ಶುಕ್ರವಾರ, ಅಕ್ಟೋಬರ್ 23, 2020
21 °C

ಸಚ್ಚಿದಾನಂದ ಸತ್ಯಸಂದೇಶ: ಶಿಕ್ಷಣದಲ್ಲಿ ಧರ್ಮ ಮತ್ತು ಅದರ ಶಕ್ತಿ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ Updated:

ಅಕ್ಷರ ಗಾತ್ರ : | |

ವಿಶ್ವದ ಸೃಷ್ಟಿ ಸತ್ವ-ರಜಸ್ಸು-ತಮಸ್ಸುಗಳಿಂದ ಆಗಿದೆಯಂತೆ. ಸೃಷ್ಟಿಯ ಮೂಲ ವಸ್ತುವಾದ ಪರಬ್ರಹ್ಮ ನಿರ್ಗುಣಾವಸ್ಥೆಯಲ್ಲಿರುತ್ತಂತೆ. ಅದು ಬೆಳೆದಂತೆ ನಾನಾ ರೂಪ ತಾಳುತ್ತಂತೆ. ಹಾಗೆಯೇ ಮನುಷ್ಯ ಹುಟ್ಟುವಾಗ ನಿರ್ಗುಣನಾಗಿರುತ್ತಾನೆ. ಆದರೆ ಬೆಳೆಯುತ್ತಾ ಹೋದಂತೆ ಗುಣಾವಗುಣಗಳನ್ನು ಮೈಗೂಡಿಸಿಕೊಳ್ಳುತ್ತಾ ಹೋಗುತ್ತಾನೆ. ಆತ ಕಲಿತ ಗುಣ ಎಂಥದ್ದು ಅನ್ನೋದು ಕಲಿಯುವ ಪರಿಸರ ಮತ್ತು ಶಿಕ್ಷಣಕ್ರಮದ ಮೇಲೆ ಆಧಾರಿತವಾಗಿರುತ್ತದೆ. ಮನುಷ್ಯ ಕೂಡ ಒಂದು ಪ್ರಾಣಿ. ಆತ ಯಾವ ಪರಿಸರದಲ್ಲಿ ಏನು ಕಲಿಯುತ್ತಾನೆ, ಹೇಗೆ ಕಲಿಯುತ್ತಾನೆಂಬುದರ ಮೇಲೆ ಅವನ ಮೃಗೀಯತನ ನಿರ್ಧಾರವಾಗುತ್ತದೆ.

ಮನುಷ್ಯ ಗುಣಸಂಪನ್ನನಾಗಲೆಂದೇ ಬಾಲ್ಯದಲ್ಲೇ ಶಿಕ್ಷಣ ಕಲಿಸಲಾಗುತ್ತದೆ. ಈ ಶಿಕ್ಷಣದಲ್ಲಿ ಶಿಸ್ತಿರಲಿ ಅಂತ ಧರ್ಮವನ್ನು ಅಳವಡಿಸಲಾಗಿದೆ. ಶಿಕ್ಷಣ ಮತ್ತು ಧರ್ಮ ಮನುಷ್ಯನ ಬದುಕನ್ನ ರೂಪಿಸುತ್ತದೆ. ಇದರಲ್ಲಿ ಉತ್ತೀರ್ಣರಾದವರೆಲ್ಲ ಪರಿಪೂರ್ಣ ಮಾನವರಾಗಲು ಸಾಧ್ಯವಿಲ್ಲ. ಅವನ ಪರಿಸರಕ್ಕೆ ಕಲಿತ ವಿದ್ಯೆ, ಅನುಸರಿಸಿದ ಧರ್ಮವನ್ನೆಲ್ಲ ಬುಡಮೇಲು ಮಾಡುವ ಶಕ್ತಿ ಇದೆ. ಇಲ್ಲಿ ಪರಿಸರ ಅಂದರೆ ಅವನ ಮನೆ, ಬೆಳೆಯುವ ವಾತಾವರಣ, ಯೋಚಿಸುವ ಕ್ರಮ. ಮನೆಯಲ್ಲಿ ತಂದೆ-ತಾಯಿ ಒಳ್ಳೆಯವರಾಗಿ ಒಳ್ಳೇ ರೀತಿಯಲ್ಲಿ ವರ್ತಿಸಿದರೆ, ಅವ ರನ್ನು ನೋಡಿ ಕಲಿಯುವ ಮಕ್ಕಳು ಉತ್ತಮ ರೀತಿಯಲ್ಲಿ ಬೆಳೆಯುತ್ತಾರೆ. ಮನೆಯೊಳಗೆ ಕಲಿತ ರೀತಿ-ನೀತಿಗೂ, ಹೊರಗೆ ಕಲಿಯುವ ರೀತಿ-ನೀತಿಗೂ ಭಿನ್ನವಾಗಿರುತ್ತದೆ. ಯಾವುದು ಸರಿ, ಯಾವುದು ತಪ್ಪು ಅಂತ ನಿಷ್ಕರ್ಷಿಸಿ ಮುನ್ನಡೆಯಲು ಶಿಕ್ಷಣ ಮತ್ತು ಧರ್ಮ ನೆರವಿಗೆ ಬರುತ್ತದೆ.

ನದಿಯಲ್ಲಿ ಹುಟ್ಟುವ ಮೀನು, ಸಮುದ್ರವನ್ನು ಸೇರುವಂತೆ ಮನುಷ್ಯ ಸಹ ಮನೆಯಿಂದ ಹೊರ ಪ್ರಪಂಚಕ್ಕೆ ಕಾಲಿಡಲೇಬೇಕು. ಸಮುದ್ರದಲ್ಲಿ ದೊಡ್ಡ ಮೀನುಗಳಿಂದ ತಪ್ಪಿಸಿಕೊಂಡು ಬಲೆ-ಗಾಳಕ್ಕೆ ಸಿಗದೆ ಜೀವಿಸುವುದು ಮೀನಿಗೆ ಹೇಗೆ ಸವಾಲಾಗಿರುತ್ತದೋ, ಅದೇ ರೀತಿ ಮನುಷ್ಯ ದೊಡ್ಡವನಾಗಿ ಹೊರ ಪ್ರಪಂಚದಲ್ಲಿ ಬಾಳುವಾಗ ಶೋಷಣೆ-ವಂಚನೆಗಳಿಂದ ಪಾರಾಗಿ ಬದುಕುವುದು ಬಹು ದೊಡ್ಡ ಸವಾಲೇ. ಅವನು ಎಷ್ಟೇ ಎಚ್ಚರಿಕೆಯಿಂದಿದ್ದರೂ ಮೋಸದ ಬಲೆಯಿಂದ ತಪ್ಪಿಸಿಕೊಳ್ಳುವುದು ಸುಲಭವಲ್ಲ. ಏಕೆಂದರೆ ಸ್ವಾರ್ಥ ಎಂಬ ಹಂಬು ಅವನ ಬೆನ್ನಿಗೆ ಯಾವತ್ತೂ ನೇತು ಹಾಕಿಕೊಂಡೇ ಇರುತ್ತೆ. ಅವನೊಳಗಿನ ದುರಾಸೆಯೋ, ಅವನ ಸುತ್ತಲಿನ ಆಮಿಷವೋ, ಅವನನ್ನು ತಪ್ಪು ದಾರಿಗೆಳೆಯಬಹುದು. ಇಂಥ ತಪ್ಪು ನಡೆಯದಂತೆ ಸರಿ ದಾರಿಯಲ್ಲಿ ನಡೆಯಲು ಶಿಕ್ಷಣ ಬುದ್ದಿಗೆ ವಿವೇಕದ ಯುಕ್ತಿ ನೀಡಿದರೆ, ಧರ್ಮ ಮನಸ್ಸಿಗೆ ಸಾತ್ವಿಕ ಶಕ್ತಿ ತುಂಬುತ್ತದೆ.

ಆದ್ದರಿಂದ ಮಕ್ಕಳು ವಿದ್ಯಾಶಾಲೆಗೆ ಹೋದಂತೆಯೇ ಧರ್ಮಶಾಲೆಗೂ ಹೋಗಬೇಕು. ಪಠ್ಯಪುಸ್ತಕಕ್ಕೆ ಆದ್ಯತೆ ಕೊಟ್ಟಷ್ಟೆ ನೀತಿಪುಸ್ತಕಕ್ಕೂ ಮನ್ನಣೆ ನೀಡಬೇಕು. ನಮ್ಮ ಬಹುತೇಕ ಜನ ಧರ್ಮವನ್ನು ಮರೆತು, ಶಿಕ್ಷಣಕ್ಕಷ್ಟೆ ಆದ್ಯತೆ ನೀಡುತ್ತಿದ್ದಾರೆ. ಇದರಿಂದ ಮಕ್ಕಳು ಶಿಕ್ಷಣದಲ್ಲಿ ಉತ್ತೀರ್ಣರಾದರೂ ಜೀವನವೆಂಬ ನೀತಿಯಲ್ಲಿ ಅನುತ್ತೀರ್ಣರಾಗುತ್ತಿದ್ದಾರೆ. ಅದರಲ್ಲೂ ಹಣ ಗಳಿಕೆಯ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುವ ಪೋಷಕರ ಮೂರ್ಖತನ ಮಕ್ಕಳ ಬದುಕನ್ನು ದುರಂತಕ್ಕೀಡುಮಾಡುತ್ತಿದೆ. ಆ ಮೂಲಕ ಸಮಾಜವನ್ನು ಹಾಳು ಮಾಡುತ್ತಿದೆ.

ನಿರ್ಗುಣಾವಸ್ಥೆಯಲ್ಲಿದ್ದ ಮಗು ಮೂಲಪ್ರವೃತ್ತಿಯಾದ ಮೃಗೀಯ ಗುಣ ಮೈಗೂಡದಂತೆ ಮಾಡುವ ಯುಕ್ತಿ-ಶಕ್ತಿಯೇ ಶಿಕ್ಷಣ ಮತ್ತು ಧರ್ಮ. ಇದನ್ನರಿಯದ ಜನ ಶಿಕ್ಷಣದಲ್ಲಿ ಬೆರೆಯಬೇಕಾದ ಧರ್ಮವನ್ನು ಅಲಕ್ಷಿಸುತ್ತಿದ್ದಾರೆ. ಇದರಿಂದ ಮಕ್ಕಳು ಯೌವನಾವಸ್ಥೆಗೆ ಬರುವಷ್ಟರಲ್ಲಿ ನೈತಿಕವಾಗಿ ನಿಶ್ಶಕ್ತರಾಗುತ್ತಿದ್ದಾರೆ. ಇಂಥ ಮಕ್ಕಳಿಂದ ಹೆತ್ತವರಿಗೂ ಹೊರೆ ಸಮಾಜಕ್ಕೂ ಬರೆ. ಶಿಕ್ಷಣದಲ್ಲಿ ಧರ್ಮ ಬೆರೆತಾಗ ಮಾತ್ರ ಮಾನವರ ಬದುಕು ‘ಸಚ್ಚಿದಾನಂದ’ದಂತೆ ಸುಂದರವಾಗಿರುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.