ಗುರುವಾರ , ನವೆಂಬರ್ 26, 2020
21 °C

ಪ್ರವಾದಿ ಜನ್ಮದಿನ ‘ಈದ್ ಮಿಲಾದ್’

ಎನ್‌. ಮಹಮ್ಮದ್ Updated:

ಅಕ್ಷರ ಗಾತ್ರ : | |

Prajavani

ಇಸ್ಲಾಂನ ಕೊನೆಯ ಪ್ರವಾದಿ ಮುಹಮ್ಮದ್‌ ಅವರ ಜನ್ಮದಿನವನ್ನು ‘ಈದ್‌ ಮಿಲಾದ್’ ಅಥವಾ ‘ಮಿಲಾದುನ್ನಬಿ’ ಎಂಬ ಹೆಸರಿನಲ್ಲಿ ಆಚರಿಸಲಾಗುತ್ತದೆ. ಇಸ್ಲಾಮಿಕ್‌ ಕ್ಯಾಲೆಂಡರಿನ ಮೂರನೇ ತಿಂಗಳು ರಬೀವುಲ್‌ ಅವ್ವಲ್. ಪ್ರವಾದಿ ಅವರು ರಬೀವುಲ್‌ ಅವ್ವಲ್ ತಿಂಗಳ 12ರಂದು ಸೌದಿ ಅರೇಬಿಯಾದ ಮೆಕ್ಕಾದಲ್ಲಿ ಜನಿಸಿದರು.

ಪ್ರತಿವರ್ಷ ರಬೀವುಲ್‌ ಅವ್ವಲ್ ತಿಂಗಳಿನಲ್ಲಿ ಪ್ರವಾದಿ ಜನ್ಮದಿನದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಅವರ ಜೀವನಚರಿತ್ರೆ ಮತ್ತು ಸಂದೇಶಗಳನ್ನು ನೆನಪಿಸಲಾಗುತ್ತದೆ.

ಇಸ್ಲಾಂ ಧರ್ಮದ ಬಗ್ಗೆ ತಿಳಿದುಕೊಳ್ಳಲು ಪವಿತ್ರ ಗ್ರಂಥ ‘ಕುರ್‌ಆನ್‌' ಬಳಿಕ ಇರುವ ಅತ್ಯಂತ ಮಹತ್ವದ ಮೂಲ ಎಂದರೆ ಪ್ರವಾದಿಯವರ ಸಂದೇಶ ಮತ್ತು ಜೀವನಚರಿತ್ರೆಯಾಗಿದೆ. ಪ್ರವಾದಿ ಜೀವನದಲ್ಲಿ ನಡೆದಿರುವ ಎಲ್ಲ ಘಟನೆಗಳನ್ನು ಇತಿಹಾಸಕಾರರು ಬರೆದಿಟ್ಟಿದ್ದಾರೆ.

ಪ್ರವಾದಿ ಅವರ ನಾಯಕತ್ವ ಕೇವಲ ಧಾರ್ಮಿಕ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ರಾಜಕೀಯ, ಸಾಮಾಜಿಕ, ಆರ್ಥಿಕ, ಶಿಕ್ಷಣ ಕ್ಷೇತ್ರಗಳಲ್ಲೂ ಅವರು ಮಾದರಿಯಾಗಿದ್ದರು. ಮೂಢನಂಬಿಕೆ, ಕಂದಾಚಾರಗಳಲ್ಲಿ ಮುಳುಗಿದ್ದ ಅರೇಬಿಯಾದ ಜನರನ್ನು ಸರಿದಾರಿಗೆ ತರಲು ಪ್ರಯತ್ನಿಸಿದ್ದರಲ್ಲದೆ, ಆ ಕೆಲಸದಲ್ಲಿ ಯಶಸ್ವಿಯೂ ಆಗಿದ್ದರು.

ಎಲ್ಲ ಬಗೆಯ ಕೆಡುಕು ಮತ್ತು ಅನಾಚಾರಗಳಿಂದ ಮುಳುಗಿದ್ದ ಸಮಾಜವನ್ನು ವಿಶ್ವಕ್ಕೆ ಮಾದರಿಯಾಗುವ ರೀತಿಯಲ್ಲಿ ಕಟ್ಟಿದ್ದರು. ವ್ಯಾಪಾರ ವಹಿವಾಟಿನಲ್ಲಿ ಪ್ರಾಮಾಣಿಕತೆ ತಂದಿದ್ದರು. ಪರಸ್ಪರ ಕಿತ್ತಾಡುತ್ತಿದ್ದ ವಿವಿಧ ಪಂಗಡಗಳ ನಡುವೆ ಶಾಂತಿ, ಸೌಹಾರ್ದ ಮೂಡಿಸಿದ್ದರು. ಅಜ್ಞಾನದಲ್ಲಿ ಸಿಲುಕಿದ್ದ ಜನರಿಗೆ ಜ್ಞಾನದ ಹಾದಿ ತೋರಿಸಿದ್ದರು.

ಜನ್ಮದಿನ ಆಚರಣೆ: ಪ್ರವಾದಿ ಅವರ ಹುಟ್ಟುಹಬ್ಬದ ಆಚರಣೆ ಬಗ್ಗೆ ಮುಸ್ಲಿಮರಲ್ಲಿ ಭಿನ್ನಾಭಿಪ್ರಾಯಗಳಿವೆ. ಕೆಲವರು ಹುಟ್ಟುಹ‌ಬ್ಬವನ್ನು ವಿಜೃಂಭಣೆಯಿಂದ ಆಚರಿಸುವುದಾದರೆ, ಮತ್ತೆ ಕೆಲವರು ಆಚರಣೆ ವಿರೋಧಿಸುವರು.

‘ಜನ್ಮದಿನದಂತಹ ಆಚರಣೆಗಳು ಇಸ್ಲಾಮಿನ ಮೂಲ ನಿಯಮಗಳಿಗೆ ವಿರುದ್ಧವಾದುದು. ಪ್ರವಾದಿ ಸೇರಿದಂತೆ ಯಾರದೇ ಜನ್ಮದಿನ ಆಚರಿಸುವುದು ಇಸ್ಲಾಮಿಕ್‌ ಪದ್ಧತಿ ಅಲ್ಲ. ಪ್ರವಾದಿ ಅವರು ಬದುಕಿದ್ದಾಗ ಹುಟ್ಟುಹಬ್ಬ ಆಚರಿಸಿರಲಿಲ್ಲ. ಅವರ ಮರಣದ ನಂತರ ಖಲೀಫಾ ಅವರ ಆಡಳಿತದ ಅವಧಿಯಲ್ಲೂ ಹುಟ್ಟುಹಬ್ಬ ಆಚರಿಸಿದ ಉದಾಹರಣೆ ಇಲ್ಲ ಎಂಬುದು ಇತಿಹಾಸದಿಂದ ತಿಳಿದುಬರುತ್ತದೆ’ ಎಂಬುದು ಕೆಲವರ ವಾದ.

‘ನಾವು ಅತಿಯಾಗಿ ಪ್ರೀತಿಸುವ ಪ್ರವಾದಿಯ ಜನ್ಮದಿನ ವಿಜೃಂಭಣೆಯಿಂದ ಆಚರಿಸಿದರೆ ತಪ್ಪೇನಿದೆ? ಇದು ಸಂಭ್ರಮದ ದಿನ’ ಎಂಬುದು ಹುಟ್ಟುಹಬ್ಬ ಆಚರಣೆಯ ಪರವಾಗಿರುವವರ ನಿಲುವು.

ಈ ವಾದ ವಿವಾದಗಳು ಇದ್ದರೂ ಪ್ರತಿವರ್ಷ ರಬೀವುಲ್‌ ಅವ್ವಲ್‌ 12ರಂದು ಮೆರವಣಿಗೆ ಹಾಗೂ ವಿವಿಧ ಕಾರ್ಯಕ್ರಮಗಳನ್ನು
ಹಮ್ಮಿಕೊಳ್ಳಲಾಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು