ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ್ಪು ಆಲಿಕಲ್ಲು ಮತ್ತು ಮುತ್ತು

Last Updated 29 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಅಕ್ಕಮಹಾದೇವಿಯ ವಚನಗಳು ರಸಾರ್ದ್ರವಾಗಿರುತ್ತವೆ, ಉಪಮಾನಗಳಿಂದ, ಚಿತ್ರಕಲ್ಪನೆಗಳಿಂದ ಮನೋಹರವಾಗಿರುತ್ತವೆ, ಅವಳದ್ದು ಕವಿಯ ಹೃದಯ, ಕವಿಯ ಕಣ್ಣು ಎಂದು ಸಾರುವಂತಿರುತ್ತವೆ...

ಮುತ್ತು ನೀರಲ್ಲಾಯಿತ್ತು

ವಾರಿಕಲ್ಲೂ ನೀರಲ್ಲಾಯಿತ್ತು

ಉಪ್ಪೂ ನೀರಲ್ಲಾಯಿತ್ತು

ಉಪ್ಪು ಕರಗಿತ್ತು, ವಾರಿಕಲ್ಲು ಕರಗಿತ್ತು

ಮುತ್ತು ಕರಗಿದುದನಾರೂ ಕಂಡವರಿಲ್ಲ

ಈ ಸಂಸಾರಿ ಮಾನವರು ಲಿಂಗವ ಮುಟ್ಟಿ ಭವಭಾರಿಗಳಾದರು

ನಾ ನಿಮ್ಮ ಮುಟ್ಟಿ ಕರಿಗೊಂಡೆನಯ್ಯಾ

ಚೆನ್ನಮಲ್ಲಿಕಾರ್ಜುನಯ್ಯಾ

ತನ್ನ ಆದರ್ಶಕ್ಕಾಗಿ ಸಾಮಾಜಿಕ ವ್ವವಸ್ಥೆ ಮತ್ತು ರಾಜ ಪ್ರಭುತ್ವಗಳೆರಡನ್ನೂ ಏಕಕಾಲಕ್ಕೆ ಧಿಕ್ಕರಿಸಿ ನಿಂತ ಶ್ರೇಷ್ಠ ಅನುಭಾವಿ ಅಕ್ಕಮಹಾದೇವಿಯ ವಚನವಿದು.

ಭವಿಗಳನ್ನೂ ಭಕ್ತರನ್ನೂ ಖಚಿತ ವಿವರಣೆಯೊಂದಿಗೆ ಬೇರೆ ಮಾಡುವ ಪ್ರಯತ್ನವನ್ನು ಈ ವಚನ ಮಾಡುತ್ತದೆ. ತೀ.ನಂ ಶ್ರೀಕಂಠಯ್ಯನವರು ಹೇಳುತ್ತಾರೆ: ‘ಅಕ್ಕಮಹಾದೇವಿಯ ವಚನಗಳು ರಸಾರ್ದ್ರವಾಗಿರುತ್ತವೆ, ಉಪಮಾನಗಳಿಂದ, ಚಿತ್ರಕಲ್ಪನೆಗಳಿಂದ ಮನೋಹರವಾಗಿರುತ್ತವೆ, ಅವಳದ್ದು ಕವಿಯ ಹೃದಯ, ಕವಿಯ ಕಣ್ಣು ಎಂದು ಸಾರುವಂತಿರುತ್ತವೆ’. ಅವರ ಮಾತಿಗೆ ಪುರಾವೆಯಾಗಿ ಈ ವಚನವನ್ನು ಅವಲೋಕಿಸಬಹುದು.

ತನ್ನ ಮನದಿಂಗಿತವನ್ನು ಅಭಿವ್ಯಕ್ತಿಸಲು ಅಕ್ಕ ಮನೋಹರವಾದ ಉಪಮೆಗಳನ್ನು ಬಳಸಿಕೊಂಡಿದ್ದಾಳೆ. ಒಂದೇ ಮೂಲದಿಂದ ಆವಿರ್ಭವಿಸಿದ ಮೂರು ವಸ್ತುಗಳನ್ನು ಪರಸ್ಪರ ಹೋಲಿಸುತ್ತಾಳೆ. ವಾರಿಕಲ್ಲು ಅಂದರೆ ಆಲಿಕಲ್ಲು. ಉಪ್ಪು, ಆಲಿಕಲ್ಲು ಹಾಗೂ ಮುತ್ತು – ಈ ಮೂರಕ್ಕೂ ನೀರೇ ಮೂಲವಸ್ತು. ಅವುಗಳ ಪೈಕಿ ಉಪ್ಪು ನೀರಿನಲ್ಲಿ ಕರಗುತ್ತದೆ. ಆಲಿಕಲ್ಲೂ ಕೂಡ ಕರಗಿ ನೀರಾಗಿಬಿಡುತ್ತದೆ. ಆದರೆ ಅದೇ ಮೂಲವಸ್ತುವಿನಿಂದ ಹುಟ್ಟಿ ಬಂದಿರುವ ಮುತ್ತು ಮಾತ್ರ ಇವೆರಡವುಗಳಿಗಿಂತ ಭಿನ್ನವಾಗಿದೆ. ಮುತ್ತು ಎಂದೂ ಕರಗುವುದಿಲ್ಲ. ಅದು ಅತ್ಯಂತ ದೃಢವಾಗಿರುತ್ತದೆ. ಈ ಪ್ರಾಪಂಚಿಕರೂ ಕೂಡ ಒಂದೇ ಮನುಷ್ಯಮೂಲದಿಂದ ಬಂದವರೇ ಆಗಿದ್ದೇವೆ. ಆದರೆ ನಮ್ಮಲ್ಲಿ ಬಹುತೇಕ ಜನರು ಭವಿಗಳು ಅಂದರೆ ಸಾಮಾನ್ಯ ಜನರು, ಭವದ ರಾಗ-ದ್ವೇಷ-ಸುಖ-ದುಃಖ – ಇವನ್ನೆಲ್ಲ ತೀವೃವಾಗಿ ಅನುಭವಿಸುವ ಭೋಗಿಗಳು. ನಾವೆಷ್ಟು ಸುಖ-ಭೋಗದ ಲಾಲಸೆಗೆ ಬೀಳುತ್ತೇವೆಯೋ ಅಷ್ಟು ಬೇಗ ಕರಗಿ ಹೋಗುತ್ತೇವೆ.

ಭವಭಾರಿ ಅಂದರೆ ಲೌಕಿಕರು. ಕರಿಗೊಂಡೆ ಎಂದರೆ ಗಟ್ಟಿಯಾದೆ. ಚೆನ್ನಮಲ್ಲಿಕಾರ್ಜುನನ ಮೇಲೆ ಅಕ್ಕನ ಭಕ್ತಿಗೆ ಎಣೆಯೇ ಇಲ್ಲ. ಆಕೆಯ ಭಾವ ತೀವ್ರವಾದಂತೆಲ್ಲ ಆಕೆ ಇತರೆಲ್ಲ ದೇವರುಗಳಲ್ಲಿಯೂ ಆತನೇ ಶ್ರೇಷ್ಠ ಎಂಬ ತೀರ್ಮಾನಕ್ಕೆ ಬರುತ್ತಾಳೆ. ಹಾಗಾಗಿ ಚೆನ್ನಮಲ್ಲಿಕಾರ್ಜುನನನ್ನು ಪೂಜಿಸಿ ತಾನು ಗಟ್ಟಿಯಾಗಿದ್ದೇನೆ, ದೃಢವಾಗಿದ್ದೇನೆ – ಅಂದರೆ ಮುತ್ತಿನಂತೆ ಘನವಾಗಿದ್ದೇನೆ ಎಂಬ ಮಾತನ್ನು ಅರುಹುತ್ತಾಳೆ. ಉಳಿದ ಪ್ರಾಪಂಚಿಕರು ಇನ್ನೂ ಲೋಕದ ಜಾತ್ರೆಯಲ್ಲಿಯೇ ತಲ್ಲೀನರಾಗಿದ್ದಾರೆ. ಆದ್ದರಿಂದ ಅವರ ಭಕ್ತಿಯು ದೃಢತೆಯನ್ನು ಪಡೆದುಕೊಂಡಿರುವುದಿಲ್ಲ. ಅವರ ಮನಸ್ಸಿನಲ್ಲಿ ಘನವಾದ ವೈರಾಗ್ಯ ಮೂಡಿರುವುದಿಲ್ಲ. ಆದ್ದರಿಂದ ಅವರು ಸುಖ-ದುಃಖಗಳನ್ನು ಮೀರಲಾರದೇ ಎಲ್ಲ ಬಗೆಯ ಪ್ರಾಪಂಚಿಕ ವ್ಯವಹಾರಗಳಲ್ಲಿ ಮಗ್ನರಾಗಿದ್ದಾರೆ. ಹಾಗಾಗಿಯೇ ಮುಕ್ತಿಯಿಂದ ಇನ್ನೂ ಸಾಕಷ್ಟು ದೂರದಲ್ಲಿದ್ದಾರೆ.

ಚೆನ್ನಮಲ್ಲಿಕಾರ್ಜುನನ್ನು ಮನಸ್ಸಿಗೆ ತಂದುಕೊಳ್ಳುವ ಮೂಲಕ ಅಕ್ಕ ವೈರಾಗ್ಯದ ಶಿಖರದ ಉತ್ತುಂಗ ಶೃಂಗವನ್ನು ಆರೋಹಿಸಿದ್ದಾಳೆ. ಅವಳ ಮನಸ್ಸೀಗ ಸದೃಢವಾಗಿದೆ. ಯಾವ ಲೌಕಿಕ ವ್ಯಾಮೋಹಕ್ಕೂ ಒಳಗಾಗದೇ ಗಟ್ಟಿಯಾಗಿ ಉಳಿಯುವಷ್ಟು ಪಕ್ವಗೊಂಡಿದೆ. ಈ ವಿಚಾರವನ್ನೇ ಅತ್ಯಂತ ಮಾರ್ಮಿಕವಾಗಿ ಎಲ್ಲರಿಗೂ ಅರ್ಥವಾಗುವ ಉಪಮಾನವನ್ನು ನೀಡುತ್ತ ವಿವರಿಸುವ ಅಕ್ಕನ ವಚನದ ಸೊಬಗನ್ನು ಸವಿಯುವುದೆಂದರೆ ಮೃದು ಮಣ್ಣಿನ ಮೇಲೆ ಮೊದಲ ಮಳೆಯಾದಾಗ ಉದುರಿದ ತಾಜಾ ಆಲಿಕಲ್ಲನ್ನು ನಾಲಿಗೆಯ ಮೇಲಿಟ್ಟುಕೊಂಡು ‘ಆಹಾ’ ಎನ್ನುತ್ತ ಚಪ್ಪರಿಸಿದಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT