ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚ್ಚಿದಾನಂದ ಸತ್ಯ ಸಂದೇಶ: ಕೊಳೆತ ಆಸೆಯೇ ದುರಾಸೆ

ಅಕ್ಷರ ಗಾತ್ರ

ಭಗವಂತ ರೂಪಿಸಿದ ಸೃಷ್ಟಿಯ ಶಿಕ್ಷಣಶಾಲೆಯಲ್ಲಿ ಪ್ರತಿಜೀವಿಗೂ ಪರೀಕ್ಷೆ ಸದಾ ಇರುತ್ತದೆ. ಇದು ಮಾಸಿಕ, ವಾರ್ಷಿಕ ಪರೀಕ್ಷೆಯಂತಲ್ಲ, ಅಡಿಗಡಿಗೂ ಪರೀಕ್ಷೆಗಳಿರುತ್ತವೆ. ಅವು ಸಾವು-ಬದುಕಿನ ಪರೀಕ್ಷೆಗಳೇ ಇರಬಹುದು. ಬದುಕಿಗಾಗಿ ನಡೆಸುವ ಹೋರಾಟವೇ ಇರಬಹುದು. ಅವೆಲ್ಲಾ ಪರೀಕ್ಷಾ ಸೂತ್ರಧಾರಿ ಜಗನ್ನಾಥನ ಲೀಲೆಗಳು. ಕ್ಷಣಕ್ಷಣಕ್ಕೂ ಎದುರಾಗುವ ಭಗವಂತನ ಪರೀಕ್ಷೆಯನ್ನು ಎದುರಿಸಲು ನಾವು ಸದಾ ಸನ್ನದ್ಧವಾಗಿರಬೇಕು. ಭಗವಂತನ ಪರೀಕ್ಷೆಗೆ ಬೇಕಾದ ಕೌಶಲವೆಂದರೆ ಸ್ಥಿತಪ್ರಜ್ಞತೆ.

ಭಗವಂತ ಹರವಿದ ಬದುಕಿನ ಹಾಳೆಯಲ್ಲಿ ಪರೀಕ್ಷೆಗೆ ಬೇಕಾದ ಪ್ರಶ್ನೆಯೂ ಇರುತ್ತೆ, ಉತ್ತರವೂ ಅಲ್ಲೇ ಇರುತ್ತೆ. ಯಾವ ಪ್ರಶ್ನೆಗೆ ಯಾವ ಉತ್ತರ ಬರೆಯಬೇಕೆಂಬ ಜಾಣ್ಮೆ ಮನುಷ್ಯನಿಗಿರಬೇಕಷ್ಟೆ. ಇತರೆ ಜೀವಿಗಳಿಗಿಂತ ಭಗವಂತ ಹೆಚ್ಚು ಪರೀಕ್ಷೆಯನ್ನು ಒಡ್ಡುವುದು ಮತ್ತು ಹೆಚ್ಚು ಶಿಕ್ಷಿಸುವುದು ಮನುಷ್ಯನನ್ನು ಮಾತ್ರ. ಏಕೆಂದರೆ ಮನುಷ್ಯಜನ್ಮ ಜೀವನಚಕ್ರದ ಅಂತಿಮ ಭಾಗ. ಇದಕ್ಕಾಗಿ ಭಗವಂತ ಇತರೆ ಜೀವಿಗಳಿಗಿಂತ ಭಿನ್ನವಾಗಿ ಮನುಷ್ಯನನ್ನು ರೂಪಿಸಿದ್ದಾನೆ. ಇಂಥ ಉತ್ಕೃಷ್ಟವಾದ ಜನ್ಮದಲ್ಲಿ ಉತ್ತೀರ್ಣನಾದರೆ ಮೋಕ್ಷ ಸಿಗುತ್ತದೆ. ಆದ್ದರಿಂದ ಮಾನವರಾದವರು ಬಹಳ ಎಚ್ಚರಿಕೆಯಿಂದ ಬದುಕಿ, ಪುನೀತರಾಗಬೇಕು.

ಭಗವಂತ ನೀಡುವ ಪರೀಕ್ಷೆ ಬಹಳ ಸರಳ. ಅದೊಂದು ಸಾತ್ವಿಕ ಬದುಕಿನ ಹಂದರದ ಮೇಲೆ, ಸಜ್ಜನಿಕೆ ಎಂಬ ಹಲಗೆ ಹರವಿ, ಗುಣಮೌಲ್ಯದ ಸೌಧ ಕಟ್ಟುವ ಪರೀಕ್ಷೆ. ಇಂಥ ‘ಮಾನವತೆಯ ಭವನ’ ಕಟ್ಟಲು ಬೇಕಾದ ಸಾಮಗ್ರಿಗಳನ್ನು ಭಗವಂತ ಸನಿಹದಲ್ಲೆ ಇಟ್ಟಿರುತ್ತಾನೆ. ಆ ಸಾಮಗ್ರಿಯಲ್ಲಿ ತನ್ನದೆಷ್ಟು, ಪರರದೆಷ್ಟು, ತನ್ನದ್ಯಾವುದು, ಪರರದ್ಯಾವುದು – ಎಂದು ಕಂಡುಕೊಳ್ಳುವ ಒಳ್ಳೆಯ ಬುದ್ಧಿ ಬೇಕಷ್ಟೆ; ದುರಾಸೆಯಿಂದ ಪರರದ್ದನ್ನು ತನ್ನದ್ದೆಂದು ದೋಚಲು ಹೋದರೆ ಅನುತ್ತೀರ್ಣನಾಗುತ್ತಾನೆ. ಪಾಪದ ಪ್ರಾಯಶ್ಚಿತ್ತಕ್ಕಾಗಿ ಮತ್ತೆ ಕನಿಷ್ಠಜೀವಿಯಾಗಿ ಸೃಷ್ಟಿಚಕ್ರ ಸುತ್ತಬೇಕಾಗುತ್ತದೆ.

ಹುಟ್ಟಿನಿಂದ ಸಾವಿನವರೆಗೆ ಭಗವಂತ ಒಡ್ಡುವ ಪರೀಕ್ಷೆಯಲ್ಲಿ ಬೀಳುವುದು, ಏಳುವುದು ಸಾಮಾನ್ಯ ಪ್ರಕ್ರಿಯೆ. ಎದ್ದಾಗ ಬೀಗದೆ, ಬಿದ್ದಾಗ ಅಂಜದೆ ಬದುಕಿನ ದೋಣಿಯನ್ನು ಒಳ್ಳೆಯ ಆಲೋಚನೆಯಿಂದ ಉಟ್ಟಾಕುತ್ತಾ, ಭಗವಂತನಿರುವ ದಡಕ್ಕೆ ಸಾಗಬೇಕು. ಹೀಗೆ ಸಾಗುವಾಗ ಬಯಕೆಯ ಮೀನುಗಳು, ಭಯಾನಕ ತಿಮಿಂಗಿಲಗಳು ಎದುರಾಗುತ್ತವೆ. ಇಂಥ ಬಯಕೆ-ಭಯಗಳನ್ನು ನಿಭಾಯಿಸುತ್ತಾ ಜೀವನದ ಗುರಿ ಮುಟ್ಟಲು ನಮಗೆ ಉತ್ತಮ ಮನಸ್ಸಿರಬೇಕು. ಬಸವಣ್ಣನವರ ‘ಪರರ ಸ್ವತ್ತನ್ನು ಒಲ್ಲೆ’ ಎಂಬ ದಿವ್ಯ ಮಂತ್ರವನ್ನು ಮನದ ತುಂಬ ತುಂಬಿಕೊಂಡು, ಇಹಬಂಧನದ ಸಂಕೋಲೆಗಳನ್ನು ಕಳೆದುಕೊಳ್ಳಬೇಕು.

ಈ ಸೃಷ್ಟಿಯಲ್ಲಿ ಜೀವಿಗಳನ್ನು ಬಂಧಿಸಿರುವುದೇ ಆಸೆ. ಸದಾ ಹುಟ್ಟುವ ಆಸೆಗಳು ಮನದಲ್ಲಿ ಕೊಳೆಯುತ್ತಾ ಹೋದರೆ ದುರಾಸೆಯಾಗುತ್ತವೆ. ದುರಾಸೆ ಕೊಳೆತಷ್ಟು ಮನುಷ್ಯನ ಮನಸ್ಸು ಕೆಡುತ್ತಾ ಹೋಗುತ್ತದೆ. ಮನಸ್ಸು ಕೆಟ್ಟಷ್ಟು ಮನುಷ್ಯ ಕೆಡುತ್ತಾ ಹೋಗುತ್ತಾನೆ. ಕೆಟ್ಟ ಮನುಷ್ಯ ಹುಟ್ಟಿದ ಮನೆಗಾಗಲಿ, ಸತ್ತಾಗ ಹೋಗುವ ಸುಡುಗಾಡಿಗಾಗಲಿ ಪ್ರಯೋಜನವಿಲ್ಲ. ಕಂಟಕ ಪ್ರಾಯನಾದ ಕೆಟ್ಟವರನ್ನ ಭಗವಂತ ಹತ್ತಿರಕ್ಕೂ ಬಿಟ್ಟುಕೊಳ್ಳುವುದಿಲ್ಲ. ಮತ್ತೆ ಹುಳು-ಹುಪ್ಪಟ್ಟೆಯಾಗಿ ಹುಟ್ಟಿ ಜೀವಾತ್ಮದ ಸರಪಣಿಯಲ್ಲೆ ಬಂಧಿಯಾಗಬೇಕಾಗುತ್ತದೆ. ಈ ಭವಬಂಧನದಿಂದ ಮುಕ್ತಿ ಹೊಂದಿ ಅನಂತ ದಿಗಂತದಲ್ಲಿ ಸಾಗಲು ಅದೆಷ್ಟೋ ಯುಗಗಳು ಬೇಕಾಗುತ್ತವೆ.

ಇದಕ್ಕಾಗೆ ಪುರಂದರದಾಸರು ‘ಮಾನವಜನ್ಮ ದೊಡ್ಡದು. ಅದನ್ನು ಹಾಳುಮಾಡಿಕೊಳ್ಳಬೇಡಿರೋ’ ಎಂದು ಎಚ್ಚರಿಸಿದ್ದರು. ಹಿರಿಯರು, ಅನುಭಾವಿಗಳ ಮಾತನ್ನ ಯಾರೂ ಕಡೆಗಣಿಸಬಾರದು. ನಮ್ಮ ಪೂರ್ವಿಕರು ಹಾಕಿಕೊಟ್ಟ ಒಳ್ಳೆಯ ಸಂಸ್ಕೃತಿಯ ಹಾದಿಯಲ್ಲೇ ನಡೆಯಬೇಕು. ಆ ಚೌಕಟ್ಟನ್ನು ಮೀರದಂತೆ ಸಂಯಮದಿಂದ ಹೆಜ್ಜೆ ಹಾಕುವ ಗಟ್ಟಿಮನಸ್ಸನ್ನು ಮಾಡಬೇಕು. ಅಡಿಗಡಿಗೆ ಎದುರಾಗುವ ಆಸೆಯ ಗಾಳಕ್ಕೆ ಮನಸ್ಸು ಸಿಕ್ಕಿಸಿಕೊಳ್ಳದೇ, ಎಚ್ಚರದಿಂದ ಸಾಗಿದರೆ ‘ಸಚ್ಚಿದಾನಂದ’ ಜಗತ್ತು ತೆರೆದುಕೊಳ್ಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT