ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣ ಸಾರ: ದಾಕ್ಷಾಯಣಿ ಹೆಸರು ಬಯಸದ ಸತಿ

ಭಾಗ 174
ಅಕ್ಷರ ಗಾತ್ರ

ತಂದೆಯ ದುರ್ವರ್ತನೆಯಿಂದ ನೊಂದ ಸತೀದೇವಿ, ‘ಎಲೈ ತಂದೆಯೇ, ಮಹಾದೇವನನ್ನು ನಿಂದಿಸುವವನು ಮತ್ತು ನಿಂದೆಯನ್ನು ಕೇಳುವವನು ಇಬ್ಬರೂ ಚಂದ್ರಸೂರ್ಯರಿರುವವರೆಗೆ ನರಕವನ್ನು ಅನುಭವಿಸುವರು. ಆದುದರಿಂದ ಶಿವನ ನಿಂದೆಯನ್ನು ಕೇಳಿರುವ ನಾನು ಈಗ ಶರೀರವನ್ನು ತ್ಯಜಿಸುವೆ. ಅಗ್ನಿಯಲ್ಲಿ ಪ್ರವೇಶ ಮಾಡುವೆ. ನನ್ನ ಸ್ವಾಮಿಯ ನಿಂದೆಯನ್ನು ಕೇಳಿದ ಮೇಲೆ ನಾನು ಬದುಕಿದ್ದು ಪ್ರಯೋಜನವಿಲ್ಲ. ಈಗ ರುದ್ರನನ್ನು ನಿಂದಿಸುತ್ತಿರುವ ನೀನು, ಕೊನೆಗೊಮ್ಮೆ ಪಶ್ಚಾತ್ತಾಪವನ್ನು ಪಡುವೆ. ಮೂರು ಲೋಕಗಳಿಗೂ ಪ್ರಿಯನಾದ ಶಿವನನ್ನು ನೀನೋರ್ವನೇ ನಿಂದಿಸುತ್ತಿರುವುದು. ಪರಿಶುದ್ಧರಾದ ಸತ್ಪುರುಷರು ಮಹಾತ್ಮರನ್ನು ನಿಂದಿಸಿದರೆ ಆಶ್ಚರ್ಯವಾಗುತ್ತದೆ. ಆದರೆ ತಿಳಿವಳಿಕೆಯಿಲ್ಲದ ಮೂರ್ಖನಾದ ನಿನ್ನಂಥವನು ಮಹಾತ್ಮರನ್ನು ನಿಂದಿಸುವುದು ಅಚ್ಚರಿಯಾಗುವುದಿಲ್ಲ. ನಿನ್ನಂಥ ಕಡುಮೂರ್ಖರ ಸ್ವಭಾವವೇ ಹಾಗಿರುತ್ತದೆ. ‘ಶಿವ’ ಎಂಬ ಎರಡಕ್ಷರಗಳನ್ನು ಒಂದು ಬಾರಿ ಮಾತ್ರ ಜಪಿಸಿದರೂ ಸಕಲ ಪಾಪಗಳೂ ನಾಶವಾಗುತ್ತವೆ. ಅಂತಹ ಪರಮ ಪವಿತ್ರನಾದ ನನ್ನ ಪತಿ ಶಿವನನ್ನು ನಿನ್ನ ನೀಚ ನಾಲಿಗೆಯಿಂದ ಹೀಯಾಳಿಸಿದ್ದೀಯ.

‘ಭೋಗ ಮತ್ತು ಮೋಕ್ಷಗಳನ್ನು ಅಪೇಕ್ಷಿಸುವವರ ಮನಸ್ಸೆಂಬ ದುಂಬಿಯು ಶಿವನ ಪಾದಗಳೆಂಬ ಕಮಲಗಳನ್ನು ಸೇವಿಸುವುದು. ಅದರಿಂದ ಸಕಲ ಇಷ್ಟಾರ್ಥಗಳೂ ಸಿದ್ಧಿಸುವುವು. ಶಿವನು ತನ್ನ ಭಕ್ತರು ಯಾವುದನ್ನು ಕೇಳಿದರೂ ಕೂಡಲೇ ಅದನ್ನು ಅನುಗ್ರಹಿಸುವ ಭಕ್ತವತ್ಸಲ. ಸಕಲ ಜನಗಳಿಗೆ ಬಂಧುವಾದ ಶಿವನನ್ನು ನೀನು ಕಾರಣವಿಲ್ಲದೆ ದ್ವೇಷಿಸುತ್ತಲಿರುವೆ. ನಿನ್ನ ಹೊರತು ಬೇರಾರೂ ಶಿವನನ್ನು ಅಪಮಾನಿಸಿಲ್ಲ. ದೇವತೆಗಳು ಮತ್ತು ದೇವಮುನಿಗಳು ಸಹ ಶಿವನನ್ನು ಅಪವಿತ್ರನೆಂದು ಭಾವಿಸಿಲ್ಲ. ನೀನೋರ್ವನೇ ತಿಳಿವಳಿಕೆಯಿಲ್ಲದೆ ದುರಹಂಕಾರದಿಂದ ದೂಷಿಸುತ್ತಿದ್ದೀಯ. ಕಪಾಲಧಾರಿಯಾದ ಶಂಕರನು, ಸ್ಮಶಾನದಲ್ಲಿ ಭೂತಗಳೊಂದಿಗೆ ತಲೆಗೂದಲನ್ನು ಕೆದರಿಕೊಂಡು ವಿಹರಿಸುವುದು, ಚಿತಾಭಸ್ಮವನ್ನು ಧರಿಸುವುದು ಲೋಕಕ್ಷೇಮಕ್ಕಾಗಿಯೇ ಹೊರತು, ನೀನು ಭಾವಿಸಿದಂತೆ ಅದು ಅಪವಿತ್ರವಲ್ಲ. ಶಿವನ ಪಾದಸ್ಪರ್ಶದಿಂದ ಪವಿತ್ರವಾಗುವ ಚಿತಾಭಸ್ಮವನ್ನು ಯಾರು ಶಿರಸ್ಸಿನಲ್ಲಿ ಧರಿಸುವರೋ ಅವರು ಶಿವನ ಸ್ವರೂಪವನ್ನು ಹೊಂದುವರು. ಸದಾ ಸ್ಮಶಾನದಲ್ಲಿ ಚಿತಾಭಸ್ಮದ ಮೇಲೆಯೇ ಸಂಚರಿಸುವಂತಹ ನಮ್ಮ ಗಣಗಳ ಹೆಜ್ಜೆಗಳು ಈ ನಿನ್ನ ಯಜ್ಞಶಾಲೆಗೆ ಬಂದರೆ, ನಿನ್ನ ಮತ್ತು ನಿನ್ನ ಯಜ್ಞ ಎರಡೂ ನಾಶವಾಗುವುದು ನಿಶ್ಚಿತ.

‘ವೇದದಲ್ಲಿ ಜೀವನ್ಮುಕ್ತಿಗೆ ಪ್ರವೃತ್ತಿಮಾರ್ಗ ಮತ್ತು ನಿವೃತ್ತಿಮಾರ್ಗ ಎಂಬ ಬದುಕಿನ ಎರಡು ಕರ್ಮಗಳನ್ನು, ಮಾರ್ಗಗಳನ್ನು ಹೇಳಲಾಗಿದೆ. ತಿಳಿವಳಿಕೆಯುಳ್ಳವರು ಅವರೆಡು ಕರ್ಮಗಳನ್ನೂ ವಿಮರ್ಶಿಸಿ ಒಂದನ್ನು ಆಯ್ದುಕೊಳ್ಳಬೇಕು. ಪರಸ್ಪರ ವಿರುದ್ಧವಾಗಿರುವ ಆ ಎರಡು ಕರ್ಮಗಳನ್ನು ಒಂದು ಜೀವಿತಾವಧಿಯಲ್ಲಿ ಮಾಡಲು ಸಾಧ್ಯವಿಲ್ಲ. ಆದರೆ ಪರಬ್ರಹ್ಮನಾದ ಪರಮೇಶ್ವರನಲ್ಲಿ ಭಕ್ತಿಯುಳ್ಳವನಿಗೆ ಈ ಎರಡು ಕರ್ಮಗಳ ಅವಶ್ಯಕತೆಯೇ ಬರುವುದಿಲ್ಲ. ಅವನಿಗೆ ಶಿವಜ್ಞಾನದಿಂದಲೇ ಮುಕ್ತಿ ಪಡೆಯಬಲ್ಲ. ನೀನು ಅಹಂಕಾರವನ್ನು ತ್ಯಜಿಸು, ದುರ್ಬದ್ಧಿಯನ್ನು ಬಿಡು.

‘ಯಾರು ಮಹಾತ್ಮರನ್ನು ನಿಂದಿಸುವರೋ ಅವರ ಜನ್ಮಕ್ಕೆ ಧಿಕ್ಕಾರವಿರಲಿ. ಅಂತಹ ದುಷ್ಟನ ಸಂಬಂಧವನ್ನೂ ಬಿಟ್ಟುಬಿಡಬೇಕು. ಆದ್ದರಿಂದ ನಿನ್ನ ಮಗಳೆಂಬ ಕಾರಣಕ್ಕೆ ನನ್ನ ‘ದಾಕ್ಷಾಯಣಿ’ ಎಂದು ಕರೆಯುವುದನ್ನು ನಾನು ಬಯಸುವುದಿಲ್ಲ. ನಿನಗೆ ಹೆಚ್ಚು ಹೇಳಿ ಪ್ರಯೋಜನವಿಲ್ಲ. ಸರ್ವಥಾ ನೀನು ದುಷ್ಟ. ಇಂತಹ ದುಷ್ಟನಿಂದ ಜನಿಸಿದ ಈ ನನ್ನ ಶರೀರದಿಂದ ನನಗೆ ಪ್ರಯೋಜನವಿಲ್ಲ. ಈ ಅಪವಿತ್ರವಾದ ಶರೀರವನ್ನು ತ್ಯಜಿಸಿ ಸುಖವನ್ನು ಹೊಂದುವೆ’ ಎಂದು ಹೇಳಿದ ಸತೀದೇವಿ ಮನಸ್ಸಿನಲ್ಲಿ ತನ್ನ ಪ್ರಾಣಪ್ರಿಯನಾದ ಶಂಕರನನ್ನು ಸ್ಮರಿಸಿದಳು ಎಂಬಲ್ಲಿಗೆ ಸತೀಖಂಡದ ಇಪ್ಪತ್ತೊಂಬತ್ತನೆಯ ಅಧ್ಯಾಯ ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT