆ ಸ್ವಾಮಿ ವಿವೇಕಾನಂದ) ಹೊರಡುವ ಮುನ್ನ ಈ ಮಾತನ್ನು ಅನೇಕ ಬಾರಿ ಕೇಳಬೇಕಾಗುತ್ತಿತ್ತು. ಅಷ್ಟೇ ಅಲ್ಲ ಮತ್ತೆ ಬರುವ ದಿನವನ್ನು ಖಚಿತಪಡಿಸಿಯೇ ಹೊರಡಬೇಕಿತ್ತು. ಅವನು ಬರುವ ದಿನವಾದರಂತೂ ಗುರುಗಳ ಕಣ್ಣು ತಮ್ಮ ಕೊಠಡಿಯ ಬಾಗಿಲಿನತ್ತಲೇ ನೆಟ್ಟಿರುತ್ತಿತ್ತು. ನರೇಂದ್ರ ಒಬ್ಬನೇ ಅಲ್ಲ, ಅವರ ಪ್ರೀತಿಯ ಮಾಂತ್ರಿಕ ದೃಷ್ಟಿಗೆ ಬಿದ್ದವರ ಪಾಡೆಲ್ಲ ಅಷ್ಟೆ.

ರಾಮಕೃಷ್ಣ ಪರಮಹಂಸ

ಶ್ರೀರಾಮಕೃಷ್ಣ ವಚನವೇದದ ಕರ್ತೃ ‘ಮ’(ಮಹೇಂದ್ರನಾಥ ಗುಪ್ತ) ಕೂಡ ಈ ‘ಮರಳಿ ಬಾ’ ಮಂತ್ರಕ್ಕೆ ವಶವಾದವನೇ. ಅವನು ವಚನವೇದದ ಆರಂಭದಲ್ಲೇ ಅವರಿಂದ ಬೀಳ್ಕೊಳ್ಳುವ ಸಂಕಟವನ್ನು ಚಿತ್ರಿಸುತ್ತಾನೆ. ವಾರಾಂತ್ಯದಲ್ಲಿ ತನ್ನನ್ನು ದೂರದಿಂದಲೇ ಕಂಡ ಪರಮಹಂಸರು ‘ಓ ಬಂತು ನವಿಲು!’ಎಂದು ಉದ್ಗರಿಸುವುದನ್ನು ಕೇಳಿ ಇತರ ಭಕ್ತರು ನಗುವ ಪ್ರಸಂಗ ಹೇಳುತ್ತಾನೆ. ಹಿನ್ನೆಲೆಯ ಕಥೆಯನ್ನು ಪರಮಹಂಸರೇ ವಿವರಿಸುತ್ತಾರೆ: ‘ಸಾಧುವೊಬ್ಬನ ಗುಡಿಸಲ ಬಳಿ ನವಿಲುಗಳು ಓಡಾಡುತ್ತಿರುತ್ತವೆ. ಒಂದು ಸಂಜೆ ಅವನು ಒಂದು ನವಿಲಿಗೆ ಕೊಂಚ ಅಫೀಮನ್ನು ತಿನ್ನಿಸುತ್ತಾನೆ. ಮರುದಿನ ಅದು ಮತ್ತೆ ಅದೇ ಸಮಯಕ್ಕೆ ಹಾಜರಾಗುತ್ತವೆ.’ (ಅಂದರೆ ಪರಮಹಂಸರ ಸತ್ಸಂಗದ ಸವಿ ಉಂಡ ‘ಮ’ ಮರುದಿನ ಮತ್ತೆ ಅದೇ ಸಮಯಕ್ಕೆ ಆಗಮಿಸಿದ್ದಾನೆ ಎಂಬ ತಾತ್ಪರ್ಯ).

ಪರಮಹಂಸರ ಪರಿಚಾರಿಕೆಗೆ ಬಂದ ಹುಡುಗ ಲಾಟು (ಮುಂದೆ ಸ್ವಾಮಿ ಅದ್ಭುತಾನಂದ) ಅವರ ಪ್ರೀತಿಗೆ ವಶವಾಗಿ ತನ್ನ ಮೂಲ ಯಜಮಾನ ಪರಮಹಂಸರ ಗೃಹಸ್ಥಭಕ್ತ ರಾಮಚಂದ್ರದತ್ತನ ಮನೆಯಿಂದ ಬಿಡಿಸಿಕೊಂಡು ಪೂರ್ಣಕಾಲ ಪರಮಹಂಸರೊಂದಿಗೆ ಇದ್ದು ಸಾಧನಾನಿರತನಾಗುತ್ತಾನೆ.

ಹೀಗೆ ಶ್ರೀರಾಮಕೃಷ್ಣರ ‘ಮರಳಿ ಬಾ’ ಮಹಾಮಂತ್ರ ಅವರ ಸಂಬಂಧಸೂತ್ರವಾಗಿ ಬಹಳ ಯಶಸ್ವಿಯಾಯಿತು. ಇದು ನಮಗೂ ನಡತೆಯ ಮಾದರಿ. ಬೀಳ್ಕೊಡುವ ಮುನ್ನ ಪ್ರೀತಿಯಿಂದ ಹೇಳೋಣ: ‘ಮರಳಿ ಬನ್ನಿ’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT