ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚ್ಚಿದಾನಂದ ಸತ್ಯಸಂದೇಶ: ಬದುಕಿಗೆ ನೂರು ದಾರಿಗಳಿವೆ

ಅಕ್ಷರ ಗಾತ್ರ

ಮನುಷ್ಯ ವೈಜ್ಞಾನಿಕವಾಗಿ ಎಷ್ಟೇ ಬೆಳೆದರೂ ಮಾನಸಿಕವಾಗಿ ಕುಬ್ಜನಾಗುತ್ತಲೇ ಇದ್ದಾನೆ. ಅದೆಷ್ಟು ಧರ್ಮಗಳು ಹುಟ್ಟಿದರೂ, ಮನುಷ್ಯನ ಮೂಲಪ್ರವೃತ್ತಿಯಾದ ಮೃಗೀಯತನ ನಾಶವಾಗುತ್ತಿಲ್ಲ. ಆಧುನಿಕವಾಗಿ ಬೆಳೆದಷ್ಟು ಅವನೊಳಗಿನ ಸಂಕುಚಿತ ಭಾವನೆಗಳು ಕ್ಷೀಣಿಸುತ್ತಿಲ್ಲ. ಇದರಿಂದಾಗಿ ನೆಮ್ಮದಿಯಾದ ಸುಂದರ ಜೀವನ ಕಟ್ಟಿಕೊಳ್ಳುವ ಕಾಲದಲ್ಲೂ ಕೊರಗಿ ಸೊರಗುತ್ತಿದ್ದಾನೆ. ತುಂಡು ಭೂಮಿ, ತುಂಡು ಬಟ್ಟೆಯಲ್ಲಿದ್ದಾಗ ತಿಂದುಂಡು ಸುಖವಾಗಿದ್ದವ, ಆಸ್ತಿ ಹಾಸಿ ಮಿಗುವಷ್ಟು ಕಾಲದಲ್ಲಿ ದುಃಖಿತನಾಗಿದ್ದಾನೆ. ಮನುಷ್ಯನ ಈ ವಿಚಿತ್ರ ಸಂಕಟಕ್ಕೆ ಅವನ ಅಸಂತೃಪ್ತ ದುರ್ಬಲ ಮನಸ್ಸೇ ಕಾರಣ.

ಮನುಷ್ಯ ದೇಹ ಬೆಳೆಸಲು ಎಂಥ ಪೌಷ್ಟಿಕ ಆಹಾರ ಸೇವಿಸಬೇಕು ಅಂತ ಯೋಚಿಸಿದ. ಆದರೆ ಮನಸ್ಸನ್ನು ಬೆಳೆಸಲು ಬೇಕಾದ ಪೌಷ್ಟಿಕಾಂಶ ಯಾವುದು ಎಂಬುದನ್ನು ಮರೆತ. ಇದರಿಂದ ಅವನ ದೇಹ ಬೆಳೆದಂತೆ ಮನಸ್ಸು ಬೆಳೆಯಲೇ ಇಲ್ಲ. ಇದರ ದುಷ್ಪರಿಣಾಮದಿಂದ ಆನಂದ ಹತ್ತಿರದಲ್ಲಿದ್ದರೂ, ದೂರದಲ್ಲಿದೆ ಎಂದು ಹಲುಬಿದ. ಇದರಿಂದ ಸಣ್ಣ-ಪುಟ್ಟ ಕಷ್ಟಗಳಿಗೂ ಈಗ ತನ್ನ ಅಮೂಲ್ಯ ಜೀವವನ್ನೇ ಕೊನೆಗಾಣಿಸಿಕೊಳ್ಳುತ್ತಿದ್ದಾನೆ.

‘ಮಾನವ ಜನ್ಮ ದೊಡ್ಡದು, ಅದನ್ನು ಹಾಳು ಮಾಡಿಕೊಳ್ಳಬೇಡಿ’ ಎಂದು ಪುರಂದರದಾಸರು 16ನೇ ಶತಮಾನದಲ್ಲೇ ಹೇಳಿದ್ದರೂ, 21ನೇ ಶತಮಾನದಲ್ಲೂ ಮಾನವರು ಜೀವನ ಇರಲಿ, ಜೀವನವನ್ನೇ ಹಾಳುಮಾಡಿಕೊಳ್ಳುತ್ತಿದ್ದಾರೆ. ಬದುಕುವುದಕ್ಕೆ ನೂರು ದಾರಿಗಳಿದ್ದರೂ, ಸಾಯುವ ಒಂಟಿ ದಾರಿಯನ್ನೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇಂಥ ವೈರುಧ್ಯಕ್ಕೆ ಕಾರಣ ಇತ್ತೀಚಿನ ಜನರಲ್ಲಿ ಕ್ಷೀಣಿಸುತ್ತಿರುವ ಮನೋದಾರ್ಢ್ಯ. ದೇಹದಾರ್ಢ್ಯಕ್ಕೆ ವ್ಯಾಯಾಮ ಹೇಗೆ ಮುಖ್ಯವೋ, ಮನಸ್ಸು ದೃಢವಾಗಿ ಬೆಳೆಯಲು ಧ್ಯಾನ ಅವಶ್ಯವಾಗಿಬೇಕು. ದೇಹಕ್ಕೆ ಪೌಷ್ಟಿಕ ಆಹಾರ ಹೇಗೆ ಬೇಕೋ, ಮನಸ್ಸಿನ ದೃಢತೆಗೆ ಉತ್ತಮ ವಿಚಾರಗಳು ಬೇಕು. ಬಾಳಿ ತೋರಿಸುತ್ತೇನೆಂಬ ಛಲಗಾರಿಕೆ ಅದಮ್ಯವಾಗಿ ಇಟ್ಟುಕೊಂಡ ಮನುಷ್ಯ, ಅದೆಂಥ ಗಮ್ಯವಾದ ಕಷ್ಟಗಳನ್ನೂ ಹಿಮ್ಮೆಟ್ಟಿಸಬಲ್ಲ. ಇಂಥ ಸರಳ ವಿಚಾರ ತಿಳಿಯದವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

ಪ್ರಸ್ತುತ ಸಮಾಜವನ್ನು ಕಂಗೆಡಿಸುತ್ತಿರುವ ವಿಷಯ ಎಂದರೆ ರೈತರ ಆತ್ಮಹತ್ಯೆ ಮತ್ತು ಹೆತ್ತವರು ತಮ್ಮ ಮಕ್ಕಳನ್ನು ಕೊಂದು ಸಾವಿನ ಹಾದಿ ತುಳಿಯುತ್ತಿರುವುದು. ನಾಡಿಗೇ ಅನ್ನ ನೀಡುವ ರೈತ, ಜನರೆಲ್ಲರ ಹಸಿವು ನೀಗಿಸುವ ರೈತ, ತಾನೇ ಬದುಕಲಾರದ ಸ್ಥಿತಿಗೆ ಬಂದುಬಿಟ್ಟಿದ್ದಾನೆ ಎಂಬುದು ನಿಜಕ್ಕೂ ಆತಂಕದ ಸಂಗತಿ. ಇಡೀ ಸಮಾಜ ರೈತರ ಕಷ್ಟಕ್ಕೆ ಸ್ಪಂದಿಸುವಾಗ, ಅವರು ಆತ್ಮಹತ್ಯೆ ಬಗ್ಗೆ ಯೋಚಿಸದೆ, ಬದುಕುವ ಛಲಗಾರಿಕೆ ರೂಢಿಸಿಕೊಳ್ಳಬೇಕು.

ಹಾಗೆಯೇ, ಹೆತ್ತಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಳ್ಳುವ ಪಿಡುಗು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಈ ಪಿಡುಗು ಸಂಪೂರ್ಣ ನಿವಾರಣೆಯಾಗಲೇ ಬೇಕು. ಶಿಶುಹತ್ಯೆ ಮಹಾಪಾಪ. ಶಿಶುಹತ್ಯೆ ಮಾಡಿದ ಪಾಪ ಏಳೇಳು ಜನ್ಮದಲ್ಲೂ ಕಾಡುತ್ತದೆ. ಅಂಥದರಲ್ಲಿ ಹೆತ್ತಮಕ್ಕಳನ್ನೇ ಕೊಂದವರಿಗೆ ಆಜನ್ಮ ರೌರವನರಕ ಖಚಿತ. ಎಂಥ ಪ್ರಾಣಿಯೂ ಪ್ರಾಣ ಕೊಟ್ಟಾದರೂ ತನ್ನ ಮರಿಗಳನ್ನು ಕಾಪಾಡುತ್ತದೆ. ಪುಣ್ಯಕೋಟಿ ಹಸು ಹೆಬ್ಬುಲಿಗೆ ಬಲಿಯಾಗುವ ಮುನ್ನ ತನ್ನ ಕರುವನ್ನು ನೆನೆದು, ಅದಕ್ಕೊಂದು ಆಶ್ರಯಧಾತರನ್ನು ಹುಡುಕುತ್ತದೆ. ಅಂಥದ್ದರಲ್ಲಿ ಬುದ್ಧಿ ಇರುವ ಮನುಷ್ಯ ಕರುಳಕುಡಿಗಳನ್ನು ಕೊಲ್ಲುವುದು ಅಕ್ಷಮ್ಯ. ಆ ಭಗವಂತ ಖಂಡಿತ ಕ್ಷಮಿಸಲಾರ. ಏನೇ ಕಷ್ಟ ಬರಲಿ, ಅದನ್ನು ಎದುರಿಸುವ ಬಲದಲ್ಲಿ, ಬದುಕುವ ಛಲದಲ್ಲಿ ತೋರಿಸಬೇಕು, ಸಾಯುವ ಅಡ್ಡ ಮಾರ್ಗದಲ್ಲಿ ಅಲ್ಲ. ಬದುಕಿ ಸಾಧಿಸುತ್ತೇನೆನ್ನುವವರಿಗೆ ಹಲವು ದಾರಿಗಳಿವೆ. ಇಂಥ ಛಲವಂತರಿಗೆಂದೇ ‘ಸಚ್ಚಿದಾನಂದ’ ಮಾರ್ಗ ಸದಾ ತೆರೆದಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT