ಭಾನುವಾರ, ಜನವರಿ 17, 2021
27 °C

ಸಚ್ಚಿದಾನಂದ ಸತ್ಯಸಂದೇಶ: ವರ್ಷ ಎಣಿಕೆಗೆ ಹರ್ಷ ಬದುಕಿಗೆ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ Updated:

ಅಕ್ಷರ ಗಾತ್ರ : | |

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

ಪ್ರತಿ ವರ್ಷವನ್ನು ಹೊಸ ಹರ್ಷದಿಂದಲೇ ಸ್ವಾಗತಿಸುತ್ತೇವೆ. ಎಲ್ಲರಿಗೂ ಒಳ್ಳೆಯದಾಗಲಿ ಅಂತ ಶುಭಾಶಯ ವಿನಿಮಯ ಮಾಡುತ್ತೇವೆ. ಹೊಸವರ್ಷದಲ್ಲಾದರೂ ಹಳೆಯ ನೋವುಗಳೆಲ್ಲ ಮರೆಯಲಿ ಎಂದು ಆಶಿಸುತ್ತೇವೆ. ಹೊಸವರ್ಷದಲ್ಲಿ ಹೊಸ ಬದುಕು ಕಟ್ಟಿಕೊಳ್ಳುವ ಸಂಕಲ್ಪ ಸಹ ಮಾಡುತ್ತೇವೆ. ಕಳೆದ ವರ್ಷ ಬಹಳ ಕೆಟ್ಟದ್ದಾಗಿತ್ತು. ಹೊಸ ವರ್ಷ ಖಂಡಿತ ಉತ್ತಮವಾಗಿರುತ್ತೆ. ಬಯಸಿದ ಕಾರ್ಯಗಳೆಲ್ಲ ನೆರವೇರುತ್ತೆ ಅಂತ ಅಂದುಕೊಳ್ಳುತ್ತೇವೆ. ಹೊಸವರ್ಷದಲ್ಲಿ ಹೊಸ ಕೆಲಸ ಆರಂಭಿಸಲು ಹರ್ಷದಿಂದಲೇ ಕಾರ್ಯೋನ್ಮುಖವಾಗುತ್ತೇವೆ. ಆದರೆ, ಮತ್ತದೇ ಸೋಲು-ನೋವು ಕಂಡಾಗ ಆ ವರ್ಷವೂ ಸರಿಯಾಗಿಲ್ಲ ಅಂತ, ಮತ್ತೊಂದು ಹೊಸವರ್ಷ ಕಾಯುತ್ತೇವೆ. ಆ ವರ್ಷವೂ ಉತ್ತಮವಾಗದಾಗ ಮಗದೊಂದು ವರ್ಷದತ್ತ ಚಿತ್ತೈಸುತ್ತೇವೆ.

ಹೀಗೆ ಪ್ರತಿ ಹೊಸ ವರ್ಷವನ್ನೂ ಹರ್ಷದಿಂದ ಸ್ವಾಗತಿಸಿ, ಕೊನೆಗೆ ಅದೊಂದು ದುರಾದೃಷ್ಟ ವರ್ಷ ಅಂತ ವಿಷಾದದ ವಿದಾಯ ಹೇಳುತ್ತಿರುತ್ತೇವೆ. ಆದರೆ ಇಲ್ಲಿ ಒಂದು ಸತ್ಯ ಮರೆಯುತ್ತೇವೆ; ಹೊಸವರ್ಷ ಅನ್ನೋದು ನಮ್ಮ ಲೆಕ್ಕಾಚಾರಕ್ಕೆ, ವಾಸ್ತವ ಬದುಕಿಗಲ್ಲ ಅನ್ನೋ ಪರಮಸತ್ಯ. ಕಳೆದ ವರ್ಷ ನಮಗೆ ಒಳ್ಳೆಯದಾಗಲಿಲ್ಲ ಎಂಬುದೇ ಒಂದು ಸುಳ್ಳು. ಹಳೆ ವರ್ಷ ಕೆಟ್ಟದ್ದಾಗಿದ್ದರೆ, ಹೊಸ ವರ್ಷವನ್ನು ಹರ್ಷದಿಂದ ಸ್ವಾಗತಿಸಲು ಈ ಜೀವವೇ ಇರುತ್ತಿರಲಿಲ್ಲ. ನಾವು ಬಯಸಿದ್ದು ಈಡೇರದ ಮಾತ್ರಕ್ಕೆ ಕಳೆದ ವರ್ಷವನ್ನು ಕೆಟ್ಟದ್ದು ಅಂತ ಭಾವಿಸಬಾರದು. ಜೀವ ಚೈತನ್ಯ ನೀಡಿದ ಕಳೆದ ವರ್ಷಕ್ಕೆ ನಿಜಕ್ಕೂ ಕೃತಜ್ಞರಾಗಿರಬೇಕು.

ಹೊಸ ವರ್ಷ, ಹಳೆ ವರ್ಷ ಅನ್ನೋದೆಲ್ಲಾ ಮನುಷ್ಯರ ಲೆಕ್ಕಾಚಾರ. ಪ್ರಾಣಿ-ಪಕ್ಷಿಗಳಿಗಂತೂ ಗೊತ್ತೇ ಇಲ್ಲ. ಪ್ರಕೃತಿಗಂತೂ ಹೊಸ ವರ್ಷ ಅನ್ನೋದು ಇಲ್ಲವೇ ಇಲ್ಲ. ಪ್ರತಿ ಬೆಳಗು ಈ ಭೂಮಿಗೆ ಹೊಸದೇ, ಪ್ರತಿ ಕ್ಷಣವೂ ಅದಕ್ಕೆ ಒಸಗೆಯ ಹರ್ಷವೇ. ಚಂಡಮಾರುತ-ಭೂಕಂಪನ, ಅತಿವೃಷ್ಟಿ-ಅನಾವೃಷ್ಟಿಗಳೆಲ್ಲಾ ಆ ತಾಯಿಯ ವಿನೋದಲೀಲೆಗಳೇ. ನಮಗೆ ತೊಂದರೆಯಾಯಿತೆಂದು ಪ್ರಕೃತಿಕ್ರಿಯೆಗಳನ್ನು ದೂಷಿಸಬಾರದು. ನಾವು ಹೇಗೆ ನಮ್ಮ ಅನುಕೂಲಕ್ಕೆ ತಕ್ಕಂತೆ ಭೂಮಿಯನ್ನು ಬಳಸುತ್ತೇವೋ, ಹಾಗೆಯೇ, ಪ್ರಕೃತಿ ತನ್ನ ಅಗತ್ಯಕ್ಕೆ ತಕ್ಕಂತೆ ವರ್ತಿಸುತ್ತದೆ. ನಮ್ಮ ಮೂಗಿನ ನೇರಕ್ಕೆ ಇದು ಒಳ್ಳೆಯದು, ಅದು ಕೆಟ್ಟದ್ದು ಅಂದುಕೊಳ್ಳೋದು ಮೂರ್ಖತನ.

ಒಳ್ಳೇದು-ಕೆಟ್ಟದ್ದು, ಸೋಲು-ಗೆಲುವು – ಎಲ್ಲ ವಿಧಿಲಿಖಿತದಲ್ಲಿಲ್ಲ. ಅದು ನಮ್ಮ ಕೈಯಲ್ಲಿರುತ್ತೆ. ವರ್ಷದ ಅಳತೆಗೋಲಲ್ಲಿ ಖಂಡಿತ ಇರುವುದಿಲ್ಲ. ಪ್ರತಿಕ್ಷಣ ನಾವು ಮಾಡುವ ಒಳ್ಳೆಯ ಕೆಲಸ ಒಳಿತನ್ನು ತರುತ್ತೆ. ಇಂದು ಸಮಾಜ ಬಹಳ ಸಂಕಷ್ಟಗಳನ್ನೆದುರಿಸುತ್ತಿದೆ. ಒಂದು ಕಡೆ ಜಾತಿ-ಧರ್ಮದ ಸಮಸ್ಯೆ. ಮತ್ತೊಂದು ಕಡೆ ಭ್ರಷ್ಟಾಚಾರ-ಅನೀತಿಗಳ ಆಗರ. ಇವುಗಳಿಂದ ಉದ್ಭವವಾಗಿರುವ ಬಡತನ-ಅಜ್ಞಾನ ಸಮಾಜವನ್ನೂ ಆ ಮೂಲಕ ದೇಶವನ್ನು ಹಾಳು ಮಾಡುತ್ತಿದೆ. ನಾವೇ ಸೃಷ್ಟಿಸಿಕೊಂಡಿರುವ ವಿಷವರ್ತುಲಗಳಿಂದ ಹೊರಬರದಿದ್ದರೆ ದೇಶಕ್ಕೆ ಉಳಿಗಾಲವಿಲ್ಲ.

ನಾವೆಲ್ಲಾ ಒಂದೇ ಅನ್ನುವುದರಲ್ಲಿ ನೆಮ್ಮದಿ ಇದೆ. ಹಂಚಿಕೊಂಡು ಬಾಳುವುದರಲ್ಲಿ ಸುಖವಿದೆ. ತಾರತಮ್ಯದ ಅಂಚು ಹಿಡಿದು, ಹೊಂಚಿಕೊಂಡು ಬಾಳುವುದರಲ್ಲಿ ಅಧರ್ಮ-ಭ್ರಷ್ಟಾಚಾರವಿರುತ್ತದೆ. ದೇಶವನ್ನು ರೂಪಿಸುವ ನಾವು ಉತ್ತಮರಾಗಿರಬೇಕು. ಸಮಾಜದ ಸ್ಥಿತಿ-ಗತಿ ಬದಲಿಸುವ ಧೀಮಂತ ಶಕ್ತಿಯು ನಮಗಿರಬೇಕು. ಸಮಾಜಕ್ಕೆ ಕಂಟಕವಾಗದ ರೀತಿ ಬದುಕಲು ವರ್ಷದ ಪ್ರತಿಕ್ಷಣವನ್ನೂ ಮೀಸಲಿಡಬೇಕು. ಹೀಗಾಗದಿದ್ದರೆ ಈ ವರ್ಷವೂ ನಮಗೆ ಒಳಿತಾಗುವುದಿಲ್ಲ. ವರ್ಷ ಅನ್ನೋದು ಎಣಿಕೆಯ ಲೆಕ್ಕಕ್ಕಾದರೆ, ಹರ್ಷ ಬದುಕಿನ ಅಂಕಿತಕ್ಕೆ. ವರ್ಷ ಹರ್ಷದಾಯಕವಾಗಬೇಕಾದರೆ ಬದುಕಿನ ಲೆಕ್ಕಾಚಾರ ಚೆನ್ನಾಗಿರಬೇಕು. ಪರರ ಹಿತದಲ್ಲಿ ನಮ್ಮ ಹಿತವಿದೆ ಎಂದು ಭಾವಿಸಬೇಕು. ಆಗ ‘ಸಚ್ಚಿದಾನಂದ’ಭಾವವು ಸ್ಫುರಿಸುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು