ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚ್ಚಿದಾನಂದ ಸತ್ಯಸಂದೇಶ | ಸಂಕ್ರಮಣ: ಪ್ರಗತಿಯ ಸಂಕಿರಣ

ಅಕ್ಷರ ಗಾತ್ರ

ಮನುಷ್ಯ ಪ್ರಕೃತಿಯಿಂದ ಕಲಿಯುವುದು ಬಹಳಷ್ಟಿದೆ. ಮನುಷ್ಯ ಈ ಭೂಮಿಗೆ ಬರುವುದಕ್ಕೆ ಮೊದಲೇ ಗಿಡ-ಮರ, ಪ್ರಾಣಿ-ಪಕ್ಷಿಗಳು, ಹುಳು-ಹುಪ್ಪಟ್ಟೆಗಳು ಮೈದಾಳಿವೆ. ಇವುಗಳಿಗೆ ಹೀಗೇ ಬದುಕು ಅಂತ ಯಾರೂ ಹೇಳಿಕೊಟ್ಟಿಲ್ಲ. ಅವು ನಿಸರ್ಗದ ಮಡಿಲಲ್ಲಿ ಆಡುತ್ತಲೇ ತಮ್ಮ ಬದುಕು ಕಟ್ಟಿಕೊಳ್ಳುತ್ತವೆ. ಆದರೆ ಮನುಷ್ಯನಿಗೆ ಅದೆಷ್ಟೇ ಹೇಳಿಕೊಟ್ಟರೂ ಬದುಕನ್ನು ಕಟ್ಟಿಕೊಳ್ಳಲಾಗದೆ ತೊಳಲಾಡುತ್ತಾನೆ. ಇಂಥ ವೈರುಧ್ಯಕ್ಕೆ ಕಾರಣ ನೈಸರ್ಗಿಕವಾಗಿ ಬದುಕುವುದನ್ನು ರೂಢಿಸಿಕೊಳ್ಳದ ಅವನ ಮನಃಸ್ಥಿತಿ. ನಿಸರ್ಗದಿಂದ ಪಾಠ ಕಲಿಯದ ಮನುಷ್ಯ ಕೃತಕವಾಗಿ ಬದುಕನ್ನು ಕಟ್ಟಿಕೊಳ್ಳಲು ಯತ್ನಿಸಿ, ತಾನೂ ಕೆಟ್ಟು ಭೂಮಿಯನ್ನೂ ದಿಕ್ಕೆಡಿಸುತ್ತಿದ್ದಾನೆ.

ಪ್ರಕೃತಿಸಂಪತ್ತು ಬದುಕಿಗಾಗಿ ಇದೆಯೇ ಹೊರತು, ಸುಖಕ್ಕಾಗಿ ಅಲ್ಲ. ಪ್ರಕೃತಿ ಸಂಪತ್ತನ್ನು ತನ್ನ ಸುಖಕ್ಕಾಗಿ ದುರ್ಬಳಕೆ ಮಾಡಿದ ಮನುಷ್ಯ, ಈಗ ತಾನೇ ಸೃಷ್ಟಿಸಿಕೊಂಡ ಕೃತಕ ಬದುಕಿನಲ್ಲಿ ಸಿಕ್ಕಿ ಒದ್ದಾಡುತ್ತಿದ್ದಾನೆ. ಮಿತಿಮೀರಿದರೆ ಅಮೃತವೂ ವಿಷವಾಗುತ್ತದೆ ಎಂಬಂತೆ ಅವನ ಅತಿಯಾದ ಆಸೆಗಳು ಅವನನ್ನೇ ಆಪೋಷಣ ತೆಗೆದುಕೊಳ್ಳುತ್ತಿವೆ. ಇಡೀ ಭೂಮಿಯೇ ತನ್ನದೆಂದು ಭ್ರಮಿಸಿ, ಪಶು-ಪಕ್ಷಿಗಳನ್ನ ಸಾಕುವ ನೆಪದಲ್ಲಿ ಕಬಳಿಸಿದ. ಇಡೀ ಊರಿನ ಜಮೀನೆಲ್ಲ ತನಗೆ ಬೇಕೆಂದು ಆಕ್ರಮಿಸಿದ. ಅದನ್ನೆಲ್ಲಾ ಉಳುಮೆ ಮಾಡಲು ಕಷ್ಟವಾದಾಗ ದುರ್ಬಲರನ್ನ ತನ್ನ ಅಡಿಯಾಳಾಗಿಸಿ ಶೋಷಿಸಿದ. ಒಂದು ಊರು ಸಾಲದು ಅಂತ ಪಕ್ಕದ ಊರಿನವನ ಆಸ್ತಿ ಕಬಳಿಸಲು ಕಾದಾಟಕ್ಕಿಳಿದ. ಇಂಥ ಬಡಿದಾಟಕ್ಕೆ ಸೇನಾಪಡೆಗಳನ್ನೆ ಕಟ್ಟಿಕೊಂಡು ರಾಜನಂತೆ ಮೆರೆದ.
ಇಷ್ಟಾದರೂ ಮನುಷ್ಯ ಸುಖ ಅರಸುವುದನ್ನು ಬಿಡಲಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲು ಲೋಭತನವನ್ನೇ ರೂಢಿಸಿಕೊಂಡ. ಸಾವಿರಾರು ವರ್ಷ ಬದುಕುವವನಂತೆ ಸಾವಿರಾರು ಕೋಟಿ ಲೂಟಿ ಮಾಡಿದ. ಹಣಕ್ಕಾಗಿ ಪ್ರಕೃತಿನಾಶ ಮಾಡಿ, ಇಂದು ಸ್ವಚ್ಛಂದವಾಗಿ ಉಸಿರಾಡಲು ಆಗದಂಥ ದುಃಸ್ಥಿತಿಯನ್ನು ತಂದುಕೊಂಡ. ಪ್ರಕೃತಿ ವಿರುದ್ಧವಾಗಿ ತಾನೇ ಸೃಷ್ಟಿಸಿಕೊಂಡ ಕೃತಕ ನಿರೋಧಕ ವ್ಯವಸ್ಥೆಗಳಿಂದ ಸಣ್ಣ ಕ್ರಿಮಿಗೂ ಈಗ ತತ್ತರಿಸುವಂತಾಗಿದ್ದಾನೆ.

ಅವನ ಕೃತಕ ಬದುಕು ಅವನನ್ನು ಹೇಗೆ ದಿಕ್ಕು ತಪ್ಪಿಸಿವೆ ಎಂದರೆ, ದೂರದ ಊರಿಗೆ ನಡೆದಾಡಲು ಕಷ್ಟ ಅಂತ ಸೃಷ್ಟಿಸಿಕೊಂಡ ವಾಹನಗಳು, ಅವನನ್ನು ಪಕ್ಕದ ಬೀದಿಯಲ್ಲಿ ನಡೆದಾಡುವುದನ್ನೆ ಮರೆಸಿವೆ. ಪರಿಶ್ರಮದ ಮೇಲೆ ಬದುಕನ್ನು ಕಟ್ಟಿಕೊಳ್ಳದೆ, ಯಂತ್ರಗಳಿಂದ ಸುಖ ಬಯಸಿ, ರೋಗವನ್ನು ಹೆಚ್ಚಿಸಿಕೊಂಡವನಿಗೆ ಪರಿಶ್ರಮದ ಬೆವರಿನ ಬೆಲೆ ಅರ್ಥವಾಗುತ್ತಿಲ್ಲ. ಭಗವಂತ ನಿಸರ್ಗದತ್ತ ತೋಟದಲ್ಲಿ ಮನುಷ್ಯ ಬದುಕಲು ಬೇಕಾದ ಸಂಪತ್ತನ್ನು ಸಾಕಷ್ಟು ಪೇರಿಸಿಟ್ಟಿದ್ದಾನೆ. ಅದರಲ್ಲಿ ಆಸೆಯ ಹಣ್ಣನ್ನು ಇಟ್ಟಿದ್ದಾನೆ. ಅದನ್ನು ಅದೆಷ್ಟು ಹಿತ-ಮಿತವಾಗಿ ತಿನ್ನುತ್ತೇವೋ, ಅಷ್ಟೂ ನಮ್ಮ ಜೀವ ಮತ್ತು ಜೀವನ ಚೆನ್ನಾಗಿರುತ್ತದೆ.

ಸಂಕ್ರಮಣ ಕಾಲ ಬದಲಾವಣೆ ಪರ್ವ ಕಾಲ. ಸೂರ್ಯ ಪ್ರಗತಿಪಥದಲ್ಲಿ ಚಲಿಸುವ ಸುಸಮಯ. ಮನುಷ್ಯ ವರ್ಷಪೂರ್ತಿ ದುಡಿದ ಸಂಪಾದನೆಯನ್ನು ಅಳೆದು ಸುರಿವ ಸುಗ್ಗಿಯ ಹಿಗ್ಗಿನ ಕಾಲ. ಜೊಳ್ಳನ್ನು ತೂರಿ, ಗಟ್ಟಿಕಾಳುಗಳನ್ನು ಬದುಕಿಗೆ ಕಟ್ಟಿಕೊಳ್ಳುವ ಸಂಭ್ರಮದ ಕಾಲ. ಪ್ರತಿ ಸಂಕ್ರಾಂತಿ ನಿಸರ್ಗಕ್ಕೆ ಒಸಗೆ ಕಾಲ. ತನ್ನೊಡೆಯ ಸೂರ್ಯ ಅಶ್ವಾರೂಢನಾಗಿ ಮೇಲೇರಿ ಬರುವ ಕಾಲವನ್ನು ಪ್ರಕೃತಿ ಹಸಿರಿನಿಂದ ಕಂಗೊಳಿಸಿ ಸ್ವಾಗತಿಸುತ್ತದೆ. ಪಶು-ಪಕ್ಷಿಗಳು ಸಂತೋಷದಿಂದ ಕೂಗಿ ಕರೆಯುತ್ತವೆ. ಆದರೆ ಮೂರ್ಖಮನುಷ್ಯ ಮಾತ್ರ ಕೆಟ್ಟ ಬಿಸಿಲೆಂದು ಛತ್ರಿ ಹಿಡಿಯುತ್ತಾನೆ. ಸೂರ್ಯನ ಪ್ರಗತಿಯ ಕಿರಣಕ್ಕೆ ಬೆನ್ನುಮಾಡಿ ನಡೆವ ಮನುಷ್ಯನ ಅಜ್ಞಾನ ಅಳಿದಾಗ ‘ಸಚ್ಚಿದಾನಂದ’ದ ಅನುಭವವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT