ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಂಕರ ಜಯಂತಿ 2022: ಆದಿಶಂಕರರ ಅ-ವಿರೋಧಿ ದೃಷ್ಟಿ

Last Updated 5 ಮೇ 2022, 19:31 IST
ಅಕ್ಷರ ಗಾತ್ರ

ಭಾರತದ ಗತಕಾಲದ ದಾರ್ಶನಿಕ-ಧಾರ್ಮಿಕ ಸಂಪ್ರದಾಯಗಳು ನಮಗೆ ಕೊಟ್ಟಿರುವ ಅತ್ಯಂತ ಶಕ್ತಿಶಾಲಿ ಸಂಪನ್ಮೂಲ - ಆಯ್ಕೆ ಮತ್ತು ವ್ಯಾಖ್ಯಾನದ ಸ್ವಾತಂತ್ರ್ಯ. ಲಭ್ಯವಿರುವ ಪಠ್ಯ-ಪರಂಪರೆಗಳಲ್ಲಿ ಅಗತ್ಯವಿರುವ ಪರಿಕಲ್ಪನೆಗಳನ್ನು ಆಯ್ದುಕೊಳ್ಳುವ, ಮತ್ತು ಅವನ್ನು ನಮ್ಮ ಸಂದರ್ಭಕ್ಕೆ ಅನುವಾಗುವಂತೆ ವ್ಯಾಖ್ಯಾನಿಸಿ ಮರುರೂಪಿಸಿಕೊಳ್ಳುವ ಸೌಲಭ್ಯವು ನಮಗೆ ಈ ಸಂಪ್ರದಾಯದಿಂದಲೇ ಸಿಕ್ಕಿದೆ. ಉಪನಿಷತ್ಕಾರರಿಂದ ತೊಡಗಿ ಬುದ್ಧ-ಮಹಾವೀರರವರೆಗಿನ ಪುರಾತನ ದಾರ್ಶನಿಕರು ಮಾಡಿದ್ದು ಇಂಥ ಆಯ್ಕೆ-ಮರುನಿರೂಪಣೆಗಳ ಕಾರ್ಯವನ್ನು. ಮೊದಲ ಸಹಸ್ರಮಾನದ ದ್ವಿತೀಯಾರ್ಧದಲ್ಲಿ ಭಾರತದ ದರ್ಶನಗಳು ಶಾಖೆಗಳಾಗಿ ಹರಳುಗಟ್ಟಲು ಆರಂಭವಾದಾಗ ಆದಿಶಂಕರರು ಮತ್ತೊಮ್ಮೆ ಇಂಥದೇ ಸಂಗ್ರಹಣ-ಸಂಶ್ಲೇಷಣದ ಕೆಲಸ ಮಾಡಿದರು. ಇವತ್ತು, ಅದ್ವೈತ ವೇದಾಂತವೆಂಬ ದರ್ಶನವು ಶಂಕರರ ಹೆಸರಿನೊಂದಿಗೆ ತಳುಕು ಹಾಕಿಕೊಂಡಿದೆಯಾದರೂ ನಿಜವಾಗಿ ಅದನ್ನು ‘ಕಂಡುಹಿಡಿದವರು’ ಅವರಲ್ಲ. ಉಪನಿಷತ್ತುಗಳಲ್ಲಿಯೂ ಮತ್ತು ಬೇರೆಬೇರೆ ದರ್ಶನಗಳಲ್ಲಿಯೂ ಲಭ್ಯವಿದ್ದ ಆಕೃತಿಗಳನ್ನು ಆಯ್ದು, ಅವನ್ನು ಒಂದಕ್ಕೊಂದು ವಿರೋಧವಾಗದಂತೆ ಪರಿಷ್ಕರಿಸಿ ಮರುರೂಪಿಸಿ ಅದ್ವೈತವೆಂಬ ಹೊಸ ಆಕಾರವು ಸ್ಫುಟವಾಗುವಂತೆ ಮಾಡಿದವರು ಆದಿಶಂಕರರು.

ತಾತ್ವಿಕ ಮಾರ್ಗವೊಂದನ್ನು ಹೀಗೆ, ಹೊಸತಾಗಿ ಕಲ್ಪಿಸುವ ಬದಲು, ಇರುವ ಆಕರಗಳಲ್ಲೇ ಆವಿಷ್ಕರಿಸುವ ವಿಧಾನವೇನಿದೆ, ಅದಕ್ಕೆ ದೊಡ್ಡದೊಂದು ಅನುಕೂಲತೆಯಿದೆ. ಅದೇನೆಂದರೆ, ಇಂಥ ಆಯ್ಕೆ-ವ್ಯಾಖ್ಯಾನದ ಮಾರ್ಗವು ತನಗಿಂತ ಮೊದಲಿರುವ ಅನ್ಯ ನಿಲುವುಗಳನ್ನು ನಿರಾಕರಿಸುವುದಿಲ್ಲ, ಅವನ್ನೂ ಒಳಗೊಂಡು ಬೆಳೆಯುತ್ತದೆ; ತನಗಿಂತ ಪೂರ್ವದ ಚಿಂತನೆಗಳನ್ನು ಅದು ಅಲ್ಲಗೆಳೆಯುವುದಿಲ್ಲ, ಬದಲು ವಿಸ್ತರಿಸಿ ಪರಿಷ್ಕರಿಸುತ್ತದೆ. ಭಾರತದಲ್ಲಿ ಅದ್ವೈತ ಸಂಪ್ರದಾಯವು ಅತ್ಯಂತ ಹೆಚ್ಚು ಪ್ರಚಲಿತವಾಗಿದ್ದಕ್ಕೆ ಕಾರಣ, ಅದು ಇಂಥ ವಿಸ್ತರಣ ಮತ್ತು ಪರಿಷ್ಕರಣೆಯ ದಾರಿ ಹಿಡಿದದ್ದೇ ಕಾರಣವಾಗಿರಬಹುದು ಎಂದು ಊಹಿಸಲಿಕ್ಕೆ ನಮಗೆ ಬೇಕಷ್ಟು ಸಾಕ್ಷ್ಯಗಳು ಸಿಗುತ್ತವೆ.

ಸ್ವಾರಸ್ಯದ ಅಂಥ ಒಂದು ಉದಾಹರಣೆ, ಆದಿಶಂಕರರ ಗುರುಪಿತಾಮಹರಾಗಿದ್ದ ಗೌಡಪಾದರೇ ಮಾಡಿರುವ ಪ್ರಸ್ತಾಪ. ‘ಮಾಂಡೂಕ್ಯಕಾರಿಕೆ’ಯಲ್ಲಿ (3.17) ಅವರು ಮಾಡಿರುವ ಪ್ರಸ್ತಾಪ ಹೀಗೆ: ‘ಸ್ವಸಿದ್ಧಾಂತ ವ್ಯವಸ್ಥಾಸು ದ್ವೈತಿನೋ ನಿಶ್ಚಿತಾ ದೃಢಮ್ ‘ ಪರಸ್ಪರಂ ವಿರುಧ್ಯಂತೇ ತೈರಯಂ ನ ವಿರುದ್ಧ್ಯತೇ’ ‘ತಮ್ಮತಮ್ಮ ಸಿದ್ಧಾಂತವೇ ನಿಶ್ಚಿತವೆಂದು ನಂಬುವ ದ್ವಯವಾದಿಗಳು ಆ ಕಾರಣದಿಂದಲೇ ಪರಸ್ಪರರನ್ನು ವಿರೋಧಿಸುತ್ತಾರೆ. ಆದರೆ ನಮ್ಮ ಸಿದ್ಧಾಂತವು ಯಾರಿಗೂ ವಿರೋಧವಲ್ಲ.’ ಈ ಕಾರಿಕೆಗೆ ಭಾಷ್ಯ ಬರೆದಿರುವ ಆದಿಶಂಕರರು ಈ ಮಾತನ್ನು ಸಾಮಾಜಿಕವಾಗಿ ಅನ್ವಯಿಸಿ ವ್ಯಾಖ್ಯಾನ ಮಾಡಿದ್ದಾರೆ. ಶಂಕರರ ಮಾತುಗಳ ತಾತ್ಪರ್ಯ ಹೀಗೆ: ‘ತಮ್ಮತಮ್ಮ ನಿಯಮಗಳೇ ನಿಶ್ಚಿತವೆಂದು ವಾದಿಸುವ ಭರದಲ್ಲಿ ದ್ವೈತ ನಿಲುವುಗಳಿಗೆ ರಾಗದ್ವೇಷಗಳ ಸೋಂಕು ಹತ್ತಿಕೊಳ್ಳುತ್ತದೆ. ಆದರೆ ಆತ್ಮವೊಂದೇ ಸತ್ಯವೆಂಬ ನಮ್ಮ ಸಿದ್ಧಾಂತದ ಮಾತು ಯಾರಿಗೂ ವಿರೋಧವಲ್ಲ, ನನ್ನ ಕೈಕಾಲುಗಳು ನನಗೆ ಹೇಗೆ ಬೇರೆಯಾಗಿದ್ದೂ ಬೇರೆಯಲ್ಲವೋ ಹಾಗೆ’.

ಮುಂದೆ ಅದ್ವೈತ ಸಿದ್ಧಾಂತವು ರೂಪಿಸಿಕೊಂಡ ಎಲ್ಲ ತತ್ತ್ವ-ಪರಿಕಲ್ಪನೆಗಳೂ ಈ ಬಗೆಯ ಅ-ವಿರೋಧದ ನೆಲೆಯವು. ಉದಾಹರಣೆಗೆ, ಈ ಜಗತ್ತಿನ ಸತ್ಯಗಳನ್ನು ವ್ಯಾವಹಾರಿಕ ಮತ್ತು ಪಾರಮಾರ್ಥಿಕ ಎಂದು ವಿಭಜಿಸಿ ನೋಡುವ ಮಾರ್ಗ. ಹಲವು ಟೀಕಾಕಾರರು ಅವಸರದಲ್ಲಿ ತೀರ್ಮಾನಿಸುವಂತೆ, ಈ ವಿಭಜನೆಯು ಬದುಕೆಲ್ಲವೂ ಮಿಥ್ಯೆಯಂದು ಪಲಾಯನ ಮಾಡುವ ಧೋರಣೆಯದ್ದೇನೂ ಅಲ್ಲ. ಬದಲು, ಈ ಲೋಕದ ಸತ್ಯಗಳಲ್ಲಿ ಹಲವು ಸ್ತರಗಳಿಗಳಿದ್ದು, ಅದರಲ್ಲಿ ಕೆಲವು ಬಗೆಯ ಸತ್ಯಗಳು ಸಾಪೇಕ್ಷವಾಗಿ ಅಷ್ಟು ನಿಜವಲ್ಲ – ಎಂಬ ಎಚ್ಚರ ಈ ನಿಲುವಿನ ಹಿಂದಿದೆ. ಉದಾಹರಣೆಗೆ, ಸಾಕಾರ ಸಗುಣ ದೇವರ ಅಸ್ತಿತ್ವ ಇದೆ ನಂಬುವ ದ್ವೈತಿಗಳೊಂದಿಗೆ, ಅದ್ವೈತಕ್ಕೆ ನಿಜವಾದ ವಿರೋಧವೇನೂ ಇಲ್ಲ. ದೇವರೆಂಬುದು, ವ್ಯಾವಹಾರಿಕ ನೆಲೆಯಲ್ಲಿ ನಿಜ, ಪಾರಮಾರ್ಥಿಕವಾಗಿ ಅಲ್ಲ - ಎಂಬುದಷ್ಟೇ ಅವರ ತಿದ್ದುಪಡಿ.

ಗೌಡಪಾದ-ಶಂಕರರ ಕಾಲಗಳು ಹೇಗಿದ್ದವೋ ನಮಗೆ ನಿಶ್ಚಿತವಾಗಿ ಗೊತ್ತಿಲ್ಲ, ಆದರೆ ನಮ್ಮ ಕಾಲಕ್ಕಂತೂ ಅವರ ಮಾತುಗಳು ಉಪಯುಕ್ತವಾದ ಪಾಠ ಹೇಳುವಂತಿವೆ.

ಕಾರಣ, ನಾವಿವತ್ತು ಗೌಡಪಾದರು ಹೇಳುವ ‘ಸ್ವಸಿದ್ಧಾಂತವ್ಯವಸ್ಥೆ’ಗಳನ್ನು ಇನ್ನೂ ದೃಢಗೊಳಿಸುವ ಹಠ ಹೊತ್ತಿದ್ದೇವೆ. ಮತ್ತು, ಆದಕಾರಣವೇ ಶಂಕರರು ಹೇಳುವಂತೆ ನಮ್ಮೊಳಗೆ ನಿಯಂತ್ರಿಸಲಾಗದಷ್ಟು ‘ರಾಗದ್ವೇಷಯುಕ್ತ’ ಸಂಘರ್ಷಗಳು ಉದ್ಭವಿಸುತ್ತಿವೆ. ಇಂಥ ಬೌದ್ಧಿಕ ಸಂಘರ್ಷದ ಕಾಲದೊಳಗಿರುವ ನಮಗೆ ಅದ್ವೈತದ ಅ-ವಿರೋಧಿ ನಿಲುವು ಹೊಸ ವಿವೇಕವನ್ನು ಕಲಿಸಬಹುದೆ? - ಈ ಶಂಕರಜಯಂತಿಯಂದು ನಾನು ಕೇಳಿಕೊಳ್ಳುವ ಪ್ರಶ್ನೆ ಇದು.

(ಲೇಖಕ ‘ಶಂಕರವಿಹಾರ’ ಪುಸ್ತಕದ ಕರ್ತೃ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT